ಶನಿವಾರ, ಜನವರಿ 25, 2020
15 °C

ದೆಹಲಿಯಲ್ಲಿ ಶುಕ್ರವಾರ ರಾತ್ರಿ ಪ್ರತಿಭಟನೆ: ಭೀಮ್ ಆರ್ಮಿ ಚಂದ್ರಶೇಖರ್, ಹಲವರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ರಾಜಧಾನಿ ದೆಹಲಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಶುಕ್ರವಾರ ತಡರಾತ್ರಿ ಪ್ರತಿಭಟನೆ ನಡೆಸಿದ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಸೇರಿದಂತೆ ಹಲವರನ್ನು ಶನಿವಾರ ಮುಂಜಾನೆ ದೆಹಲಿ ಪೊಲೀಸರು ಬಂಧಿಸಿದ್ದಾರೆ.

ದೆಹಲಿಯಲ್ಲಿ ಈ ಹಿಂದಿನ ಪ್ರತಿಭಟನೆ ವೇಳೆ ಬಂಧಿಸಲಾಗಿದ್ದ 40 ಮಂದಿಯನ್ನು ಬಿಡುಗಡೆ ಮಾಡಬೇಕೆಂದು ಠಾಣೆಯ ಮುಂದೆ ಹಲವರು ಪ್ರತಿಭಟನೆ ನಡೆಸಿದ್ದರು. ಈ ಸಮಯದಲ್ಲಿಯೇ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಸೇರಿದಂತೆ ಹಲವರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. 

ಶುಕ್ರವಾರ ದೆಹಲಿಯ ದರಿಯಾಗಂಜ್ ಪ್ರದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಅನುಮತಿ ಇಲ್ಲದೆ ಹಲವು ಮಂದಿ ಪ್ರತಿಭಟನೆ ನಡೆಸಿದ್ದರು. ಈ ಸಮಯದಲ್ಲಿ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಹಲವರನ್ನು ವಶಕ್ಕೆ ತೆಗೆದುಕೊಂಡಿದ್ದರು. ಈ ವೇಳೆ ಭೀಮ್‌ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಪೊಲೀಸರ ವಶದಿಂದ ತಪ್ಪಿಸಿಕೊಂಡಿದ್ದರು.

ಪ್ರತಿಭಟನೆ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ನಡೆದ ಘರ್ಷಣೆಯಿಂದಾಗಿ ದರಿಯಾಗಂಜ್ ಪ್ರದೇಶ ಪ್ರಕ್ಷುಬ್ಧತೆಯಿಂದ ಕೂಡಿತ್ತು. ಈ ಸಮಯದಲ್ಲಿ ಹಲವು ಮಕ್ಕಳನ್ನೂ ಪೊಲೀಸರು ವಶಕ್ಕೆ ಪಡೆದಿದ್ದರು. ಹಿಂಸಾಚಾರದ ವೇಳೆ ಮಕ್ಕಳಿಗೂ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಮಾಹಿತಿ ನೀಡಿರುವ ಪೊಲೀಸರು ಮಕ್ಕಳ ಪೋಷಕರು ಬಂದ ಕೂಡಲೆ ಪೋಷಕರ ವಶಕ್ಕೆ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಲಘು ಲಾಠಿ ಪ್ರಹಾರದ ಸಮಯದಲ್ಲಿ ಬಂಧಿಸಲಾಗಿರುವ 40 ಮಂದಿಯನ್ನು ಬಿಡುಗಡೆ ಮಾಡಬೇಕೆಂದು ಶುಕ್ರವಾರ ರಾತ್ರಿಯಿಂದಲೇ ಪೊಲೀಸ್ ಠಾಣೆಯ ಎದುರು ಪ್ರತಿಭಟನಾಕಾರರು ಧರಣಿ ನಡೆಸಿದ್ದರು. ಆದರೆ, ಪೊಲೀಸರು ಇದಾವುದಕ್ಕೂ ಜಗ್ಗಲಿಲ್ಲ. ಶುಕ್ರವಾರ ನಡೆದ ಪ್ರತಿಭಟನೆ ವೇಳೆ ಉದ್ರಿಕ್ತ ಜನರು ಪೊಲೀಸರಿಗೆ ತಿರುಗಿಬಿದ್ದಿದ್ದರಿಂದ ಶಾಂತಿಯುತ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತು. ಈ ಘಟನೆಯಲ್ಲಿ 36 ಮಂದಿ ಗಾಯಗೊಂಡಿದ್ದರು. ಅಲ್ಲದೆ, ಎಂಟು ಮಂದಿ ಪೊಲೀಸರಿಗೂ ಸಣ್ಣ ಪುಟ್ಟ ಗಾಯಗಳಾಗಿದ್ದವು.

ಗಾಯಗೊಂಡವರನ್ನು ಸಮೀಪದ ಲೋಕನಾಯಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾಧ್ಯಮದವರೊಂದಿಗೆ ಮಾತನಾಡಿರುವ ಪೊಲೀಸರು ಪ್ರತಿಭಟನೆಯಲ್ಲಿ ಯಾವುದೇ ಲಾಠಿ ಚಾರ್ಜ್ ಮಾಡಿಲ್ಲ. ಕೇವಲ ಲಘು ಲಾಠಿ ಚಾರ್ಜ್ ಮಾಡಲಾಗಿದೆ. ಅಲ್ಲದೆ, ಉದ್ರಿಕ್ತರನ್ನು ನಿಯಂತ್ರಿಸಲು ಜಲಪಿರಂಗಿ ಪ್ರಯೋಗಿಸಿ ಎಲ್ಲರನ್ನೂ ಚದುರಿಸಲಾಯಿತು ಎಂದಿದ್ದಾರೆ.

ರಾಜಧಾನಿ ದೆಹಲಿಯ ದರಿಯಾಗಂಜ್ ಪ್ರದೇಶದ ಜಾಮಿಯಾ ಮಸೀದಿ ಸಮೀಪ ಶುಕ್ರವಾರ ಪ್ರಾರ್ಥನೆ ಸಲುವಾಗಿ 1000ಕ್ಕೂ ಹೆಚ್ಚು ಮಂದಿ ಸೇರಿದ್ದರು. ಪ್ರಾರ್ಥನೆ ಮುಗಿದ ನಂತರ ಎಲ್ಲರೂ ಅವರ ಮನೆಗಳಿಗೆ ತೆರಳಬೇಕಾಗಿತ್ತು. ಆದರೆ, ಅವರೆಲ್ಲಾ ಯಾವುದೇ ಅನುಮತಿ ಪಡೆಯದೆ ಜಂತರ್ ಮಂತರ್ ಕಡೆ ತೆರಳಲು ಆರಂಭಿಸಿದರು. ಪೊಲೀಸರು ಬೇಡವೆಂದೂ ಮನವಿ ಮಾಡಿದರೂ ಅದನ್ನು ಲೆಕ್ಕಿಸದೆ ಅವರು ತಮ್ಮ ಪ್ರಯತ್ನ ಮುಂದುವರಿಸಿದ್ದರು. ಅಲ್ಲದೆ, ದೆಹಲಿ ಗೇಟ್ ಸಮೀಪ ಸೇರಿಕೊಂಡರು. ಪೊಲೀಸರು ಅವರನ್ನು ತಾತ್ಕಾಲಿಕ ತಡೆ ಹಾಕಿ ನಿಲ್ಲಿಸಿದರು. ಸಂಜೆ ವೇಳೆಗೆ ಕೆಲವರು ಪೊಲೀಸರ ಮೇಲೆ ಕಲ್ಲುತೂರಾಟ ನಡೆಸಿದರು. ಕೂಡಲೆ 58 ತುಕಡಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಸಿಕೊಂಡು ಎಲ್ಲರನ್ನೂ ನಿಯಂತ್ರಣಕ್ಕೆ ತರಲಾಯಿತು.

ಕೂಡಲೆ ಎಲ್ಲಾ ಪ್ರತಿಭಟನಾಕಾರರು ಸ್ಥಳದಿಂದ ಚದುರಿದರು. ನಂತರ ಕ್ಷಿಪ್ರ ಕಾರ್ಯಾಚರಣೆ ಪಡೆ ಸಿಬ್ಬಂದಿ ದರಿಯಾ ಗಂಜ್ ಪ್ರದೇಶದಲ್ಲಿ ಪಥಸಂಚಲನ ನಡೆಸಿದರು ಎಂದು ಸುದ್ದಿ ಸಂಸ್ಥೆ ವರದಿ ಮಾಡಿವೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು