ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಚ ರಾಜ್ಯ ಫಲಿತಾಂಶ ಲೋಕಸಭೆ ಚುನಾವಣೆಗೆ ದಿಕ್ಸೂಚಿಯಾದರೆ ಬಿಜೆಪಿ ಪಾಡೇನು?

ಪ್ರಾಬಲ್ಯ ಕುಸಿಯುವ ಭೀತಿಯಲ್ಲಿ ಬಿಜೆಪಿ
Last Updated 13 ಡಿಸೆಂಬರ್ 2018, 8:11 IST
ಅಕ್ಷರ ಗಾತ್ರ

ನವದೆಹಲಿ:ರಾಜಸ್ಥಾನ, ಮಧ್ಯ ಪ್ರದೇಶ, ಛತ್ತೀಸಗಡ, ತೆಲಂಗಾಣ ಮತ್ತು ಮಿಜೋರಾಂ ವಿಧಾನಸಭೆ ಚುನಾವಣೆಯನ್ನು ಮುಂಬರುವ ಲೋಕಸಭೆ ಚುನಾವಣೆಗೆ ದಿಕ್ಸೂಚಿ ಎಂದೇ ಬಿಂಬಿಸಲಾಗಿದೆ. ಈ ಐದು ರಾಜ್ಯಗಳ ಪೈಕಿ ಮೂರರಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾಗುವುದು ನಿಚ್ಚಳವಾಗಿದೆ. ಮೂರು ಹಿಂದಿ ಭಾಷಿಕ ರಾಜ್ಯಗಳಲ್ಲಿ ಬಿಜೆಪಿಗೆ ಎದುರಾದ ಸೋಲು ಲೋಕಸಭೆ ಚುನಾವಣೆ ಮೇಲೆ ಪ್ರಭಾವ ಬೀರುವ ಸಾಧ್ಯತೆ ಹೆಚ್ಚಾಗಿದೆ ಎನ್ನಲಾಗಿದೆ.

ಛತ್ತೀಸಗಡದಲ್ಲಿ 15 ವರ್ಷಗಳ ಬಿಜೆಪಿ ಅಧಿಕಾರವನ್ನು ಕೊನೆಗಾಣಿಸಿರುವ ಕಾಂಗ್ರೆಸ್ ಭರ್ಜರಿ ಗೆಲವು ದಾಖಲಿಸಿದೆ. ರಾಜಸ್ಥಾನದಲ್ಲೂ ಬಹುಮತ ಗಳಿಸಿದೆ. ಮಧ್ಯಪ್ರದೇಶದಲ್ಲೂ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಈ ಮೂರೂ ರಾಜ್ಯಗಳಲ್ಲಿ ಬಿಜೆಪಿ ದಶಕದಿಂದ ಪ್ರಬಲ ಹಿಡಿತ ಸಾಧಿಸಿತ್ತು. ಒಂದು ವೇಳೆ ಇದು ಲೋಕಸಭೆ ಚುನಾವಣೆಗೆ ದಿಕ್ಸೂಚಿಯಾದರೆ ಬಿಜೆಪಿ ನೂರರಷ್ಟು ಸ್ಥಾನ ಕಳೆದುಕೊಳ್ಳಬೇಕಾಗಬಹುದು ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಿಂದ ತೊಡಗಿ ಪಂಜಾಬ್, ಹರಿಯಾಣ, ದೆಹಲಿ, ರಾಜಸ್ಥಾನ, ಮಧ್ಯ ಪ್ರದೇಶ, ಉತ್ತರ ಪ್ರದೇಶ, ಬಿಹಾರ, ಛತ್ತೀಸಗಡ ಹಾಗೂ ಗುಜರಾತ್‌ನಲ್ಲಿ ಒಟ್ಟು 273 ಲೋಕಸಭಾ ಕ್ಷೇತ್ರಗಳಿವೆ. ಈ ಪೈಕಿ 226 ಕ್ಷೇತ್ರಗಳುಬಿಜೆಪಿ ಮತ್ತು ಮಿತ್ರಪಕ್ಷಗಳ ತೆಕ್ಕೆಯಲ್ಲಿವೆ.

ಬಿಜೆಪಿಗೆ 80ರಿಂದ 100 ಲೋಕಸಭಾ ಸ್ಥಾನ ಕಳೆದುಕೊಳ್ಳುವ ಭೀತಿ

‘ರಾಜಸ್ಥಾನ, ಮಧ್ಯ ಪ್ರದೇಶ, ಛತ್ತೀಸಗಢ ಫಲಿತಾಂಶವನ್ನು ಮತ್ತು ಸಮಾಜವಾದಿ ಪಕ್ಷ, ಬಹುಜನ ಸಮಾಜ ಪಕ್ಷ ಒಗ್ಗಟ್ಟಾಗುವ ಸುಳಿವು ನೀಡಿರುವುದನ್ನು ಗಣನೆಗೆ ತೆಗೆದುಕೊಳ್ಳುವುದಾದರೆ, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 80ರಿಂದ 100 ಸ್ಥಾನ ಕಳೆದುಕೊಳ್ಳುವ ಸಾಧ್ಯತೆ ಇದೆ’ ಎಂದು ನ್ಯೂಸ್‌ 18 ಸುದ್ದಿತಾಣಕ್ಕೆ ಬರೆದಿರುವ ಲೇಖನದಲ್ಲಿ ಲೇಖಕ, ಪತ್ರಕರ್ತ ರಶೀದ್ ಕಿದ್ವಾಯಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈಶಾನ್ಯ ರಾಜ್ಯಗಳಲ್ಲಿ ಮತ್ತು ತೆಲಂಗಾಣದಲ್ಲಿ ಬಿಜೆಪಿ ಖಾತೆ ತೆರೆದಿದ್ದರೂ ಸಂಭವನೀಯ ಕೊರತೆ ನೀಗಿಸಲು ನೆರವಾಗಲಾರದು ಎಂಬುದು ಅವರ ಅಭಿಪ್ರಾಯ.

ಛತ್ತೀಸಗಡದಲ್ಲಿ 10 ಕ್ಷೇತ್ರಗಳನ್ನು ಉಳಿಸಿಕೊಳ್ಳುತ್ತಾ ಬಿಜೆಪಿ?

90 ಕ್ಷೇತ್ರಗಳ ಛತ್ತೀಸಗಡ ವಿಧಾನಸಭೆಯಲ್ಲಿಹೇಳಿಕೊಳ್ಳುವಂತಹ ಜನನಾಯಕರೇ ಇಲ್ಲದ ಕಾಂಗ್ರೆಸ್68 ಕ್ಷೇತ್ರಗಳನ್ನು ಗೆದ್ದಿದೆ.ರೈತರ ಸಂಕಷ್ಟ, ನಿರುದ್ಯೋಗ, ಬೆಲೆ ಏರಿಕೆ ಮತ್ತು ಭ್ರಷ್ಟಾಚಾರ ಆರೋಪಗಳೇ 15 ವರ್ಷಗಳ ರಮಣ್‌ ಸಿಂಗ್‌ ಆಳ್ವಿಕೆ ಕೊನೆಗೊಳ್ಳಲು ಕಾರಣ ಎನ್ನಲಾಗುತ್ತಿದೆ. ಕೇಂದ್ರ ಸರ್ಕಾರ ಕೈಗೊಂಡ ನೋಟು ರದ್ದತಿ ಮತ್ತು ಜಿಎಸ್‌ಟಿಯಂತಹ ನಿರ್ಧಾರಗಳೂ ಪರಿವರ್ತನೆಗೆ ಕಾರಣವಾಗಿವೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಈ ರಾಜ್ಯದಲ್ಲಿ 11 ಲೋಕಸಭಾ ಕ್ಷೇತ್ರಗಳಿದ್ದು, 2014ರ ಚುನಾವಣೆಯಲ್ಲಿ 10 ಕ್ಷೇತ್ರಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿತ್ತು. ಕೇವಲ ಒಂದು ಕ್ಷೇತ್ರದಲ್ಲಷ್ಟೇ ಕಾಂಗ್ರೆಸ್ ಜಯ ಸಾಧಿಸಿತ್ತು. ಆಡಳಿತ ವಿರೋಧಿ ಅಲೆ ಹೀಗೆಯೇ ಮುಂದುವರಿದು 2019ರ ಲೋಕಸಭೆ ಚುನಾವಣೆಯಲ್ಲೂ ಮತದಾರ ಕಾಂಗ್ರೆಸ್ ಪರ ಒಲವು ತೋರಿದರೆ ಬಿಜೆಪಿಗೆ ಭಾರಿ ನಷ್ಟವಾಗಲಿದೆ.

ವಿಧಾನಸಭೆ ಚುನಾವಣೆಯಲ್ಲಿನ ಮತದಾರನಒಲವು ಹೀಗಿಯೇ ಮುಂದುವರಿದರೆ ಲೋಕಸಭೆ ಚುನಾವಣೆಯಲ್ಲಿ ರಾಜಸ್ಥಾನ, ಮಧ್ಯ ಪ್ರದೇಶ ಮತ್ತು ಛತ್ತೀಸಗಡದಲ್ಲಿ ಬಿಜೆಪಿಗೆ ಸುಮಾರು 62 ಸ್ಥಾನಗಳ ವರೆಗೆ ನಷ್ಟವಾದರೂ ಆಗಬಹುದು ಎಂದು ಇಂಡಿಯಾ ಟುಡೆ ಸುದ್ದಿತಾಣ ವಿಶ್ಲೇಷಿಸಿದೆ.

ಉಪ ಚುನಾವಣಾ ಕಣವೂಬಿಜೆಪಿ ಪಾಲಿಗೆ ಮಗ್ಗುಲಮುಳ್ಳು

2014ರ ಲೋಕಸಭೆ ಚುನಾವಣೆ ಬಳಿಕನಡೆದ ಉಪಚುನಾವಣೆಗಳು ಆಡಳಿತಾರೂಢ ಬಿಜೆಪಿಗೆ ಸಂಕಷ್ಟ ತಂದದ್ದೇ ಹೆಚ್ಚು.ಲೋಕಸಭಾ ಚುನಾವಣೆ ಹತ್ತಿರವಾಗುತ್ತಿರುವ ಸಮಯದಲ್ಲೇ ಬಿಜೆಪಿಯು ಉಪಚುನಾವಣೆಗಳಲ್ಲಿ ಮತ್ತೆ ಮತ್ತೆ ಸೋಲನುಭವಿಸುತ್ತಿದೆ. ಪರಿಣಾಮವಾಗಿ ಲೋಕಸಭೆಯಲ್ಲಿ ಬಿಜೆಪಿ ಸಂಸದರ ಸಂಖ್ಯೆ 282ರಿಂದ272ಕ್ಕೆ ಕುಸಿದಿದೆ.

2014ರ ಲೋಕಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶದ 80 ಕ್ಷೇತ್ರಗಳ ಪೈಕಿ 71ರಲ್ಲಿ ಬಿಜೆಪಿ ಗೆದ್ದಿತ್ತು. ಆದರೆ, ಈವರ್ಷ ನಡೆದ ಉಪಚುನಾವಣೆಗಳಲ್ಲಿ ಬೆನ್ನು ಬೆನ್ನಿಗೆ ಮೂರು ಕ್ಷೇತ್ರಗಳನ್ನು ಕಳೆದುಕೊಂಡಿದೆ. ಕರ್ನಾಟಕದ 28 ಕ್ಷೇತ್ರಗಳ ಪೈಕಿ 17 ಸ್ಥಾನಗಳನ್ನು ಬಿಜೆಪಿ ಗೆದ್ದಿದ್ದ ಬಿಜೆಪಿಗೆ ಮೂರು ಕ್ಷೇತ್ರಗಳಿಗೆ ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ಒಂದನ್ನು ಗೆಲ್ಲಲು ಮಾತ್ರ ಸಾಧ್ಯವಾಗಿದೆ. ಕರ್ನಾಟಕದಲ್ಲಿ ಜೆಡಿಎಸ್‌, ಮಹಾರಾಷ್ಟ್ರದಲ್ಲಿ ಎನ್‌ಸಿಪಿ, ಉತ್ತರ ಪ್ರದೇಶದಲ್ಲಿ ಎಸ್‌ಪಿ, ಬಿಎಸ್‌ಪಿ ಮತ್ತು ಆರ್‌ಎಲ್‌ಡಿಯಂತಹ ಪ್ರಾದೇಶಿಕ ಪಕ್ಷಗಳು ಬಿಜೆಪಿಯ ಲೋಕಸಭಾ ಸ್ಥಾನಗಳನ್ನು ಕಸಿದುಕೊಳ್ಳುತ್ತಿವೆ.

ಕಮಲಕ್ಕೆ ಕೈಕೊಟ್ಟ ನಾಯ್ಡು, ಈಗ ಆರ್‌ಎಲ್‌ಎಸ್‌ಪಿ ಸರದಿ

2014ರ ಲೋಕಸಭೆ ಚುನಾವಣೆ ವೇಳೆ ಎನ್‌ಡಿಎ ಮಿತ್ರಕೂಟದಲ್ಲಿದ್ದ ತೆಲುಗುದೇಶಂ ಪಕ್ಷ (ಟಿಡಿಪಿ) ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಿಲ್ಲವೆಂಬ ಮುನಿಸಿನೊಂದಿಗೆ ಮಿತ್ರಕೂಟದಿಂದ ಹೊರನಡೆದಿದೆ. ಪಕ್ಷದ ಮುಖ್ಯಸ್ಥ, ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಕಾಂಗ್ರೆಸ್‌ ಸೇರಿದಂತೆ ಇತರ ಪ್ರತಿಪಕ್ಷಗಳ ಜತೆ ಕೈಜೋಡಿಸಿದ್ದಾರೆ. ಇದೀಗ ಬಿಹಾರದ ರಾಷ್ಟ್ರೀಯ ಲೋಕಸಮತಾ ಪಕ್ಷವೂ (ಆರ್‌ಎಲ್‌ಎಸ್‌ಪಿ) ಎನ್‌ಡಿಎಯಿಂದ ಹೊರ ನಡೆದಿದೆ. ಪಕ್ಷದ ಮುಖ್ಯಸ್ಥ ಉಪೇಂದ್ರ ಕುಶ್ವಾಹ ಅವರು ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯ ರಾಜ್ಯ ಖಾತೆ ಸಚಿವ ಸ್ಥಾನಕ್ಕೆ ಸೋಮವಾರ ರಾಜೀನಾಮೆ ನೀಡಿದ್ದು, ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಳ್ಳುವ ಸುಳಿವು ನೀಡಿದ್ದಾರೆ.

ಕಾಂಗ್ರೆಸ್ ಗೆಲುವಿಗೆ ರಾಹುಲ್ ಕಾರ್ಯತಂತ್ರ ಕಾರಣವೇ?

ಪಂಚ ರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್‌ ಸಾಧನೆಗೆ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಅವರ ಕಾರ್ಯತಂತ್ರ ಕಾರಣವೇ ಎಂಬ ವಿಷಯವೂ ಈಗ ಚರ್ಚೆಯಲ್ಲಿದೆ. ರಾಹುಲ್ ಅವರು ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಒಂದೇ ವರ್ಷದಲ್ಲಿ ಪಕ್ಷ ಈ ಸಾಧನೆ ಮಾಡಿದೆ. ರಾಜಸ್ಥಾನ ಮತ್ತು ಮಧ್ಯ ಪ್ರದೇಶದಲ್ಲಿ ಕ್ರಮವಾಗಿ ಪಕ್ಷ ಮುನ್ನಡೆಸುವ ಜವಾಬ್ದಾರಿ ಹೊತ್ತಿರುವ ಸಚಿನ್ ಪೈಲಟ್ ಮತ್ತು ಕಮಲನಾಥ್ ರಾಹುಲ್ ಗಾಂಧಿ ಆಪ್ತರು. ಕಮಲನಾಥ್ ಅವರನ್ನು ಮೇನಲ್ಲಿ ಕಾಂಗ್ರೆಸ್‌ನ ಮಧ್ಯ ಪ್ರದೇಶ ಘಟಕದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. ಅಶೋಕ್ ಗೆಹ್ಲೊಟ್ ಅವರನ್ನು ಈಚೆಗಷ್ಟೇ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಿರುವುದೂ ರಾಹುಲ್ ಕಾರ್ಯತಂತ್ರದ ಭಾಗ ಎನ್ನಲಾಗಿದೆ.

ಲೋಕಸಭೆಯಲ್ಲಿ ಈಗಿನ ಬಲಾಬಲ

ಲೋಕಸಭೆ ವೆಬ್‌ಸೈಟ್‌ ಮಾಹಿತಿ
ಲೋಕಸಭೆ ವೆಬ್‌ಸೈಟ್‌ ಮಾಹಿತಿ

ಇನ್ನಷ್ಟು...

(ಮಾಹಿತಿ:ವಿವಿಧ ಮೂಲಗಳಿಂದ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT