ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ: ಹರಿಕಥೆ ಪ್ರವೀಣೆ ಈ ಗೌರಮ್ಮ

ಹುಟ್ಟು ಅಂಧೆಯಾದರೂ ಸ್ವಂತ ಶ್ರಮದಿಂದ ಬಾಳು ರೂಪಿಸಿಕೊಂಡ ಕಲಾವಿದೆ
Last Updated 12 ಏಪ್ರಿಲ್ 2018, 10:39 IST
ಅಕ್ಷರ ಗಾತ್ರ

ರಾಮನಗರ: ಕಲೆಯ ಬೆಳಕಿನಲ್ಲಿ ಜಗತ್ತಿನ ಸೌಂದರ್ಯ ಕಂಡುಕೊಂಡ ಅಪೂರ್ವ ಪ್ರತಿಭೆ ಕನಕಪುರ ತಾಲ್ಲೂಕಿನ ಚಿಕ್ಕಕಲ್ಲಬಾಳು ಗ್ರಾಮದ ಗೌರಮ್ಮ. ಇವರ ಕಣ್ಣಿಗೆ ದೃಷ್ಟಿ ಭಾಗ್ಯ ಇಲ್ಲವಾದರೂ ಕಲೆಯ ಮೂಲಕ ಸೃಷ್ಟಿಯ ಸೊಬಗನ್ನು ಕಂಡವರಿವರು.

ಹರಿಕಥೆ ವಿದೂಷಿಯಾದ ಇವರು ಕತೆ ಹೇಳಲು ನಿಂತರೆ ಇವರೊಬ್ಬ ಅಂಧರೆದಂದು ಅನ್ನಿಸುವುದೇ ಇಲ್ಲ. ಕಂಚಿನ ಕಂಠ, ಸುಲಲಿತ ಗಾಯನ, ನಿರರ್ಗಳ ನಿರೂಪಣೆ – ಇವು ಗೌರಮ್ಮ ಅವರ ನಿರೂಪಣೆಯಲ್ಲಿ ಕಾಣಿಸುವ ವಿಶಿಷ್ಟ ಅಂಶಗಳಾಗಿವೆ.

ಹುಟ್ಟು ಅಂಧರಾದ ಗೌರಮ್ಮ ಅವರಿಗೆ ಈಗ 75 ವರ್ಷ ವಯಸ್ಸು. ಶಾಲೆಗೆ ಹೋಗದ ಗೌರಮ್ಮ ರಾತ್ರಿ 9 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ಅನೇಕ ಹರಿಕಥೆಗಳನ್ನು ನಿರರ್ಗಳವಾಗಿ ಮಾಡುತ್ತಾರೆ. ಜಿಲ್ಲೆಯ ನಾನಾ ಭಾಗದ ಜನರು ಬಂದು ಇವರನ್ನು ಹರಿಕಥೆ ಮಾಡಲು ಕರೆದುಕೊಂಡು ಹೋಗುತ್ತಾರೆ, ದಿನಾಂಕ ತಿಳಿಸಿದರೆ ಇವರೇ ಹೋಗಿ ಬರುತ್ತಾರೆ.

ತನ್ನ ಐದನೇ ವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಡ ಗೌರಮ್ಮ ಕಡುಕಷ್ಟದಲ್ಲಿ ಬೆಳೆದವರು. ಇವರ ತಾಯಿ ನಂಜಮ್ಮ ಅವರು ಕೂಡ ತತ್ವಪದ
ಗಳನ್ನು ಹಾಡುತ್ತಿದ್ದರು. ಕೂಲಿ ಕೆಲಸ ಮಾಡಿ ಮಕ್ಕಳನ್ನು ಸಾಕಿದರು. ತಾಯಿಯನ್ನು ಕಳೆದುಕೊಂಡಿರುವ ಗೌರಮ್ಮ ಅವರು ಈಗ ಏಕಾಂಗಿಯಾಗಿ ಮುರುಕಲು
ಮನೆಯಲ್ಲಿ ಜೀವನ ನಡೆಸುತ್ತಿದ್ದಾರೆ.

‘ನಾನು ಕುರುಡಿಯಾದರೂ ನನ್ನನ್ನು ಶಾಲೆಗೆ ಸೇರಿಸು ಎಂದು ತಾಯಿಯನ್ನು ಕೇಳಿಕೊಂಡೆ, ಶಾಲೆಗೆ ಸೇರಿಸಲಿಲ್ಲ. ಆದರೂ ನಾನು ಛಲ ಬಿಡದೆ ದೇವಸ್ಥಾನದ ಬಳಿ ನಡೆಯುತ್ತಿದ್ದ ಹರಿಕಥೆಗಳನ್ನು ಕೇಳಿ ಅರ್ಥೈಸಿಕೊಂಡು ಕಳೆದ 50 ವರ್ಷಗಳಿಂದ ಹರಿಕಥೆಗಳನ್ನು ಮಾಡುತ್ತಿದ್ದೇನೆ’ ಎನ್ನುತ್ತಾರೆ ಗೌರಮ್ಮ.

ಮಾದೇಶ್ವರನ ಕಥೆ, ಬಾಲನಾಗಮ್ಮನ ಕಥೆ, ನಂಜುಂಡೇಶ್ವರನ ಕಥೆ, ಮೈದಾಳಮ್ಮನ ಕಥೆ ಸೇರಿದಂತೆ ಹಲವು ಹರಿಕಥೆಗಳನ್ನು ಮಾಡುತ್ತೇನೆ. ಇದರ ಜತೆಗೆ ಭಜನೆ, ತತ್ವಪದ, ಜನಪದ ಗೀತೆಗಳನ್ನು ಹಾಡುತ್ತೇನೆ. ನಾನು ಕುರುಡಿ ಎಂದು ನನಗೆ ಯಾವತ್ತೂ ಅನಿಸಿಲ್ಲ. ಇದಕ್ಕೆ ನನ್ನಲ್ಲಿರುವ ಆತ್ಮವಿಶ್ವಾಸವೇ ಕಾರಣ. ಒಂದು ಹರಿಕಥೆ ಮಾಡಿದರೆ ₹1 ಸಾವಿರ ನೀಡುತ್ತಾರೆ ಎಂದು ತಿಳಿಸಿದರು.

‘ನನ್ನನ್ನು ಕಲಾವಿದೆ ಎಂದು ಗುರುತಿಸಿ ಸರ್ಕಾರದ ವತಿಯಿಂದ ಮಾಸಾಶನ ನೀಡಿದರೆ ಜೀವನ ನಡೆಸಲು ಅನುಕೂಲವಾಗುತ್ತದೆ. ನಾನು ಮಾಡುವ ಹರಿಕಥೆಗಳನ್ನು ಮುಂದಿನ ತಲೆಮಾರಿಗೂ ಕಲಿಸಬೇಕು ಎಂಬ ಆಸೆಯಿದೆ. ಯಾರೂ ಬಂದರೂ ನಾನು ಕಲಿಸಿಕೊಡಲು ಸಿದ್ಧನಿದ್ದೇನೆ’ ಎಂದು ತಿಳಿಸಿದರು.

‘ದೃಷ್ಟಿಯಲ್ಲಿ ವಿಕಲೆಯಾದರೂ ಪ್ರತಿಭೆಯಲ್ಲಿ ಸುಕಲೆಯಾಗಿರುವ ಗೌರಮ್ಮ ಅವರೊಳಗೆ ಅದ್ಭುತ ಚೇತನವಿದೆ. ಒಳಗಣ್ಣನ್ನು ಸದಾ ತೆರೆದುಕೊಂಡಿರುವ ಇವರಿಗೆ ಹೊರಗಣ್ಣಿನ ದೃಷ್ಟಿಯ ಕೊರತೆ ಇಲ್ಲಿಯವರೆವಿಗೂ ಇವರ ಅನುಭವಕ್ಕೆ ಬಂದಂತಿಲ್ಲ. ಅಷ್ಟರ ಮಟ್ಟಿಗೆ ಇವರು ತಮ್ಮ ಕಲಾ ಪ್ರದರ್ಶನದ ನೆಲೆಯಲ್ಲಿ ಅತ್ಯಂತ ಕ್ರಿಯಾಶೀಲರಾಗಿದ್ದಾರೆ. ಇದು ಗೌರಮ್ಮ ಅವರ ವ್ಯಕ್ತಿತ್ವದ ಅಚ್ಚರಿ ಎನ್ನಬಹುದು’ ಎನ್ನುತ್ತಾರೆ ಸಾಹಿತಿ ಎಲ್.ಸಿ. ರಾಜು.

ಆತ್ಮವಿಶ್ವಾಸದ ಪ್ರತೀಕ
‘ಅಂಧ ಕಲಾವಿದೆ ಗೌರಮ್ಮ ಅವರು ಯುವ ಸಮುದಾಯಕ್ಕೆ ಆತ್ಮವಿಶ್ವಾಸದ ಪ್ರತೀಕದಂತಿದ್ದಾರೆ. ತಾವು ಕುರುಡಿ ಎಂಬ ನ್ಯೂನ್ಯತೆಯನ್ನು ಬದಿಗಿಟ್ಟು ಹಲವು ಗಂಟೆಗಳ ಕಾಲ ಹರಿಕಥೆ ಮಾಡುವ ಮೂಲಕ ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು ಎನ್ನುವವರಿಗೆ ಅವರು ಮಾದರಿಯಾಗಿದ್ದಾರೆ’ ಎಂದು ಶಿಕ್ಷಕ ಪ್ರಭಾಕರ್‌ ತಿಳಿಸಿದರು. ‘ಇವರಿಗೆ ಕಣ್ಣು ಕಾಣಿಸದೇ ಇರುವುದರಿಂದ ಇವರು ಯಾವ ಇಲಾಖೆಗಳಿಗೂ ಹೋಗಲು ಆಗುವುದಿಲ್ಲ. ಆದ್ದರಿಂದ ಸಂಬಂಧಪಟ್ಟ ಇಲಾಖೆಯವರು ಇವರ ಕಷ್ಟಗಳಿಗೆ ಸ್ಪಂದಿಸಲಿ. ಜತೆಗೆ ಸಾಂಸ್ಕೃತಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಸಂಘಸಂಸ್ಥೆಗಳು ಅಂಧ ಕಲಾವಿದೆಯ ನೆರವಿಗೆ ಧಾವಿಸಬೇಕು’ ಎಂದು ತಿಳಿಸಿದರು.

–ಎಸ್. ರುದ್ರೇಶ್ವರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT