ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಯಕತ್ವದ ಎಚ್ಚರಿಕೆಯ ಗುಣ

Last Updated 24 ಮಾರ್ಚ್ 2019, 20:15 IST
ಅಕ್ಷರ ಗಾತ್ರ

ಬ್ರಹ್ಮದತ್ತ ವಾರಾಣಸಿಯನ್ನು ಆಳುತ್ತಿದ್ದಾಗ ಬೋಧಿಸತ್ವ ಒಂದು ವಾನರನಾಗಿ ಹುಟ್ಟಿ ಬೆಳೆದು ತನ್ನೊಂದಿಗೆ ಎಂಭತ್ತು ಸಾವಿರ ಕೋತಿಗಳನ್ನು ಸೇರಿಸಿಕೊಂಡು ತಾನು ರಾಜನಾಗಿ ಹಿಮಾಲಯದಲ್ಲಿ ನೆಲೆಸಿದ್ದ.

ಈ ವಾನರರಿರುವ ಕಾಡಿನ ಪಕ್ಕದಲ್ಲೇ ಗಡಿಪ್ರದೇಶದ ಹಳ್ಳಿಯೊಂದಿತ್ತು. ಅಲ್ಲಿಯ ಜನ ಕೆಲಸಕ್ಕೆಂದು ಬೇರೆ ಬೇರೆ ಊರುಗಳಿಗೆ ಹೋಗುವರು. ಕೆಲಸ ಮುಗಿದೊಡನೆ ಮತ್ತೆ ಹಳ್ಳಿಗೆ ಬಂದು ನೆಲೆಸುವರು. ಹೀಗಾಗಿ ಈ ಹಳ್ಳಿ ಕೆಲವೊಮ್ಮೆ ನಿರ್ಜನವಾಗಿ ಮತ್ತೆ ಕೆಲವೊಮ್ಮೆ ಜನಭರಿತವಾಗಿರುತ್ತಿತ್ತು. ಈ ಹಳ್ಳಿಯ ಮಧ್ಯದಲ್ಲಿ ಒಂದು ವಿಶಾಲವಾದ ಮಾವಿನಹಣ್ಣಿನ ಮರವಿತ್ತು. ಅದರ ಹಣ್ಣುಗಳು ಅತ್ಯಂತ ರುಚಿಯಾಗಿದ್ದವು. ಅಂತಹ ಹಣ್ಣುಗಳು ಕಾಡಿನ ಯಾವ ಮರದಲ್ಲಿಯೂ ಇರಲಿಲ್ಲ. ಹೀಗಾಗಿ ಹಣ್ಣಿನ ದಿನಗಳಲ್ಲಿ ಕೋತಿಗಳು ಹಳ್ಳಿಗೆ ಹೋಗಿ ಮನಸಾರೆ ಹಣ್ಣುಗಳನ್ನು ತಿನ್ನುತ್ತಿದ್ದವು. ಹಳ್ಳಿ ನಿರ್ಜನವಾಗಿದ್ದಾಗ ಇದು ಸುಲಭವಾಗಿತ್ತು. ಆದರೆ ಅದು ಜನಭರಿತವಾಗಿದ್ದಾಗ ಹಣ್ಣು ತಿನ್ನುವುದು ಕಷ್ಟವಾಗುತ್ತಿತ್ತು.

ಹಣ್ಣು ಬಿಡುವ ದಿನಗಳು ಬಂದಾಗ ಕೋತಿಗಳು ಬಂದು ನಾಯಕನನ್ನು ಹಣ್ಣಿಗಾಗಿ ಬೇಡಿಕೊಂಡವು. ಆಗ ಬೋಧಿಸತ್ವ ಒಂದು ಕೋತಿಯನ್ನು ಕಳಿಸಿ ಈಗ ಮರದಲ್ಲಿ ಹಣ್ಣು ಬಿಟ್ಟಿವೆಯೇ? ಹಳ್ಳಿ ಜನಭರಿತವಾಗಿದೆಯೇ ಎಂಬುದನ್ನು ನೋಡಲು ಹೇಳಿದ. ಆ ಕೋತಿ ಮರಳಿ ಬಂದು ಹೇಳಿತು, ‘ರಾಜಾ, ಮರದಲ್ಲಿ ಎಲೆಗಳು ಕಾಣದಷ್ಟು ಹಣ್ಣುಗಳು ಸುರಿದಿವೆ. ಆದರೆ ಹಳ್ಳಿಯಲ್ಲಿ ಕಾಲಿಡುವುದು ಸಾಧ್ಯವಿಲ್ಲ. ಅದು ತುಂಬ ಜನಭರಿತವಾಗಿದೆ. ಈಗ ನಾವೇನಾದರೂ ಹೋದರೆ ಬದುಕಿ ಉಳಿಯುವುದು ಕಷ್ಟ’. ಆದರೆ ಕೋತಿಗಳ ಬಾಯಲ್ಲಿ ನೀರು. ಅವು ರಾಜನಿಗೆ ದುಂಬಾಲು ಬಿದ್ದವು. ‘ಹೇಗಿದ್ದರೂ ಮನುಷ್ಯರು ರಾತ್ರಿ ಮಲಗುತ್ತಾರೆ. ಆದ್ದರಿಂದ ಮಧ್ಯರಾತ್ರಿಯ ಹೊತ್ತಿಗೆ ಹೋಗಿ ಹಣ್ಣು ತಿನ್ನೋಣ. ಅವರು ಏಳುವಷ್ಟರಲ್ಲಿ ಕಾಡಿಗೆ ಬಂದುಬಿಡೋಣ’ ಎಂದು ಕಾಡಿ, ಕಾಡಿ ಅವನನ್ನು ಒಪ್ಪಿಸಿದವು.

ಅಂದು ರಾತ್ರಿ ಹನ್ನೆರಡರ ನಂತರ ಬೋಧಿಸತ್ವನ ನಾಯಕತ್ವದಲ್ಲಿ ಎಲ್ಲ ಕೋತಿಗಳು ಮರವನ್ನೇರಿ ಹಣ್ಣು ತಿನ್ನತೊಡಗಿದವು. ಆದರೆ ಆಗ ಒಬ್ಬ ಮನುಷ್ಯ ಶೌಚಕ್ಕೆ ಹೋಗಲು ಎದ್ದವನು ಕೋತಿಗಳನ್ನು ನೋಡಿ ಜನರನ್ನೆಲ್ಲ ಎಬ್ಬಿಸಿದ. ನೂರಾರು ಜನ ಬಿಲ್ಲು ಬಾಣಗಳೊಡನೆ ಬಂದು ಮರವನ್ನು ಸುತ್ತಿ ನಿಂತರು. ಅವರ ನಾಯಕ ಹೇಳಿದ, ‘ಹೀಗೇ ಇರೋಣ ಬೆಳಕಾದ ತಕ್ಷಣ ಒಂದು ಕೋತಿಯೂ ಪಾರಾಗದ ಹಾಗೆ ಹೊಡೆದು ಕೊಂದು ಬಿಡಿ’. ಕೋತಿಗಳಿಗೆ ಗಾಬರಿಯಾಯಿತು. ಬೋಧಿಸತ್ವನ ಸುತ್ತ ನೆರೆದು ಅಳತೊಡಗಿದವು. ಆಗ ಆತ, ‘ಭಯ ಬೇಡ ನನಗೆ ಇಂಥ ಸಮಯ ಬಂದೀತು ಎಂದು ಯೋಚಿಸಿ ಯೋಜನೆ ಮಾಡಿದ್ದೇನೆ’ ಎಂದು ಒಂದು ಕೂಗು ಹಾಕಿದ. ಆಗ ಈ ಗುಂಪಿನಲ್ಲಿ ಬರದೇ ಹೊರಗೆ ಇದ್ದ ಕಪಿ ಸೇನಕ ಹೋಗಿ ಊರ ಹೊರಗಿನ ಗುಡಿಸಲಿಗೆ ಬೆಂಕಿ ಹಚ್ಚಿತು. ಗುಡಿಸಲಿನಿಂದ ಮತ್ತೊಂದು ಗುಡಿಸಲಿಗೆ ಬೆಂಕಿ ಹರಡಿತು, ಜನರೆಲ್ಲ ಗಾಬರಿಯಾಗಿ ಬೆಂಕಿ ನಂದಿಸಲು ಓಡಿದರು. ಆಗ ಬೋಧಿಸತ್ವ ಕಪಿಗಳನ್ನು ಕರೆದುಕೊಂಡು ಕಾಡಿಗೆ ಓಡಿ ಬಂದ. ಕಪಿಗಳೆಲ್ಲ ಸಂತೋಷದಿಂದ ನಾಯಕನನ್ನು, ಅವನ ನಾಯಕತ್ವ ಗುಣಗಳನ್ನು ಹೊಗಳಿದವು.

ನಾಯಕರಿಗೆ ಯಾವಾಗಲೂ ದೂರದೃಷ್ಟಿ ಇರಬೇಕು. ಅತ್ಯಂತ ಭದ್ರತೆಯ ಕ್ಷಣದಲ್ಲೂ ಅಭದ್ರತೆಯ ನೆರಳು ಕಾಣಬೇಕು, ಅದಕ್ಕೆ ಪ್ರತಿಯಾದ ವ್ಯವಸ್ಥೆ ಮಾಡಿಕೊಂಡಿರಬೇಕು. ತೊಂದರೆಯಾದಾಗ ಗಾಬರಿಯಿಂದ ಓಡಾಡದೇ ಪ್ರತಿಯೊಂದು ನಡೆಗೂ ನಾಲ್ಕಾರು ಬೇರೆ ನಡೆಗಳನ್ನು ಚಿಂತಿಸಿಕೊಂಡಿರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT