ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪನಗರ ರೈಲು: ಕೇಂದ್ರ ಅನುಮತಿ

ರೈಲ್ವೆ ಮಂಡಳಿ ಸಭೆಯಲ್ಲಿ ಮಹತ್ವದ ನಿರ್ಧಾರ: ಬೆಂಗಳೂರಿನ ಸಂಚಾರ ದಟ್ಟಣೆ ತಗ್ಗಿಸುವ ಗುರಿ
Last Updated 4 ನವೆಂಬರ್ 2019, 18:54 IST
ಅಕ್ಷರ ಗಾತ್ರ

ನವದೆಹಲಿ: ಬೆಂಗಳೂರಿನ ಸಂಚಾರ ದಟ್ಟಣೆ ತಗ್ಗಿಸಲೆಂದೇ ರೂಪಿಸಿರುವ ಉಪನಗರ ರೈಲು ಯೋಜನೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಸೋಮವಾರ ಇಲ್ಲಿ ನಡೆದ ರೈಲ್ವೆ ಮಂಡಳಿಯ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

ಬೆಂಗಳೂರು ಹಾಗೂ ಸುತ್ತಮುತ್ತ ಇರುವ ತುಮಕೂರು, ಕೋಲಾರ, ರಾಮನಗರ, ಚಿಕ್ಕಬಳ್ಳಾಪುರ ಮತ್ತಿತರ ನಗರಗಳ ಜನತೆಗೆ ಈ ಯೋಜನೆಯಿಂದ ಸಾಕಷ್ಟು ಅನುಕೂಲವಾಗಲಿದೆ.

ರಾಜ್ಯ ಸರ್ಕಾರದ ಸಹಭಾಗಿತ್ವಕ್ಕೆ ಸಂಬಂಧಿಸಿದ ಅಂತಿಮ ಹಂತದ ಮಾತುಕತೆಗಾಗಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರೊಂದಿಗೆ ಮಂಡಳಿಯ ಅಧ್ಯಕ್ಷ ವಿನೋದ್‌ಕುಮಾರ್‌ ಯಾದವ್‌ ಅವರು ಮಂಗಳವಾರ ಮತ್ತೊಂದು ಸುತ್ತಿನ ಸಭೆ ನಡೆಸಲಿದ್ದಾರೆ.

1983ರಲ್ಲೇ ಯೋಜನಾ ವರದಿ ಸಿದ್ಧಪಡಿಸಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದ ರಾಜ್ಯ ಸರ್ಕಾರ (ಶೇ20), ಕೇಂದ್ರ ಸರ್ಕಾರ (ಶೇ 20) ಮತ್ತು ಖಾಸಗಿ ಸಹಭಾಗಿತ್ವದ (ಪಿಪಿಪಿ) ಮಾದರಿಯ ಈ ಯೋಜನೆಗಾಗಿ ಕಡ್ಡಾಯವಾಗಿ ಪರಿಗಣಿಸುವ ಕೆಲವು ಮಾನದಂಡಗಳನ್ನೂ ಕೈಬಿಡುವಂತೆ ಇತ್ತೀಚೆಗೆ ನಡೆದ ಸಭೆಗಳಲ್ಲಿ ಮನವಿ ಮಾಡಿತ್ತು.

ಸಂಸದರಾಗಿದ್ದ ಅನಂತಕುಮಾರ್‌ ಹಾಗೂ ಕೇಂದ್ರ ಲೋಕಸಭಾ ಕ್ಷೇತ್ರದ ಸಂಸದ ಪಿ.ಸಿ. ಮೋಹನ್‌ ಈ ಯೋಜನೆ ಆರಂಭಿಸುವಂತೆ ಕೇಂದ್ರದ ಮೇಲೆ ಒತ್ತಡ ಹೇರಿದ್ದರಲ್ಲದೆ, ಯೋಜನೆಯಿಂದ ಸಾರ್ವಜನಿಕರಿಗೆ ದೊರೆಯುವ ಅನುಕೂಲಗಳ ಕುರಿತೂ ಗಮನ ಸೆಳೆದಿದ್ದರು. ಮೆಟ್ರೊ ಸೌಲಭ್ಯ ಇರುವ ಕಡೆ ಉಪನಗರ ರೈಲು ಯೋಜನೆ ಬೇಡ ಎಂಬ ಷರತ್ತನ್ನು ಸಡಿಲಗೊಳಿಸಬೇಕು ಎಂಬ ರಾಜ್ಯದ ಬೇಡಿಕೆಗೆ ಮಂಡಳಿ ಸಮ್ಮತಿ ಸೂಚಿಸಿದ್ದು, ಯೋಜನೆಯ ಜಾರಿಗಾಗಿ ಸ್ಪೆಷಲ್‌ ಪರ್ಪಸ್‌ ವೆಹಿಕಲ್‌ (ಎಸ್‌ಪಿವಿ) ಸ್ಥಾಪಿಸಲು ಸೂಚನೆ ನೀಡಿದೆ.

ಈಗಿರುವ ಹಳೆಯ ಕೆಲವು ರೈಲು ಮಾರ್ಗಗಳನ್ನೇ ಅಭಿವೃದ್ಧಿಪಡಿಸಿ ಈ ಯೋಜನೆಗೆ ಬಳಸಿಕೊಳ್ಳಲು ಉದ್ದೇಶಿಸಿರುವ ರೈಲ್ವೆ ಇಲಾಖೆ, ಕೆಲವು ಹೊಸ ಮಾರ್ಗಗಳನ್ನೂ ರೂಪಿಸಲು ನಿರ್ಧರಿಸಿದೆ. 30 ಎಲಿವೇಟೆಡ್ ನಿಲ್ದಾಣಗಳು ಹಾಗೂ 51 ನೆಲಮಟ್ಟದ ನಿಲ್ದಾಣಗಳ ನಿರ್ಮಾಣ ಕಾರ್ಯವು ಯೋಜನೆ ಅಡಿ ನಡೆಯಬೇಕಿದೆ. ಕೆಂಗೇರಿ–ವೈಟ್‌ಫೀಲ್ಡ್, ಬೆಂಗಳೂರು ನಗರ ನಿಲ್ದಾಣ–ರಾಜಾನುಕುಂಟೆ, ನೆಲಮಂಗಲ–ಬೈಯಪ್ಪನಹಳ್ಳಿ ಮತ್ತು ಬೊಮ್ಮಸಂದ್ರ–ದೇವನಹಳ್ಳಿಗಳನ್ನು ಸಂಪರ್ಕಿಸುವ ಮಾರ್ಗಗಳಲ್ಲಿ ಒಟ್ಟು 29 ಹೊಸ ನಿಲ್ದಾಣಗಳು ತಲೆ ಎತ್ತಲಿವೆ.

ಈ ಪೈಕಿ ಒಟ್ಟು 17 ನಿಲ್ದಾಣಗಳು ಅಂತರ್‌ ಬದಲಾವಣೆ (ಇಂಟರ್‌ ಚೇಂಜ್‌) ಸೌಲಭ್ಯ ಹೊಂದಿರುತ್ತವೆ. 5 ನಿಲ್ದಾಣಗಳು ರೈಲು ಮತ್ತು ಮೆಟ್ರೊ ರೈಲು ಬದಲಾವಣೆ ನಿಲ್ದಾಣಗಳಾಗಿ ಕಾರ್ಯ ನಿರ್ವಹಿಸಲಿವೆ.

**

ಡಿಪಿಆರ್‌ಗೆ ಕೇಂದ್ರ ಅನುಮೋದನೆ ನೀಡಿದ್ದು, ಕೆಲವೇ ದಿನಗಳಲ್ಲಿ ಕಾಮಗಾರಿ ಆರಂಭವಾಗಲಿದೆ.
-ಪಿ.ಸಿ. ಮೋಹನ್‌, ಸಂಸದ, ಬೆಂಗಳೂರು ಕೇಂದ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT