ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೈಲಿಗಿಂತ ಆಸ್ಪತ್ರೆಯಲ್ಲೇ ಹೆಚ್ಚಿನ ಸಮಯ ಕಳೆದ ಲಾಲು!

2 ತಿಂಗಳು ಜೈಲು ವಾಸ, 17 ತಿಂಗಳು ಆಸ್ಪತ್ರೆ ವಾಸ
Last Updated 28 ಜುಲೈ 2019, 20:02 IST
ಅಕ್ಷರ ಗಾತ್ರ

ಪಟ್ನಾ: ಬಹುಕೋಟಿ ಮೇವು ಹಗರಣ ದಲ್ಲಿ ಶಿಕ್ಷೆಗೊಳಗಾಗಿರುವ ರಾಷ್ಟ್ರೀಯ ಜನತಾ ದಳದ (ಆರ್‌ಜೆಡಿ) ಮುಖ್ಯಸ್ಥ ಲಾಲು ಪ್ರಸಾದ್‌ ಜೈಲಿಗಿಂತ ಹೆಚ್ಚಿನ ಸಮಯವನ್ನು ಆಸ್ಪತ್ರೆಯಲ್ಲಿಯೇ ಕಳೆದಿದ್ದಾರೆ.

ಲಾಲು ಅವರನ್ನು 2017ರ ಡಿಸೆಂಬರ್‌ನಲ್ಲಿ ಶಿಕ್ಷೆಗೊಳಪಡಿಸಿ ಜೈಲಿಗೆ ಕಳುಹಿಸಲಾಗಿತ್ತು. ಬರೋಬ್ಬರಿ 19 ತಿಂಗಳ ಶಿಕ್ಷೆಯ ಅವಧಿಯಲ್ಲಿ ಅವರು ಕೇವಲ ಎರಡು ತಿಂಗಳು ಮಾತ್ರ ಜೈಲಿನಲ್ಲಿದ್ದರು. ಉಳಿದ 17 ತಿಂಗಳು ಆಸ್ಪತ್ರೆಯಲ್ಲಿಯೇ ಕಳೆದಿದ್ದಾರೆ.

ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿರುವ ಲಾಲು, ರಾಂಚಿಯ ರಾಜೇಂದ್ರ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಆರ್‌ಐಎಂಎಸ್‌) ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ. ಮೇವು ಹಗರಣಕ್ಕೆ ಸಂಬಂಧಿಸಿ ಒಂದು ಪ್ರಕರಣದಲ್ಲಿ ಮಾತ್ರ ಅವರಿಗೆ ಜಾಮೀನು ಸಿಕ್ಕಿದೆ. ಮತ್ತೆರಡು ಪ್ರಕರಣಗಳಿಗೆ ಸಂಬಂಧಿಸಿ ಶಿಕ್ಷೆ ಅನುಭವಿಸಬೇಕಾಗಿದೆ.

ಆರ್‌ಐಎಂಎಸ್‌ ಆಸ್ಪತ್ರೆಯ ಶುಲ್ಕ ಸಹಿತ ವಾರ್ಡ್‌ನಲ್ಲಿ ದಾಖಲಾಗಿರುವ ಲಾಲು ಭದ್ರತೆಗೆ ಒಟ್ಟು 42 ಪೊಲೀಸರನ್ನು ನಿಯೋಜಿಸಲಾಗಿದೆ.

‘ಆಸ್ಪತ್ರೆಯ ಆಡಳಿತ ಮಂಡಳಿಯು ಲಾಲು ಅವರ ಆರೋಗ್ಯ ಕುರಿತು ವರದಿ ಕಳುಹಿಸುತ್ತದೆ. ಈವರೆಗೂ ಬಂದಿರುವ ವರದಿಯಲ್ಲಿ ಅವರನ್ನು ಜೈಲಿಗೆ ಕಳುಹಿಸಲು ಅಡ್ಡಿಯಲ್ಲ ಎಂದು ತಿಳಿಸಿಲ್ಲ. ಅವರ ಆರೋಗ್ಯ ಸುಧಾರಿಸಿದೆ ಎಂಬ ವರದಿ ಬಂದ ತಕ್ಷಣವೇ ಜೈಲಿಗೆ ಕಳುಹಿಸುತ್ತೇವೆ’ ಎಂದು ಬಂದೀಖಾನೆಯ ಪೊಲೀಸ್‌ ಮಹಾನಿರೀಕ್ಷಕ ವೀರೇಂದ್ರ ಭೂಷಣ್‌ ತಿಳಿಸಿದ್ದಾರೆ.

‘ಲಾಲು ಅವರು 15ಕ್ಕಿಂತ ಹೆಚ್ಚು ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ಬಂದಿಲ್ಲ. ಇನ್ಸುಲಿನ್‌ ಪಡೆಯಲು ಅವರಿಗೆ ಮತ್ತೊಬ್ಬರ ಸಹಾಯ ಬೇಕಾಗುತ್ತಿದೆ. ಅವರ ಆರೋಗ್ಯ ಕಳವಳಕಾರಿಯಾಗಿದೆ’ ಎಂದು ಅವರನ್ನು ನೋಡಿಕೊಳ್ಳುತ್ತಿರುವ ವೈದ್ಯ ಡಾ. ಡಿ.ಕೆ.ಝಾ ಹೇಳಿದ್ದಾರೆ.

ಶಿಕ್ಷೆ ಪ್ರಕಟಗೊಂಡ ನಂತರ ಲಾಲು ಅವರನ್ನು ರಾಂಚಿಯ ಹೋಟವಾರ್‌ ಜೈಲಿಗೆ ಕಳುಹಿಸಲಾಗಿತ್ತು. ಸಕ್ಕರೆ ಕಾಯಿಲೆ, ಕಿಡ್ನಿ ಸಮಸ್ಯೆ ಕಂಡುಬಂದಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಯಿತು. 2018ರಲ್ಲಿ ಮುಂಬೈ ಮತ್ತು ನವದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ಏಮ್ಸ್‌) ಚಿಕಿತ್ಸೆ ಪಡೆಯಲು ಷರತ್ತುಬದ್ಧ ಜಾಮೀನು ನೀಡಲಾಗಿತ್ತು. ಲಾಲು ಆರೋಗ್ಯವಾಗಿದ್ದಾರೆ ಎಂದು ಏಮ್ಸ್ ಪ್ರಮಾಣಪತ್ರ ನೀಡಿದ ನಂತರ ಮತ್ತೆ ಅವರನ್ನು ಜೈಲಿಗೆ ಕಳುಹಿಸಲಾಗಿತ್ತು. ಕಳೆದ ವರ್ಷ ಅವರ ಪುತ್ರ ತೇಜ್‌ ಪ್ರತಾಪ್‌ ಮದುವೆಗೆ ಜಾಮೀನು ನೀಡಲಾಗಿತ್ತು. 2018ರ ಆಗಸ್ಟ್‌ನಲ್ಲಿ ಮತ್ತೆ ಅವರನ್ನು ಆರ್‌ಐಎಂಎಸ್‌ಗೆ ಸ್ಥಳಾಂತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT