ಬುಧವಾರ, ಸೆಪ್ಟೆಂಬರ್ 18, 2019
24 °C

ಐಎಸ್‌ಐನಿಂದ ಹಣ ಪಡೆದ ಬಿಜೆಪಿ, ಬಜರಂಗದಳ: ದಿಗ್ವಿಜಯ ಸಿಂಗ್‌ ಆರೋಪ

Published:
Updated:
Prajavani

ಭಿಂಡ್‌ (ಮಧ್ಯಪ್ರದೇಶ): ‘ಪಾಕಿಸ್ತಾನದ ಗೂಢಚಾರ ಸಂಸ್ಥೆ ಐಎಸ್‌ಐನಿಂದ ಬಿಜೆಪಿ ಮತ್ತು ಬಜರಂಗದಳ ಹಣ ಪಡೆದಿವೆ’ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ದಿಗ್ವಿಜಯ ಸಿಂಗ್‌ ಆರೋಪಿಸಿದ್ದಾರೆ.

ಈ ಹೇಳಿಕೆಗೆ ಬಿಜೆಪಿ ವಲಯದಿಂದ ಪ್ರತಿರೋಧ ವ್ಯಕ್ತವಾಗಿದೆ. ‘ಅವರು ವಿಶ್ವಾಸಾರ್ಹತೆ ಕಳೆದುಕೊಂಡಿದ್ದಾರೆ. ಉದ್ದೇಶಪರ್ವಕವಾಗಿ ವಿವಾದಿತ ಹೇಳಿಕೆ ನೀಡುತ್ತಿದ್ದಾರೆ’ ಎಂದು ಬಿಜೆಪಿ ಟೀಕಿಸಿದೆ.

‘ಬಿಜೆಪಿ, ಬಜರಂಗದಳ ಹಣ ಪಡೆದಿವೆ. ಇದರತ್ತ ಗಮನಹರಿಸಿ’ ಎಂದು ಶನಿವಾರ ಸುದ್ದಿಗಾರರಿಗೆ ಸಿಂಗ್‌ ತಿಳಿಸಿದರು. ‘ಪಾಕಿಸ್ತಾನ ಪರ ಮುಸ್ಲಿಂರಿಗಿಂತಲೂ, ಮುಸ್ಲಿಂಯೇತರರೇ ಹೆಚ್ಚು ಗೂಢಚಾರಿಕೆ ಮಾಡುತ್ತಿದ್ದಾರೆ. ತಿಳಿದುಕೊಳ್ಳಿ’ ಎಂದರು.

ಭಾನುವಾರ ‘ತಮ್ಮ  ಹೇಳಿಕೆ ಬಗ್ಗೆ ಸುದ್ದಿವಾಹಿನಿಗಳು ಸತ್ಯಕ್ಕೆ ದೂರವಾದ ಸುದ್ದಿಗಳನ್ನು ಪ್ರಸಾರ ಮಾಡುತ್ತಿವೆ’ ಎಂದು ಟ್ವೀಟ್ ಮಾಡಿದ್ದಾರೆ.

‘ಮಧ್ಯಪ್ರದೇಶ ಪೊಲೀಸರು ಬಜರಂಗದಳ ಮತ್ತು ಬಿಜೆಪಿ ಐಟಿ ವಿಭಾಗದ ಕೆಲವರನ್ನು ಬಂಧಿಸಿದ್ದಾರೆ’ ಎಂದೂ ಅವರು ಟ್ವೀಟ್ ಮಾಡಿದ್ದಾರೆ.

‘ನಾನು ಆರೋಪ ಮಾಡಿದ್ದೇನೆ ಮತ್ತು ಅದಕ್ಕೆ ಬದ್ಧನಾಗಿದ್ದೇನೆ. ಸುದ್ದಿವಾಹಿನಿಗಳು  ಈ ಬಗ್ಗೆ ಬಿಜೆಪಿಗೆ ಏಕೆ ಪ್ರಶ್ನಿಸಬಾರದು’ ಎಂದು ದಿಗ್ವಿಜಯ್ ಸಿಂಗ್ ಅವರು ಪ್ರಶ್ನಿಸಿದರು.

ಬಿಜೆಪಿ ಹಿರಿಯ ನಾಯಕ ಶಿವರಾಜ ಸಿಂಗ್ ಚೌಹಾಣ್‌ ಅವರು, ‘ಕಾಂಗ್ರೆಸ್‌ ನಾಯಕ ವಿಶ್ವಾಸಾರ್ಹತೆ ಕಳೆದುಕೊಂಡಿದ್ದಾರೆ. ಅವರೂ ಪಾಕಿಸ್ತಾನದ ಭಾಷೆಯನ್ನೇ ಬಳಸುತ್ತಾರೆ. ಐಎಸ್‌ಐ ಹೇಳಿದ್ದನ್ನೇ ಇವರು ಹೇಳುತ್ತಾರೆ. ಅವರು ಒಸಾಮಜೀ (ಉಗ್ರ ಒಸಾಮ ಬಿನ್‌ ಲಾಡೆನ್‌) ಎನ್ನುತ್ತಾರೆ’ ಎಂದು ಚೌಹಾಣ್‌ ಟೀಕಿಸಿದರು.

ಮಧ್ಯಪ್ರದೇಶದ ಎಟಿಎಸ್‌ ಇತ್ತೀಚೆಗೆ, ಪಾಕಿಸ್ತಾನದ ಜೊತೆಗೆ ಮಾಹಿತಿಗಳ ವಿನಿಮಯ ಮತ್ತು ಅಂತರಗಡಿ ಹಣಕಾಸು ವಹಿವಾಟು ಸಂಬಂಧ ಮೂವರನ್ನು ಬಂಧಿಸಿತ್ತು. ‘ಇವರ ಪೈಕಿ ಒಬ್ಬರು ಬಜರಂಗದಳ ಸದಸ್ಯ’ ಎಂಬುದು ಕಾಂಗ್ರೆಸ್‌ ಪಕ್ಷದ ಆರೋಪ.

Post Comments (+)