ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಗಾವತಿ: ಖಾಸಗಿ ಆಸ್ಪತ್ರೆ ಮೀರಿಸುವ ಸರ್ಕಾರಿ ಆಸ್ಪತ್ರೆ

Last Updated 28 ಫೆಬ್ರುವರಿ 2018, 21:44 IST
ಅಕ್ಷರ ಗಾತ್ರ

ಗಂಗಾವತಿ (ಕೊಪ್ಪಳ ಜಿಲ್ಲೆ): ನಗರದ ಸರ್ಕಾರಿ ಉಪ ವಿಭಾಗ ಆಸ್ಪತ್ರೆಯು ರಾಜ್ಯದಲ್ಲಿಯೇ ಅತ್ಯಧಿಕ ಸುರಕ್ಷಿತ ಹೆರಿಗೆ ಮಾಡಿಸುವ ಮೂಲಕ ಅಗ್ರಸ್ಥಾನದಲ್ಲಿದೆ.

2018ರ ಜನವರಿ ತಿಂಗಳಲ್ಲಿ ರಾಜ್ಯದ 176 ತಾಲ್ಲೂಕು ಆಸ್ಪತ್ರೆಗಳಲ್ಲಿ ಆದ ಸುರಕ್ಷಿತ ಹೆರಿಗೆಗಳ ಕುರಿತು ಆರೋಗ್ಯ ಇಲಾಖೆ ನಡೆಸಿದ ಸಮೀಕ್ಷೆಯಲ್ಲಿ ಇದು ಗೊತ್ತಾಗಿದೆ.

ಒಂದು ತಿಂಗಳಲ್ಲಿ 374 ಹೆರಿಗೆಯಾಗಿದ್ದು, ಅವುಗಳಲ್ಲಿ 315 ಸಹಜ ಹಾಗೂ 59 ಸಿಸೇರಿಯನ್‌ ಆಗಿವೆ. ಹೆರಿಗೆ ಸಂದರ್ಭದಲ್ಲಿ ತಾಯಿ ಅಥವಾ ಮಗು ಮೃತಪಟ್ಟ ಉದಾಹರಣೆ ಇಲ್ಲ. 348 ಹೆರಿಗೆ ಮೂಲಕ ಗೋಕಾಕ್ ತಾಲ್ಲೂಕು ಆಸ್ಪತ್ರೆ ಎರಡನೇ ಸ್ಥಾನದಲ್ಲಿದೆ ಎಂದು ಆಸ್ಪತ್ರೆಯ ರಾಷ್ಟ್ರೀಯ ಆರೋಗ್ಯ ಅಭಿಯಾನ ವಿಭಾಗ ತಿಳಿಸಿದೆ.

ಆಧುನಿಕ ಸ್ಪರ್ಶ ಪಡೆದುಕೊಂಡಿರುವ ಈ ಆಸ್ಪತ್ರೆಯಲ್ಲಿನ ವೈದ್ಯರ ತಂಡ ಗುಣಮಟ್ಟದ ಸೇವೆ ನೀಡುತ್ತಿದೆ. ಆದ್ದರಿಂದ ಇದುವರೆಗೂ ಬಡವರಿಗಷ್ಟೇ ಸೀಮಿತವಾಗಿದ್ದ ಇಲ್ಲಿಗೆ ವಿವಿಧ ವರ್ಗದ ಜನ ದಾಂಗುಡಿ ಇಡುತ್ತಿದ್ದಾರೆ. ಎರಡು ವರ್ಷದ ಹಿಂದಷ್ಟೆ ನಿತ್ಯ 150ರಿಂದ 200ರಷ್ಟಿದ್ದ ಹೊರರೋಗಿಗಳ ಸಂಖ್ಯೆ ಈಗ ನಾಲ್ಕು ಪಟ್ಟು ಹೆಚ್ಚಳವಾಗಿದೆ.

ಗಂಗಾವತಿ ಮಾತ್ರವಲ್ಲ, ಕೊಪ್ಪಳ, ಗದಗ, ಕಂಪ್ಲಿ, ಹೊಸಪೇಟೆ, ಕುಡತನಿ, ಲಿಂಗಸಗೂರು, ಮುದಗಲ್, ಸಿಂಧನೂರು, ಮಾನ್ವಿಗಳಿಂದಲೂ ಜನ ಬಂದು ಚಿಕಿತ್ಸೆ ಪಡೆಯುತ್ತಾರೆ.

ಕಡಿಮೆ ತೂಕದ ಮಕ್ಕಳ ಆರೈಕೆಗೆ ಆರೋಗ್ಯ ಇಲಾಖೆ ರೂಪಿಸಿರುವ ಕೆಎಂಸಿ ಯನ್ನು ಹೈದರಾಬಾದ್‌ ಕರ್ನಾಟಕ ಭಾಗದಲ್ಲಿ ಮೊದಲ ಬಾರಿಗೆ ಇಲ್ಲಿ ಜಾರಿಗೆ ತರಲಾಗಿದೆ. ಮಕ್ಕಳಿಗೆ ಹಾಲುಣಿಸಲು ಪ್ರತ್ಯೇಕ ಕೊಠಡಿ ಇದೆ.

ಆಸ್ಪತ್ರೆಯಲ್ಲಿ ಜನರಲ್, ಸೆಮಿ ಸ್ಪೇಷಲ್ ಹಾಗೂ ಸ್ಪೇಷಲ್ ಕೊಠಡಿ ಸೌಲಭ್ಯವಿದೆ. ಅಲ್ಲದೇ ಆಸ್ಪತ್ರೆಯ ಎರಡು ಕೊಠಡಿಗೆ ಹವಾನಿಯಂತ್ರಿತ (ಎಸಿ) ವ್ಯವಸ್ಥೆ ಅಳವಡಿಸಲಾಗಿದೆ.

*

ಈ ಸಾಧನೆಯು ಆಸ್ಪತ್ರೆಯ ವೈದ್ಯರ ತಂಡದ ಸಾಮೂಹಿಕ ಯತ್ನದ ಫಲ. ಮತ್ತಷ್ಟು ಸಾಧನೆಗೆ ಸಾರ್ವಜನಿಕರ ಸಹಕಾರ ಅಗತ್ಯವಿದೆ.

–ಡಾ.ಈಶ್ವರ  ಸವುಡಿ

ಆಡಳಿತಾಧಿಕಾರಿ, ಗಂಗಾವತಿ ಉಪ ವಿಭಾಗ ಆಸ್ಪತ್ರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT