ಶುಕ್ರವಾರ, ಜುಲೈ 30, 2021
23 °C
ರಾಜಸ್ಥಾನ ಸರ್ಕಾರ ಅಸ್ಥಿರಗೊಳಿಸಲು ಬಿಜೆಪಿ ಸಂಚು: ಮುಖ್ಯಮಂತ್ರಿ ಗೆಹ್ಲೋಟ್‌ ಆರೋಪ

ಕಾಂಗ್ರೆಸ್‌ ಶಾಸಕರಿಗೆ ₹25 ಕೋಟಿ ಆಮಿಷ: ಅಶೋಕ್‌ ಗೆಹ್ಲೋಟ್‌ ಆರೋಪ

ಪಿಟಿಐ Updated:

ಅಕ್ಷರ ಗಾತ್ರ : | |

Ashok gehlot

ಜೈಪುರ: ರಾಜಸ್ಥಾನದ ಕಾಂಗ್ರೆಸ್‌ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಯತ್ನಿಸುತ್ತಿದ್ದು, ಕೆಲವು ಶಾಸಕರಿಗೆ ತಲಾ ₹25 ಕೋಟಿ ನೀಡುವ ಆಮಿಷವೊಡ್ಡಿದೆ ಎಂದು ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಆರೋಪಿಸಿದ್ದಾರೆ.

ಮಧ್ಯಪ್ರದೇಶದ ರೀತಿಯಲ್ಲೇ ರಾಜಸ್ಥಾನದಲ್ಲೂ ಕಾಂಗ್ರೆಸ್‌ ಸರ್ಕಾರ ಉರುಳಿಸುವ ಯೋಜನೆಯನ್ನು ಬಿಜೆಪಿ ರೂಪಿಸಿದೆ. ಇದಕ್ಕಾಗಿಯೇ ಅಪಾರ ಪ್ರಮಾಣದಲ್ಲಿ ಹಣದ ವರ್ಗಾವಣೆ ನಡೆಯುತ್ತಿದೆ. ₹10 ಕೋಟಿ ಮುಂಗಡ ನೀಡುವುದಾಗಿಯೂ ಕೆಲವು ಶಾಸಕರಿಗೆ ಬಿಜೆಪಿ ತಿಳಿಸಿದೆ ಎಂದು ಅವರು ದೂರಿದ್ದಾರೆ.

ರಾಜಸ್ಥಾನ ಮತ್ತು ಗುಜರಾತ್‌ನಲ್ಲಿನ ಶಾಸಕರನ್ನು ಸೆಳೆಯಲು ಸಾಧ್ಯವಾಗದ ಕಾರಣ ರಾಜ್ಯಸಭೆ ಚುನಾವಣೆಯನ್ನು ಉದ್ದೇಶಪೂರ್ವಕವಾಗಿಯೇ ಮುಂದೂಡಲಾಗಿತ್ತು. ಕಾಂಗ್ರೆಸ್‌ ಶಾಸಕರು ಒಗ್ಗಟ್ಟಾಗಿದ್ದು, ಎಚ್ಚರವಹಿಸಿದ್ದಾರೆ. ಯಾವುದೇ ಆಮಿಷಗಳಿಗೆ ಬಲಿಯಾಗುವುದಿಲ್ಲ ಎನ್ನುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.

ರೆಸಾರ್ಟ್‌ಗೆ ಶಾಸಕರು:

ಜೂನ್‌ 19ರಂದು ನಡೆಯುವ ರಾಜ್ಯಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಶಾಸಕರನ್ನು ದೆಹಲಿ ಹೆದ್ದಾರಿಯಲ್ಲಿರುವ ಜೈಪುರದ ರೆಸಾರ್ಟ್‌ವೊಂದಕ್ಕೆ ಕರೆದೊಯ್ಯಲಾಗಿದೆ. 

ಕಾಂಗ್ರೆಸ್‌ ಶಾಸಕರಿಗೆ ಹಣದ ಆಮಿಷವೊಡ್ಡಲಾಗಿದೆ ಎಂದು ಸರ್ಕಾರದ ಮುಖ್ಯ ಸಚೇತಕ ಮಹೇಶ್  ಜೋಶಿ ಭ್ರಷ್ಟಾಚಾರ ನಿಗ್ರಹ ದಳದ ಮಹಾನಿರ್ದೇಶಕರಿಗೆ ದೂರು ಸಲ್ಲಿಸಿದ್ದಾರೆ. ಕರ್ನಾಟಕ ಮತ್ತು ಮಧ್ಯಪ್ರದೇಶ ರೀತಿಯಲ್ಲಿ  ಸರ್ಕಾರವನ್ನು ಉರುಳಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಅವರು ದೂರಿದ್ದಾರೆ.

200 ಸದಸ್ಯರ ವಿಧಾನಸಭೆಯಲ್ಲಿ ಕಾಂಗ್ರೆಸ್‌ 107 ಸದಸ್ಯರ ಬಲ ಹೊಂದಿದೆ. ಜತೆಗೆ, 13 ಪಕ್ಷೇತರ ಶಾಸಕರಲ್ಲಿ 12 ಮಂದಿ ಕಾಂಗ್ರೆಸ್‌ಗೆ ಬೆಂಬಲ ನೀಡುತ್ತಿದ್ದಾರೆ.

ಸಾಬೀತುಪಡಿಸಲು ಬಿಜೆಪಿ ಸವಾಲು:

ಕಾಂಗ್ರೆಸ್‌ ಶಾಸಕರಿಗೆ ಆಮಿಷವೊಡ್ಡಿರುವುದನ್ನು ಸಾಬೀತುಪಡಿಸುವಂತೆ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಸತೀಶ್‌ ಪೂನಿಯಾ ಸವಾಲು ಹಾಕಿದ್ದಾರೆ.

ಪಕ್ಷದ ಶಾಸಕರ ಬಗ್ಗೆಯೇ ಕಾಂಗ್ರೆಸ್‌ಗೆ ವಿಶ್ವಾಸವಿಲ್ಲ. ಕಳೆದ 55 ವರ್ಷಗಳಿಂದ ಆಮಿಷವೊಡ್ಡುವ ರಾಜಕೀಯ ಮಾಡಿರುವ ಕಾಂಗ್ರೆಸ್‌ ಈಗ ಬಿಜೆಪಿಯನ್ನು ದೂರುತ್ತಿದೆ ಎಂದು ಟೀಕಿಸಿದ್ದಾರೆ.

 

 

 

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು