ಸೋಮವಾರ, ಸೆಪ್ಟೆಂಬರ್ 20, 2021
27 °C

ಸನ್ನಿ ಡಿಯೋಲ್‌ ಮೇಲೆ ಐಟಿ ಒತ್ತಡ: ಅಮರಿಂದರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಭಾವ್‌ (ಪಠಾಣ್‌ಕೋಟ್‌): ‘ಗುರುದಾಸ್‌ಪುರ ಲೋಕಸಭಾ ಕ್ಷೇತ್ರದಿಂದ ಬಿಜೆಪಿಯ ಅಭ್ಯರ್ಥಿಯಾಗಿ ಸ್ಪರ್ಧಿಸದಿದ್ದರೆ ಮನೆಯ ಮೇಲೆ ಆದಾಯ ತೆರಿಗೆ ದಾಳಿ ನಡೆಸುವುದಾಗಿ ನಟ ಸನ್ನಿ ಡಿಯೋಲ್‌ ಅವರಿಗೆ ಬಿಜೆಪಿಯವರು ಒತ್ತಡ ಹೇರಿರಬೇಕು’ ಎಂದು ಪಂಜಾಬ್‌ ಮುಖ್ಯಮಂತ್ರಿ ಅಮರಿಂದರ್‌ ಸಿಂಗ್‌ ಆರೋಪಿಸಿದ್ದಾರೆ.

ಕಾಂಗ್ರೆಸ್‌ ಅಭ್ಯರ್ಥಿ ಸುನಿಲ್‌ ಜಖಾರ್‌ ಪರ ಚುನಾವಣಾ ರ್‍ಯಾಲಿಯೊಂದರಲ್ಲಿ ಸನ್ನಿ ಡಿಯೋಲ್‌ ವಿರುದ್ಧ ಟೀಕಾ ಪ್ರಹಾರ ನಡೆಸಿದ ಅಮರಿಂದರ್‌, ‘ಗುರುದಾಸ್‌ಪುರ ಕ್ಷೇತ್ರಕ್ಕೂ ಸನ್ನಿ ಡಿಯೋಲ್‌ಗೂ ಯಾವುದೇ ಸಂಬಂಧವಿಲ್ಲ. ಚುನಾವಣೆಯ ಬಳಿಕ ಅವರು ಮುಂಬೈಗೆ ಓಡಿಹೋಗುತ್ತಾರೆ ಎಂದರು.

‘ಜನರಿಗೆ ಸಂಬಂಧಪಟ್ಟ ವಿಚಾರಗಳ ಬಗ್ಗೆ ಏನನ್ನೂ ತಿಳಿದುಕೊಳ್ಳದ ವ್ಯಕ್ತಿ, ಜನರ ಸೇವೆ ಮಾಡಲು ಹೇಗೆ ಸಾಧ್ಯ? ಚುನಾವಣೆ ಎಂಬುದು ಹಾಸ್ಯವಲ್ಲ. ಸಂಸದರಾದವರು ಸಂಸತ್ತಿನಲ್ಲಿ ಜನರ ಪರವಾಗಿ ಮಾತನಾಡಬೇಕು. ಅವರು (ಸನ್ನಿ ಡಿಯೋಲ್‌) ಇಲ್ಲಿಂದ ಸ್ಪರ್ಧಿಸಲು ಬಿಜೆಪಿಯವರು ಹೇರಿದ ಒತ್ತಡವೇ ಕಾರಣ. ಸನ್ನಿ ಡಿಯೋಲ್‌ ಬ್ಯಾಂಕ್‌ಗಳಿಗೆ ಹಲವು ಕೋಟಿ ರೂಪಾಯಿ ಸಾಲ ಉಳಿಸಿಕೊಂಡಿದ್ದಾರೆ ಎಂದು ನಾನು ಪತ್ರಿಕೆಗಳಲ್ಲಿ ಓದಿದ್ದೆ. ತಮ್ಮ ಪಕ್ಷದಿಂದ ಸ್ಪರ್ಧಿಸದಿದ್ದರೆ ಆದಾಯ ತೆರಿಗೆ ದಾಳಿ ನಡೆಸುವುದಾಗಿ ಬಿಜೆಪಿಯವರು ಸನ್ನಿ ಮೇಲೆ ಒತ್ತಡ ಹೇರಿರಬೇಕು. ರಾಜಕೀಯ ಎದುರಾಳಿಗಳ ಮೇಲೆ ಇಂಥ ಒತ್ತಡ ಹೇರುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ’ ಎಂದು ಅಮರಿಂದರ್‌ ಆರೋಪಿಸಿದರು.

ಸನ್ನಿ ಡಿಯೋಲ್‌ ಅವರ ಸಾಮಾನ್ಯ ಜ್ಞಾನದ ಬಗ್ಗೆ ಟೀಕೆ ಮಾಡುತ್ತಾ, ‘ಅವರು (ಡಿಯೋಲ್‌) ದಿನಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಟಿ.ವಿ. ಸಂದರ್ಶನವೊಂದರಲ್ಲಿ ಸನ್ನಿ ಅವರಿಗೆ, ‘ಬಾಲಾಕೋಟ್‌ ವಾಯು ದಾಳಿಯ ಬಗ್ಗೆ ನಿಮ್ಮ ಅಭಿಪ್ರಾಯವೇನು’ ಎಂದು ಕೇಳಲಾಗಿತ್ತು. ಅದಕ್ಕೆ ‘ಬಾಲಾಕೋಟ್‌ ಎಂದರೇನು’ ಎಂದು ಸನ್ನಿ ಮರು ಪ್ರಶ್ನಿಸಿದ್ದರು. ಇಂಥ ಸಂಸದರು ನಮಗೆ ಬೇಕೇ? ದೇಶದಲ್ಲಿ ಏನು ನಡೆಯುತ್ತಿದೆ ಎಂಬುದೇ ಗೊತ್ತಿರದ ವ್ಯಕ್ತಿಯೊಬ್ಬ ರಾಜಕೀಯ ಪ್ರವೇಶಿಸಿ ಏನು ಮಾಡಬಲ್ಲ’ ಎಂದು ಪ್ರಶ್ನಿಸಿದರು.

‘ನೀವು ಮುಂಬೈ ನಿವಾಸಿ, ನಿಮ್ಮ ತೋಟ, ಮನೆ, ವ್ಯಾಪಾರ ಎಲ್ಲವೂ ಮುಂಬೈಯಲ್ಲಿದೆ. ಹೀಗಿರುವಾಗ ಗುರುದಾಸ್‌ಪುರಕ್ಕಾಗಿ ಏಕೆ ಅಷ್ಟೊಂದು ಕಷ್ಟಪಡುತ್ತೀರಿ? ಇಲ್ಲಿ ಬಂದು ಏನು ಮಾಡಬೇಕೆಂದು ಬಯಸುತ್ತೀರಿ? ಎಂದು ಅವರು ಪ್ರಶ್ನಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು