ಬಿಜೆಪಿ: ಶೇ. 40 ಸಂಸದರ ಟಿಕೆಟ್‌ಗೆ ಸಂಚಕಾರ

ಶನಿವಾರ, ಮಾರ್ಚ್ 23, 2019
31 °C
ಅಭ್ಯರ್ಥಿ ಬದಲಾವಣೆಯ ಇಂಗಿತ: ಜನಸಂಪರ್ಕ ಇಲ್ಲದವರಿಗೆ ಕೊಕ್

ಬಿಜೆಪಿ: ಶೇ. 40 ಸಂಸದರ ಟಿಕೆಟ್‌ಗೆ ಸಂಚಕಾರ

Published:
Updated:

ನವದೆಹಲಿ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮೂರು ಹಂತಗಳ ಸಮೀಕ್ಷೆ ನಡೆಸಿರುವ ಬಿಜೆಪಿ, ಹಿಂದಿ ಭಾಷಿಕ ರಾಜ್ಯಗಳೂ ಸೇರಿದಂತೆ ರಾಷ್ಟ್ರ ಮಟ್ಟದಲ್ಲಿ ಶೇ 40ರಷ್ಟು ಅಭ್ಯರ್ಥಿಗಳನ್ನು ಬದಲಿಸುವ ನಿರ್ಣಯ ಕೈಗೊಂಡಿದೆ.

ಅಭ್ಯರ್ಥಿಗಳ ಆಯ್ಕೆ ಕುರಿತು ಪಕ್ಷದ ರಾಜ್ಯ ಘಟಕ ಹಾಗೂ ಹೈಕಮಾಂಡ್‌ ವತಿಯಿಂದ ಆಂತರಿಕ ಸಮೀಕ್ಷೆ ನಡೆಸಿ ವರದಿ ಪಡೆದಿರುವ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ, ಸಂಘ ಪರಿವಾರದ ಮುಖಂಡರಿಂದಲೂ ವರದಿ ಸಂಗ್ರಹಿಸಿದೆ.

ಸಾರ್ವಜನಿಕರ ಸಂಪರ್ಕದಿಂದ ದೂರ ಉಳಿದ, ಜನಪರ ಕಾಳಜಿ ತೋರದೇ ಸೋಲಿನ ಭೀತಿ ಎದುರಿಸುತ್ತಿರುವ ಸಂಸದರನ್ನು ಬದಲಿಸಿ, ಹೊಸಬರಿಗೆ ಟಿಕೆಟ್‌ ನೀಡುವ ಚಿಂತನೆ ನಡೆಸಲಾಗಿದೆ ಎಂದು ಪಕ್ಷದ ಉನ್ನತ ಮೂಲಗಳು ‘ಪ್ರಜಾವಾಣಿ’ಗೆ ಖಚಿತಪಡಿಸಿವೆ.

ಉತ್ತರ ಪ್ರದೇಶ, ಗುಜರಾತ್‌, ಮದ್ಯಪ್ರದೇಶ, ರಾಜಸ್ಥಾನ, ಛತ್ತೀಸಗಢ, ಉತ್ತರಾಖಂಡ, ಹರಿಯಾಣ, ಹಿಮಾಚಲ ಪ್ರದೇಶ, ಬಿಹಾರ ಮತ್ತು ದೆಹಲಿಯಲ್ಲಿ ಕೆಲವು ಹಾಲಿ ಸಂಸದರಿಗೆ ಟಿಕೆಟ್‌ ನಿರಾಕರಿಸುವ ಸಾಧ್ಯತೆಗಳು ದಟ್ಟವಾಗಿವೆ. ಕರ್ನಾಟಕ ಮತ್ತು ಮಹಾರಾಷ್ಟ್ರಗಳಲ್ಲೂ ಒಬ್ಬಿಬ್ಬರಿಗೆ ಟಿಕೆಟ್‌ ನಿರಾಕರಿಸಿದರೂ ಅಚ್ಚರಿಯಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.

2014ರ ಚುನಾವಣೆಯಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯ 7ರಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಗೆದ್ದಿದ್ದ ಬಿಜೆಪಿ ಈ ಬಾರಿ ಕನಿಷ್ಠ ಮೂವರನ್ನು ಬದಲಿಸಲಿದೆ. ಅವರಲ್ಲಿ ನವದೆಹಲಿ ಕ್ಷೇತ್ರದ ಮೀನಾಕ್ಷಿ ಲೇಖಿ, ವಾಯವ್ಯ ದೆಹಲಿಯ ಉದಿತ್‌ ರಾಜ್‌, ದಕ್ಷಿಣ ದೆಹಲಿಯ ರಮೇಶ್‌ ಬಿಧೂರಿ ಅವರ ಹೆಸರುಗಳು ಪ್ರಮುಖವಾಗಿವೆ.

ಭಾರತೀಯ ಕ್ರಿಕೆಟ್‌ ತಂಡದ ಮಾಜಿ ಆಟಗಾರ ಗೌತಮ್‌ ಗಂಭೀರ್‌ ಅವರನ್ನು ಮೀನಾಕ್ಷಿ ಲೇಖಿ ಪ್ರತಿನಿಧಿಸುತ್ತಿರುವ ಕ್ಷೇತ್ರದಿಂದ ಕಣಕ್ಕಿಳಿಸಲು ಪಕ್ಷ ಆಸಕ್ತಿ ತಾಳಿದೆ. ಪ್ರಮುಖ ರಾಜ್ಯವಾದ ಉತ್ತರಪ್ರದೇಶದಲ್ಲಿ ಹಾಲಿ ಇರುವ 68 ಜನ ಸಂಸದರಲ್ಲಿ 22 ಜನರಿಗೆ ಟಿಕೆಟ್‌ ನೀಡುವುದಿಲ್ಲ ಎಂಬ ಸಂದೇಶವನ್ನು ಪರೋಕ್ಷವಾಗಿ ರವಾನಿಸಲಾಗಿದೆ.

ಕ್ಷೇತ್ರ ಬದಲು; ಮೇನಕಾಗೆ ಸೂಚನೆ: ಉತ್ತರಪ್ರದೇಶದ ಫಿಲಿಬಿತ್‌ ಕ್ಷೇತ್ರ ಪ್ರತಿನಿಧಿಸುತ್ತಿರುವ ಸಚಿವೆ ಮೇನಕಾ ಗಾಂಧಿ ಅವರನ್ನು ಹರಿಯಾಣದ ಯಾವುದಾದರೂ ಕ್ಷೇತ್ರದಿಂದ ಕಣಕ್ಕಿಳಿಸಲು ಹೈಕಮಾಂಡ್‌ ಆಲೋಚಿಸುತ್ತಿದೆ. ಅವರನ್ನು ಹರಿಯಾಣದಿಂದ ಕಣಕ್ಕಿಳಿಸಿದಲ್ಲಿ ಪಕ್ಷಕ್ಕೆ ನೆರವಾಗಲಿದೆ ಎಂಬ ಭಾವನೆ ವರಿಷ್ಠರದ್ದಾಗಿದೆ. ಸುಲ್ತಾನ್‌ಪುರದಲ್ಲಿ ಗೆದ್ದಿದ್ದ ಅವರ ಪುತ್ರ ವರುಣ್‌ ಗಾಂಧಿ ಅವರನ್ನು ಫಿಲಿಬಿತ್‌ನಿಂದ ಅಖಾಡಕ್ಕೆ ಇಳಿಸುವ ಸಾಧ್ಯತೆಗಳಿವೆ.

ಹಿರಿಯರಿಗೂ ಟಿಕೆಟ್‌ ಅನುಮಾನ
ಬಿಜೆಪಿಯ ಹಿರಿಯ ಸಂಸದರಾದ ಲಾಲ್‌ಕೃಷ್ಣ ಅಡ್ವಾಣಿ (ಗಾಂಧಿನಗರ– ಗುಜರಾತ್‌), ಮುರುಳಿ ಮನೋಹರ ಜೋಶಿ (ಕಾನ್ಪುರ– ಉತ್ತರಪ್ರದೇಶ), ಭಗತ್‌ಸಿಂಗ್‌ ಕೋಶಿಯಾರಿ (ನೈನಿತಾಲ್‌ ಉಧಮ್‌ಸಿಂಗ್‌ ನಗರ– ಉತ್ತರಾಖಂಡ), ಬಿ.ಸಿ. ಖಂಡೂರಿ (ಗರ್ವಾಲ್‌ ಉತ್ತರಾಖಂಡ), ಶಾಂತಕುಮಾರ್‌ (ಕಾಂಗ್ರಾ– ಹಿಮಾಚಲ ಪ್ರದೇಶ) ಅವರಿಗೆ ಈ ಬಾರಿ ಮತ್ತೆ ಟಿಕೆಟ್‌ ದೊರೆಯುವ ಬಗ್ಗೆ ಪಕ್ಷದ ಮೂಲಗಳು ಶಂಕೆ ವ್ಯಕ್ತಪಡಿಸುತ್ತಿವೆ.

ಕಾಂಗ್ರೆಸ್‌ನ 2ನೇ ಪಟ್ಟಿ
ನವದೆಹಲಿ: ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆಯಾಗಿದೆ. ಮಹಾರಾಷ್ಟ್ರದ ಐದು ಮತ್ತು ಉತ್ತರ ಪ್ರದೇಶದ 16 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಪ್ರಕಟಿಸಲಾಗಿದೆ. 

ಮುಂಬೈ ಕೇಂದ್ರ–ಉತ್ತರ ಕ್ಷೇತ್ರದಿಂದ ಪ್ರಿಯಾ ದತ್‌ ಅವರಿಗೆ ಟಿಕೆಟ್‌ ನೀಡಲಾಗಿದೆ. ಉತ್ತರ ಪ್ರದೇಶದ ಮೊರಾದಾಬಾದ್‌ನಿಂದ ರಾಜ್ಯ ಘಟಕದ ಅಧ್ಯಕ್ಷ ರಾಜ್‌ ಬಬ್ಬರ್‌ ಕಣಕ್ಕೆ ಇಳಿಯಲಿದ್ದಾರೆ. 

ಸಾವಿತ್ರಿ ಫುಲೆ ಅವರು ಬಹರೈಚ್‌, ಕೈಸರ್‌ ಜಹರ್‌ ಅವರು ಸೀತಾಪುರದಿಂದ ಸ್ಪರ್ಧಿಸಲಿದ್ದಾರೆ. ಪ್ರಿಯಾಂಕಾ ಗಾಂಧಿ ಅವರ ಆಪ್ತರಾಗಿ
ರುವ ಲಲಿತೇಶ್‌ ಪತಿ ತ್ರಿಪಾಠಿ ಅವರು ಮಿರ್ಜಾಪುರದ ಹುರಿಯಾಳಾಗಿದ್ದಾರೆ. 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 1

  Frustrated
 • 1

  Angry

Comments:

0 comments

Write the first review for this !