ಎನ್‌ಆರ್‌ಸಿ: ‘ಭಾರತ–ಬಾಂಗ್ಲಾ ಬಾಂಧವ್ಯಕ್ಕೆ ಧಕ್ಕೆ’

7
ಅಸ್ಸಾಂ ಜನಗಣತಿಯ ವಿರುದ್ಧ ಹೋರಾಟ ಮುಂದುವರಿಸಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ

ಎನ್‌ಆರ್‌ಸಿ: ‘ಭಾರತ–ಬಾಂಗ್ಲಾ ಬಾಂಧವ್ಯಕ್ಕೆ ಧಕ್ಕೆ’

Published:
Updated:

ನವದೆಹಲಿ: ಎನ್‌ಆರ್‌ಸಿ ಪರಿಷ್ಕೃತ ಪಟ್ಟಿ ಬಿಡುಗಡೆಯಿಂದ ಭಾರತ ಮತ್ತು ಬಾಂಗ್ಲಾದೇಶದ ಬಾಂಧವ್ಯಕ್ಕೆ ಧಕ್ಕೆಯಾಗುವ ಸಾಧ್ಯತೆ ಇದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆತಂಕ ವ್ಯಕ್ತಪಡಿಸಿದ್ದಾರೆ.

40 ಲಕ್ಷ ಜನರಲ್ಲಿ ಶೇಕಡ ಒಂದರಷ್ಟು ಜನರು ಮಾತ್ರ ಅಕ್ರಮ ವಲಸಿಗರು ಇರಬಹುದು. ಆದರೆ, ಬಿಜೆಪಿ ಎಲ್ಲ 40 ಲಕ್ಷ ಜನರನ್ನೂ ಅಕ್ರಮ ವಲಸಿಗರು ಎಂದು ಬಿಂಬಿಸಲು ಹೊರಟಿದೆ ಎಂದು ಅವರು ಆರೋಪಿಸಿದ್ದಾರೆ.

ಮತಬ್ಯಾಂಕ್ ರಾಜಕಾರಣ ಮಾಡಲು ಹೊರಟಿರುವ ಬಿಜೆಪಿಯು ಅಕ್ರಮ ವಲಸಿಗರ ಹೆಸರಿನಲ್ಲಿ ಜನರನ್ನು ಹಿಂಸಿಸುತ್ತಿದೆ ಎಂದು ಮಮತಾ ಕಿಡಿ ಕಾರಿದ್ದಾರೆ.

‘40 ಲಕ್ಷ ಜನರು ಒಳನುಸಳಿದ್ದಾರೆ ಎಂದರೆ ಗಡಿಯಲ್ಲಿ ಕಾವಲು ಕಾಯುತ್ತಿದ್ದ ಸೇನೆ ಏನು ಮಾಡುತಿತ್ತು. ಗಡಿಗಳ ಕಾವಲು ಕೇಂದ್ರ ಸರ್ಕಾರದ ಹೊಣೆಯಲ್ಲವೇ’ ಎಂದು ಅವರು ಪ್ರಶ್ನಿಸಿದ್ದಾರೆ.

ಮತದಾರರ ಪಟ್ಟಿಯಲ್ಲಿರುವ ಮಂದಿಯನ್ನೂ ಎನ್‌ಆರ್‌ಸಿ ಪಟ್ಟಿಯಿಂದ ಕೈಬಿಡಲಾಗಿದೆ. ಹೀಗಾಗಿ ಅಸ್ಸಾಂನಲ್ಲಿರುವ ಸ್ಥಿತಿಗತಿ ಅರಿಯಲು ಎಲ್ಲ ಪಕ್ಷಗಳು ಅಲ್ಲಿಗೆ ನಿಯೋಗ ಕಳಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಪಟ್ಟಿಯಲ್ಲಿ ಅಗತ್ಯ ಮಾರ್ಪಾಡು ಮಾಡುವಂತೆ ಒತ್ತಾಯಿಸಿ ಟಿಎಂಸಿ, ಎಸ್‌ಪಿ, ಆರ್‌ಜೆಡಿ, ಟಿಡಿಪಿ, ಎಎಪಿ, ಬಿಎಸ್‌ಪಿ ಮತ್ತು ಜೆಡಿಎಸ್‌ ಸಂಸದರು ಸಂಸತ್‌ ಹೊರಗೆ ಪ್ರತಿಭಟನೆ ನಡೆಸಿದ್ದಾರೆ.

ಆರೋಪ: ಎನ್‌ಆರ್‌ಸಿ ಪರಿಷ್ಕರಣೆಗೆ ಅಗತ್ಯ ದಾಖಲೆ ಮತ್ತು ಮಾಹಿತಿ ನೀಡದ ರಾಜ್ಯಗಳ ಪೈಕಿ ಪಶ್ಚಿಮ ಬಂಗಾಳ ಮೊದಲ ಸ್ಥಾನದಲ್ಲಿದೆ ಎಂದು ಜನಗಣತಿ ಆಯುಕ್ತ ಮತ್ತು ರಿಜಿಸ್ಟ್ರಾರ್ ಜನರಲ್ ಶೈಲೇಶ್ ಆರೋಪ ಮಾಡಿದ್ದಾರೆ.

‘ದೇಶದಲ್ಲಿ ಭೀತಿಯ ವಾತಾವರಣ’

ದೇಶದಲ್ಲಿ ಆತಂಕ, ಭೀತಿಯ ವಾತಾವರಣ ನಿರ್ಮಾಣವಾಗಿದೆ. ಜನರಲ್ಲಿ ಅನಿಶ್ಚಿತತೆ ಭಾವನೆ ಮೂಡಿದೆ ಎಂದು ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಮತ್ತು ಕಾಂಗ್ರೆಸ್‌ ಸದಸ್ಯರು ಸಂಸತ್‌ನಲ್ಲಿ ಆರೋಪಿಸಿದ್ದಾರೆ.

ವಿರೋಧ ಪಕ್ಷಗಳ ಸದಸ್ಯರು ಎನ್‌ಆರ್‌ಸಿ ವಿರುದ್ಧ ಪ್ರತಿಭಟನೆ ಮುಂದುವರಿಸಿದ್ದರಿಂದ ಬುಧವಾರವೂ ಸಂಸತ್‌ ಕಲಾಪಗಳನ್ನು ಮುಂದೂಡಲಾಯಿತು. ಕೇಂದ್ರ ಸರ್ಕಾರ ಧ್ರುವೀಕರಣ ರಾಜಕಾರಣಕ್ಕೆ ಎನ್‌ಆರ್‌ಸಿ ಕರಡು ಪಟ್ಟಿಯನ್ನು ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿದೆ ಎಂದು ಸದಸ್ಯರು ಆರೋಪಿಸಿದರು.

ಎನ್‌ಆರ್‌ಸಿ ಕುರಿತು ರಾಜ್ಯಸಭೆಗೆ ಗೃಹ ಸಚಿವರು ಹೇಳಿಕೆ ನೀಡುವಂತೆ ಒತ್ತಾಯಿಸಿ ಟಿಎಂಸಿ ಮತ್ತು ಕಾಂಗ್ರೆಸ್‌ ಸದಸ್ಯರು ಪಟ್ಟು ಹಿಡಿದರು.

ಸಭಾಧ್ಯಕ್ಷ ವೆಂಕಯ್ಯ ನಾಯ್ಡು ಅವರು ಅಮಿತ್‌ ಶಾ ಅವರಿಗೆ ಮಾತನಾಡಲು ಅವಕಾಶ ನೀಡಿದರು.

ಇದರಿಂದ ಕೆರಳಿದ ಟಿಎಂಸಿ ಸದಸ್ಯರು ಸಭಾಧ್ಯಕ್ಷರ ಪೀಠದ ಎದುರು ನುಗ್ಗಿ ಪ್ರತಿಭಟನೆ ನಡೆಸಿದರು. ರಾಜನಾಥ್‌ ಸಿಂಗ್‌ ಮಾತನಾಡಲು ಮುಂದಾದಾಗ ಟಿಎಂಸಿ ಸಂಸದರು ಅಡ್ಡಿಪಡಿಸಿದರು. ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಲಾಯಿತು.

ಧೈರ್ಯವಿದ್ದರೆ ಬಂಧಿಸಿ: ಶಾ ಸವಾಲು

ಬಿಜೆಪಿ ಮತ್ತು ತೃಣಮೂಲ ಕಾಂಗ್ರೆಸ್‌ ನಡುವೆ ಆರಂಭವಾಗಿರುವ ಸಂಘರ್ಷ ತಾರಕಕ್ಕೇರಿದೆ.

ಎನ್‌ಆರ್‌ಸಿ ವಿರುದ್ಧದ ಹೋರಾಟಕ್ಕೆ ವಿರೋಧ ಪಕ್ಷಗಳ ನಾಯಕರನ್ನು ಒಗ್ಗೂಡಿಸಲು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ ನವದೆಹಲಿಯಲ್ಲಿ ವಿರೋಧ ಪಕ್ಷದ ನಾಯಕರನ್ನು ಭೇಟಿಯಾಗಿದ್ದಾರೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಇದೇ 11ರಂದು ಕೋಲ್ಕತ್ತದಲ್ಲಿ ರ‍್ಯಾಲಿ ನಡೆಸುವುದಾಗಿ ಪ್ರಕಟಿಸಿದ್ದಾರೆ. ‘ಪಶ್ಚಿಮ ಬಂಗಾಳ ಸರ್ಕಾರ ಅನುಮತಿ ನೀಡಲಿ, ಬಿಡಲಿ. ಆ.11ರಂದು ಕೋಲ್ಕತ್ತದಲ್ಲಿ ರ‍್ಯಾಲಿ ನಡೆಸುವುದು ಶತಸಿದ್ಧ. ಮಮತಾ ಬ್ಯಾನರ್ಜಿ ಅವರಿಗೆ ಧೈರ್ಯವಿದ್ದರೆ ನನ್ನನ್ನು ಬಂಧಿಸಲಿ’ ಎಂದು ಅಮಿತ್ ಶಾ ಸವಾಲು ಹಾಕಿದ್ದಾರೆ. ಇದಕ್ಕೆ ಮಮತಾ ಪ್ರತಿಕ್ರಿಯೆ ನೀಡಿಲ್ಲ.

ಪಶ್ಚಿಮ ಬಂಗಾಳದಲ್ಲಿರುವ ಬಾಂಗ್ಲಾದೇಶದ ವಲಸಿಗರನ್ನು ಹೊರದಬ್ಬಲು ಅಸ್ಸಾಂ ರೀತಿಯಲ್ಲಿಯೇ ಎನ್‌ಆರ್‌ಸಿ ಜಾರಿಗೆ ಒತ್ತಾಯಿಸಿ ರ‍್ಯಾಲಿ ನಡೆಸುವುದಾಗಿ ಶಾ ಹೇಳಿದ್ದಾರೆ. ರ‍್ಯಾಲಿಗೆ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ ಎಂಬ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿವೆ. ಇದಕ್ಕೆ ಸ್ಪಷ್ಟನೆ ನೀಡಿರುವ ಪೊಲೀಸರು, ಈ ಮೊದಲೇ ರ‍್ಯಾಲಿಗೆ ಅನುಮತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ದೀದಿಗೆ ದೇವೇಗೌಡರ ಬೆಂಬಲ

ಎನ್‌ಆರ್‌ಸಿ ವಿರುದ್ಧ ಸಮರ ಸಾರಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ. ದೇವೇಗೌಡ ಬೆಂಬಲ ಸೂಚಿಸಿದ್ದಾರೆ.

ಬೆಂಬಲ ಕೋರಿ ಮಮತಾ ಬ್ಯಾನರ್ಜಿ ಬುಧವಾರ ದೇವೇಗೌಡರನ್ನು ಭೇಟಿಯಾಗಿದ್ದರು. ಮಾತುಕತೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಗೌಡರು, ದೇಶದಲ್ಲಿ ಸದ್ಯ ಉದ್ಭವಿಸಿರುವ ಸ್ಥಿತಿ ಮತ್ತು ಬಿಜೆಪಿಯೇತರ ಪಕ್ಷಗಳು ಒಗ್ಗೂಡುವ ಕುರಿತು ಚರ್ಚಿಸಲಾಯಿತು ಎಂದು ತಿಳಿಸಿದರು.

***

ಭಾರತದಲ್ಲಿ ಜನಿಸಿದ ಬಗ್ಗೆ ನನ್ನ ತಂದೆ, ತಾಯಿ ಬಳಿ ಸೂಕ್ತ ದಾಖಲೆ ಇಲ್ಲ. ಹೀಗಾಗಿ ಕೇಂದ್ರ ಸರ್ಕಾರ ನನಗೂ ಅಕ್ರಮ ವಲಸಿಗ ಎಂಬ ಹಣೆಪಟ್ಟೆ ಹಚ್ಚುವ ಸಾಧ್ಯತೆ ಇದೆ.

- ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ

ಬರಹ ಇಷ್ಟವಾಯಿತೆ?

 • 8

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !