ಮಂಗಳವಾರ, ನವೆಂಬರ್ 12, 2019
28 °C

ಜಾರ್ಖಂಡ್‌ ಚುನಾವಣೆ ಮೊದಲ ಪಟ್ಟಿ ಬಿಡುಗಡೆ

Published:
Updated:
Prajavani

ರಾಂಚಿ: ಜಾರ್ಖಂಡ್‌ ವಿಧಾನ ಸಭೆಗೆ ನಡೆಯಲಿರುವ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷ ಭಾನುವಾರ ಬಿಡುಗಡೆ ಮಾಡಿವೆ.

ಬಿಜೆಪಿ 50 ಅಭ್ಯರ್ಥಿಗಳ ಹೆಸರನ್ನು ಘೋಷಿಸಿದ್ದರೆ, ಕಾಂಗ್ರೆಸ್‌ ಕೇವಲ ಐವರ ಹೆಸರನ್ನು ಘೋಷಿಸಿದೆ.

ಬಿಜೆಪಿ ಮುಖಂಡ, ರಾಜ್ಯದ ಹಾಲಿ ಮುಖ್ಯಮಂತ್ರಿ ರಘುವರ ದಾಸ್‌ ಅವರು ಜಮ್‌ಶೆಡ್‌ಪುರ (ಪೂರ್ವ) ಕ್ಷೇತ್ರದಿಂದ ಹಾಗೂ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಲಕ್ಷ್ಮಣ ಗಿಲುವಾ ಅವರು ಚಕ್ರಧರಪುರ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಭಾನುವಾರ ಪಟ್ಟಿ ಬಿಡುಗಡೆ ಮಾಡಿದ ಪಕ್ಷದ ಕಾರ್ಯಾಧ್ಯಕ್ಷ ಜೆ.ಪಿ. ನಡ್ಡಾ, ‘ದಾಸ್‌ ಅವರ ನಾಯಕತ್ವದಲ್ಲಿ ರಾಜ್ಯದಲ್ಲಿ ಭ್ರಷ್ಟಾಚಾರವು ಗಣನೀಯವಾಗಿ ಕಡಿಮೆಯಾಗಿದೆ. ಎಲ್ಲಾ ವರ್ಗಗಳಿಂದಲೂ ಅವರಿಗೆ ಬೆಂಬಲ ವ್ಯಕ್ತವಾಗುತ್ತಿದೆ’ ಎಂದರು.

ಜಾರ್ಖಂಡ್‌ ಮುಕ್ತಿ ಮೋರ್ಚಾ (ಜೆಎಂಎಂ) ಜೊತೆ ಮೈತ್ರಿ ಮಾಡಿಕೊಂಡಿರುವ ಕಾಂಗ್ರೆಸ್‌ ಪಕ್ಷವು ಐದು ಕ್ಷೇತ್ರಗಳಿಗೆ ಮಾತ್ರ ಅಭ್ಯರ್ಥಿಗಳನ್ನು ಘೋಷಿಸಿದೆ. ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ರಾಮೇಶ್ವರ ಉರಾಂವ್‌ ಅವರು ಲೊಹರ್ದಗಾ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ.

ಕಾಂಗ್ರೆಸ್‌– ಜೆಎಂಎಂ ನಡುವೆ ಸೀಟು ಹೊಂದಾಣಿಕೆ ಒಪ್ಪಂದವಾಗಿದ್ದು, ಜೆಎಂಎಂ 43 ಕ್ಷೇತ್ರಗಳಲ್ಲಿ, ಕಾಂಗ್ರೆಸ್‌ 31 ಕ್ಷೇತ್ರಗಳಲ್ಲಿ ಹಾಗೂ ಇನ್ನೊಂದು ಮಿತ್ರಪಕ್ಷವಾದ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಏಳು ಕ್ಷೇತ್ರಗಳಲ್ಲಿ ಸ್ಪರ್ಧಿಸಲಿವೆ. ಮೈತ್ರಿಯ ನೇತೃತ್ವವನ್ನು ಜೆಎಂಎಂನ ಹೇಮಂತ್‌ ಸೊರೇನ್‌ ವಹಿಸಲಿದ್ದಾರೆ.

2014ರ ಚುನಾವಣೆಯಲ್ಲಿ ಜೆಎಂಎಂ 19 ಕ್ಷೇತ್ರಗಳನ್ನು ಗೆದ್ದುಕೊಂಡಿತ್ತು. ಕಾಂಗ್ರೆಸ್‌ 62 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದರೂ 6 ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸಿತ್ತು.

ರಾಜ್ಯದಲ್ಲಿ ಪ್ರಸಕ್ತ ಆಡಳಿತ ನಡೆಸುತ್ತಿರುವ ಬಿಜೆಪಿ 37 ಸ್ಥಾನಗಳಲ್ಲಿ ಹಾಗೂ ಅದರ ಮಿತ್ರಪಕ್ಷ ಆಲ್‌ ಜಾರ್ಖಂಡ್‌ ಸ್ಟೂಡೆಂಟ್ಸ್‌ ಯೂನಿಯನ್‌ (ಎಜೆಎಸ್‌ಯು) 3 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದವು. ಇತರ ಪಕ್ಷಗಳ ಕೆಲವು ಶಾಸಕರು ಬಿಜೆಪಿಗೆ ಸೇರ್ಪಡೆಯಾದ್ದರಿಂದ ಸರ್ಕಾರ ರಚಿಸಲು ಬಿಜೆಪಿಗೆ ಸಾಧ್ಯವಾಗಿತ್ತು. ಮುಂಬರುವ ಚುನಾವಣೆಯಲ್ಲಿ ಕನಿಷ್ಠ 65 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಗುರಿಯನ್ನು ಬಿಜೆಪಿ ಇಟ್ಟಕೊಂಡಿದೆ.

ಪ್ರತಿಕ್ರಿಯಿಸಿ (+)