ಭಾನುವಾರ, ಜನವರಿ 26, 2020
28 °C

ನ.4ರಂದು ಮಾಡಿದ್ದ ವಿವಾದಿತ ಟ್ವೀಟ್‌ ಅನ್ನು ದಿಢೀರ್‌ ಅಳಿಸಿದ ಬಿಜೆಪಿ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ನೋಂದಣಿ ಪ್ರಕ್ರಿಯೆ (ಎನ್‌ಆರ್‌ಸಿ) ದೇಶದಾದ್ಯಂತ ವಿವಾದದ ಕಿಡಿ ಹೊತ್ತಿಸಿರುವ ನಡುವೆಯೇ ಬಿಜೆಪಿ ತನ್ನ ಬಹು ವಿವಾದಿತ ಟ್ವೀಟ್‌ ಅನ್ನು ಗುರುವಾರ ದಿಢೀರ್‌ ಅಳಿಸಿ ಹಾಕಿದೆ. 

‘ಬೌದ್ಧ, ಹಿಂದೂ, ಸಿಖ್ಖರನ್ನು ಹೊರತುಪಡಿಸಿ ದೇಶದಲ್ಲಿರುವ ಪ್ರತಿಯೊಬ್ಬ ವಲಸಿಗರನ್ನು ಹೊರ ಹಾಕುತ್ತೇವೆ,’ ಎನ್ನುವ ಮೂಲಕ ಮುಸ್ಲಿಂ ಸಮುದಾಯವನ್ನು ತಮ್ಮ ಪಟ್ಟಿಯಿಂದ ಹೊರಗಿಟ್ಟು ಮಾಡಿದ್ದ ಟ್ವೀಟ್‌ ಕಳೆದ ತಿಂಗಳು ಸಾಮಾಜಿಕ ತಾಣದಲ್ಲಿ ಸಂಚಲನ ಸೃಷ್ಟಿ ಮಾಡಿತ್ತು. ದೇಶದಲ್ಲಿ ಸಿಎಎ ಮತ್ತು ಎನ್‌ಆರ್‌ಸಿ ವಿರುದ್ಧ ಹೋರಾಟಗಳು ಕಾವು ಪಡೆದುಕೊಂಡಿರುವ ಈ ಹೊತ್ತಿನಲ್ಲಿ ಬಿಜೆಪಿ ನ.4ರಂದು ಮಾಡಿದ್ದ ಟ್ವೀಟ್‌ ಅನ್ನು ಡಿಲಿಟ್‌ ಮಾಡಿದೆ. 

ಇದಕ್ಕೂ ಹಿಂದೆ ಗೃಹ ಸಚಿವ ಅಮಿತ್‌ ಶಾ ಅವರು  ಲೋಕಸಭೆ ಚುನಾವಣೆ ವೇಳೆ ಇದೇ ರೀತಿಯ ಹೇಳಿಕೆ ನೀಡಿದ್ದರು. ‘ದೇಶಾಂದ್ಯಂತ ರಾಷ್ಟ್ರೀಯ ನೋಂದಣಿ ಪ್ರಕ್ರಿಯೆಯನ್ನು ಜಾರಿ ಮಾಡಲು ಬಿಜೆಪಿ ಬದ್ಧವಾಗಿದೆ,’ ಎಂಬ ಅವರ ಹೇಳಿಕೆ ವಿವಾದದ ಕಿಡಿ ಹೊತ್ತಿಸಿತ್ತು.  

ಇನ್ನು ಟ್ವೀಟ್‌ ಅಳಿಸಿರುವ ಬಗ್ಗೆ ಮಾತನಾಡಿರುವ ತೃಣಮೂಲ ಕಾಂಗ್ರೆಸ್‌ನ ಸಂಸದ ಡೆರಿಕ್‌ ಒಬ್ರೆಯಾನ್‌, ‘ಬಿಜೆಪಿ ಐಟಿ ವಿಭಾಗ ವಿವಾದಿತ ಟ್ವೀಟ್‌ ಅನ್ನು ಅಳಿಸಿರಬಹುದು. ಆದರೆ, ನಮ್ಮ ಸರ್ಕಾರ ಎನ್‌ಆರ್‌ಸಿಯನ್ನು ದೇಶಾದ್ಯಂತ ಜಾರಿಗೆ ತರುತ್ತದೆ ಎಂದು ಸಂಸತ್‌ನಲ್ಲಿ ಗೃಹ ಇಲಾಖೆ ಹೇಳಿದ್ದನ್ನು ಅಳಿಸಲು ಸಾಧ್ಯವೇ ಇಲ್ಲ,’ ಎಂದು ಪ್ರಶ್ನೆ ಮಾಡಿದ್ದಾರೆ.  

ಟ್ವೀಟ್‌ ಅಳಿಸಿದ ಕುರಿತು ಹಲವರು ವ್ಯಂಗ್ಯವಾಡಿದ್ದಾರೆ. ‘ಆಗಿದ್ದು ಆಗಿ ಹೋಗಿದೆ,’ ಎಂದು ಹಲವರು ಗೇಲಿ ಮಾಡಿದ್ದಾರೆ. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು