ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುದ್ಧಕ್ಕೆ ಬಂದರೆ ಚಚ್ಚುತ್ತೇವೆ

ಪಾಕಿಸ್ತಾನಕ್ಕೆ ಸೇನಾ ಮುಖ್ಯಸ್ಥ ಬಿಪಿನ್‌ ರಾವತ್‌ ಎಚ್ಚರಿಕೆ
Last Updated 26 ಜುಲೈ 2019, 19:51 IST
ಅಕ್ಷರ ಗಾತ್ರ

ಶ್ರೀನಗರ: ಭಾರತದ ಜತೆಗೆ ಇನ್ನೊಂದು ಯುದ್ಧಕ್ಕೆ ಮುಂದಾದರೆ ಪಾಕಿಸ್ತಾನವನ್ನು ಚಚ್ಚಿ ಬಿಸಾಕುತ್ತೇವೆ ಎಂದು ಸೇನಾ ಮುಖ್ಯಸ್ಥ ಬಿಪಿನ್‌ ರಾವತ್‌ ಎಚ್ಚರಿಕೆ ಕೊಟ್ಟಿದ್ದಾರೆ. ಕಾರ್ಗಿಲ್‌ ಸಂಘರ್ಷದ 20ನೇ ವರ್ಷಾಚರಣೆ ದಿನ ಅವರು ಈ ಎಚ್ಚರಿಕೆ ನೀಡಿದ್ದಾರೆ. ದ್ರಾಸ್‌ನಲ್ಲಿನ ಯುದ್ಧ ಸ್ಮಾರಕದಲ್ಲಿ ನಮನ ಸಲ್ಲಿಸಿ ಅವರು ಶುಕ್ರವಾರ ಮಾತನಾಡಿದರು.

‘ಆಪರೇಷನ್‌ ವಿಜಯ್‌’ ಎಂದು ಕರೆಯಲಾಗುವ ಕಾರ್ಗಿಲ್‌ ಸಂಘರ್ಷ ಕೊನೆಗೊಂಡ ಜುಲೈ 26ನೇ ದಿನವನ್ನು ವಿಜಯ ದಿನವಾಗಿ ಆಚರಿಸಲಾಗುತ್ತಿದೆ. ಪಾಕಿಸ್ತಾನವು ಅತಿಕ್ರಮಣ ಮಾಡಿಕೊಂಡಿದ್ದ ಭಾರತದ ಪ್ರದೇಶ ವಶಪಡಿಸಿಕೊಳ್ಳುವ ಭಾರತದ ಸೇನೆಯ ಕಾರ್ಯಾಚರಣೆ 1999ರ ಜು.26ರಂದು ಯಶಸ್ವಿಯಾಗಿ ಕೊನೆಗೊಂಡಿತ್ತು.

‘ಸೇನೆಗೆ ವಹಿಸುವ ಯಾವುದೇ ಹೊಣೆಗಾರಿಕೆ, ಅದು ಎಷ್ಟು ಕಷ್ಟದ್ದೇ ಆಗಿರಲಿ ಅದನ್ನು ಈಡೇರಿಸಲಾಗುವುದು ಎಂದು ದೇಶದ ಜನರಿಗೆ ಭರವಸೆ ಕೊಡುತ್ತೇನೆ. ನಮ್ಮ ಯೋಧರು ನಿರಂತರವಾಗಿ ಗಡಿಗಳನ್ನು ಕಾಯಲಿದ್ದಾರೆ’ ಎಂದು ಅವರು ತಿಳಿಸಿದ್ದಾರೆ.

ಸೇನಾ ಸಲಕರಣೆ ಆಧುನೀಕರಣದ ಬಗ್ಗೆಯೂ ಅವರು ಮಾತನಾಡಿದ್ದಾರೆ. ಫಿರಂಗಿ ವ್ಯವಸ್ಥೆಯನ್ನು ಆಧುನೀಕರಿಸಲು ಈಗ ಒತ್ತು ನೀಡಲಾಗುತ್ತಿದೆ. 2020ರ ಹೊತ್ತಿಗೆ ನಮ್ಮಲ್ಲಿ ಹೂವಿಟ್ಜರ್‌, ಕೆ–9 ವಜ್ರ ಫಿರಂಗಿಗಳು ಇರಲಿವೆ. ಇವುಗಳನ್ನು ದೇಶದಲ್ಲಿಯೇ ತಯಾರಿಸಲಾಗುವುದು. ಬೊಫೋರ್ಸ್‌ ಮಾದರಿಯ 2 ವಿಧಗಳ ಫಿರಂಗಿಯೂ ಸ್ಥಳೀಯವಾಗಿಯೇ ನಿರ್ಮಾಣವಾಗಲಿದೆ ಎಂದರು.

ಕಾರ್ಗಿಲ್‌ ಯುದ್ಧದಲ್ಲಿ ಹುತಾತ್ಮರಾದ ಯೋಧರ ಪತ್ನಿಯರು ಅಮೃತಸರದಲ್ಲಿ ಶುಕ್ರವಾರ ನಡೆದ ವಿಜಯ್‌ ದಿವಸ್‌ ಕಾರ್ಯಕ್ರಮದಲ್ಲಿ ಸ್ಮಾರಕಕ್ಕೆ ನಮಿಸಿದರು
ಕಾರ್ಗಿಲ್‌ ಯುದ್ಧದಲ್ಲಿ ಹುತಾತ್ಮರಾದ ಯೋಧರ ಪತ್ನಿಯರು ಅಮೃತಸರದಲ್ಲಿ ಶುಕ್ರವಾರ ನಡೆದ ವಿಜಯ್‌ ದಿವಸ್‌ ಕಾರ್ಯಕ್ರಮದಲ್ಲಿ ಸ್ಮಾರಕಕ್ಕೆ ನಮಿಸಿದರು

ಕಾಶ್ಮೀರಿ ಯುವಕರಿಗೆ ಎಚ್ಚರಿಕೆ

ಉತ್ತಮ ಮತ್ತು ಶಾಂತಿಯುತ ಭವಿಷ್ಯಕ್ಕಾಗಿ ಕುಟುಂಬಗಳಿಗೆ ಮರಳುವಂತೆ ಭಯೋತ್ಪಾದನೆಯತ್ತ ಸಾಗಿರುವ ಕಾಶ್ಮೀರದ ಯುವಕರಿಗೆ ರಾವತ್‌ ಕರೆ ಕೊಟ್ಟರು.

‘ಬಂದೂಕು ಕೈಗೆತ್ತಿಕೊಂಡ ಕಾಶ್ಮೀರದ ಯಾವುದೇ ಯುವಕ ಅಮಾಯಕ ಅಲ್ಲ’ ಎಂದೂ ಅವರು ಎಚ್ಚರಿಕೆ ಕೊಟ್ಟಿದ್ದಾರೆ. ತಪ್ಪುದಾರಿಗೆ ಇಳಿದಿರುವ ಯುವಜನರು ಮತ್ತೆ ಮುಖ್ಯವಾಹಿನಿಗೆ ಬರುವಂತೆ ಮನವೊಲಿಸಲು ಕುಟುಂಬಗಳಿಗೆ ಪ್ರೇರಣೆ ನೀಡುವ ಕೆಲಸವನ್ನೂ ಸೇನೆ ಮಾಡುತ್ತಿದೆ ಎಂದು ಅವರು ತಿಳಿಸಿದರು.

ತಮ್ಮ ಮಕ್ಕಳು ಪಿ.ಎಚ್‌ಡಿ ಮಾಡಿದ ಬಳಿಕ ಉಗ್ರಗಾಮಿಗಳಾಗಲಿ ಎಂದು ಯಾವ ಕುಟುಂಬವೂ ಬಯಸುವುದಿಲ್ಲ ಎಂದೂ ಅವರು ಹೇಳಿದರು.

ಧೋನಿಯೇ ರಕ್ಷಕ: ಟೆರಿಟೋರಿಯಲ್‌ ಆರ್ಮಿ ಬೆಟಾಲಿಯನ್‌ನಲ್ಲಿ ಸೇವೆ ಸಲ್ಲಿಸಲು ಮುಂದಾಗಿರುವ ಕ್ರಿಕೆಟಿಗ ಮಹೇಂದ್ರ ಸಿಂಗ್‌ ಧೋನಿ ಅವರಿಗೆ ಭದ್ರತೆಯ ಅಗತ್ಯ ಇಲ್ಲ. ಯಾಕೆಂದರೆ ಅವರೇ ಈಗ ದೇಶದ ಜನರ ರಕ್ಷಣೆಯ ಹೊಣೆ ಹೊತ್ತಿದ್ದಾರೆ ಎಂದು ರಾವತ್‌ ತಿಳಿಸಿದರು.

*ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ಮತ್ತು ಚೀನಾದ ವಶದಲ್ಲಿರುವ ಅಕ್ಷಯ್‌ ಚಿನ್‌ ಪ್ರದೇಶಗಳು ಭಾರತದ ಭಾಗ. ಇವನ್ನು ವಶಪಡಿಸಿಕೊಳ್ಳಲು ಸರ್ಕಾರದ ನಿರ್ಧಾರ ಅಗತ್ಯ

- ಬಿಪಿನ್‌ ರಾವತ್‌, ಸೇನಾ ಮುಖ್ಯಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT