‘ಪ್ರವಾಹದ ವಿರುದ್ಧ ಈಜಿ’ ಪತ್ನಿಯನ್ನು ಮರಳಿ ಪಡೆದ

7
ಹೆಂಡತಿಗಾಗಿ ಜೀವವನ್ನೇ ಪಣಕ್ಕೆ ಇಟ್ಟ ಈ ಸತ್ಯಕತೆ ಸಿನಿಮಾಕ್ಕೂ ಪ್ರೇರಣೆಯಾಯ್ತು!

‘ಪ್ರವಾಹದ ವಿರುದ್ಧ ಈಜಿ’ ಪತ್ನಿಯನ್ನು ಮರಳಿ ಪಡೆದ

Published:
Updated:
Deccan Herald

ಅಜ್ಮೀರ್ (ರಾಜಸ್ಥಾನ): ಇಲ್ಲಿ ಟ್ರಾವೆಲ್ ಏಜೆನ್ಸಿಯಲ್ಲಿ ಕೆಲಸ ಮಾಡುವ ವಿಜೇಂದರ್ ಸಿಂಗ್ ರಾಥೋಡ್‌ಗೆ ಐತಿಹಾಸಿಕ ಹಾಗೂ ಪಾರಂಪರಿಕ ತಾಣಗಳನ್ನು ಸುತ್ತುವುದು ಹವ್ಯಾಸವೂ ಹೌದು, ವೃತ್ತಿಯ ಭಾಗವೂ ಹೌದು. ಆದರೆ, ಉತ್ತರಾಖಂಡದ ಕೇದಾರನಾಥಕ್ಕೆ 2013ರಲ್ಲಿ ಹೋಗಿ ಬಂದ ಪ್ರವಾಸ ಮಾತ್ರ ಅವರ ಬದುಕನ್ನು ಶಾಶ್ವತವಾಗಿ ಬದಲಿಸಿತು. ಹೆಂಡತಿ ಲೀಲಾ ಮತ್ತು 30 ಪ್ರಯಾಣಿಕರೊಂದಿಗೆ ಅವರು ಚಾರ್‌ಧಾಮ್ ಯಾತ್ರೆಗೆ ಹೊರಟರು.

ಉತ್ತರಾಖಂಡಕ್ಕೆ ಹೋಗುವವರೆಗೂ ಅಲ್ಲಿನ ಪ್ರವಾಹ ಪರಿಸ್ಥಿತಿ ಬಗ್ಗೆ ಅವರಿಗೆ ಏನೊಂದೂ ಗೊತ್ತಿರಲಿಲ್ಲ. ಪ್ರವಾಹ ಮತ್ತು ಭೂಕುಸಿತದಿಂದ ತಲೆದೋರಿದ ಬಿಕ್ಕಟ್ಟಿನಲ್ಲಿ ಲೀಲಾ ಮತ್ತು ವಿಜೇಂದ್ರ ಬೇರ್ಪಟ್ಟರು. ಪರಸ್ಪರ ಸಂಪರ್ಕಿಸಲು ಯಾವುದೇ ಸೌಲಭ್ಯವೂ ಇರಲಿಲ್ಲ. ಹೀಗಾಗಿ, ಪ್ರವಾಹ ಪರಿಸ್ಥಿತಿ, ಹಾಳಾದ ರಸ್ತೆ ಸಂಪರ್ಕ ವ್ಯವಸ್ಥೆಯ ಗೊಂದಲಮಯ ಸನ್ನಿವೇಶದಲ್ಲಿ ಒಬ್ಬರನ್ನೊಬ್ಬರು ಭೇಟಿಯಾಗಲು ಸಾಧ್ಯವಾಗಲೇ ಇಲ್ಲ.

ದಂಪತಿ ಮತ್ತೆ ಪರಸ್ಪರರ ಮುಖ ನೋಡುವಷ್ಟರಲ್ಲಿ ಬರೋಬ್ಬರಿ 19 ತಿಂಗಳು ಕಳೆದುಹೋಗಿತ್ತು. ಆ ಖುಷಿಯ ಕ್ಷಣ ಸಾಕಾರವಾಗಲು ವಿಜೇಂದ್ರ ತಮ್ಮ ಜೀವವನ್ನೇ ತೇಯ್ದಿದ್ದರು. ಸಿನಿಮಾದಂತೆ ತೆರೆದುಕೊಳ್ಳುವ ಈ ಕಥೆಯನ್ನು ಆಧರಿಸಿ ಚಿತ್ರ ತೆಗೆಯುವ ಪ್ರಯತ್ನವೂ ಇದೀಗ ಬಾಲಿವುಡ್‌ನಲ್ಲಿ ಆರಂಭವಾಗಿದೆ. ಈ ಬಗ್ಗೆ ‘ದಿ ಬೆಟರ್‌ ಇಂಡಿಯಾ’ ವೆಬ್‌ಸೈಟ್‌ ಲೇಖನವೊಂದನ್ನು ಪ್ರಕಟಿಸಿದೆ. ವಿಜೇಂದ್ರ ತಮ್ಮ ಪತ್ನಿಯನ್ನು ಹುಡುಕಿಕೊಂಡ ಕಥೆ ಹೀಗಿದೆ...

‘ಅದು 2013ರ ಜೂನ್ 12. ನಾನು ಮತ್ತು ಲೀಲಾ ಚಾರ್‌ಧಾಮ್ ಯಾತ್ರೆಗೆ ಹೊರಟೆವು. ಅಲ್ಲಿನ ಪರಿಸ್ಥಿತಿ ಬಗ್ಗೆ ನಮಗೆ ಏನೂ ಗೊತ್ತಿರಲಿಲ್ಲ. ನಾನು ಕೆಲಸ ಮಾಡುತ್ತಿದ್ದ ಟ್ರಾವೆಲ್ ಕಂಪನಿಯ ಬಸ್‌ನಲ್ಲಿ ಒಟ್ಟು 30 ಪ್ರಯಾಣಿಕರನ್ನು ಕರೆದೊಯ್ದಿದ್ದೆ. ನಾನು ಲೀಲಾ ಜೊತೆಗೆ ಕೊನೆಯ ಮಾತುಗಳನ್ನು ಆಡಿದ್ದು ಜೂನ್ 16ರಂದು. ಅದೇ ದಿನ ಕೇದಾರನಾಥಕ್ಕೆ ಪ್ರವಾಹ ಅಪ್ಪಳಿಸಿ, ಅವಳೆಲ್ಲೋ–ನಾನೆಲ್ಲೋ ಆಗಿಬಿಟ್ಟೆವು’.

‘ಆ ಜಾಗ ಲೀಲಾಗಷ್ಟೇ ಅಲ್ಲ, ನನಗೂ ಅಪರಿಚಿತ. ಲೀಲಾ ಕಳೆದುಹೋದ ನಂತರ ನನಗೆ ಹುಚ್ಚು ಹಿಡಿದಂತೆ ಆಯಿತು. ಪ್ರಕೃತಿಮಾತೆ ಮತ್ತು ಕ್ರೂರವಿಧಿಯ ವಿರುದ್ಧ ಹೋರಾಟಕ್ಕೆ ಮುಂದಾದೆ. ನನಗೆ ನನ್ನ ಲೀಲಾ ಬೇಕಾಗಿತ್ತು. ಕೇದಾರದಲ್ಲಿ ಪ್ರವಾಹದ ನೀರಿನ ಮಟ್ಟ ಏರಿ ಕಟ್ಟಡಗಳು ಮುಳುಗಿದವು. ಆದರೂ ನಾನು ಹುಡುಕಾಟ ನಿಲ್ಲಿಸಲಿಲ್ಲ. ನನ್ನ ಬಳಿಯಿದ್ದ ಲೀಲಾಳ ಒಂದೇ ಒಂದು ಫೋಟೊವನ್ನು ಎಲ್ಲರಿಗೂ ತೋರಿಸುತ್ತಾ, ಈ ಚಿತ್ರದಲ್ಲಿರುವ ಮಹಿಳೆಯನ್ನು ನೋಡಿದ್ದೀರಾ ಎಂದು ಕೇಳುತ್ತಿದ್ದೆ’.

‘ದಿನಗಳು, ವಾರಗಳು, ತಿಂಗಳುಗಳು ಉರುಳಿಹೋದವು. ಲೀಲಾ ಮಾತ್ರ ಸಿಗಲೇ ಇಲ್ಲ. ನನ್ನ ಕುಟುಂಬದ ಸದಸ್ಯರು ವಾಪಸ್ ಬಂದುಬಿಡುವಂತೆ ಹೇಳುತ್ತಿದ್ದರು. ನಾನು ಸೋಲೊಪ್ಪಲು ತಯಾರಿರಲಿಲ್ಲ. ನನಗೆ ತಲೆಕೆಟ್ಟುಹೋಗಿದೆ ಎಂದು ಹಲವರು ಅಂದುಕೊಂಡಿದ್ದರು. ಮಕ್ಕಳಾದ ರಾಜಲಕ್ಷ್ಮಿ, ಪುಷ್ಪಾ, ಪಿಂಕಿ, ಸೀಮಾದೇವಿ ಮತ್ತು ಸಾಗರ್‌ ಅವರನ್ನು ನೋಡಿಕೊಳ್ಳುವ ಜವಾಬ್ದಾರಿಯೂ ನನ್ನ ಮೇಲಿತ್ತು. ಅಪ್ಪ–ಅಮ್ಮ ಬರುತ್ತಾರೆ ಎಂದು ಅವರು ಕಾಯುತ್ತಿದ್ದರು’.

‘ಆದರೆ ಲೀಲಾ ಇಲ್ಲದೆ ಊರಿಗೆ ವಾಪಸ್ ಹೋಗಲು ನನಗೆ ಮನಸ್ಸೇ ಬರಲಿಲ್ಲ. ಉತ್ತರಾಖಂಡ ರಾಜ್ಯದ ಸುಮಾರು ಒಂದು ಸಾವಿರ ಹಳ್ಳಿಗಳನ್ನು ಎಡತಾಕಿ ಬಂದೆ. ಎಲ್ಲಿಯೂ ಲೀಲಾ ಪತ್ತೆಯಾಗಲಿಲ್ಲ. ನನ್ನ ಬಂಧುಗಳೆಲ್ಲರೂ ‘ಲೀಲಾ ಸತ್ತುಹೋಗಿದ್ದಾಳೆ’ ಎಂದೇ ಹೇಳುತ್ತಿದ್ದರು. ಉತ್ತರಾಖಂಡ ಸರ್ಕಾರವು ‘ಲೀಲಾ ಸತ್ತುಹೋಗಿದ್ದಾಳೆ’ ಎಂದು ಘೋಷಿಸಿ, ₹9 ಲಕ್ಷ ಪರಿಹಾರ ಕೊಡಲು ಮುಂದೆ ಬಂತು. ‘ನಿನ್ನ ಲೀಲಾ ಸತ್ತಿಲ್ಲ, ಅವಳು ನಿನಗಾಗಿ ಕಾಯುತ್ತಿದ್ದಾಳೆ’ ಎನ್ನುತ್ತಿದ್ದ ನನ್ನ ಮನಸ್ಸಿನ ಮಾತನ್ನೇ ನಾನು ನಂಬಿದೆ. ಪರಿಹಾರ ತೆಗೆದುಕೊಳ್ಳಲಿಲ್ಲ. ಹುಡುಕಾಟ ಮುಂದುವರಿಸಿದೆ.

‘ಸತತ 19 ತಿಂಗಳು ಹೀಗೆ ಹುಡುಕುತ್ತಲೇ ಇದ್ದೆ. ದುಡ್ಡು ನೀರಿನಂತೆ ಖರ್ಚಾಗುತ್ತಿತ್ತು. ಹುಡುಕಾಟದ ವೆಚ್ಚ, ಮಕ್ಕಳ ಪೋಷಣೆಯ ಖರ್ಚಿಗಾಗಿ ಪಿತ್ರಾರ್ಜಿತ ಆಸ್ತಿಯನ್ನೂ ಮಾರಬೇಕಾಯಿತು. ಆದರೆ ಅವಳೆಡೆಗಿನ ನನ್ನ ಪ್ರೀತಿ ಮತ್ತು ಅವಳು ಜೀವಂತ ಸಿಕ್ಕಿಯೇ ಸಿಗುತ್ತಾಳೆ ಎನ್ನುವ ನಿರೀಕ್ಷೆ ಮಾತ್ರ ಕಡಿಮೆಯಾಗಿರಲಿಲ್ಲ. ಹುಡುಕಾಟದ ದಿನಗಳಲ್ಲಿ ರಸ್ತೆಬದಿಯಲ್ಲಿಯೇ ಎಷ್ಟೋ ರಾತ್ರಿಗಳನ್ನು ಕಳೆದಿದ್ದೇನೆ. ಹೊತ್ತುಹೊತ್ತಿಗೆ ಊಟ–ತಿಂಡಿ ಸಿಗದೆ ಪರದಾಡಿದ್ದೇನೆ’.

‘ಕೊನೆಗೂ ದೇವರು ಕಣ್ಣುಬಿಟ್ಟ. 2015ರ ಜ.27ರಂದು ಗೊಂಗೊಲಿಯ ಕೆಲ ಗ್ರಾಮಸ್ಥರು ತಮ್ಮ ಊರಿನಲ್ಲಿ ಮಾನಸಿಕ ಅಸ್ವಸ್ಥೆಯೊಬ್ಬರು ಇದ್ದಾರೆ ಎಂದು ಹೇಳಿದರು. ಆಕೆ ನನ್ನ ಹೆಂಡತಿಯೇ ಆಗಿರಬಹುದು ಎಂದು ಅಲ್ಲಿಗೆ ಓಡಿದೆ. ನನ್ನ ಅದೃಷ್ಟಕ್ಕೆ ಆಕೆ ಲೀಲಾ ಆಗಿದ್ದಳು. ಆದರೆ ಆಘಾತದಿಂದ ಅವಳ ಮನಸ್ಸು ಮುದುಡಿಹೋಗಿತ್ತು. ಒಂಟಿಯಾಗಿ ಸುಮ್ಮನೇ ಕುಳಿತಿರುತ್ತಿದ್ದಳು. ಯಾರೊಂದಿಗೂ ಮಾತನಾಡುತ್ತಿರಲಿಲ್ಲ. ಅವಳನ್ನು ನೋಡಿ ನನಗೆ ಖುಷಿಯಾಯಿತು. ಮನೆಗೆ ಕರೆದೊಯ್ದೆ. ಈಗ ನನ್ನ ಇಡೀ ಕುಟುಂಬ ಅವಳ ಜೊತೆಗೆ ನಿಂತಿದೆ. ಅವಳು ಮೊದಲಿನಂತೆ ಆಗಲು ಏನು ಮಾಡಬೇಕು ಎಂದು ಯೋಚಿಸಿ ಅದರಂತೆ ನಡೆದುಕೊಳ್ಳುತ್ತಿದ್ದೇವೆ. ಏನಾಯಿತು ಎನ್ನುವ ಬಗ್ಗೆ ನಾವು ಯಾರೂ ಮಾತನಾಡುತ್ತಿಲ್ಲ. ಅವಳನ್ನು ನಗಿಸಲು ಸದಾ ಪ್ರಯತ್ನಿಸುತ್ತಿರುತ್ತೇವೆ’.

‘ಲೀಲಾ ಈಗ ಹುಷಾರಾಗಿದ್ದಾಳೆ. ನನ್ನ ಮಕ್ಕಳಿಗೆ ತಾಯಿ ಸಿಕ್ಕಳು, ನನಗೆ ಹೆಂಡತಿ ಮತ್ತು ಗೆಳತಿ’ ವಿಜೇಂದ್ರ ಇಷ್ಟು ಹೇಳಿ ನೆಮ್ಮದಿಯ ನಿಟ್ಟುಸಿರು ಬಿಡುತ್ತಾರೆ.

ಆದರೆ, ಈ ಕಥೆ ಬಾಲಿವುಡ್ ಮಂದಿಯ ಕುತೂಹಲ ಕೆರಳಿಸಿದೆ. ‘ನಿನ್ನ ಹೆಂಡತಿ ಸತ್ತು ಹೋಗಿದ್ದಾಳೆ’ ಎಂದು ಸರ್ಕಾರವೇ ಘೋಷಿಸಿ ಲಕ್ಷಾಂತರ ರೂಪಾಯಿ ಪರಿಹಾರ ನೀಡಲು ಮುಂದೆ ಬಂದರೂ, ಒಪ್ಪದ ವಿಜೇಂದ್ರ ಅವರ ಕಥೆಯನ್ನು ಬಾಲಿವುಡ್ ಅಚ್ಚರಿಯಿಂದ ಗಮನಿಸಿದೆ. ಈ ಸಾಧನೆಯನ್ನು ತೆರೆಯ ಮೇಲೆ ತರಲು ಸಿದ್ಧಾರ್ಥ ರಾಯ್ ಕಪೂರ್ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ವಿನೋದ್ ಕಪ್ರಿ ನಿರ್ದೇಶನದ ಹೊಣೆ ಹೊತ್ತುಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !