ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧ್ಯಪ್ರದೇಶ: ಆಡಳಿತ ವಿರೋಧಿ ಅಲೆ ದಾಟಲು ಬಿಜೆಪಿ ಹೊಸ ತಂತ್ರ

50ಕ್ಕೂ ಹೆಚ್ಚು ಶಾಸಕರಿಗೆ ಟಿಕೆಟ್ ನೀಡದಿರಲು ನಿರ್ಧಾರ
Last Updated 22 ಅಕ್ಟೋಬರ್ 2018, 8:47 IST
ಅಕ್ಷರ ಗಾತ್ರ

ಭೋಪಾಲ್ (ಮಧ್ಯಪ್ರದೇಶ): ಆಡಳಿತ ವಿರೋಧಿ ಅಲೆಯ ಸುಳಿಗೆ ಸಿಲುಕಿರುವ ಬಿಜೆಪಿ ಗೆಲುವಿಗೆ ಹೊಸ ತಂತ್ರ ಹೆಣೆದಿದೆ. ಪಕ್ಷದ ಒಟ್ಟು 165 ಹಾಲಿ ಶಾಸಕರ ಪೈಕಿ ಮೂರನೇ ಒಂದು ಭಾಗದಷ್ಟು ಜನರಿಗೆ (50ಕ್ಕೂ ಹೆಚ್ಚು) ಟಿಕೆಟ್ ನೀಡದಿರಲು ನಿರ್ಧರಿಸಿದೆ. ಜನರ ವಿರೋಧ ಎದುರಿಸುತ್ತಿರುವವರನ್ನು ಚುನಾವಣೆಯಿಂದಲೇ ದೂರ ಇಡುವ ಮೂಲಕ ರಾಜ್ಯದಲ್ಲಿ ನಾಲ್ಕನೇ ಬಾರಿಗೆ ಅಧಿಕಾರದ ಗದ್ದುಗೆ ಏರುವ ಕನಸು ಕಾಣುತ್ತಿದೆ.

ಕಳಪೆ ಸಾಧನೆ ಮಾಡಿರುವ ಆರೋಪ ಎದುರಿಸುತ್ತಿರುವ ಈ ಶಾಸಕರ ಪಟ್ಟಿಯನ್ನು ಪಕ್ಷದ ಕೇಂದ್ರ ಚುನಾವಣಾ ಸಮಿತಿಗೆ ಕಳುಹಿಸಿಕೊಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಈ ಸಮಿತಿಯ ಸದಸ್ಯರಾಗಿದ್ದಾರೆ. ಈ ವಿಚಾರದಲ್ಲಿ ಸಮಿತಿಯು ಶೀಘ್ರ ತನ್ನ ಅಂತಿಮ ನಿರ್ಧಾರ ಪ್ರಕಟಿಸಲಿದೆ.

ಪಕ್ಷದ ಉಮೇದುವಾರರ ಆಯ್ಕೆ ಪ್ರಕ್ರಿಯೆಯ ಅರಿವು ಇರುವ ಬಿಜೆಪಿ ನಾಯಕರೊಬ್ಬರ ಹೇಳಿಕೆ ಉಲ್ಲೇಖಿಸಿ ‘ಹಿಂದೂಸ್ತಾನ್ ಟೈಮ್ಸ್’ ಸೋಮವಾರ ವರದಿ ಪ್ರಕಟಿಸಿದೆ. ‘ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಸಂಪುಟದಲ್ಲಿರುವ ಆರು ಸಚಿವರ ಹೆಸರು ಸಹ ಕಳಪೆ ಸಾಧಕರ ಪಟ್ಟಿಯಲ್ಲಿದೆ. ಪಕ್ಷದ ಆಂತರಿಕ ಸಮೀಕ್ಷೆಗಳ ಪ್ರಕಾರ ಶೇ 35ರಿಂದ 40ರಷ್ಟು ಶಾಸಕರ ಬಗ್ಗೆ ಜನರಲ್ಲಿ ಅಸಹನೆ ಇದೆ’ ಎಂದು ವರದಿ ತಿಳಿಸಿದೆ.

ಮಧ್ಯಪ್ರದೇಶದಲ್ಲಿ ಬಿಜೆಪಿ ಸತತ ನಾಲ್ಕು ವಿಧಾನಸಭಾ ಉಪಚುನಾವಣೆಗಳಲ್ಲಿ ಸೋಲನುಭವಿಸಿತ್ತು. ಇದಾದ ನಂತರ, ಪಕ್ಷದ ಕಾರ್ಯಕರ್ತರು ಮತ್ತು ಮತದಾರರ ವಿಶ್ವಾಸವನ್ನು ಮರಳಿ ಪಡೆಯಲು ಏನು ಮಾಡಬೇಕು ಎಂಬ ಬಗ್ಗೆ ಹಲವು ಸಮೀಕ್ಷೆಗಳನ್ನು ನಡೆಸಿತ್ತು. ಚೌಹಾಣ್ ಸರ್ಕಾರದ ಕಾರ್ಯವೈಖರಿ ಬಗ್ಗೆ ಪಕ್ಷದ ಕಾರ್ಯಕರ್ತರು ಅಸಮಾಧಾನ ಹೊಂದಿರುವುದನ್ನು ಎತ್ತಿ ತೋರಿಸಿದ್ದವು.

ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಎಲ್ಲ 230 ವಿಧಾನಸಭಾ ಕ್ಷೇತ್ರಗಳ ಸಂಭಾವ್ಯ ಅಭ್ಯರ್ಥಿಗಳ ಬಗ್ಗೆ ಬಿಜೆಪಿಯ ಹಿರಿಯ ನಾಯಕರು ಕಾರ್ಯಕರ್ತರಿಂದ ಅಭಿಪ್ರಾಯ ಪಡೆದುಕೊಂಡರು. ಅ.16 ಮತ್ತು 17ರಂದು ಈ ಪ್ರಕ್ರಿಯೆ ನಡೆಯಿತು.

‘ಪಕ್ಷದ ಕಾರ್ಯಕರ್ತರು ಹಾಲಿ ಶಾಸಕರು ಯಾರು ಎಂಬುದನ್ನು ಪರಿಗಣನೆಗೆ ತೆಗೆದುಕೊಳ್ಳದೆ, ಯಾರ ಮುಲಾಜಿಗೂ ಒಳಪಡದೆ ತಮ್ಮ ಅಭಿಪ್ರಾಯಗಳನ್ನು ಮುಚ್ಚುಮರೆಯಿಲ್ಲದೆ ತಿಳಿಸಿದರು’ ಎಂದು ಈ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದ ಬಿಜೆಪಿಯ ಹಿರಿಯ ನಾಯಕರೊಬ್ಬರು ಪ್ರತಿಕ್ರಿಯಿಸಿದರು.

ಪಕ್ಷದ ಕಾರ್ಯಕರ್ತರು ಕೆಲ ಕ್ಷೇತ್ರಗಳಲ್ಲಿ ಶಾಸಕರ ವಿರುದ್ಧ ಘೋಷಣೆಗಳನ್ನು ಮೊಳಗಿಸಿದ್ದರ ಬಗ್ಗೆಯೂ ಮಧ್ಯಪ್ರದೇಶದ ಮಾಧ್ಯಮಗಳು ವರದಿ ಮಾಡಿವೆ. ಭೈರಾಸಿಯಾ (ಭೋಪಾಲ್) ಕ್ಷೇತ್ರದ ವಿಷ್ಣು ಖಾತ್ರಿ ವಿರುದ್ಧ ಭಾನುವಾರವಷ್ಟೇ ಕಾರ್ಯಕರ್ತರು ಘೋಷಣೆ ಮೊಳಗಿಸಿದ್ದರು. ಗೋವಿಂದಪುರ (ಭೋಪಾಲ್‌) ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಬಾಬುಲಾಲ್ ಗೌರ್ ಉಮೇದುವಾರಿಕೆ ವಿರೋಧಿಸಿಯೂ ಕಾರ್ಯಕರ್ತರು ಘೋಷಣೆಗಳನ್ನು ಕೂಗಿದ್ದರು. ಗೌರ್ ಈ ಕ್ಷೇತ್ರವನ್ನು ನಲ್ವತ್ತು ವರ್ಷಗಳಿಂದ ಪ್ರತಿನಿಧಿಸುತ್ತಿದ್ದಾರೆ.

ಮಧ್ಯಪ್ರದೇಶದಲ್ಲಿ ಬಿಜೆಪಿ 2003ರಲ್ಲಿ ಅಧಿಕಾರಕ್ಕೆ ಬಂತು. ಶಿವರಾಜ್‌ ಸಿಂಗ್ ಚೌಹಾಣ್ 2005ರಲ್ಲಿ ಮುಖ್ಯಮಂತ್ರಿಯಾದರು. 2013ರ ಚುನಾವಣೆಯಲ್ಲಿ ಪಕ್ಷ ಅಭೂತಪೂರ್ವ ವಿಜಯ ಗಳಿಸಿತ್ತು. ರಾಜ್ಯದಲ್ಲಿ ನ.28ರಂದು ಚುನಾವಣೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT