ಸೋಮವಾರ, ಜನವರಿ 20, 2020
19 °C
ಹಲವು ಅರ್ಥ ಸ್ಪುರಿಸುತ್ತಿರುವ ಜೆಡಿಯು–ಬಿಜೆಪಿ ವಾಕ್ಸಮರ

ಬಿಹಾರ: ಮತ್ತೆ ಮೈತ್ರಿ ಬದಲಿಸಲು ನಿತೀಶ್‌ ಸಜ್ಜು?

ಅಭಯ ಕುಮಾರ್‌ Updated:

ಅಕ್ಷರ ಗಾತ್ರ : | |

ಪಟ್ನಾ: ಜೆಡಿಯು ಮುಖ್ಯಸ್ಥ ನಿತೀಶ್‌ ಕುಮಾರ್‌ ಅವರ ಸಹಮತ ಇಲ್ಲದೆ ಜೆಡಿಯುನಲ್ಲಿರುವ ಯಾರಾದರೂ ಪ್ರಧಾನಿ ನರೇಂದ್ರ ಮೋದಿ ಅವರ ನೀತಿಗಳ ವಿರುದ್ಧ, ಬಿಹಾರ ಉಪಮುಖ್ಯಮಂತ್ರಿ ಸುಶೀಲ್‌ ಕುಮಾರ್ ಮೋದಿ ವಿರುದ್ಧ ಮಾತನಾಡಲು ಸಾಧ್ಯವೇ?

ಮುಖ್ಯಮಂತ್ರಿ ನಿತೀಶ್‌ ಅವರನ್ನು ಚೆನ್ನಾಗಿ ಬಲ್ಲವರ ಪ್ರಕಾರ ಇದು ಸಾಧ್ಯವೇ ಇಲ್ಲ. ‘ಮುಂದಿನ ದಿನಗಳಲ್ಲಿ ಬಿಹಾರ ರಾಜಕಾರಣದಲ್ಲಿ
ಇನ್ನಷ್ಟು ಪಲ್ಲಟಗಳು ಕಾಣಿಸಿಕೊಳ್ಳಲಿವೆ’ ಎಂದು ವಿಧಾನಸಭೆ ಚುನಾವಣೆಗೆ ಮುಂಚೆ ಮತ್ತು ಫಲಿತಾಂಶದ ನಂತರ ನಡೆದ ರಾಜ
ಕೀಯ ಬದಲಾವಣೆಗಳನ್ನು ಹತ್ತಿರದಿಂದ ಗಮನಿಸಿದವರು ಹೇಳುತ್ತಿದ್ದಾರೆ. 

2015ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸೋತಿದ್ದರೂ ಸನ್ನಿವೇಶದ ಕಾರಣಕ್ಕೆ ಸುಶೀಲ್‌ ಕುಮಾರ್‌ ಮೋದಿ ಅವರು ಉಪಮುಖ್ಯಮಂತ್ರಿಯಾಗಿದ್ದಾರೆ ಎಂದು ಜೆಡಿಯುನ ರಾಷ್ಟ್ರೀಯ ಉಪಾಧ್ಯಕ್ಷ ಪ್ರಶಾಂತ್‌ ಕಿಶೋರ್‌ ಹೇಳಿದ್ದಾರೆ.

ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಮತ್ತು ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ವಿಚಾರದಲ್ಲಿ ಕೇಂದ್ರ ಸರ್ಕಾರದ ನೀತಿಯನ್ನು ಪ್ರಶಾಂತ್‌ ಟೀಕಿಸುತ್ತಲೇ ಇದ್ದಾರೆ. ಬಿಹಾರದಲ್ಲಿ ಜೆಡಿಯು–ಬಿಜೆಪಿ ಮೈತ್ರಿ ಸರ್ಕಾರ ಇದೆ. ಹಾಗಿರುವಾಗ ಪ್ರಶಾಂತ್‌ ಅವರ ನಡವಳಿಕೆಯನ್ನು ಅರ್ಥ ಮಾಡಿಕೊಳ್ಳುವುದು ಹೇಗೆ?

‘ದತ್ತಾಂಶ ಸಂಗ್ರಹಿಸುವುದು ಮತ್ತು ಘೋಷಣೆಗಳನ್ನು ರೂಪಿಸುವ ಕೆಲಸದಲ್ಲಷ್ಟೇ ಮಗ್ನರಾಗಿದ್ದವರು ಈಗ ರಾಜಕೀಯ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದು ಮೈತ್ರಿ ಧರ್ಮಕ್ಕೆ ವಿರುದ್ಧ’ ಎಂದು ಸುಶೀಲ್‌ ಕುಮಾರ್‌ ತಿರುಗೇಟು ನೀಡಿದ್ದಾರೆ. ರಾಜಕೀಯ ಕಾರ್ಯತಂತ್ರ ರೂಪಿಸುವುದನ್ನೇ ವೃತ್ತಿಯಾಗಿಸಿಕೊಂಡಿರುವ ಪ್ರಶಾಂತ್‌ಗೆ ಇದು ನೇರ ಟೀಕೆ. 

ಪ್ರಶಾಂತ್‌ ಮತ್ತು ಸುಶೀಲ್‌ ಕುಮಾರ್‌ ಇಬ್ಬರ ಜತೆಗೂ ನಿತೀಶ್‌ ಅವರು ಉತ್ತಮ ಬಾಂಧವ್ಯ ಹೊಂದಿದ್ದಾರೆ. ಹಾಗಿದ್ದರೂ, ಸುಶೀಲ್‌ ವಿರುದ್ಧ ಮಾತನಾಡಿದ್ದು ಯಾಕೆ ಎಂದು ಪ್ರಶಾಂತ್‌ ಅವರನ್ನು ನಿತೀಶ್‌ ಕೇಳಿಲ್ಲ. ಬಿಜೆಪಿ ನಾಯಕರಲ್ಲಿ ಪ್ರಶಾಂತ್‌ ಬಗ್ಗೆ ಭಾರಿ ಆಕ್ರೋಶ ಇದೆ. ಇದನ್ನು ಸರಿಪಡಿಸುವ ಕೆಲಸಕ್ಕೂ ನಿತೀಶ್‌ ಕೈ ಹಾಕಿಲ್ಲ. 

‘ನಿತೀಶ್‌ ಅವರ ಮನಸಲ್ಲಿ ಏನಿದೆ ಎಂಬುದನ್ನು ಊಹಿಸುವುದು ಕಷ್ಟ. ಆದರೆ, ನಿತೀಶ್‌ ಅವರು ಬಿಜೆಪಿಯಿಂದ ತಪ್ಪಿಸಿಕೊಳ್ಳಲು ದಾರಿಯೊಂದನ್ನು ಹುಡುಕುತ್ತಿದ್ದಾರೆ ಎನಿಸುತ್ತಿದೆ. ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಹೆಚ್ಚು ಕ್ಷೇತ್ರಗಳಿಗೆ ಚೌಕಾಸಿ ಮಾಡುವ ತಂತ್ರವೂ ಇದಾಗಿರಬಹುದು’ ಎಂದು ರಾಜಕೀಯ ವಿಶ್ಲೇಷಕ ಅಜಯ್‌ ಕುಮಾರ್‌ ಹೇಳುತ್ತಾರೆ. 

ಪಟ್ನಾ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಎನ್‌.ಕೆ.ಚೌಧರಿ ಅವರೂ ಇದನ್ನು ಒಪ್ಪುತ್ತಾರೆ. ‘ಪ್ರಶಾಂತ್‌ ಅವರು ಸುಶೀಲ್‌ ಅವರ ಮೇಲೆ ಈ ರೀತಿಯ ವಾಗ್ದಾಳಿ ನಡೆಸಬೇಕಿದ್ದರೆ ಅದು ಯೋಜಿತ ಕಾರ್ಯತಂತ್ರದ ಭಾಗವೇ ಆಗಿರಬೇಕು. ಅಕ್ಟೋಬರ್‌ನಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಹೆಚ್ಚು ಕ್ಷೇತ್ರಗಳಿಗೆ ಬೇಡಿಕೆ ಇಡುವುದೇ ಇದರ ಗುರಿಯಾಗಿರಬಹುದು’ ಎಂದು ಅವರು ಹೇಳುತ್ತಾರೆ.

‘ಮಹಾಮೈತ್ರಿ’ ಬಾಗಿಲು ತೆರೆದಿದೆಯೇ?
ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಿತೀಶ್‌ ಅವರು ಆರ್‌ಜೆಡಿ, ಕಾಂಗ್ರೆಸ್‌ ಮೈತ್ರಿಕೂಟದ ಜತೆ ಸೇರಿ ಮಹಾಮೈತ್ರಿಕೂಟವನ್ನು ರಚಿಸಿಕೊಂಡಿದ್ದರು. ಫಲಿತಾಂಶ ಪ್ರಕಟವಾದ ಬಳಿಕ ಈ ಮೈತ್ರಿಕೂಟದ ಸರ್ಕಾರದ ನೇತೃತ್ವವನ್ನು ನಿತೀಶ್‌ ವಹಿಸಿಕೊಂಡಿದ್ದರು. ನಂತರ, ಮೈತ್ರಿಕೂಟವನ್ನು ತೊರೆದು ಹಳೆಯ ಮಿತ್ರಪಕ್ಷ ಬಿಜೆಪಿಯ ಜತೆಗೆ ಹೋದರು. 

ಮಹಾಮೈತ್ರಿಕೂಟಕ್ಕೆ ನಿತೀಶ್‌ಗೆ ಸ್ವಾಗತವಿದೆ ಎಂಬ ಅರ್ಥದ ಮಾತು ಕಾಂಗ್ರೆಸ್‌ನಿಂದ ಈಗ ಬಂದಿದೆ. ‘ವಿಭಜಕ ಬಿಜೆಪಿಯ ಜತೆ ಇರಬೇಕೇ, ತಮ್ಮ ಜಾತ್ಯತೀತ ವರ್ಚಸ್ಸು ಉಳಿಸಿಕೊಳ್ಳುವುದಕ್ಕಾಗಿ ಮಹಾಮೈತ್ರಿಕೂಟಕ್ಕೆ ಮರಳಬೇಕೇ ಎಂಬ ನಿರ್ಧಾರವನ್ನು ನಿತೀಶ್‌ ಕೈಗೊಳ್ಳಬೇಕಾಗಿದೆ. ಅವರು ಬೇಗ ನಿರ್ಧಾರ ಕೈಗೊಂಡಷ್ಟು ಒಳ್ಳೆಯದು’ ಎಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸದಾನಂದ ಸಿಂಗ್‌ ಹೇಳಿದ್ದಾರೆ. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು