ಮಂಗಳವಾರ, ಸೆಪ್ಟೆಂಬರ್ 17, 2019
21 °C
ಭೋಪಾಲ್‌: ಕ್ಷೇತ್ರ ಉಳಿಸಿಕೊಳ್ಳಲು ಬಿಜೆಪಿ, ಕಸಿದುಕೊಳ್ಳಲು ಕಾಂಗ್ರೆಸ್‌ ಸಾಹಸ

ಸಾಧ್ವಿ ಪ್ರಜ್ಞಾಗೆ ‘ದಿಗ್ವಿಜಯ’ದ ಸವಾಲು

Published:
Updated:

ಭೋಪಾಲ್: ಮಧ್ಯಪ್ರದೇಶದ ಎಂಟು ಲೋಕಸಭಾ ಕ್ಷೇತ್ರಗಳಿಗೆ ಆರನೇ ಹಂತದಲ್ಲಿ (ಮೇ 12ರಂದು) ಮತದಾನ ನಡೆಯಲಿದೆ. ಇವುಗಳಲ್ಲಿ ಭೋಪಾಲ್ ಕ್ಷೇತ್ರ ಅತಿ ಹೆಚ್ಚು ಕುತೂಹಲ ಮೂಡಿಸಿದೆ.

ಭೋಪಾಲ್‌ ಲೋಕಸಭಾ ಕ್ಷೇತ್ರವು ಬೇರೆ ಬೇರೆ ಕಾರಣಗಳಿಗಾಗಿ ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಬಹುಮುಖ್ಯವಾಗಿದೆ. ಮಧ್ಯಪ್ರದೇಶದಲ್ಲಿ ಸುಮಾರು ಮೂರು ದಶಕಗಳಿಂದ ಬಿಜೆಪಿಯು ಹಿಡಿತ ಸಾಧಿಸಿರುವ ಮೂರು ಲೋಕಸಭಾ ಕ್ಷೇತ್ರಗಳಲ್ಲಿ ಭೋಪಾಲ್‌ ಒಂದು (ಇಂದೋರ್ ಹಾಗೂ ವಿದಿಶಾ ಉಳಿದೆರಡು ಕ್ಷೇತ್ರಗಳು).

15 ವರ್ಷಗಳ ಬಿಜೆಪಿ ಆಡಳಿತಕ್ಕೆ ಅಂತ್ಯಹಾಡಿ, ರಾಜ್ಯದಲ್ಲಿ ಇತ್ತೀಚೆಗಷ್ಟೇ ಅಧಿಕಾರ ಹಿಡಿದಿರುವ ಕಾಂಗ್ರೆಸ್‌ ಪಕ್ಷವು ಈ ಬಾರಿ ಭೋಪಾಲ್‌ ಕ್ಷೇತ್ರವನ್ನು ವಶಪಡಿಸಿಕೊಳ್ಳಬೇಕೆಂಬ ಹುಮ್ಮಸ್ಸಿನಲ್ಲಿದೆ. ಅದಕ್ಕಾಗಿಯೇ ಪಕ್ಷದ ಹಿರಿಯ ಮುಖಂಡರಲ್ಲಿ ಒಬ್ಬರಾಗಿರುವ ದಿಗ್ವಿಜಯ್‌ ಸಿಂಗ್‌ ಅವರನ್ನು ಕಣಕ್ಕಿಳಿಸಿದೆ.

ದಿಗ್ವಿಜಯ್ ಅವರು 1984 ಮತ್ತು 1991ರಲ್ಲಿ ರಾಜಘಡ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. 1989ರ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಸೋಲನುಭವಿಸಿದ್ದರು. ಅದಾದ ನಂತರ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ನೇತೃತ್ವ ವಹಿಸುವ ಸಲುವಾಗಿ ಲೋಕಸಭೆಯನ್ನು ಬಿಟ್ಟಿದ್ದ ಅವರು, 10 ವರ್ಷ ರಾಜ್ಯದಲ್ಲಿ ಆಡಳಿತ ನಡೆಸಿದ್ದರು. 2014ರಲ್ಲಿ ರಾಜ್ಯಸಭೆಯ ಮೂಲಕ ಮತ್ತೆ ರಾಷ್ಟ್ರ ರಾಜಕಾರಣಕ್ಕೆ ಮರಳಿದ್ದರು.

‘ದಿಗ್ವಿಜಯ್ ಅವರು ಈ ಬಾರಿ ಲೋಕಸಭೆಗೆ ಸ್ಪರ್ಧಿಸಲು ಬಯಸುವುದಾದರೆ ಅತ್ಯಂತ ಕಠಿಣವಾದ ಕ್ಷೇತ್ರಕ್ಕೆ ಅವರ ಹೆಸರನ್ನು ಪರಿಗಣಿಸಲಾಗುವುದು’ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲನಾಥ್ ಕೆಲವು ತಿಂಗಳ ಹಿಂದೆ ಘೋಷಿಸಿದರು. ಈ ಸವಾಲನ್ನು ದಿಗ್ವಿಜಯ್‌ ಸ್ವೀಕರಿಸಿದರು. ತಮ್ಮ ಸಾಂಪ್ರದಾಯಿಕ ಕ್ಷೇತ್ರ ರಾಜಘಡದಿಂದ ಸ್ಪರ್ಧಿಸಬೇಕೆಂಬುದು ಅವರ ಬಯಕೆಯಾಗಿದ್ದರೂ ಭೋಪಾಲ್‌ ಕ್ಷೇತ್ರದಿಂದ ಕಣಕ್ಕಿಳಿಯುವಂತೆ ಪಕ್ಷ ಅವರಿಗೆ ಸೂಚನೆ ನೀಡಿತು.

ದಿಗ್ವಿಜಯ್‌ ವಿರುದ್ಧ ಬಿಜೆಪಿಯು ರಾಜ್ಯದ ಮಾಜಿ ಮುಖ್ಯಮಂತ್ರಿಗಳಾಗಿರುವ ಶಿವರಾಜ್‌ ಸಿಂಗ್‌ ಚೌಹಾಣ್‌ ಅಥವಾ ಉಮಾಭಾರತಿ ಅವರನ್ನು ಕಣಕ್ಕಿಳಿಸಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಮಾಲೆಗಾಂವ್ ಸ್ಫೋಟ ಆರೋಪಿ ಸಾಧ್ವಿ ಪ್ರಜ್ಞಾ ಸಿಂಗ್‌ ಠಾಕುರ್‌ ಅವರನ್ನು ಕಣಕ್ಕಿಳಿಸಿ ಬಿಜೆಪಿ ಅಚ್ಚರಿ ಮೂಡಿಸಿತು. ಚುನಾವಣೆಯ ಆರಂಭದಿಂದಲೇ ‘ರಾಷ್ಟ್ರೀಯತೆ’ ಮತ್ತು ‘ಹಿಂದುತ್ವ’ ವಿಚಾರದಲ್ಲಿ ಮತ ಧ್ರುವೀಕರಣ ಪ್ರಯತ್ನ ಮಾಡಿರುವ ಬಿಜೆಪಿಯು ಭೋಪಾಲ್‌ ಕ್ಷೇತ್ರದಲ್ಲಿ ಯುಪಿಎ –2 ಅವಧಿಯಲ್ಲಿ ಮುನ್ನೆಲೆಗೆ ಬಂದ ‘ಹಿಂದೂ ಭಯೋತ್ಪಾದನೆ’ ಆರೋಪದ ಲಾಭ ಪಡೆಯಲು ಮುಂದಾಗಿದೆ ಎಂದೇ ಈ ನಡೆಯನ್ನು ವಿಶ್ಲೇಷಿಸಲಾಗುತ್ತಿದೆ.

‘ಪ್ರಜ್ಞಾ ಅವರನ್ನು ಹಿಂಸಿಸಲು ‘ಹಿಂದೂ ಭಯೋತ್ಪಾದನೆ’ ಎಂಬ ಪದಪುಂಜವನ್ನು ಹುಟ್ಟುಹಾಕಲಾಗಿತ್ತು. ಅವರ ಮೇಲೆ ಸುಳ್ಳು ಆರೋಪಗಳನ್ನು ಹೊರಿಸಿ ಹಿಂಸಿಸಲಾಯಿತು’ ಎಂದು ಶಿವರಾಜ್‌ ಸಿಂಗ್‌ ಚೌಹಾಣ್‌ ಅವರು ಚುನಾವಣಾ ಪ್ರಚಾರ ಸಭೆಯೊಂದರಲ್ಲಿ ಹೇಳಿದ್ದಾರೆ. ಪ್ರಜ್ಞಾ ಅವರು ಇದನ್ನೇ ಹಲವು ಬಾರಿ ಹೇಳಿದ್ದಾರೆ.

ಬಿಜೆಪಿಯ ‘ಹಿಂದುತ್ವ’ ರಾಜಕಾರಣಕ್ಕೆ ಪ್ರತಿಯಾಗಿ ದಿಗ್ವಿಜಯ್‌ ಅವರೂ ಮೃದು ಹಿಂದುತ್ವದ ರಾಜಕಾರಣ ಆರಂಭಿಸಿದ್ದಾರೆ. ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಅವರೂ ದೇವಸ್ಥಾನಗಳು, ಸ್ವಾಮೀಜಿಗಳನ್ನು ಭೇಟಿ ಮಾಡುತ್ತಿದ್ದಾರೆ.

ಬಿಜೆಪಿಗೆ ಇಕ್ಕಟ್ಟು

ವಿವಾದ ಸೃಷ್ಟಿಸುವ ಹೇಳಿಕೆಗಳಿಗೆ ಪ್ರಸಿದ್ಧರಾಗಿರುವ ಸಾಧ್ವಿ ಪ್ರಜ್ಞಾ ಅವರ ಕೆಲವು ಹೇಳಿಕೆಗಳು ಬಿಜೆಪಿ ನಾಯಕರನ್ನು ಇಕ್ಕಟ್ಟಿಗೆ ಸಿಲುಕಿಸಿವೆ.

‘ಮುಂಬೈ ದಾಳಿಯಲ್ಲಿ ಉಗ್ರರ ಗುಂಡಿಗೆ ಬಲಿಯಾದ ಹೇಮಂತ್‌ ಕರ್ಕರೆ ಅವರ ಸಾವಿಗೆ ನನ್ನ ಶಾಪವೇ ಕಾರಣ, ಬಾಬರಿ ಮಸೀದಿ ಕೆಡವುವ ಕೆಲಸದಲ್ಲಿ ನಾನು ಭಾಗಿಯಾಗಿದ್ದೆ ಮತ್ತು ಆ ಬಗ್ಗೆ ಹೆಮ್ಮೆ ಇದೆ’ ಎಂಬ ಹೇಳಿಕೆಗಳು ಬಿಜೆಪಿಯನ್ನು ಇಕ್ಕಟ್ಟಿನ ಸ್ಥಿತಿಗೆ ತಂದು ನಿಲ್ಲಿಸಿದ್ದವು.

ಈ ಹೇಳಿಕೆಗಳಿಂದ ಪಕ್ಷವು ಅಂತರ ಕಾಯ್ದುಕೊಂಡಿತು. ಇನ್ನೊಂದೆಡೆ ಬಾಬರಿ ಮಸೀದಿ ಕುರಿತ ಹೇಳಿಕೆಗಾಗಿ ಚುನಾವಣಾ ಆಯೋಗವು ಅವರಿಗೆ ಮೂರುದಿನಗಳ ಪ್ರಚಾರ ನಿಷೇಧ ಶಿಕ್ಷೆ ವಿಧಿಸಿತು. ಪ್ರಜ್ಞಾ ಅವರನ್ನು ಕಣಕ್ಕಿಳಿಸಿದರೆ ಇಡೀ ಮಧ್ಯಪ್ರದೇಶದಲ್ಲಿ ಬಿಜೆಪಿಗೆ ಸಹಾಯವಾಗಬಹುದು ಎಂಬ ಪಕ್ಷದ ನಿರೀಕ್ಷೆ ಹುಸಿಯಾಗುವಂತೆ ಕಾಣಿಸಿದೆ.

ಭೋಪಾಲ್‌ ಕ್ಷೇತ್ರದಿಂದಾಚೆ ಯಾವುದೇ ಪರಿಣಾಮ ಉಂಟುಮಾಡುವಲ್ಲಿ ಪ್ರಜ್ಞಾ ವಿಫಲರಾಗಿದ್ದಾರೆ. ಬಿಜೆಪಿಯ ಕೆಲವು ಸ್ಥಳೀಯ ನಾಯಕರೂ ಸಾಧ್ವಿ ಅವರಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾರೆ.

 

 

Post Comments (+)