ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಗೆ ಮೋದಿ ವರ್ಚಸ್ಸೇ ಆಧಾರ

ಹರಿಯಾಣ: ಖಟ್ಟರ್‌ಗೆ ಆಡಳಿತ ವಿರೋಧಿ ಅಲೆಯೇ ಸವಾಲು; ಜಾಟ್ ಮತಗಳೇ ನಿರ್ಣಾಯಕ
Last Updated 29 ಮಾರ್ಚ್ 2019, 19:00 IST
ಅಕ್ಷರ ಗಾತ್ರ

2014ರ ಚುನಾವಣೆಯವರೆಗೂ ಹರಿಯಾಣದ ಯಾವುದೇ ಲೋಕಸಭಾ ಕ್ಷೇತ್ರವನ್ನು ಗೆದ್ದುಕೊಳ್ಳಲು ಬಿಜೆಪಿಗೆ ಸಾಧ್ಯವಾಗಿರಲಿಲ್ಲ. ಬಿಜೆಪಿಗೆ ದಶಕಗಳ ಕಾಲ ದೊಡ್ಡ ಮಟ್ಟದ ಜನ ಬೆಂಬಲವೂ ಇರಲಿಲ್ಲ. ಆದರೆ ಕಳೆದ ಲೋಕಸಭಾ ಚುನಾವಣೆಯ ಆಸುಪಾಸಿನಲ್ಲಿ ಜಾಟರ ನೆಲದಲ್ಲಿ ಆದ ಬದಲಾವಣೆಗಳು ಸಾರ್ವತ್ರಿಕ ಚುನಾವಣಾ ಫಲಿತಾಂಶವನ್ನೇ ಬದಲಾಯಿಸಿದವು. ಕೆಲ ತಿಂಗಳ ಬಳಿಕ ನಡೆದ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌, ಐಎನ್‌ಎಲ್‌ಡಿ ಪಕ್ಷಗಳನ್ನು ದೂಳೀಪಟ ಮಾಡಿದ ಬಿಜೆಪಿ, ಸ್ವಂತ ಬಲದ ಮೇಲೆ ಅಧಿಕಾರ ಹಿಡಿಯಿತು.

ಅನನುಭವಿಗಳು ಮತ್ತು ಮೊದಲ ಬಾರಿಗೆ ಸ್ಪರ್ಧಿಸಿದ ಅಭ್ಯರ್ಥಿಗಳಿಂದಲೇ ತುಂಬಿದ್ದ ಬಿಜೆಪಿಯನ್ನು ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಮುನ್ನಡೆಸಿದ್ದರು. ‘ಮೋದಿ ಅಲೆ’ಯನ್ನು ಬಳಸಿಕೊಂಡು ವಿಜಯ ಪತಾಕೆಯನ್ನೂ ಹಾರಿಸಿದರು. ಈ ಬಾರಿಯೂ ಮೋದಿ ಅವರ ಹೆಸರಿನಲ್ಲಿಯೇ ಚುನಾವಣೆ ನಡೆಯುತ್ತಿದೆ.

ರಾಷ್ಟ್ರೀಯ ಮಟ್ಟದಲ್ಲಿ ಮೋದಿ ಅವರ ಸಾಧನೆಗಳನ್ನು, ರಾಜ್ಯ ಮಟ್ಟದಲ್ಲಿ ಖಟ್ಟರ್ ಅವರನ್ನೂ ಇಟ್ಟುಕೊಂಡು ಬಿಜೆಪಿ ಸ್ಪರ್ಧೆಗೆ ಇಳಿದಿದೆ. ಆಡಳಿತ ವಿರೋಧಿ ಅಲೆಯನ್ನು ದೂರ ಮಾಡುವ ನಿಟ್ಟಿನಲ್ಲಿ, ಬಹುತೇಕ ಹಾಲಿ ಸಂಸದರನ್ನು ಈ ಬಾರಿ ಕೈಬಿಡಲಾಗಿದೆ. ಮೋದಿ ಜಾದೂ, ರಾಷ್ಟ್ರೀಯ ಭದ್ರತೆ ವಿಚಾರದಲ್ಲಿ ಎನ್‌ಡಿಎ ಸರ್ಕಾರದ ದೃಢ ನಿಲುವುಗಳು ಪಕ್ಷಕ್ಕೆ ವರದಾನವಾಗಲಿವೆ ಎಂಬ ವಿಶ್ವಾಸದಲ್ಲಿ ಬಿಜೆಪಿ ಇದೆ.

ಸೇನಾಧಿಕಾರಿಯಾಗುವ ಆಶಯದಿಂದ ಭಾರತೀಯ ಸೇನಾ ಅಕಾಡೆಮಿಗೆ (ಐಎಂಎ) ಹರಿಯಾಣದಲ್ಲಿ ಹೆಚ್ಚಿನ ಸಂಖ್ಯೆಯು ಯುವಕರು ಸೇರ್ಪಡೆಯಾಗಿ ಗಮನ ಸೆಳೆದಿದ್ದಾರೆ. ಪುಲ್ವಾಮಾ ಹಾಗೂ ಬಾಲಾಕೋಟ್ ದಾಳಿಯ ಬಳಿಕ ಬಿಜೆಪಿ ಪ್ರಸ್ತಾಪಿಸಿದ ‘ರಾಷ್ಟ್ರೀಯತೆ’ಗೆ ಹರಿಯಾಣದಲ್ಲಿ ಒಳ್ಳೆಯ ಸ್ಪಂದನೆ ವ್ಯಕ್ತವಾಗಿದೆ ಎಂದು ಬಿಜೆಪಿ ಹೇಳುತ್ತಿದೆ.

ಉತ್ತಮ ಆಡಳಿತ ನೀಡಿರುವುದಾಗಿ ಬಿಜೆಪಿ ಹೇಳಿಕೊಳ್ಳುತ್ತಿದೆ. ಆದರೆ, ಜನರ ನಿರೀಕ್ಷೆಯ ಮಟ್ಟಕ್ಕೆ ಏರಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಕೃಷಿ ಮತ್ತು ಕೃಷಿಕರ ಸಮಸ್ಯೆಗಳು, ಕಾನೂನು–ಸುವ್ಯವಸ್ಥೆ, ನಿರುದ್ಯೋಗ, ಸತಲೆಜ್‌–ಯಮುನಾ ಸಂಪರ್ಕ ಕಾಲುವೆ ವಿಚಾರಗಳು ವಿಪಕ್ಷಗಳಾದ ಕಾಂಗ್ರೆಸ್, ಐಎನ್‌ಎಲ್‌ಡಿ, ಆಮ್ ಆದ್ಮಿ ಪಕ್ಷಗಳಿಗೆ ಆಹಾರವಾಗುವ ಸಾಧ್ಯತೆಯಿದೆ.

ಪ್ರಬಲ ಜಾಟ್ ಸಮುದಾಯ ಹಾಗೂ ಇತರ ಸಮುದಾಯಗಳು ಧ್ರುವೀಕರಣಗೊಂಡಿವೆ. ಮೀಸಲಾತಿಗಾಗಿ ಜಾಟರು ಇಟ್ಟಿದ್ದ ಬೇಡಿಕೆ ಇನ್ನೂ ಕನಸಾಗಿಯೇ ಉಳಿದಿದೆ. ಮೀಸಲಾತಿ ಹೋರಾಟದ ವೇಳೆ ತೀವ್ರ ಹಿಂಸಾಚಾರ, ಲೂಟಿ, ಪ್ರತಿಭಟನೆಗಳು ನಡೆದವು. ಈ ಘಟನೆ ಸರ್ಕಾರದ ಚಟುವಟಿಕೆಯನ್ನು ಒಂದು ವಾರ ಸ್ಥಗಿತಗೊಳಿಸಿತ್ತು. ಇದು ಖಟ್ಟರ್ ಸರ್ಕಾರದ ವೈಫಲ್ಯಗಳಲ್ಲಿ ಒಂದು ಎಂದು ಹೇಳಲಾಗಿದೆ. ದೇರಾ ಸಚ್ಚಾ ಸೌದಾ ಮುಖ್ಯಸ್ಥನ ವಿರುದ್ಧ ಬಂದ ತೀರ್ಪು ಖಂಡಿಸಿ ನಡೆದ ಹಿಂಸಾಚಾರದಲ್ಲಿ ಪೊಲೀಸರ ಗುಂಡಿಗೆ 40 ಮಂದಿ ಬಲಿಯಾಗಿದ್ದು ಕೂಡಾ ಸರ್ಕಾರದ ಕಾನೂನು ಮತ್ತು ಸುವ್ಯವಸ್ಥೆಗೆ ಮತ್ತೊಂದು ಕಳಂಕ ಎನಿಸಿತು. ಥಳಿತ ಪ್ರಕರಣಗಳು, ಜಾನುವಾರು ಸಂರಕ್ಷಣೆ ಹೆಸರಲ್ಲಿ ನಡೆದ ಹಿಂಸಾಚಾರಗಳು ಆಡಳಿತವನ್ನು ಗೊಂದಲಕ್ಕೆ ಸಿಲುಕಿಸಿದವು.

ಜಾಟ್‌ ಸಮುದಾಯವನ್ನು ಬಿಟ್ಟು ಇತರ ಸಮುದಾಯಗಳ ಮತಗಳನ್ನು ಧ್ರುವೀಕರಣ ಮಾಡುವುದು ಬಿಜೆಪಿಯ ಉದ್ದೇಶ. ಬಿಜೆಪಿ ತನ್ನ ಸ್ವಂತ ಶಕ್ತಿಯ ಮೇಲೆ ಮತ ಗಳಿಸುವುದಕ್ಕಿಂತ ಮಿಗಿಲಾಗಿ, ಐಎನ್‌ಎಲ್‌ಡಿಇಬ್ಭಾಗದ ಲಾಭವನ್ನು ಪಡೆಯುವ ಸಾಧ್ಯತೆಯಿದೆ. ಕಾಂಗ್ರೆಸ್‌ನಲ್ಲಿ ಮೂಡಿರುವ ಬಿರುಕೂ ಬಿಜೆಪಿಗೆ ನೆರವಾಗುವ ಸಾಧ್ಯತೆಯಿದೆ.

‘ಕೈ’ ಹಿರಿಯರು ಕಣಕ್ಕೆ

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಹಣಿಯಲು ಪಕ್ಷದ ಹಿರಿಯ ನಾಯಕರನ್ನು ಕಣಕ್ಕಿಳಿಸಲು ಕಾಂಗ್ರೆಸ್ ಮುಂದಾಗಿದೆ. ಶಾಸಕರಾಗಿರುವ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಅವರು ಸೋನೆಪತ್‌ನಿಂದ ಸ್ಪರ್ಧಿಸುವ ಸಾಧ್ಯತೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT