ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲರಿಗೂ ಕಾನೂನು ಅರಿವು ಅಗತ್ಯ

ಹಿರಿಯ ಸಿವಿಲ್ ನ್ಯಾಯಾಧೀಶ ನಾಮದೇವ ಕೆ.ಸಾಲಮಂಟಪಿ ಹೇಳಿಕೆ
Last Updated 29 ಏಪ್ರಿಲ್ 2018, 14:27 IST
ಅಕ್ಷರ ಗಾತ್ರ

ಯಾದಗಿರಿ: ‘ಜನರು ತಮ್ಮ ದೈನಂದಿನ ಜೀವನಕ್ಕೆ ಅಗತ್ಯ ಕಾನೂನಿನ ಅರಿವು ಪಡೆಯಬೇಕು. ಕಾನೂನಿಂದ ದೊರೆಯುವ ಸವಲತ್ತುಗಳ ಬಗ್ಗೆ ತಿಳಿದುಕೊಳ್ಳಬೇಕು’ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ನಾಮದೇವ ಕೆ.ಸಾಲಮಂಟಪಿ ಹೇಳಿದರು.

ನಗರದ ಜಿಲ್ಲಾ ವಕೀಲರ ಸಂಘದ ಆವರಣದಲ್ಲಿ ಶನಿವಾರ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ಜಿಲ್ಲಾ ವಕೀಲರ ಸಂಘ ಆಶ್ರಯದಲ್ಲಿ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಮಕ್ಕಳಿಗೆ ಬಾಲ ಸ್ನೇಹಿ ಕಾನೂನು ಸೇವೆಗಳು ಮತ್ತು ಅವುಗಳ ಸಂರಕ್ಷಣೆ ಯೋಜನೆ ಹಾಗೂ ನಾಲ್ಸಾದ ವಿವಿಧ ಯೋಜನೆಗಳ ಕುರಿತು ಹಮ್ಮಿಕೊಂಡಿದ್ದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಿವಿಲ್ ನ್ಯಾಯಾಧೀಶ ಪ್ರಕಾಶ ಅರ್ಜುನ ಬನಸೋಡೆ ಮಾತನಾಡಿ,‘ಮಕ್ಕಳು ಇಂದು ಅಪಾಯದ ಸ್ಥಿತಿಯಲ್ಲಿದ್ದು, ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಬಾಲ್ಯ ವಿವಾಹ ಕಾಯ್ದೆಯಡಿ ಹೆಣ್ಣು ಮಕ್ಕಳನ್ನು 18 ವರ್ಷ ಹಾಗೂ ಗಂಡು ಮಕ್ಕಳನ್ನು 21 ವರ್ಷಗಳ ಮುಂಚೆ ವಿವಾಹ ಮಾಡುವುದು ಅಪರಾಧ’ಎಂದು ಸಲಹೆ ನೀಡಿದರು.

‘ಮಕ್ಕಳ ಸರ್ವಾಂಗೀಣ ಬೆಳವಣಿಗೆಯಲ್ಲಿ ದೇಶದ ಅಭಿವೃದ್ಧಿ ಅಡಗಿದೆ. ಮಕ್ಕಳನ್ನು ಮಾನಸಿಕ, ದೈಹಿಕ, ಆಧ್ಯಾತ್ಮಿಕ ಹಾಗೂ ವೈಚಾರಿಕವಾಗಿ ಬೆಳೆಸಬೇಕು. ಜೀವಿಸುವ, ಭಾಗವಹಿಸುವ, ಅಭಿಪ್ರಾಯ ವ್ಯಕ್ತಪಡಿಸುವ ಮುಂತಾದ ಹಕ್ಕುಗಳು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿವೆ. ಮಕ್ಕಳಿಗೆ ಸಂಬಂಧಿಸಿದ ಪ್ರಕರಣಗಳನ್ನು ತ್ವರಿತಗತಿಯಲ್ಲಿ ಬಗೆಹರಿಸುವ ಹಾಗೂ ಪುನರ್ ವಿಕಾಸಕ್ಕೆ ನಮ್ಮ ಕಾನೂನಿನಲ್ಲಿ ಹಲವು ಸವಲತ್ತು ನೀಡಲಾಗಿದ್ದು, ಕಾರ್ಯಕಾರಿ ಸ್ವಯಂ ಸೇವಕರು ಇದರ ಕುರಿತು ಜನರಿಗೆ ತಿಳಿಸುವಲ್ಲಿ ಶ್ರಮಿಸಬೇಕು’ ಎಂದು ಹೇಳಿದರು.

ಸಂಪನ್ಮೂಲ ವ್ಯಕ್ತಿಗಳು ಹಾಗೂ ವಕೀಲ ಆರ್.ಎಸ್.ಪಾಟೀಲ್ ಮಾತನಾಡಿ,‘ಸಾಮಾನ್ಯ ಕಾನೂನಿನ ಅರಿವು ಇಲ್ಲದ ಸಮಾಜದ ಕಟ್ಟಕಡೆಯ ಜನರಿಗೆ ಉಚಿತವಾಗಿ ಕಾನೂನಿನ ಅರಿವು-ನೆರವು ನೀಡುವುದು ಪ್ರಾಧಿಕಾರದ ಉದ್ದೇಶವಾಗಿದೆ’ ಎಂದು ಹೇಳಿದರು.

‘ಪ್ಯಾರಾ ಲೀಗಲ್ ವ್ಯಾಲೆಂಟಿಯರ್ಸ್‌ ತಂಡವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರಲ್ಲಿ ಸಾಮಾಜಿಕ, ಆರ್ಥಿಕ ರಾಜಕೀಯ ಮೌಲ್ಯಗಳ ಬಗ್ಗೆ ತಿಳಿವಳಿಕೆ ಮೂಡಿಸುತ್ತದೆ. ಸರ್ಕಾರದ ವಿವಿಧ ಯೋಜನೆಗಳಲ್ಲಿ ಭೂರಹಿತರಿಗೆ ಭೂಮಿಯನ್ನು ಒದಗಿಸುವುದು, ವಸತಿ ರಹಿತರಿಗೆ ವಸತಿ ಯೋಜನೆಯಲ್ಲಿ ವಸತಿ ಮಂಜೂರು ಮಾಡಿಸುವುದು, ಉದ್ಯೋಗ ತರಬೇತಿ ಹಾಗೂ ಶಿಕ್ಷಣ ಪಡೆಯುವಂತೆ ಮಾಡಿ ಕಾನೂನಿನ ಸವಲತ್ತುಗಳನ್ನು ನೀಡುವ ಕೆಲಸ ಮಾಡುತ್ತದೆ’ ಎಂದರು. ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಕಾಡಪ್ಪ ಹುಕ್ಕೇರಿ, ಸರ್ಕಾರಿ ವಕೀಲರಾದ ಗೋಪಾಲರಾವ್, ಹಿರಿಯ ಸಹಾಯಕ ಸರ್ಕಾರಿ ವಕೀಲರಾದ ವಿಶ್ವನಾಥ ಉಭಾಳೆ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಭೀಮರಾಯ ಬಿ. ಕಿಲ್ಲನಕೇರಾ ಹಾಗೂ ಜಿಲ್ಲಾ ವಕೀಲರ ಸಂಘದ ಸದಸ್ಯ ಆನಂದಕುಮಾರ ಸ್ವಾಮಿ ಇದ್ದರು.

ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಸಿ.ಎಸ್. ಮಾಲಿಪಾಟೀಲ್ ಕಾರ್ಯಕ್ರಮ ನಿರೂಪಿಸಿದರು. ವಕೀಲರಾದ ಚಂದ್ರು ಕಟ್ಟಿಮನಿ ವಂದಿಸಿದರು.

**
ಜಿಲ್ಲಾ, ತಾಲ್ಲೂಕು ಮಟ್ಟದಲ್ಲಿ ಉಚಿತ ಕಾನೂನು ಸೇವಾ ಪ್ರಾಧಿಕಾರಗಳಿದ್ದು, ಜನರು ಅದರ ಸದುಪಯೊಗ ಪಡೆದುಕೊಳ್ಳಬೇಕು
– ನಾಮದೇವ ಕೆ.ಸಾಲಮಂಟಪಿ, ಹಿರಿಯ ಸಿವಿಲ್ ನ್ಯಾಯಾಧೀಶ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT