ಕಾಂಗ್ರೆಸ್‌ ರಾಮರಥಕ್ಕೆ ಬಿಜೆಪಿ ಆಕ್ಷೇಪ

7

ಕಾಂಗ್ರೆಸ್‌ ರಾಮರಥಕ್ಕೆ ಬಿಜೆಪಿ ಆಕ್ಷೇಪ

Published:
Updated:

ಭೋಪಾಲ್‌: ಹದಿನಾಲ್ಕು ವರ್ಷ ವನವಾಸದ ಸಂದರ್ಭದಲ್ಲಿ ಶ್ರೀರಾಮ ಸಾಗಿದ ದಾರಿಯಲ್ಲಿ ಸಾಗುವ ರಾಮರಥ ಯಾತ್ರೆಯನ್ನು ಮಧ್ಯಪ್ರದೇಶದ ದಿಂಡೋರಿ ಜಿಲ್ಲೆಯಲ್ಲಿ ಮಂಗಳವಾರ ರಾತ್ರಿ ತಡೆಯಲಾಗಿದೆ. 

ಇದೇ 6ರಿಂದ ರಾಜ್ಯದಲ್ಲಿ ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿದೆ. ಹಾಗಾಗಿ ಈ ರಥಯಾತ್ರೆಯನ್ನು ತಡೆಯಬೇಕು ಎಂದು ಬಿಜೆಪಿ ಮುಖಂಡರೊಬ್ಬರು ದೂರು ನೀಡಿದ್ದರು. ಅದರಂತೆ ರಥಯಾತ್ರೆ ತಡೆಯಲು ಜಿಲ್ಲಾಡಳಿತವು ಪೊಲೀಸರಿಗೆ ಸೂಚಿಸಿತ್ತು. ಪೊಲೀಸರು ರಥವನ್ನು ವಶಕ್ಕೆ ಪಡೆದಿದ್ದಾರೆ. 

ರಾಮ–ವನ–ಪಥ–ಯಾತ್ರೆ ಕೈಗೊಳ್ಳುವುದಾಗಿ ಮಧ್ಯಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ ಕಮಲನಾಥ್‌ ಅವರು ಕಳೆದ ತಿಂಗಳು ಘೋಷಿಸಿದ್ದರು. ಯಾತ್ರೆಯ ಸಂಚಾಲಕ ಹರಿಶಂಕರ್‌ ಶುಕ್ಲಾ ನೇತೃತ್ವದಲ್ಲಿ ಕಳೆದ ವಾರ ರಥಕ್ಕೆ ಚಾಲನೆ ನೀಡಲಾಗಿತ್ತು. ವನವಾಸದ ಸಂದರ್ಭದಲ್ಲಿ ಶ್ರೀ ರಾಮ ಸಂಚರಿಸಿದ್ದಾನೆ ಎನ್ನಲಾದ ಮಾರ್ಗದಲ್ಲಿ ಇರುವ ಪ್ರಮುಖ ಸ್ಥಳಗಳನ್ನು ಪ್ರವಾಸಿ ತಾಣಗಳಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಬಿಜೆಪಿ ಭರವಸೆ ನೀಡಿತ್ತು. ಈ ಭರವಸೆಯನ್ನು ನಿರ್ಲಕ್ಷಿಸಲಾಗಿದೆ ಎಂಬುದರನ್ನು ಜನರಿಗೆ ತಿಳಿಸುವುದಕ್ಕಾಗಿ ಈ ಯಾತ್ರೆಯನ್ನು ಕಾಂಗ್ರೆಸ್‌ ಹಮ್ಮಿಕೊಂಡಿತ್ತು. 

‘ರಥದಲ್ಲಿ ಹತ್ತು ಜನರು ಇರುವ ಕಾರಣ ಇದು ನಿಷೇಧಾಜ್ಞೆಯ ಉಲ್ಲಂಘನೆ ಎಂದು ಪೊಲೀಸರು ಹೇಳಿದ್ದಾರೆ. ಇದು ನಿಷೇಧಾಜ್ಞೆಯ ಉಲ್ಲಂಘನೆಯಾದರೆ ನವರಾತ್ರಿಯಲ್ಲಿ ದುರ್ಗಾ ಮೂರ್ತಿ ವಿಸರ್ಜನೆಯನ್ನು ಪೊಲೀಸರು ತಡೆಯುತ್ತಾರೆಯೇ’ ಎಂದು ಶುಕ್ಲಾ ಅವರು ಪ್ರಶ್ನಿಸಿದ್ದಾರೆ. 

ತಮ್ಮ ರಥಯಾತ್ರೆ ಮತ್ತು ರಾಜಕೀಯಕ್ಕೆ ಯಾವುದೇ ಸಂಬಂಧ ಇಲ್ಲ ಎಂದು ಶುಕ್ಲಾ ಹೇಳಿದ್ದಾರೆ. 

ಕಾಂಗ್ರೆಸ್‌ನ ಪರವಾಗಿ ಧಾರ್ಮಿಕ ಭಾವನೆಗಳನ್ನು ಕೆರಳಿಸಲು ಈ ರಥಯಾತ್ರೆ ಯತ್ನಿಸಿದೆ ಎಂದು ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ತೇಕೇಶ್ವರ ಸಾಹು ಅವರು ದೂರು ನೀಡಿದ್ದಾರೆ. ಅದರಂತೆ ರಥವನ್ನು ವಶಕ್ಕೆ ಪಡೆಯಲಾಗಿದೆ ಎಂದು ಉಪವಿಭಾಗಾಧಿಕಾರಿ ಹೇಳಿದ್ದಾರೆ. 

ರಾಹುಲ್‌, ಕೆಸಿಆರ್‌ಗೆ ದೇಶ ಒಡೆಯುವ ಕನಸು: ಅಮಿತ್‌ ಶಾ

ಕರೀಂನಗರ: ಪ್ರಧಾನಿ ನರೇಂದ್ರ ಮೋದಿ ಅವರು ದೇಶ ಕಟ್ಟುವ ಕೆಲಸದಲ್ಲಿ ತೊಡಗಿದ್ದರೆ, ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಮತ್ತು ಟಿಆರ್‌ಎಸ್‌ ಮುಖ್ಯಸ್ಥ ಕೆ. ಚಂದ್ರಶೇಖರ್‌ ರಾವ್‌ (ಕೆಸಿಆರ್‌) ದೇಶ ಒಡೆಯುವ ಕನಸು ಕಾಣುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಆರೋಪಿಸಿದ್ದಾರೆ.

ಬುಧವಾರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌, ತೆಲುಗುದೇಶಂ ಒಳಗೊಂಡ ಮಹಾಮೈತ್ರಿಗೆ ಟಿಆರ್‌ಎಸ್‌ ಮತ್ತು ಎಐಎಂಐಎಂ ಮೈತ್ರಿಕೂಟವನ್ನು ಎದುರಿಸುವ ಧೈರ್ಯ ಇಲ್ಲ ಎಂದರು.

ಚಂದ್ರಶೇಖರ್ ರಾವ್‌ ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ನೀಡಿದ್ದ 150 ಭರವಸೆಗಳಲ್ಲಿ ಒಂದನ್ನೂ ಈಡೇರಿಸಿಲ್ಲ. ಅವಧಿಗೂ ಮುನ್ನವೇ ವಿಧಾನಸಭೆ ವಿಸರ್ಜಿಸುವ ಮೂಲಕ ಜನರ ಮೇಲೆ ನೂರಾರು ಕೋಟಿ ರೂಪಾಯಿ ಹೊರೆ ಹಾಕಿದ್ದಾರೆ ಎಂದು ಟೀಕಿಸಿದರು.

2019ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಮರಳಿ ಅಧಿಕಾರಕ್ಕೆ ಬಂದಲ್ಲಿ ಒಬ್ಬ ಅಕ್ರಮ ವಲಸಿಗನೂ ದೇಶದಲ್ಲಿ ಇರಲು ಸಾಧ್ಯವಿಲ್ಲ ಎಂದು ಶಾ ಭರವಸೆ ನೀಡಿದರು.

ನವದೆಹಲಿ (ಪಿಟಿಐ): ಒಂದು ಕುಟುಂಬಕ್ಕೆ ಲಾಭ ಮಾಡಿಕೊಡುವ ಕಾರಣಕ್ಕಾಗಿ ಕಾಂಗ್ರೆಸ್ ಪಕ್ಷವು ಸಮಾಜವನ್ನು ಒಡೆಯುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಆರೋಪಿಸಿದ್ದಾರೆ. 

ಐದು ಲೋಕಸಭಾ ಕ್ಷೇತ್ರಗಳ ಬಿಜೆಪಿ ಕಾರ್ಯಕರ್ತರೊಂದಿಗೆ ಬುಧವಾರ ಸಂವಾದ ನಡೆಸಿದ ಅವರು, ಪಕ್ಷವು ಸಮಾಜವನ್ನು ಒಂದುಗೂಡಿಸುತ್ತಿದೆ ಎಂದು ಹೇಳಿದರು. 

ಸಂಭಾವ್ಯ ದಾಳಿ ಭೀತಿಯಿಂದ ಹಿಂದಿ ಭಾಷಿಕರು ಗುಜರಾತ್‌ನಿಂದ ವಲಸೆ ಹೋಗಲು ಬಿಜೆಪಿ ಕಾರಣ ಎಂಬ ಆರೋಪದ ನಡುವೆಯೇ ಮೋದಿ ಅವರ ಈ ಹೇಳಿಕೆ ಮಹತ್ವ ಪಡೆದಿದೆ. 

‘ಐದು ರಾಜ್ಯಗಳ ವಿಧಾನಸಭಾ ಚುನಾವಣೆಗಳನ್ನು ಪಕ್ಷ ಅಹಂನಿಂದ ಎದುರಿಸುತ್ತಿಲ್ಲ. ಬದಲಾಗಿ ಜನರ ಸೇವೆಗೆ ಸಿಗುವ ಅವಕಾಶ ಎಂದು ಭಾವಿಸುತ್ತದೆ’ ಎಂದು ಹೇಳಿದ್ದಾರೆ. 

ಕೇಂದ್ರದ ಭ್ರಷ್ಟಾಚಾರವನ್ನು ಹಳ್ಳಿಗಳಿಗೆ ಮುಟ್ಟಿಸಿ: ರಾಹುಲ್ ಕರೆ

(ಜೈಪುರ ವರದಿ): ಡಿಸೆಂಬರ್‌ನಲ್ಲಿ ನಡೆಯಲಿರುವ ರಾಜಸ್ಥಾನ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಸಜ್ಜಾಗುತ್ತಿದ್ದು, ರಫೇಲ್ ಒಪ್ಪಂದದಲ್ಲಿ ನಡೆದಿರುವ ಭ್ರಷ್ಟಾಚಾರ ವಿಷಯವನ್ನು ಹಳ್ಳಿಹಳ್ಳಿಗೂ ಮುಟ್ಟಿಸುವಂತೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. 

ರಫೇಲ್‌ನಂತಹ ಹಗರಣಗಳಲ್ಲಿ ತೊಡಗಿರುವ ಕೇಂದ್ರ ಸರ್ಕಾರದ ಭ್ರಷ್ಟಾಚಾರ ಪ್ರಕರಣಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂಬುದು ರಾಹುಲ್ ಅವರ ಉದ್ದೇಶವಾಗಿದೆ ಎಂದು ರಾಜಸ್ಥಾನ ಯುವ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಚಂದನಾ ಹೇಳಿದ್ದಾರೆ. 

ಬಿಕಾನೇರ್‌ನಲ್ಲಿ ಹಮ್ಮಿಕೊಂಡಿದ್ದ ಮಹಾಸಂಪರ್ಕ ಸಾರ್ವಜನಿಕ ಕಾರ್ಯಕ್ರಮಕ್ಕೂ ಮುನ್ನ ಯುವಕಾಂಗ್ರೆಸ್ ಮುಖಂಡರ ಜೊತೆ ರಾಹುಲ್  ಬುಧವಾರ ಸಭೆ ನಡೆಸಿದರು. 

ನಿರ್ಮಾಲಾ ಫ್ರಾನ್ಸ್‌ ಪ್ರವಾಸ ಪ್ರಶ್ನೆ: ರಫೇಲ್ ವಿವಾದದ ಮಧ್ಯೆಯೇ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೈಗೊಂಡಿರುವ ಫ್ರಾನ್ಸ್ ಪ್ರವಾಸವನ್ನು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ. 

‘ರಫೇಲ್ ಖರೀದಿಗೆ ಮೋದಿ ಅವರು ನಿರ್ಧರಿಸಿಯಾಗಿದೆ. ಆದರೆ ಅವರ ನಿರ್ಧಾರವನ್ನು ಸಮರ್ಥಿಸಿಕೊಳ್ಳುವ ಪ್ರಕ್ರಿಯೆ ಈಗ ಜಾರಿಯಲ್ಲಿದೆ. ಇದರ ಭಾಗವಾಗಿ ನಿರ್ಮಲಾ ಅವರು ಫ್ರಾನ್ಸ್‌ಗೆ ತೆರಳಿದ್ದಾರೆ’ ಎಂದು ರಾಹುಲ್ ಆರೋಪ ಮಾಡಿದ್ದಾರೆ. 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !