ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸತರಲ್ಲಿ ಹಳೆಯ ಅಂಶ

Last Updated 5 ಜೂನ್ 2019, 20:00 IST
ಅಕ್ಷರ ಗಾತ್ರ

ಹಳೆ ಸೂರ್ಯ ಹಳೆ ಚಂದ್ರ ಹಳೆ ಭೂಮಿ ಹಳೆ ನೀರು |
ಹಳೆ ಹಿಮಾಚಲ ಗಂಗೆ ಹಳೆ ವಂಶಚರಿತೆ ||
ಹಳೆಯವಿವು ನೀನಿದರೊಳಾವುದನು ಕಳೆದೀಯೊ? |
ಹಳದು ಹೊಸತರರೊಳಿರದೆ? – ಮಂಕುತಿಮ್ಮ || 141 ||

ಪದ-ಅರ್ಥ: ನೀನಿದರೊಳಾವುದನು=ನೀನು+ಇದರೊಳು+ಆವುದನು, ಹಳದು=ಹಳೆಯದಾದದ್ದು, ಹೊಸತರೊಳಿರದೆ=ಹೊಸತರೊಳು+ಇರದೆ.
ವಾಚ್ಯಾರ್ಥ: ಸೂರ್ಯ, ಚಂದ್ರ, ಭೂಮಿ, ನೀರು, ಹಿಮಾಲಯ ಪರ್ವತ, ಗಂಗೆ, ನಿನ್ನ ವಂಶ ಚರಿತೆ ಇವೆಲ್ಲವೂ ಹಳೆಯವೇ, ಪುರಾತನವೇ. ಇದರೊಳಗೆ ನೀನು ಯಾವುದನ್ನು ಬಿಡುತ್ತೀ? ಹಳೆಯದು ಹೊಸತರಲ್ಲಿರುವುದಿಲ್ಲವೇ?

ವಿವರಣೆ : ಈಗೊಂದು ಮೂರು ದಶಕಗಳಿಂದ ‘ಬಿಸಾಕುವ ಸಂಸ್ಕೃತಿ’ ಹೆಚ್ಚು ಬಲವತ್ತರವಾಗುತ್ತಿರುವಂತೆ ತೋರುತ್ತಿದೆ. ಹೊಸ ಬದಲಾವಣೆಯ ಹರಿಕಾರರಿಗೆ ಹಳೆಯದೆಲ್ಲದರ ಮುಗ್ಗುವಾಸನೆ ತಡೆಯದಾಗಿದೆ. ಹಳೆಯದನ್ನೆಲ್ಲ ಕಿತ್ತುಹಾಕಿ, ಡಿಟರ್ಜೆಂಟ್‍ನಿಂದ ತೊಳೆದು, ಸ್ವಚ್ಛ ಮಾಡಿ ಅಲ್ಲಿ ಹೊಸದನ್ನು ಪ್ರತಿಷ್ಠಾಪಿಸದ ಹೊರತು ನಮ್ಮ ಬಾಳು ಸಮೃದ್ಧಿಯಾಗದು. ಯಾವುದು ತಕ್ಷಣಕ್ಕೆ ಪ್ರಯೋಜನವಿಲ್ಲವೋ ಅದನ್ನು ಬಿಸಾಡುವುದು ನ್ಯಾಯ, ನಮಗೆ ಅವಶ್ಯವಿಲ್ಲದ್ದನ್ನು ಯಾಕೆ ಇಟ್ಟುಕೊಳ್ಳಬೇಕು? ಅದನ್ನು ಹೊರಗೆಸೆಯುವುದೇ ನ್ಯಾಯ. ಹೀಗೆ ಮುಂದುವರೆಯುತ್ತದೆ ಬದಲಾವಣೆಯ ವೀರರ ವಾದ.

ಇತ್ತೀಚೆಗೆ ಪೋಪ್ ಫ್ರಾನ್ಸಿಸ್ ಅವರೊಂದು ಸುಂದರ ಉಪನ್ಯಾಸವನ್ನು ನೀಡಿದ್ದರು. ಅದರಲ್ಲಿ ಈಗ ಹೆಚ್ಚಾಗುತ್ತಿರುವ “ಬಿಸಾಕುವ ಸಂಸ್ಕೃತಿ” (Throwaway culture) ಬಗ್ಗೆ ಮಾತನಾಡುತ್ತ ಜನ ಬೇಡವಾದದ್ದನ್ನೆಲ್ಲ ಬಿಸಾಕುವ ಭರದಲ್ಲಿದ್ದಾರೆ- ಹೊಟ್ಟೆಯಲ್ಲಿದ್ದು ಇನ್ನೂ ಹುಟ್ಟದ ಮಗು, ಬೇಡವಾದ ಮನೆಯ ವಸ್ತುಗಳು, ಮನೆಯ ಹಿರಿಯರು, ಬಡವರು – ಇವರನ್ನೆಲ್ಲ ನಿಷ್ಪ್ರಯೋಜಕವೆಂದು ಹೊರಗೆ ಎಸೆಯಲಾಗುತ್ತಿದೆ. ದುರ್ದೈವವೆಂದರೆ ಮನುಷ್ಯರನ್ನು, ಪರಂಪರೆಯನ್ನು ಅನಾವಶ್ಯಕವೆಂದು ಭಾವಿಸುವುದು ದುಃಖದ ಸಂಗತಿ ಎಂದಿದ್ದಾರೆ. ಎಷ್ಟು ಅರ್ಥಪೂರ್ಣವಾದ ಮಾತು!

ಇಂಗ್ಲಿಷಿನಲ್ಲೊಂದು ಗಾದೆ ಇದೆ. ತೊಟ್ಟಿಯಲ್ಲಿ ಮಗುವನ್ನು ತೊಳೆದ ನೀರನ್ನು ಹೊರಚೆಲ್ಲುವ ಭರಾಟೆಯಲ್ಲಿ ಮಗುವನ್ನು ಹೊರಗೆಸೆಯಬೇಡಿ. ಈಗ ತಂದೆ-ತಾಯಿ ಹಳಬರು, ಅವರಿಂದ ಯಾವ ಪ್ರಯೋಜನವೂ ಇಲ್ಲ. ಅವರು ಏಕಿರಬೇಕು ಎಂದು ಹೊರಗೆ ಹಾಕುವಾಗ ಅವರು ಕಟ್ಟಿದ ಹಳೆಮನೆ ಮಾತ್ರ ಬೇಕು ಎನ್ನಿಸುತ್ತದೆ. ಮನೆಯ ಹಿರಿಯರು, ಪುರಾತನರು ಬೇಡವೆಂದರೂ ಅವರ ಬಳುವಳಿಗಳಾದ ಬೋಳುತಲೆ, ಸಕ್ಕರೆ ಕಾಯಿಲೆ ಬಿಡುತ್ತವೆಯೆ? ಹಳೆಯದರ ತಳಹದಿಯ ಮೇಲೆಯೇ ಹೊಸ ಸೌಧ.

ಅದಕ್ಕೇ ಈ ಕಗ್ಗ ಕೇಳುತ್ತದೆ, ಸೂರ್ಯ, ಚಂದ್ರ, ಭೂಮಿ, ನೀರು, ಹಿಮಾಲಯ, ಗಂಗೆ ಮತ್ತು ನಿಮ್ಮ ವಂಶಚರಿತೆ ಇವೆಲ್ಲವೂ ಹಳೆಯವೇ. ಇವುಗಳೊಳಗೆ ಯಾವುದನ್ನು ಬಿಡಲಾದೀತು? ಬಿಡುವುದರಲ್ಲಿ ಅರ್ಥವಿದೆಯೆ? ಹಳೆಯದೆಲ್ಲವೂ ಬಂಗಾರವಾಗಿರಲಿಕ್ಕಿಲ್ಲ. ಭವಿಷ್ಯಕ್ಕೆ ಪ್ರಯೋಜನವಾಗುವ, ಸಾರ್ವಕಾಲಿಕವಾದ ಕೆಲವೊಂದಿಷ್ಟು ಚಿಂತನೆಗಳಿದ್ದಾವು. ಅವುಗಳ ಮೇಲೆಯೇ ಹೊಸ ಸಿದ್ಧಾಂತಗಳು ಬಂದದ್ದು. ಆದ್ದರಿಂದ ಕಗ್ಗ ಸಲಹೆ ಕೊಡುತ್ತದೆ - ಹಳತು ಹೊಸತರೊಳಗಿರದೆ? ಹೊಸ ಚಿಂತನೆಗಳ ಅಡಿಯಲ್ಲಿ ಹಳೆ ತತ್ವಗಳ ಬೀಜಗಳು ಮೊಳೆದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT