ಟಿಎಂಸಿ ಶಾಸಕನ ಹತ್ಯೆ: ಮುಕುಲ್‌ ರಾಯ್‌ ವಿರುದ್ಧ ಎಫ್‌ಐಆರ್‌

7

ಟಿಎಂಸಿ ಶಾಸಕನ ಹತ್ಯೆ: ಮುಕುಲ್‌ ರಾಯ್‌ ವಿರುದ್ಧ ಎಫ್‌ಐಆರ್‌

Published:
Updated:
Prajavani

ಕೋಲ್ಕತ್ತ/ನವದೆಹಲಿ: ತೃಣಮೂಲ ಕಾಂಗ್ರೆಸ್‌ ಶಾಸಕ ಸತ್ಯಜಿತ್‌ ಬಿಸ್ವಾಸ್‌ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮುಖಂಡ ಮುಕುಲ್ ರಾಯ್ ಮತ್ತು ಮೂವರು ವ್ಯಕ್ತಿಗಳ ವಿರುದ್ಧ ಭಾನುವಾರ ಎಫ್‍ಐಆರ್ ದಾಖಲಾಗಿದೆ.

ಪಶ್ಚಿಮ ಬಂಗಾಳದ ನಾದಿಯಾ ಜಿಲ್ಲೆಯ ಕೃಷ್ಣಗಂಜ್‍ನಲ್ಲಿ ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಸತ್ಯಜಿತ್‌ ಬಿಸ್ವಾಸ್ ಅವರನ್ನು ಶನಿವಾರ ಹತ್ಯೆ ಮಾಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ, ಎಫ್‌ಐಆರ್‌ ದಾಖಲಿಸಿ ಇಬ್ಬರನ್ನು  ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಬಾಂಗ್ಲಾದೇಶಕ್ಕೆ ಹೊಂದಿಕೊಂಡಿರುವ ಗಡಿ ಜಿಲ್ಲೆಯ ಹನ್ಸ್‌ಕಾಳಿ ಪೊಲೀಸ್‌ ಠಾಣೆ ವ್ಯಾಪ್ತಿಯ ಫೂಲ್‌ಬರಿಯ ಸರಸ್ವತಿ ಪೂಜಾ ಮಾರ್ಕ್‌ನಲ್ಲಿ ಪಕ್ಷದ ಕಾರ್ಯಕರ್ತರ ಜತೆಗೆ ಇದ್ದಾಗ ಅವರ ಮೇಲೆ ಗುಂಡಿನ ದಾಳಿ ನಡೆದಿದೆ. ಇಬ್ಬರು ಆಗಂತುಕರು ಗುಂಡು ಹಾರಿಸಿದ್ದಾರೆ. ಶಾಸಕರು ವೇದಿಕೆ ಮೇಲೆ ಕುಸಿದು ಬಿದ್ದರು. ತಕ್ಷಣ ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟೊತ್ತಿಗೆ ಅವರು ಕೊನೆ ಉಸಿರೆಳೆದಿದ್ದರು.

ರಾಜ್ಯ ಸಚಿವ ರತ್ನ ಘೋಷ್ ಮತ್ತು ನಾದಿಯಾ ತೃಣಮೂಲ ಕಾಂಗ್ರೆಸ್ ಘಟಕದ ಅಧ್ಯಕ್ಷ ಗೌರಿಶಂಕರ್ ದತ್ತಾ ಅವರು ಈ ಘಟನೆಯಲ್ಲಿ ಅದೃಷ್ಟವಶಾತ್ ಪಾರಾಗಿದ್ದರು.

ಪ್ರಾಥಮಿಕ ತನಿಖೆ ಪ್ರಕಾರ, ’ಅತ್ಯಂತ ಯೋಜನಾಬದ್ಧವಾಗಿ ಆರೋಪಿಗಳು ಹಿಂದಿನಿಂದ ಗುಂಡಿನ ದಾಳಿ ನಡೆಸಿದ್ದಾರೆ. ದಾಳಿಗೆ ನಾಡಪಿಸ್ತೂಲ್‌ ಬಳಸಿರುವುದು ಕಂಡುಬಂದಿದೆ‘ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

’ನಾದಿಯಾ ಜಿಲ್ಲೆಯು ಬಾಂಗ್ಲಾದೇಶ ಗಡಿಜಿಲ್ಲೆಗೆ ಹೊಂದಿಕೊಂಡಿದೆ. ಅರೋಪಿಗಳು ಬಾಂಗ್ಲಾಕ್ಕೆ ತೆರಳುವ ಸಾಧ್ಯತೆಗಳಿದ್ದು, ಗಡಿಜಿಲ್ಲೆಗಳಲ್ಲಿ ಹೈಅಲರ್ಟ್‌ ಘೋಷಿಸಲಾಗಿದೆ‘ ಎಂದರು.

’ಮತುವಾ ಸಮುದಾಯದಲ್ಲಿ ಸತ್ಯಜಿತ್ ಬಿಸ್ವಾಸ್ ಜನಪ್ರಿಯ ರಾಜಕಾರಣಿಯಾಗಿದ್ದರು. ಕೊಲೆಯ ಹಿಂದೆ ಬಿಜೆಪಿ ಕೈವಾಡವಿದೆ‘ ಎಂದು ಟಿಎಂಸಿ ಪ್ರಧಾನ ಕಾರ್ಯದರ್ಶಿ ಪಾರ್ಥ ಚಟರ್ಜಿ ಆರೋಪಿಸಿದ್ದಾರೆ.

’ಲೋಕಸಭಾ ಚುನಾವಣೆ ಗೆಲ್ಲಲು ಬಿಜೆಪಿ ರಾಜ್ಯದಲ್ಲಿ ಅಸ್ಥಿರತೆ ಮೂಡಿಸುತ್ತಿದ್ದು, ’ಕೊಲೆ ರಾಜಕೀಯ‘ ನಡೆಸುತ್ತಿದೆ, ಆರೋಪಿಗಳನ್ನು ತಕ್ಷಣವೇ ಬಂಧಿಸಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು‘ ಎಂದು ಅವರು ಒತ್ತಾಯಿಸಿದ್ದಾರೆ. ’ಟಿಎಂಸಿ ಮಾಡಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ‘ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ದಿಲೀಪ್‌ ಘೋಷ್‌ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !