ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರ ಕಸಿಯಲು ರಾಜ್ಯಪಾಲರ ಯತ್ನ: ಮಮತಾ ಬ್ಯಾನರ್ಜಿ ಆರೋಪ

Last Updated 2 ಮೇ 2020, 20:44 IST
ಅಕ್ಷರ ಗಾತ್ರ

ಕೋಲ್ಕತ್ತ: ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ರಾಜ್ಯಪಾಲ ಜಗ ದೀಪ್‌ ಧನ್‌ಕರ್‌ ನಡುವಿನ ಸಂಬಂ ಧವು ಈಗ ಇನ್ನಷ್ಟು ಹದಗೆಟ್ಟಿದೆ. ‘ಕೋವಿಡ್‌–19 ಸಮಸ್ಯೆಯನ್ನು ನೆಪವಾಗಿಟ್ಟು, ರಾಜ್ಯಪಾಲರು ಅಧಿಕಾರವನ್ನು ಆಕ್ರಮಿಸಿಕೊಳ್ಳಲು ಶ್ರಮಿ
ಸುತ್ತಿದ್ದಾರೆ’ ಎಂದು ಮಮತಾ ಶನಿವಾರ ಆರೋಪಿಸಿದ್ದಾರೆ.

ಕಳೆದವಾರ ರಾಜ್ಯಪಾಲರು ಬರೆದಿದ್ದ ಎರಡು ಪತ್ರಗಳನ್ನು ಮುಂದಿಟ್ಟುಕೊಂಡು ಈ ಆರೋಪ ಮಾಡಿರುವ ಮಮತಾ, ‘ದೇಶದಲ್ಲಿ ಸಂವಿಧಾನ ಜಾರಿ ನಂತರ ಈವರೆಗೆ ಯಾವ ರಾಜ್ಯಪಾಲರೂ ಯಾವ ಮುಖ್ಯಮಂತ್ರಿಯ ಜತೆಗೂ ಇಂಥ ಪತ್ರವ್ಯವಹಾರ ಮಾಡಿದ ಅಥವಾ ಮುಖ್ಯಮಂತ್ರಿ ವಿರುದ್ಧ ಇಂಥ ಹೇಳಿಕೆ ನೀಡಿದ ಉದಾಹರಣೆ ಇಲ್ಲ’ ಎಂದಿದ್ದಾರೆ.

ಈ ಕುರಿತು ರಾಜ್ಯಪಾಲರಿಗೆ ಪತ್ರವನ್ನು ಬರೆದಿರುವ ಮಮತಾ, ‘ಕೋವಿಡ್‌–19ರ ಹೆಸರಿನಲ್ಲಿ ನೀವು ಅಧಿಕಾರವನ್ನು ಆಕ್ರಮಿಸುವ ಪ್ರಯತ್ನ ಮಾಡುತ್ತಿದ್ದೀರಿ. ರಾಷ್ಟ್ರ ಮತ್ತು ಪಶ್ಚಿಮ ಬಂಗಾಳವು ತೀವ್ರವಾದ ಬಿಕ್ಕಟ್ಟನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ ನಿಮ್ಮ ಈ ಪ್ರಯತ್ನಗಳನ್ನು ತೀವ್ರಗೊಳಿಸಬಾರದು ಎಂದು ಮನವಿ ಮಾಡುತ್ತೇನೆ’ ಎಂದಿದ್ದಾರೆ.

ರಾಜ್ಯಪಾಲರಿಗೆ ಇರುವ ಅತ್ಯಂತ ಸೀಮಿತ ಅಧಿಕಾರಗಳ ಬಗ್ಗೆ ಸುಪ್ರೀಂ ಕೋರ್ಟ್‌ ನೀಡಿರುವ ಹಲವು ತೀರ್ಪುಗಳನ್ನು ಉಲ್ಲೇಖಿಸಿ, ‘ವಾಸ್ತವವನ್ನು ಒಪ್ಪಿಕೊಳ್ಳಲು ಅವರಿಗೆ ಕಷ್ಟವಾಗುವುದಾದರೆ, ರಾಜ್ಯಪಾಲರಾಗುವ ಬದಲು ಮುಖ್ಯಮಂತ್ರಿಯ ಹುದ್ದೆಯನ್ನು ಅವರು ಆಯ್ಕೆ ಮಾಡಿಕೊಳ್ಳಬೇಕಾಗಿತ್ತು’ ಎಂದು ಕುಟುಕಿದ್ದಾರೆ.

ಮಮತಾ ಅವರ ಪತ್ರಕ್ಕೆ ಸರಣಿ ಟ್ವೀಟ್‌ ಮೂಲಕ ಪ್ರತಿಕ್ರಿಯೆ ನೀಡಿರುವ ರಾಜ್ಯಪಾಲರು, ‘ಮುಖ್ಯಮಂತ್ರಿಯ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ. ಜಗಳವಾಡಲು ಇದು ಸಮಯವಲ್ಲ, ವಿವೇಕಿಯಾದವರು ಜಗಳವಾಡಲು ಇಷ್ಟಪಡುವುದೂ ಇಲ್ಲ. ಪತ್ರದಲ್ಲಿ ಅವರು ಉಲ್ಲೇಖಿಸಿರುವ ಮಾತುಗಳನ್ನು ಒಪ್ಪಲು ಸಾಧ್ಯವಿಲ್ಲದಿರುವುದರಿಂದ ಅವರಿಗೆ ಉತ್ತರವನ್ನು ಕಳುಹಿಸಲಾಗುವುದು’ ಎಂದಿದ್ದಾರೆ.

ತಾಳೆಯಾಗದ ಸಂಖ್ಯೆ
ಪಶ್ಚಿಮ ಬಂಗಾಳದ ಆರೋಗ್ಯ ಸಚಿವಾಲಯದ ವೆಬ್‌ಸೈಟ್‌ನಲ್ಲಿ ನಮೂ ದಿಸಿರುವ ಕೋವಿಡ್‌–19 ದೃಢಪಟ್ಟ ಪ್ರಕರಣಗಳ ಸಂಖ್ಯೆಗೂ (572), ರಾಜ್ಯದ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ಕೇಂದ್ರಕ್ಕೆ ಕಳುಹಿಸಿರುವ ಮಾಹಿತಿಯಲ್ಲಿ ದಾಖಲಿಸಿರುವ ಸಂಖ್ಯೆಗೂ (931) ತಾಳೆಯಾಗದಿರುವುದು ಜಟಾಪಟಿಗೆ ಕಾರಣವಾಗಿದೆ.

‘ಅಂಕಿಅಂಶಗಳನ್ನು ಮುಚ್ಚಿಡುವುದನ್ನು ಬಿಟ್ಟು, ಪಾರದರ್ಶಕವಾಗಿ ಹಂಚಿಕೊಳ್ಳಿ. ಗುಣಮುಖರಾದವರು ಮತ್ತು ಸತ್ತಿರುವವರನ್ನು ಗಣನೆಗೆ ತೆಗೆದುಕೊಂಡರೂ 572 ಮತ್ತು 931ರ ನಡುವಿನ ಅಂತರವನ್ನು ಹೊಂದಾ ಣಿಕೆ ಮಾಡಲಾಗುವುದಿಲ್ಲ’ ಎಂದು ಧನ್‌ಕರ್‌ ಅವರು ಟ್ವೀಟ್‌ ಮಾಡಿದ್ದರು. ಆರೋಗ್ಯ ಕಾರ್ಯದರ್ಶಿ ಕೇಂದ್ರಕ್ಕೆ ಕಳುಹಿಸಿದ ಪತ್ರದ ಪ್ರತಿಯನ್ನೂ ಅವರು ಟ್ವೀಟ್‌ ಜತೆ ಹಂಚಿಕೊಂಡಿದ್ದರು.

ರಾಜ್ಯದ ಆರೋಗ್ಯ ಕಾರ್ಯದರ್ಶಿಯು ಏ.30ರಂದು ಕೇಂದ್ರಕ್ಕೆ ನೀಡಿದ್ದ ಮಾಹಿತಿಯಲ್ಲಿ ರಾಜ್ಯದಲ್ಲಿ 931 ಕೋವಿಡ್‌–19 ಪ್ರಕರಣಗಳಿವೆ ಎಂದು ತಿಳಿಸಿದ್ದರು. ಆದರೆ ಅದೇದಿನ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ್ದ ಮಾಹಿತಿಯಲ್ಲಿ ರಾಜ್ಯದಲ್ಲಿ 572 ಪ್ರಕರಣಗಳು ದೃಢಪಟ್ಟಿವೆ ಎಂದುಉಲ್ಲೇಖಿಸಲಾಗಿತ್ತು.

ಇದಾದ ನಂತದ ಮುಖ್ಯ ಕಾರ್ಯದರ್ಶಿ ರಾಜೀವ್‌ ಸಿನ್ಹಾ ಅವರು ಸತ್ತ ವರು, ಸೋಂಕು ದೃಢಪಟ್ಟವರು ಮತ್ತು ಗುಣಮುಖರಾದವರ ಪಟ್ಟಿಯನ್ನು ನೀಡಿದ್ದರು. ಅದರಲ್ಲಿ ನೀಡಿದ್ದ ಅಂಕಿಸಂಖ್ಯೆಗಳೂ 931ರ ಜತೆತಾಳೆಯಾಗುತ್ತಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT