ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾಘಟಬಂಧನ: ಹೊಂದಾಣಿಕೆ ಮರೀಚಿಕೆ!

ಬಿಹಾರ: ಪಟ್ಟು ಹಿಡಿದ ಮಿತ್ರಪಕ್ಷಗಳು l ಬಿಡಿಸಲಾಗದ ಕಗ್ಗಂಟಾದ ಸೀಟು ಹಂಚಿಕೆ
Last Updated 9 ಮಾರ್ಚ್ 2019, 19:39 IST
ಅಕ್ಷರ ಗಾತ್ರ

ಪಟ್ನಾ: ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ನಡುವಿನ ಉತ್ತಮ ಬಾಂಧವ್ಯದ ಹೊರತಾಗಿಯೂ ಬಿಹಾರದಲ್ಲಿ ಮಹಾಘಟಬಂಧನ ಸ್ಥಾನ ಹೊಂದಾಣಿಕೆ ಇನ್ನೂ ಕಗ್ಗಂಟಾಗಿಯೇ ಉಳಿದಿದೆ.

ಮಹಾಘಟಬಂಧನದಲ್ಲಿರುವ ಹತ್ತಕ್ಕೂ ಹೆಚ್ಚು ಮಿತ್ರಪಕ್ಷಗಳು ಆಯ್ದ ಕ್ಷೇತ್ರಗಳಿಗಾಗಿ ಬಿಗಿಪಟ್ಟು ಹಿಡಿದ ಕಾರಣ ಹೊಂದಾಣಿಕೆ ಕುರಿತು ಇನ್ನೂ ಒಮ್ಮತಕ್ಕೆ ಬರಲು ಸಾಧ್ಯವಾಗಿಲ್ಲ.

ಮೂರು ತಿಂಗಳಿನಿಂದ ಹಲವು ಸುತ್ತಿನ ಮಾತುಕತೆ ನಡೆದರೂ ಇದುವರೆಗೂ ಸ್ಥಾನ ಹೊಂದಾಣಿಕೆ ಕುರಿತು ಒಮ್ಮತಕ್ಕೆ ಬರಲು ಸಾಧ್ಯವಾಗಿಲ್ಲ. ಬದಲಾಗಿ ಪಕ್ಷಗಳ ಬಿಗಿಪಟ್ಟಿನಿಂದ ಸಮಸ್ಯೆ ಮತ್ತಷ್ಟು ಜಟೀಲವಾಗಿದೆ.

ಬಿಹಾರದಲ್ಲಿ 40 ಲೋಕಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್‌ ಕನಿಷ್ಠ 15 ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಇಂಗಿತ ಹೊಂದಿದೆ. ಆದರೆ, ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ಅವರು ಕಾಂಗ್ರೆಸ್‌ಗೆ 8–9 ಕ್ಷೇತ್ರಗಳಿಗಿಂತ ಹೆಚ್ಚು ಸ್ಥಾನ ಬಿಟ್ಟು ಕೊಡಲು ತಯಾರಿಲ್ಲ.

2014ರ ಲೋಕಸಭಾ ಚುನಾವಣೆಯಲ್ಲಿ 12 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್‌ ಕೇವಲ ಎರಡು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. 27 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಆರ್‌ಜೆಡಿ ನಾಲ್ಕು ಕ್ಷೇತ್ರಗಳಲ್ಲಿ ಜಯಗಳಿಸಿತ್ತು. ಒಂದು ಕ್ಷೇತ್ರವನ್ನು ಎನ್‌ಸಿಪಿಯ ತಾರಿಕ್‌ ಅನ್ವರ್‌ ಅವರಿಗೆ ಬಿಟ್ಟು ಕೊಡಲಾಗಿತ್ತು. ನಂತರ ತಾರಿಕ್‌ ಅವರು ಕಾಂಗ್ರೆಸ್‌ ಸೇರ್ಪಡೆಯಾದರು.

ಬಿಹಾರದಲ್ಲಿ ಕಾಂಗ್ರೆಸ್‌ ಮೊದಲಿನಷ್ಟು ಪ್ರಭಾವಶಾಲಿಯಾಗಿಲ್ಲ. ಹೀಗಾಗಿ ಕಾಂಗ್ರೆಸ್‌ಗೆ 8–9ಕ್ಕಿಂತ ಹೆಚ್ಚು ಸ್ಥಾನ ನೀಡುವುದರಿಂದ ನಷ್ಟವಾಗುತ್ತದೆ ಎನ್ನುವುದು ಲಾಲು ಪ್ರಸಾದ್‌ ಲೆಕ್ಕಾಚಾರ ಎಂದು ಹೇಳಲಾಗಿದೆ.

ಮಹಾಘಟಬಂಧನದಲ್ಲಿರುವ ಸಿಪಿಐ ಮತ್ತು ಸಿಪಿಎಂನಂತಹ ಎಡ ಪಕ್ಷಗಳಿಗೆ ಕ್ಷೇತ್ರಗಳನ್ನು ಬಿಟ್ಟು ಕೊಡಲು ಕೂಡ ಲಾಲು ಪ್ರಸಾದ್‌ ಅವರಿಗೆ ಇಷ್ಟವಿಲ್ಲ. ಬಿಹಾರದಲ್ಲಿ ಸಿಪಿಎಂ, ಸಿಪಿಐಗಿಂತ ಸಿಪಿಐ–ಎಂಎಲ್‌ ಪ್ರಾಬಲ್ಯ ಹೊಂದಿದೆ ಎನ್ನುವುದು ಅವರ ವಾದವಾಗಿದೆ.

ಸಿಂಹಪಾಲು– ಪಟ್ಟು ಬಿಡದ ಆರ್‌ಜೆಡಿ: ಲೋಕಸಭಾ ಚುನಾವಣೆಯಲ್ಲಿ ಸ್ಥಾನ ಹೊಂದಾಣಿಕೆ ಸಂದರ್ಭದಲ್ಲಿ ಸಿಂಹಪಾಲು ಕೇಳುತ್ತಿರುವ ಆರ್‌ಜೆಡಿಯು ತನ್ನ ಮಿತ್ರಪಕ್ಷ ಕಾಂಗ್ರೆಸ್‌ ಮುಂದೆ ಹಲವು ಷರತ್ತುಗಳನ್ನು ಇಟ್ಟಿದೆ.

ಐದು ಅವಧಿಗೆ ಸಂಸದರಾಗಿದ್ದ ಪಪ್ಪು ಯಾದವ್‌ ಮತ್ತು ಪಕ್ಷೇತರ ಶಾಸಕ ಅನಂತ್‌ ಸಿಂಗ್‌ ಅವರಿಗೆ ಯಾವುದೇ ಕಾರಣಕ್ಕೂ ಕಾಂಗ್ರೆಸ್‌ ಟಿಕೆಟ್‌ ನೀಡದಂತೆ ಆರ್‌ಜೆಡಿ ಪಟ್ಟು ಹಿಡಿದಿದೆ.

ಪಕ್ಷ ವಿರೋಧಿ ಚಟುವಟಿಕೆಗಳ ಆರೋಪದ ಮೇಲೆ ಪಪ್ಪು ಯಾದವ್‌ ಅವರನ್ನು ಆರ್‌ಜೆಡಿಯಿಂದ ಮತ್ತು ಅನಂತ್‌ ಸಿಂಗ್‌ ಅವರನ್ನು ಜೆಡಿಯುನಿಂದ ಉಚ್ಛಾಟಿಸಲಾಗಿತ್ತು.

ಒಂದು ಕಾಲಕ್ಕೆ ಲಾಲು ಪ್ರಸಾದ್‌ ಮತ್ತು ಪಪ್ಪು ಯಾದವ್‌ ಗುರು–ಶಿಷ್ಯರಂತಿದ್ದರು. ಇಬ್ಬರ ಮಧ್ಯೆ ಸಂಬಂಧ ಹಳಸಿದ ನಂತರ ಪಪ್ಪು ಯಾದವ್‌ ಅವರನ್ನು ಆರ್‌ಜೆಡಿಯಿಂದ ಹೊರದಬ್ಬಲಾಯಿತು. ಕಾಂಗ್ರೆಸ್‌ ಸೇರಿದ ಪಪ್ಪು ಯಾದವ್‌ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ತಯಾರಿ ನಡೆಸಿದ್ದಾರೆ.

ಮೋಕಾಮ್‌ ಕ್ಷೇತ್ರದ ಪಕ್ಷೇತರ ಶಾಸಕ ಅನಂತ್‌ ಸಿಂಗ್‌ ಅವರು ಈ ಬಾರಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಮುಂಗೆರ್‌ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯಲು ತಯಾರಿ ನಡೆಸಿದ್ದಾರೆ. ಈ ಇಬ್ಬರಿಗೂ ಲಾಲು ಪ್ರಸಾದ್‌ ಅಡ್ಡಗಾಲು ಹಾಕಿದ್ದಾರೆ.

ಬಿಹಾರ ಕಾಂಗ್ರೆಸ್‌ ಅಧ್ಯಕ್ಷ ಮದನ್‌ ಮೋಹನ್‌ ಝಾ ಅವರು ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯೊಂದಿಗೆ ದೆಹಲಿ ತೆರಳಿದ್ದಾರೆ. ಮಾರ್ಚ್‌ 12ರಂದು ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ) ಸಭೆಯ ನಂತರ ಸೀಟು ಹಂಚಿಕೆ ಒಪ್ಪಂದ ಪ್ರಕಟಿಸುವ ಸಾಧ್ಯತೆ ಇದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT