ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿ ವಿಭಜನೆ ತಂತ್ರ ನಡೆಯದು

Last Updated 7 ಮೇ 2018, 12:58 IST
ಅಕ್ಷರ ಗಾತ್ರ

ಗಂಗಾವತಿ: ರಾಜಕೀಯ, ಚುನಾವಣೆ, ಪ್ರಚಾರ, ಜಾತಿ, ತಂತ್ರಗಾರಿಕೆ ಸಮೀಕರಣ ವಿದ್ಯೆ ಕೇವಲ ಪುರುಷರಿಗೆ ಸೀಮಿತವಲ್ಲ ಎಂಬುದು ಕನಕಗಿರಿ ಮೀಸಲು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಮಂಜುಳಾ ಅವರು ಕಣಕ್ಕಿಳಿಯುವ ಮೂಲಕ ಸಾಬೀತುಪಡಿಸಲು ಮುಂದಾಗಿದ್ದಾರೆ.

ಹೈದರಾಬಾದ್‌ ಕರ್ನಾಟಕ ಪ್ರದೇಶದಲ್ಲಿ ಜೆಡಿಎಸ್‌ ಟಿಕೆಟ್ ಪಡೆದ ಏಕೈಕ ಮಹಿಳೆ ಎಂಬ ಹೆಗ್ಗಳಿಕೆ ಮಂಜುಳಾ ಅವರದ್ದು. ರಾಜಕೀಯವಾಗಿ ಎರಡು ದಶಕಗಳ ಅನುಭವಿ. ಕಾಂಗ್ರೆಸ್‌ ಅಭ್ಯರ್ಥಿ ಶಿವರಾಜ ತಂಗಡಗಿ, ಕಳೆದ ಒಂದು ದಶಕದಿಂದ ಕ್ಷೇತ್ರದಲ್ಲಿ ರಾಜಕೀಯ ಅಸ್ತಿತ್ವಕ್ಕೆ ಹೋರಾಡುತ್ತಿರುವ ಬಿಜೆಪಿಯ ಬಸವರಾಜ ದಡೇಸೂಗೂರು ಅವರಂಥ ಪ್ರಬಲ ಸ್ಪರ್ಧಿಗಳ ಮಧ್ಯೆ ಮಂಜುಳಾ ಪೈಪೋಟಿಗೆ ಇಳಿದಿದ್ದಾರೆ.

ನಗರದ ವಡ್ಡರಹಟ್ಟಿಕ್ಯಾಂಪಿನ ನಿವಾಸದಲ್ಲಿದ್ದ ಮಂಜುಳಾ ಅವರನ್ನು ‘ಪ್ರಜಾವಾಣಿ’ ಮಾತನಾಡಿಸಿದಾಗ, ಈ ಬಾರಿ ಕನಕಗಿರಿ ಕ್ಷೇತ್ರದಲ್ಲಿ ಜನ ಬದಲಾವಣೆ ಬಯಸಿದ್ದಾರೆ. ಮುಖ್ಯವಾಗಿ ಮಹಿಳಾ ಮತದಾರರು ಕ್ಷೇತ್ರದಲ್ಲಿ ನಿರ್ಣಾಯಕರಾಗಿದ್ದರಿಂದ ಅವರಿಂದ ನನಗೆ ಸಾಕಷ್ಟು ಸ್ಪಂದನ ಸಿಗುತ್ತಿದೆ. ಈ ಬಾರಿ ಗೆಲುವು ತಮ್ಮದೇ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನೀವು ಭೋವಿ ಸಮುದಾಯದವರು. ಕೇವಲ ಆರು ಸಾವಿರ ಮಾತ್ರ ಇರುವ ಸಮುದಾಯದ ಮತಗಳ ಮೇಲೆ ಹೇಗೆ ಅವಲಂಬನೆಯಾಗಿದ್ದೀರಿ?

ನಾವು ಒಂದು ಸಮುದಾಯಕ್ಕೆ ಸೀಮಿತವಾಗಿಲ್ಲ. ನನ್ನ ತಂದೆ ಯು.ಗಣೇಶ ನಾಲ್ಕು ದಶಕಗಳ ಕಾಲ ಗುತ್ತಿಗೆದಾರರಾಗಿ ಇಡೀ ತಾಲ್ಲೂಕಿನ ಪ್ರತಿ ಗ್ರಾಮದಲ್ಲಿ ಕಾಮಗಾರಿ ಮಾಡಿದ್ದಾರೆ. ಜನರ ಪ್ರೀತಿ ವಿಶ್ವಾಸ ಗಳಿಸಿದ್ದಾರೆ. ಅದು ನನಗೆ ವರ.  ಹತ್ತು ವರ್ಷದಿಂದ ಶಿವರಾಜ ತಂಗಡಗಿ ಕ್ಷೇತ್ರದಲ್ಲಿ ಸ್ಪೃಶ್ಯ, ಅಸ್ಪೃಶ್ಯ ಎಂಬ ಬೇಧದ ಮೂಲಕ ಜಾತಿ, ವರ್ಗ ವಿಭಜಿಸಿದ್ದಾರೆ. ಈ ಬಾರಿ ಜಾತಿ ಆಧಾರಿತ ಚುನಾವಣೆ ಅಷ್ಟು ಸುಲಭವಲ್ಲ ಎಂದು ತೋರಿಸುವ ಇರಾದೆಯಿದೆ.

ರಾಜಕೀಯ ಅನುಭವ ಇಲ್ಲದ ನೀವು, ಕ್ಷೇತ್ರದಲ್ಲಿ ಜಾತಿ, ಹಣದ ಮೇಲೆ ಚುನಾವಣೆ ಎದುರಿಸುವ ಘಟಾನುಘಾಟಿಗಳನ್ನು ಹೇಗೆ ಕಟ್ಟಿ ಹಾಕುತ್ತೀರಿ?

ಆನೆಗೊಂದಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸ್ಯೆ ಅನಿತಾ ನನ್ನ ನಾದಿನಿ. ಆಕೆಯ ಚುನಾವಣೆಯಲ್ಲಿ ನನಗೆ ರಾಜಕೀಯದ ಅನುಭವ ಸಿಕ್ಕಿದೆ. ಮಾಜಿ ಸಂಸದ ಎಚ್.ಜಿ.ರಾಮುಲು, ಮಾಜಿ ಶಾಸಕ ಎಚ್.ಆರ್. ಶ್ರೀನಾಥರ ಮಾರ್ಗದರ್ಶನ, ಸಲಹೆ ಸೂಚನೆ, ದೇವೇಗೌಡ ಹಾಗೂ ಎಚ್‌.ಡಿ.ಕುಮಾರಸ್ವಾಮಿ ಅವರ ಪ್ರೋತ್ಸಾಹ ಎಲ್ಲಕ್ಕಿಂತ ಮುಖ್ಯವಾಗಿ ಮಹಿಳೆಯರ ಅಪಾರ ಬೆಂಬಲ ಸಿಗುತ್ತಿದೆ. ಕೇವಲ ಹಣದಿಂದ ಚುನಾವಣೆ ಮಾಡುತ್ತೇನೆ ಎಂಬುದು ತಪ್ಪು. ಜನರ ಭಾವನೆಗೆ ಸ್ಪಂದಿಸುವುದು ಹಾಗೂ ಪ್ರೀತಿ ವಿಶ್ವಾಸದ ಮೂಲಕ ಅವರನ್ನು ಗೆಲ್ಲಬಹುದು.

ಯಾವ ಕಾರಣಕ್ಕೆ ಜನ ನಿಮ್ಮನ್ನು ಆಯ್ಕೆ ಮಾಡಬೇಕು?

ಮುಖ್ಯವಾಗಿ ನಾನು ಸ್ಥಳೀಯ ಅಭ್ಯರ್ಥಿ. ಅವಿಭಜಿತ ಗಂಗಾವತಿ ತಾಲ್ಲೂಕಿನಲ್ಲಿ ಹುಟ್ಟಿ ಬೆಳೆದಿದ್ದೇನೆ. ಮಹಿಳೆ ಎಂಬ ಅನುಕಂಪ ಕ್ಷೇತ್ರದಲ್ಲಿದೆ. 20- 20 ಸರ್ಕಾರದ ಅವಧಿಯಲ್ಲಿ ಕುಮಾರಣ್ಣ ರಾಜ್ಯಕ್ಕೆ ನೀಡಿದ ಕೊಡುಗೆಯನ್ನು ಜನ ಈಗಲೂ ಮರೆತಿಲ್ಲ. ಮತ್ತೆ ಅವರು ಸಿಎಂ ಆಗಬೇಕು. ಜನ ನನ್ನನ್ನು ಆಯ್ಕೆ ಮಾಡುವ ಮೂಲಕ ಆ ಆಸೆಗೆ ನೀರೆರೆಯಬೇಕು. ನಾನು ಕ್ಷೇತ್ರಕ್ಕೆ ಆಯ್ಕೆಯಾದರೆ ಜನರ ಮಧ್ಯೆಯೇ ಇರುತ್ತೇನೆ. ರೈತ, ಮಹಿಳೆ, ಮಕ್ಕಳ ಹಿತ ಕಾಯುವೆ. ಈ ಬಗ್ಗೆ ಈಗಾಗಲೇ ವೈಯಕ್ತಿಕ ಪ್ರಣಾಳಿಕೆಯ ಭರವಸೆಯನ್ನು ಕ್ಷೇತ್ರದ ಜನರ ಮುಂದಿಟ್ಟಿದ್ದೇನೆ. ಜನರ ಆಶೀರ್ವಾದ ಈ ಬಾರಿ ಸಿಕ್ಕದಿದ್ದರೂ ಬೇಸರಿಸಿಕೊಳ್ಳಲಾರೆ. ಪಕ್ಷ ಸಂಘಟನೆ, ಜನರ ಸಮಸ್ಯೆಗೆ ಸ್ಪಂದಿಸುವೆ.‌

ಕ್ಷೇತ್ರದ ಬಹುತೇಕ ನಾಯಕರು ಅಸಮಾಧಾನದಿಂದ ಪಕ್ಷ ತೊರೆದಿದ್ದಾರಲ್ಲ?

ಆರು ಏಳು ಜನ ಅಕಾಂಕ್ಷಿಗಳ ಪೈಕಿ ಹೈಕಮಾಂಡ್ ನನ್ನ ಮೇಲೆ ವಿಶ್ವಾಸವಿಟ್ಟು ಅವಕಾಶ ನೀಡಿದೆ. ನಿಷ್ಠೆಯಿಂದ ಕೆಲಸ ಮಾಡುತ್ತಿದ್ದೇನೆ. ನಿಷ್ಠಾವಂತ ಕಾರ್ಯಕರ್ತರು, ಮುಖಂಡರು ಈಗಲೂ ನನ್ನೊಂದಿಗೆ ಇದ್ದಾರೆ. ಪಕ್ಷದಲ್ಲಿದ್ದು ಬೇರೊಂದು ಪಕ್ಷಕ್ಕೆ ಮತಹಾಕಿಸುವ ‘ಕಮಿಟ್‌ಮೆಂಟ್‌’ ವ್ಯಕ್ತಿಗಳು ಪಕ್ಷ ತೊರೆದಿದ್ದಾರೆ. ಅವರಿಂದ ಪಕ್ಷಕ್ಕೆ ಯಾವ ನಷ್ಟವಿಲ್ಲ. ಹತ್ತು ಕಪಟಿಗಳಿಗಿಂತ ಒಬ್ಬ ನಿಷ್ಠಾವಂತ ಕಾರ್ಯಕರ್ತ ಜೆಡಿಎಸ್‌ ಬೆನ್ನೆಲುಬು.

ಕ್ಷೇತ್ರದ ಬಹುತೇಕ ನಾಯಕರು ಅಸಮಾಧಾನದಿಂದ ಪಕ್ಷ ತೊರೆದಿದ್ದಾರಲ್ಲ?

ಆರು ಏಳು ಜನ ಅಕಾಂಕ್ಷಿಗಳ ಪೈಕಿ ಹೈಕಮಾಂಡ್ ನನ್ನ ಮೇಲೆ ವಿಶ್ವಾಸವಿಟ್ಟು ಅವಕಾಶ ನೀಡಿದೆ. ನಿಷ್ಠೆಯಿಂದ ಕೆಲಸ ಮಾಡುತ್ತಿದ್ದೇನೆ. ನಿಷ್ಠಾವಂತ ಕಾರ್ಯಕರ್ತರು, ಮುಖಂಡರು ಈಗಲೂ ನನ್ನೊಂದಿಗೆ ಇದ್ದಾರೆ. ಪಕ್ಷದಲ್ಲಿದ್ದು ಬೇರೊಂದು ಪಕ್ಷಕ್ಕೆ ಮತಹಾಕಿಸುವ ‘ಕಮಿಟ್‌ಮೆಂಟ್‌’ ವ್ಯಕ್ತಿಗಳು ಪಕ್ಷ ತೊರೆದಿದ್ದಾರೆ. ಅವರಿಂದ ಪಕ್ಷಕ್ಕೆ ಯಾವ ನಷ್ಟವಿಲ್ಲ. ಹತ್ತು ಕಪಟಿಗಳಿಗಿಂತ ಒಬ್ಬ ನಿಷ್ಠಾವಂತ ಕಾರ್ಯಕರ್ತ ಜೆಡಿಎಸ್‌ ಬೆನ್ನೆಲುಬು.

–ಎಂ.ಜೆ. ಶ್ರೀನಿವಾಸ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT