’ಭವಿಷ್ಯೋತೆರ್‌ ಭೂತ್‌‘ ಚಿತ್ರ ನಿಷೇಧ: ಮಮತಾ ಸರ್ಕಾರಕ್ಕೆ ₹20 ಲಕ್ಷ ದಂಡ

ಶುಕ್ರವಾರ, ಏಪ್ರಿಲ್ 26, 2019
35 °C
ಸುಪ್ರೀಂ ಕೋರ್ಟ್‌ ಅಸಮಾಧಾನ

’ಭವಿಷ್ಯೋತೆರ್‌ ಭೂತ್‌‘ ಚಿತ್ರ ನಿಷೇಧ: ಮಮತಾ ಸರ್ಕಾರಕ್ಕೆ ₹20 ಲಕ್ಷ ದಂಡ

Published:
Updated:

ನವದೆಹಲಿ: ರಾಜಕೀಯ ವಿಡಂಬನೆಯ ‘ಭವಿಷ್ಯೋತೆರ್‌ ಭೂತ್‌’ (ಭವಿಷ್ಯದ ಭೂತಗಳು) ಸಿನಿಮಾ ಪ್ರದರ್ಶನವನ್ನು ನಿಷೇಧಿಸಿದ್ದ ಪಶ್ಚಿಮ ಬಂಗಾಳದ ಸರ್ಕಾರದ ಕ್ರಮಕ್ಕೆ ಗುರುವಾರ ಅಸಮಾಧಾನ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್‌, ₹20 ಲಕ್ಷ ದಂಡ ವಿಧಿಸಿದೆ.

‘ದಂಡದ ಮೊತ್ತವನ್ನು ಸಿನಿಮಾದ ನಿರ್ಮಾಪಕರಿಗೆ ಮತ್ತು ಸಿನಿಮಾ ಹಾಲ್‌ ಮಾಲೀಕರಿಗೆ ಪರಿಹಾರ ರೂಪದಲ್ಲಿ ನೀಡಬೇಕು’ ಎಂದೂ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌ ನೇತೃತ್ವದ ಪೀಠ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರಕ್ಕೆ ಸೂಚಿಸಿತು. 

ಚಿತ್ರದ ನಿರ್ಮಾಪಕರ ಅಭಿವೃಕ್ತಿ ಸ್ವಾತಂತ್ರ್ಯದ ಹಕ್ಕನ್ನು ಮೊಟಕುಗೊಳಿಸಿದ್ದಕ್ಕಾಗಿ ಈ ದಂಡ ವಿಧಿಸಲಾಗಿದೆ ಎಂದು ಪೀಠ ಹೇಳಿದೆ. ಅಲ್ಲದೆ, ಚಿತ್ರಪ್ರದರ್ಶನಕ್ಕೆ ವ್ಯವಸ್ಥೆ ಮಾಡಬೇಕು ಹಾಗೂ ಸೂಕ್ತ ಭದ್ರತೆ ಒದಗಿಸಬೇಕು ಎಂದೂ ಸರ್ಕಾರದ ಮುಖ್ಯ ಕಾರ್ಯದರ್ಶಿ, ಗೃಹ ಇಲಾಖೆ, ರಾಜ್ಯ ಪೊಲೀಸ್‌ ಮಹಾನಿರ್ದೇಶಕರಿಗೆ ನ್ಯಾಯಾಲಯ ಸೂಚನೆ ನೀಡಿದೆ.

2018ರ ನವೆಂಬರ್‌ 19ರಂದು ಸೆನ್ಸಾರ್‌ ಮಂಡಳಿಯು ಈ ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ ನೀಡಿತ್ತು. ಫೆಬ್ರುವರಿ 15ರಂದು ಚಿತ್ರ ತೆರೆ ಕಂಡಿತ್ತು. ‘ಈ ಸಿನಿಮಾ ಸಾರ್ವಜನಿಕರ ಭಾವನೆಗಳಿಗೆ ಧಕ್ಕೆ ತರುವ ಅಂಶ ಒಳಗೊಂಡಿರುವುದಲ್ಲದೆ, ಚಿತ್ರ ಪ್ರದರ್ಶನಗೊಂಡರೆ ರಾಜಕೀಯ ಸಂಘರ್ಷಗಳಿಗೆ ಕಾರಣವಾಗಬಹುದು’ ಎಂಬ ಕಾರಣ ನೀಡಿ, ಪಶ್ಚಿಮ ಬಂಗಾಳ ಸರ್ಕಾರವು ಚಿತ್ರ ಪ್ರದರ್ಶನವನ್ನು ನಿಷೇಧಿಸಿತ್ತು. ಇದನ್ನು ಪ್ರಶ್ನಿಸಿ, ಇಂಡಿಬಿಲಿ ಕ್ರಿಯೆಟಿವ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿ ಸುಪ್ರೀಂ ಕೋರ್ಟ್‌ ಮೊರೆ ಹೋಗಿತ್ತು.

ಸವ್ಯಸಾಚಿ ಚಕ್ರವರ್ತಿ, ಮೂನ್‌ಮೂನ್‌ ಸೇನ್‌, ಕೌಶಿಕ್‌ ಸೇನ್‌, ಬರೂನ್‌ ಚಂದಾ, ಪ್ರಾಣ್‌ ಬಂಡೋಪಾಧ್ಯಾಯ ತಾರಾಗಣದ ಈ ಸಿನಿಮಾವನ್ನು ಅನಿಕ್‌ ದತ್ತ ನಿರ್ದೇಶಿಸಿದ್ದಾರೆ.

ಸಮಾಜದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದೆ: ಸುಪ್ರೀಂ ಕೋರ್ಟ್‌
‘ಕಲೆಯ ಉದ್ದೇಶವೇ ಪ್ರಶ್ನಿಸುವುದು ಮತ್ತು ಪ್ರಚೋದಿಸುವುದು. ಆದರೆ, ಸಮಾಜದಲ್ಲಿ ಈಗ ಕೆಲವು ಸಂಘಟಿತ ಗುಂಪುಗಳು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅಪಾಯವನ್ನು ಒಡ್ಡುತ್ತಿವೆ. ಸಮಾಜದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದೆ’ ಎಂದು ಸುಪ್ರೀಂ ಕೋರ್ಟ್‌ ಅಭಿಪ್ರಾಯಪಟ್ಟಿದೆ. 

‘ಸಮಕಾಲೀನ ಘಟನೆಗಳನ್ನು ಅವಲೋಕಿಸಿದರೆ, ಸಮಾಜದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿರುವುದು ಅರಿವಿಗೆ ಬರುತ್ತದೆ. ನಾಗರಿಕರಿಗೆ ನೀಡಿರುವ ಹಕ್ಕುಗಳನ್ನು ಗೌರವಿಸದಿರುವುದೇ ಅಸಹಿಷ್ಣುತೆ. ಸಾಹಿತ್ಯದಲ್ಲಾಗಲಿ, ಮಾಧ್ಯಮದಲ್ಲಾಗಲಿ ಅಥವಾ ರಂಗಭೂಮಿಯಲ್ಲಾಗಲಿ ವ್ಯಕ್ತವಾಗುವ ಅಭಿಪ್ರಾಯಗಳನ್ನು ಅಥವಾ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ತಡೆ ಒಡ್ಡುವುದು ಸರಿಯಲ್ಲ’ ಎಂದ ನ್ಯಾಯಪೀಠ, ‘ಭವಿಷ್ಯೋತೆರ್‌ ಭೂತ್‌’ ಚಲನಚಿತ್ರ ನಿಷೇಧಿಸಿದ ಪಶ್ಚಿಮ ಬಂಗಾಳ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿತು. 

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !