ಆಧಾರ್‌ ತಿದ್ದುಪಡಿಗೆ ಮಸೂದೆ

7
ಸಿಮ್‌, ಬ್ಯಾಂಕ್‌ ಖಾತೆಗೆ ಸ್ವಯಂಪ್ರೇರಿತ ಜೋಡಣೆಗೆ ಅವಕಾಶ

ಆಧಾರ್‌ ತಿದ್ದುಪಡಿಗೆ ಮಸೂದೆ

Published:
Updated:

ನವದೆಹಲಿ: ಆಧಾರ್‌ ತಿದ್ದುಪಡಿ ಮಸೂದೆಯನ್ನು ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಬುಧವಾರ ಮಂಡಿಸಿತು.

ಮೊಬೈಲ್‌ ಸಿಮ್‌ ಕಾರ್ಡ್‌ ಮತ್ತು ಬ್ಯಾಂಕ್‌ ಖಾತೆಗೆ ಸ್ವಇಚ್ಛೆಯಿಂದ ಆಧಾರ್‌ ಸಂಖ್ಯೆಯನ್ನು ಜೋಡಿಸಲು ಅವಕಾಶ ಕೊಡುವುದಕ್ಕೆ ಕಾನೂನಿನ ಮಾನ್ಯತೆ ನೀಡುವುದು ಇದರ ಉದ್ದೇಶವಾಗಿದೆ ಎಂದು ಸರ್ಕಾರ ಹೇಳಿದೆ.

ಮೊಬೈಲ್‌ ಸಿಮ್‌ ಕಾರ್ಡ್‌ ಪಡೆಯಲು ಹಾಗೂ ಬ್ಯಾಂಕ್‌ ಖಾತೆಗೆ ಆಧಾರ್‌ನ 12 ಅಂಕಿಯ ವಿಶಿಷ್ಟ ಗುರುತಿನ ಸಂಖ್ಯೆಯನ್ನು ಜೋಡಿಸುವುದು ಕಡ್ಡಾಯವಲ್ಲ ಎಂದು ಸುಪ್ರೀಂ ಕೋರ್ಟ್‌ 2018ರ ಸೆಪ್ಟೆಂಬರ್‌ 26ರಂದು ತೀರ್ಪು ನೀಡಿತ್ತು. 

ವಿರೋಧ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸುತ್ತಿದ್ದಂತೆ, ‘ಸುಪ್ರೀಂ ಕೋರ್ಟ್‌ ತೀರ್ಪಿನ ಅನುಸಾರ ತಿದ್ದುಪಡಿ ಮಾಡಲಾಗಿದ್ದು, ಗೋಪ್ಯತೆಯ ಉಲ್ಲಂಘನೆಯಾಗಿಲ್ಲ’ ಎಂದು ಕಾನೂನು ಸಚಿವ ರವಿಶಂಕರ್‌ ಪ್ರಸಾದ್‌ ಪ್ರತಿಪಾದಿಸಿದರು.

ದತ್ತಾಂಶ ರಕ್ಷಣೆ ಮಸೂದೆಯನ್ನು ಸಹ ಸರ್ಕಾರ ಸಿದ್ಧಪಡಿಸಿದ್ದು, ಸದ್ಯದಲ್ಲಿಯೇ ಸಂಸತ್ತಿನಲ್ಲಿ ಮಂಡನೆ ಮಾಡಲಾಗುವುದು ಎಂದು ಅವರು ತಿಳಿಸಿದರು.

‘ಈ ತಿದ್ದುಪಡಿ ಮಸೂದೆ ಸುಪ್ರೀಂ ಕೋರ್ಟ್ ತೀರ್ಪಿನ ಅನುಸಾರವಾಗಿದ್ದು, ಆಧಾರ್‌ ಸಂಖ್ಯೆಯನ್ನು ಎಲ್ಲದಕ್ಕೂ ಜೋಡಿಸಬೇಕು ಎಂಬುದು ಕಡ್ಡಾಯವಿಲ್ಲ. ಗೋಪ್ಯತೆ ಮೇಲೆ ಆಕ್ರಮಣ ಮಾಡುವುದಿಲ್ಲ. ಗೋಪ್ಯತೆ ಕಾಪಾಡಲು ಸಮಾನಾಂತರ ದೃಢೀಕರಣದ ನಿಯಮಗಳಿವೆ’ ಎಂದು ಪ್ರಸಾದ್‌ ತಿಳಿಸಿದರು.

‘ಆಧಾರ್‌ ಮೂಲಕ ಯೋಜನೆಗಳ ನೇರ ಲಾಭದ ವರ್ಗಾವಣೆಯಿಂದ ₹90,000 ಕೋಟಿ ಉಳಿತಾಯವಾಗುವುದನ್ನು ಮರೆಯಬಾರದು. ವಿಶ್ವ ಬ್ಯಾಂಕ್‌ ಹಾಗೂ ಐಎಂಎಫ್‌ ಸಹ ಆಧಾರ್‌ ಯೋಜನೆಯು ಭಾರತದ ವಿಶಿಷ್ಟ ಆವಿಷ್ಕಾರ ಎಂದು ಪ್ರಶಂಸಿಸಿವೆ’ ಎಂದರು.

ತೃಣಮೂಲ ಕಾಂಗ್ರೆಸ್‌ನ ಸಂಸದ ಸೌಗತ ರಾಯ್‌, ತಿದ್ದುಪಡಿ ಮಸೂದೆಗೆ ವಿರೋಧ ವ್ಯಕ್ತಪಡಿಸಿದರು. ಪ್ರಸ್ತಾವಿತ ತಿದ್ದುಪಡಿಯು ಸುಪ್ರೀಂ ಕೋರ್ಟ್‌ ತೀರ್ಪಿನ ಉಲ್ಲಂಘನೆಯಾಗಿದೆ. ಯಾವುದೇ ಕಾರಣಕ್ಕೂ ಮಸೂದೆ ಮಂಡಿಸಬಾರದು ಎಂದು ಒತ್ತಾಯಿಸಿದರು.

‘ಮೊದಲು ದತ್ತಾಂಶ ರಕ್ಷಣೆ ಮಸೂದೆ ಜಾರಿಗೆ ಬರಬೇಕು. ಈ ಮಸೂದೆಯ ಕರಡು ಎಲ್ಲಿದೆ? ಆಧಾರ್‌ ತಿದ್ದುಪಡಿ ಮಸೂದೆ ಕೋರ್ಟ್‌ ತೀರ್ಪು ಉಲ್ಲಂಘಿಸಿದ್ದು, ಕೂಡಲೇ ಇದನ್ನು ಹಿಂದಕ್ಕೆ ಪಡೆದು, ಪರಿಷ್ಕರಿಸಬೇಕು’ ಎಂದು ಕಾಂಗ್ರೆಸ್‌ನ ಶಶಿ ತರೂರ್‌ ಆಗ್ರಹಿಸಿದರು.

ಆರ್‌ಎಸ್‌ಪಿ ಸಂಸದ ಎನ್‌.ಕೆ.ಪ್ರೇಮಚಂದ್ರನ್‌ ಸಹ ಮಸೂದೆಗೆ ವಿರೋಧ ವ್ಯಕ್ತಪಡಿಸಿ, ಖಾಸಗಿತನದ ಹಕ್ಕನ್ನು ಇದು ಉಲ್ಲಂಘಿಸುತ್ತದೆ ಎಂದು ಆಪಾದಿಸಿದರು.

ವಿವಿಧ ವಿಷಯಗಳ ಕುರಿತು ಎಐಎಡಿಎಂಕೆ ಮತ್ತು ಟಿಡಿಪಿ ಸದಸ್ಯರು ಗಲಾಟೆ ನಡೆಸುತ್ತಿದ್ದ ಸಂದರ್ಭದಲ್ಲಿಯೇ ಆಧಾರ್‌ ತಿದ್ದುಪಡಿ ಮಸೂದೆ ಜೊತೆಗೆ ಭಾರತೀಯ ಟೆಲಿಗ್ರಾಫ್‌ ಕಾಯ್ದೆ 1885 ಮತ್ತು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ 2002ರ ತಿದ್ದುಪಡಿ ಮಸೂದೆಗಳನ್ನು ಮಂಡಿಸಲಾಯಿತು. ಮಸೂದೆ ಮಂಡನೆ ಮುಗಿಯುತ್ತಿದ್ದಂತೆ ಸ್ಪೀಕರ್‌ ಸುಮಿತ್ರಾ ಮಹಾಜನ್‌ ಅವರು ಸದನವನ್ನು ಮುಂದೂಡಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !