ಸೋಮವಾರ, ಸೆಪ್ಟೆಂಬರ್ 23, 2019
28 °C

ನಿತೀಶ್‌ ಕುಮಾರ್ ಸಿ.ಎಂ ಸ್ಥಾನ ತ್ಯಜಿಸಲಿ: ಬಿಹಾರ ಬಿಜೆಪಿ ಮುಖಂಡ ಸಂಜಯ ಪಾಸ್ವಾನ್‌

Published:
Updated:
Prajavani

ಪಟ್ನಾ: ನಿತೀಶ್‌ ಕುಮಾರ್‌ ಅವರು ಬಿಹಾರ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯಬೇಕು ಎಂದು ಬಿಜೆಪಿಯ ಹಿರಿಯ ಮುಖಂಡ ಮತ್ತು ಕೇಂದ್ರದ ಮಾಜಿ ಸಚಿವ ಸಂಜಯ ಪಾಸ್ವಾನ್‌ ಅವರು ಒತ್ತಾಯಿಸಿದ್ದಾರೆ. ಇದು ಬಿಹಾರ ಎನ್‌ಡಿಎಯೊಳಗಿನ ಮಹತ್ವದ ರಾಜಕೀಯ ಬೆಳವಣಿಗೆಯಾಗಿದ್ದು ವ್ಯಾಪಕ ಪರಿಣಾಮಗಳನ್ನು ಉಂಟುಮಾಡಬಹುದು ಎನ್ನಲಾಗಿದೆ. 

‘ನಿತೀಶ್‌ ಅವರು ಸುಮಾರು 15 ವರ್ಷ ಬಿಹಾರದ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದಾರೆ. ಈಗ, ಅವರು ರಾಜ್ಯದ ಅಧಿಕಾರವನ್ನು ಉಪ ಮುಖ್ಯಮಂತ್ರಿ ಸುಶೀಲ್‌ ಕುಮಾರ್‌ ಮೋದಿ ಅವರಿಗೆ ಹಸ್ತಾಂತರಿಸಬೇಕು. ನಿತೀಶ್‌ ಅವರು ಕೇಂದ್ರಕ್ಕೆ ತೆರಳಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೆರವಾಗಬೇಕು’ ಎಂದು ಸಂಜಯ ಹೇಳಿದ್ದಾರೆ. ಅಟಲ್‌ ಬಿಹಾರಿ ವಾಜಪೇಯಿ ನೇತೃತ್ವದ ಸರ್ಕಾರದಲ್ಲಿ ಸಂಜಯ ಅವರು ಸಚಿವರಾಗಿದ್ದರು.

ಇದನ್ನೂ ಓದಿ: ಭವಿಷ್ಯದಲ್ಲೂ ನಾವು ಮೋದಿ ಸರ್ಕಾರದಲ್ಲಿ ಭಾಗಿಯಾಗುವುದಿಲ್ಲ: ನಿತೀಶ್‌ ಕುಮಾರ್‌

ನಿತೀಶ್‌ ಅವರ ನಾಯಕತ್ವವನ್ನು ತಾವು ಪ್ರಶ್ನಿಸುತ್ತಿಲ್ಲ. ಆದರೆ, ಬಿಹಾರ ವಿಧಾನಸಭೆಯ ಮುಂದಿನ ಚುನಾವಣೆಯಲ್ಲಿ ನರೇಂದ್ರ ಮೋದಿ ಹೆಸರಿನಲ್ಲಿ ಮಾತ್ರ ಮತಗಳು ಸಿಗಲಿವೆ. ಹಾಗಾಗಿ, ನಿತೀಶ್‌ ಬಿಜೆಪಿಗೆ ದಾರಿ ಮಾಡಿಕೊಡಬೇಕು. 2020ರ ವಿಧಾನಸಭೆ ಚುನಾವಣೆಗೆ ಮುನ್ನ ಮಾಡಬೇಕಾದ ಹಲವು ಕೆಲಸಗಳಿವೆ. ಅವುಗಳನ್ನು ಮಾಡಲು ಅವಕಾಶ ಕೊಡಬೇಕು ಎಂದಿದ್ದಾರೆ.

ಅನಪೇಕ್ಷಿತ ಹೇಳಿಕೆ: ಜೆಡಿಯು

ಇದು ಅನಪೇಕ್ಷಿತ ಹೇಳಿಕೆ ಎಂದು ಜೆಡಿಯು ಹೇಳಿದೆ. ಇದು ಅವರ ವೈಯಕ್ತಿಕ ಹೇಳಿಕೆಯೇ ಅಥವಾ ಬಿಜೆಪಿಯ ನಿಲುವೇ ಎಂಬುದನ್ನು ಆ ಪಕ್ಷ ಸ್ಪಷ್ಟಪಡಿಸಬೇಕು ಎಂದು ಜೆಡಿಯು ಆಗ್ರಹಿಸಿದೆ. 

‘ನಿತೀಶ್‌ ಅವರು ಚುನಾಯಿತ ಮುಖ್ಯಮಂತ್ರಿ. ಭಾರಿ ಜನಪ್ರಿಯತೆಯನ್ನೂ ಅವರು ಪಡೆದುಕೊಂಡಿದ್ದಾರೆ. ಈ ವಿಚಾರದಲ್ಲಿ ಸಂಜಯ ಪಾಸ್ವಾನ್‌ ಅವರ ಪ್ರಮಾಣಪತ್ರ ಬೇಕಿಲ್ಲ. 2015ರ ವಿಧಾನಸಭೆ ಚುನಾವಣೆಯಲ್ಲಿ ನಿತೀಶ್‌ ಪರವಾಗಿ ಬಿಹಾರದ ಜನರು ಮತ ಹಾಕಿದ್ದಾರೆ. ಆ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರು ವ್ಯಾಪಕ ಪ್ರಚಾರ ಮಾಡಿದ್ದರೂ ಬಿಜೆಪಿ ಹೇಗೆ ಹೀನಾಯವಾಗಿ ಸೋತಿತು ಎಂಬುದನ್ನು ಮರೆಯಬಾರದು’ ಎಂದು ಜೆಡಿಯು ವಕ್ತಾರ ಸಂಜಯ್‌ ಸಿಂಗ್‌ ಹೇಳಿದ್ದಾರೆ. 

ನಾಲ್ಕನೇ ಬಾರಿ ಭಿನ್ನಸ್ವರ

ಬಿಜೆಪಿ ಮತ್ತು ಜೆಡಿಯು ನಡುವೆ ಭಿನ್ನಸ್ವರ ಕೇಳಿಸಿರುವುದು ನಾಲ್ಕು ತಿಂಗಳಲ್ಲಿ ಇದು ನಾಲ್ಕನೇ ಬಾರಿ. ನರೇಂದ್ರ ಮೋದಿ ನೇತೃತ್ವದ ಎರಡನೇ ಅವಧಿಯ ಕೇಂದ್ರ ಸರ್ಕಾರಕ್ಕೆ ಸೇರಲು ಜೆಡಿಯು ನಿರಾಕರಿಸಿದ ಬಳಿಕ ಈ ರೀತಿಯ ಅಪಸ್ವರ ಕೇಳಿಸಲು ಆರಂಭವಾಯಿತು.

ಇದನ್ನೂ ಓದಿ: ನಿತೀಶ್‌ ಸಂಪುಟ ವಿಸ್ತರಣೆ: ಬಿಜೆಪಿ ಸ್ಥಾನ ಖಾಲಿ

ತ್ರಿವಳಿ ತಲಾಖ್‌ ನಿಷೇಧ ಮಸೂದೆ ಮತ್ತು ಜಮ್ಮು–ಕಾಶ್ಮೀರದ ವಿಶೇಷಾಧಿಕಾರ ರದ್ದತಿ ವಿಚಾರದಲ್ಲಿಯೂ ಜೆಡಿಯು ಭಿನ್ನ ನಿಲುವು ತಳೆಯಿತು. 

ನಿತೀಶ್‌ ಕುಮಾರ್‌ ಅವರು ಮುಖ್ಯಮಂತ್ರಿ ಪದವಿ ತ್ಯಜಿಸಬೇಕು. ಬಿಜೆಪಿಗೆ ಈ ಹುದ್ದೆಯನ್ನು ಬಿಟ್ಟುಕೊಡಬೇಕು ಎಂಬ ಒತ್ತಾಯ ಬಿಜೆಪಿ ಕಡೆಯಿಂದ ಬಂದಿರುವುದು ಇದೇ ಮೊದಲು. 

Post Comments (+)