ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಬರಿಮಲೆ: 2ನೇ ಹಂತದ ಹೋರಾಟ ಶುರು

ಬಿಜೆಪಿಯಿಂದ ಸರದಿ ಉಪವಾಸ ಸತ್ಯಾಗ್ರಹ
Last Updated 3 ಡಿಸೆಂಬರ್ 2018, 20:00 IST
ಅಕ್ಷರ ಗಾತ್ರ

ತಿರುವನಂತಪುರ: ಶಬರಿಮಲೆ ವಿವಾದ ಪರಿಹಾರಕ್ಕೆ ಆಗ್ರಹಿಸಿ ಬಿಜೆಪಿ ಎರಡನೇ ಹಂತದ ಪ್ರತಿಭಟನೆ ಆರಂಭಿಸಿದ್ದು, ಕೇರಳ ಸಚಿವಾಲಯದ ಎದುರು ಸೋಮವಾರ ಅನಿರ್ದಿಷ್ಟಾವಧಿಯ ಸರದಿ ಉಪವಾಸ ಸತ್ಯಾಗ್ರಹ ಪ್ರಾರಂಭಿಸಿತು.

ಬಿಜೆಪಿ ಕೇರಳದ ಘಟಕದ ಪ್ರಧಾನ ಕಾರ್ಯದರ್ಶಿ ಎ.ಎನ್‌.ರಾಧಾಕೃಷ್ಣನ್‌ ಸೋಮವಾರ ಉಪವಾಸ ಸತ್ಯಾಗ್ರಹ ಆರಂಭಿಸಿದರು. ರಾಜ್ಯದ 14 ಜಿಲ್ಲೆಗಳ ಕಾರ್ಯಕರ್ತರು ಇದರಲ್ಲಿ ಭಾಗವಹಿಸಲಿದ್ದಾರೆ.

ಎಲ್ಲ ವಯಸ್ಸಿನ ಮಹಿಳೆಯರಿಗೆ ಶಬರಿಮಲೆಯ ಅಯ್ಯಪ್ಪ ದರ್ಶನಕ್ಕೆ ಅನುಮತಿ ನೀಡಿ ಸೆಪ್ಟೆಂಬರ್‌ 28ರಂದು ಸುಪ್ರೀಂ ಕೋರ್ಟ್‌ ನೀಡಿದ ತೀರ್ಪನ್ನು ಜಾರಿಗೊಳಿಸಲು ಸರ್ಕಾರ ಮುಂದಾಗಿರುವುದನ್ನು ವಿರೋಧಿಸಿ ಬಿಜೆಪಿ ಪ್ರತಿಭಟನೆ ನಡೆಸುತ್ತಿದೆ.

ಸಂಸದೆ ಸರೋಜ ಪಾಂಡೆ ಸತ್ಯಾಗ್ರಹಕ್ಕೆ ಚಾಲನೆ ನೀಡಿ, ‘ಸಿಪಿಎಂ ನೇತೃತ್ವದ ಎಲ್‌ಡಿಎಫ್‌ ಸರ್ಕಾರ ಜನರ ಇಚ್ಛೆ ವಿರುದ್ಧ ನಡೆದುಕೊಳ್ಳುತ್ತಿದೆ. ಸಂಸತ್ತಿನಲ್ಲಿ ಈ ವಿಷಯ ಪ್ರಸ್ತಾಪಿಸುತ್ತೇವೆ. ಶಬರಿಮಲೆ ವಿಷಯ ಕುರಿತು ಸರ್ಕಾರ ಮತ್ತೊಮ್ಮೆ ಯೋಚಿಸಬೇಕು’ ಎಂದು ಒತ್ತಾಯಿಸಿದರು.

ಈ ವಿವಾದ ಕುರಿತು ಚರ್ಚಿಸಲು ಎಲ್ಲ ಹಾದಿಗಳುಮುಕ್ತವಾಗಿವೆ ಎಂದು ಹೇಳಿರುವ ಅವರು, ರಾಜ್ಯ ಸರ್ಕಾರ ಇದನ್ನು ನಿಭಾಯಿಸುವಲ್ಲಿ ಎಡವಿದ್ದರಿಂದ ಇಂಥ ಪರಿಸ್ಥಿತಿ ಉದ್ಭವಿಸಿದೆ ಎಂದರು.

ಸರೋಜ ಅವರ ಜತೆಗೆ ಸಂಸದರಾದ ನಳಿನ್‌ ಕುಮಾರ್‌ ಕಟೀಲ್‌, ಪ್ರಹ್ಲಾದ ಜೋಶಿ, ವಿನೋದ್‌ ಸೋನಕರ್‌ ನಿಯೋಗವು ಎರಡು ದಿನಗಳಿಂದ ಕೇರಳದಲ್ಲೇ ಬಿಡಾರ ಹೂಡಿದೆ. ಸಮಸ್ಯೆಗಳ ಬಗ್ಗೆ ಅಯ್ಯಪ್ಪ ಭಕ್ತರ ಜೊತೆಗೆ ಚರ್ಚಿಸಿದೆ. ಈ ಕುರಿತು ಪಕ್ಷದ ಅಧ್ಯಕ್ಷ ಅಮಿತ್‌ ಶಾ ಅವರಿಗೆ ವರದಿ ನೀಡಲಿದೆ. ಕಮ್ಯುನಿಸ್ಟ್‌ ಸರ್ಕಾರ ಬಿಜೆಪಿ ನಾಯಕರ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸುತ್ತಿದೆ ಎಂದುಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಪಿ.ಎಸ್‌.ಶ್ರೀಧರನ್‌ ಪಿಳ್ಳೆ ಆರೋಪಿಸಿದರು. ಶಬರಿಮಲೆ ವಿವಾದ ಕುರಿತು ನಡೆಸುತ್ತಿರುವ ಪ್ರತಿಭಟನೆಯನ್ನು ಬಿಜೆಪಿ ನಿಲ್ಲಿಸಲಿದೆ ಎಂಬ ಮಾಧ್ಯಮ ವರದಿಗಳನ್ನು ಅವರು ತಳ್ಳಿಹಾಕಿದರು.

‘ಶಬರಿಮಲೆಯ ಸಂಪ್ರದಾಯವನ್ನು ರಾಜ್ಯ ಸರ್ಕಾರ ಹಾಳುಗೆಡವಿದೆ. ಸಂಪ್ರದಾಯಗಳ ಮೇಲೆ ನಂಬಿಕೆಯುಳ್ಳವರನ್ನು ಜೈಲಿಗೆ ಹಾಕುತ್ತಿದೆ. ಇದೇ ವರ್ತನೆ ಮುಂದುವರಿಸಿದರೆ, ಕಮ್ಯುನಿಸ್ಟ್‌ ಸರ್ಕಾರವನ್ನು ಬಂಗಾಳ ಕೊಲ್ಲಿಗೆ ಎಸೆಯಲಾಗುವುದು’ ಎಂದು ಸಂಸದ ಪ್ರಹ್ಲಾದ ಜೋಶಿ ಹೇಳಿದರು.

ಪ್ರತಿಭಟನಕಾರರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿರುವ ಪೊಲೀಸರಿಗೆ ಎಚ್ಚರಿಕೆ ನೀಡಿದ ಜೋಶಿ, ಶಬರಿಗಿರಿಗೆ ಬಂದಿದ್ದ ಕೇಂದ್ರ ಸಚಿವ ಪೊನ್‌ ರಾಧಾಕೃಷ್ಣನ್‌ ಅವರ ಜೊತೆ ಐಪಿಎಸ್‌ ಅಧಿಕಾರಿ ಯತೀಶ್‌ ಚಂದ್ರ ಅಸಭ್ಯವಾಗಿ ವರ್ತಿಸಿದ್ದಾರೆ. ಈ ಅಧಿಕಾರಿ ವಿರುದ್ಧ ಹಕ್ಕುಚ್ಯುತಿ ಮಂಡಿಸುವಂತೆ ಸಚಿವರಿಗೆ ಹೇಳಲಾಗುವುದು ಎಂದರು.

ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಹಾಗೂ ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿದ್ದರಿಂದಬಿಜೆಪಿ ಮುಖಂಡ ಕೆ.ಸುರೇಂದ್ರನ್‌ ಅವರನ್ನು ಬಂಧಿಸಲಾಗಿದೆ ಎಂದು ಆರೋಪಿಸಿದರು.

ಇದಕ್ಕೂ ಮುನ್ನ ಪೂಜಪ್ಪೊರ ಕೇಂದ್ರ ಕಾರಾಗೃಹಕ್ಕೆ ತೆರಳಿದ ಸಂಸದರ ನಿಯೋಗವು, ಸುರೇಂದ್ರನ್‌ ಅವರನ್ನು ಭೇಟಿ ಮಾಡಿತು.

ರಿಟ್‌ ಅರ್ಜಿ ವರ್ಗಾಯಿಸಲು ಮನವಿ

ನವದೆಹಲಿ:ಎಲ್ಲ ವಯಸ್ಸಿನ ಮಹಿಳೆಯರಿಗೆ ಶಬರಿಮಲೆ ದೇವಸ್ಥಾನ ಪ್ರವೇಶಕ್ಕೆ ಅನುಮತಿ ನೀಡಿರುವ ತೀರ್ಪು ಜಾರಿಗೆ ತರುವುದನ್ನು ತಡೆಯುವ ಪ್ರಯತ್ನವಾಗಿ ಕೇರಳ ಹೈಕೋರ್ಟ್‌ನಲ್ಲಿ ಸಲ್ಲಿಕೆಯಾಗಿರುವ 24 ರಿಟ್‌ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ಗೆ ವರ್ಗಾಯಿಸಬೇಕು ಎಂದು ಕೇರಳ ಸರ್ಕಾರ ಸೋಮವಾರ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದೆ.

ಎಲ್ಲ ಅರ್ಜಿಗಳು ಒಂದೇ ವಿಷಯಕ್ಕೆ ಸಂಬಂಧಿಸಿರುವುದರಿಂದ ಕಾನೂನು ಪ್ರಕ್ರಿಯೆ ಹಾಗೂ ತೀರ್ಪು ನೀಡುವಲ್ಲಿ ಯಾವುದೇ ಗೊಂದಲ ಉಂಟಾಗಬಾರದು ಎಂಬ ಉದ್ದೇಶದಿಂದ ಈ ವರ್ಗಾವಣೆ ಅರ್ಜಿ ಸಲ್ಲಿಸಲಾಗಿದೆ ಎಂದು ರಾಜ್ಯ ಸರ್ಕಾರ ಹೇಳಿದೆ. ಸೆಪ್ಟೆಂಬರ್‌ 28ರ ತೀರ್ಪು ಪ್ರಶ್ನಿಸಿ ಸಲ್ಲಿಸಿರುವ ಮರುಪರಿಶೀಲನಾ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಜನವರಿ 22 ರಂದು ನಡೆಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT