ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದೋಸ್ತಿ’‍ಗಳ ವಿರುದ್ಧ ಹೋರಾಟಕ್ಕೆ ಬಿಜೆಪಿ ಸಿದ್ಧತೆ

ಇಂದು ಬಿಜೆಪಿ ಕೃತಜ್ಞತಾ ಸಮಾವೇಶ, ಶಾಸಕಾಂಗ ಸಭೆ
Last Updated 4 ಜೂನ್ 2019, 19:24 IST
ಅಕ್ಷರ ಗಾತ್ರ

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಮತ್ತು ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸೋಲಿನ ಕಹಿಯ ಮಧ್ಯೆ ಬಿಜೆಪಿ ರಾಜ್ಯ ಘಟಕ ‘ದೋಸ್ತಿ’ ಸರ್ಕಾರದ ವಿರುದ್ಧ ಹೋರಾಟ ನಡೆಸಲು ಅಣಿಯಾಗುತ್ತಿದೆ.

ಚುನಾವಣೆಯ ಗೆಲುವಿನ ಸಂಭ್ರಮದ ಆಚರಣೆಯ ಸಮಾವೇಶದ ಜತೆಗೆ, ಹೋರಾಟದ ರೂಪುರೇಷೆ ತಯಾರಿಸುವ ಸಂಬಂಧ ಬುಧವಾರ ಸಂಜೆ ಶಾಸಕಾಂಗ ಪಕ್ಷದ ಸಭೆಯನ್ನೂ ಕರೆದಿದೆ. ನೂತನವಾಗಿ ಆಯ್ಕೆಯಾದ 25 ಸಂಸದರಿಗೆ ಸನ್ಮಾನ ಮತ್ತು
ಕಾರ್ಯಕರ್ತರಿಗೆ ಅರಮನೆ ಮೈದಾನದಲ್ಲಿ ಕೃತಜ್ಞತೆ ಸಮರ್ಪಣಾ ಸಮಾವೇಶ ಆಯೋಜಿಸಲಾಗಿದೆ.

‘ಸಮ್ಮಿಶ್ರ ಸರ್ಕಾರದ ನಿಷ್ಕ್ರಿಯತೆ ವಿರುದ್ಧ ಹೋರಾಟದ ಬಗ್ಗೆ ಚರ್ಚೆ ನಡೆಸಲು ಶಾಸಕಾಂಗ ‌ಪಕ್ಷದ ಸಭೆ ಕರೆಯ
ಲಾಗಿದೆ. ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕೆಲಸವೂ ನಡೆಯುತ್ತಿಲ್ಲ. ವಿಶೇಷವಾಗಿ ಬರಕ್ಕೆ ಸಂಬಂಧಿಸಿದಂತೆ ಪರಿಹಾರ ಕಾರ್ಯ ಕೈಗೊಂಡಿಲ್ಲ.

ರೈತರು ಮತ್ತು ಜಾನುವಾರುಗಳ ಸ್ಥಿತಿಗತಿಯ ಬಗ್ಗೆ ಗಮನಹರಿಸದೇ ಸರ್ಕಾರದ ಉಳಿವಿಗಾಗಿ ಕಸರತ್ತು ನಡೆಸುತ್ತಿದೆ. ಪಕ್ಷದ ನಾಯಕರು ರಾಜ್ಯ ವ್ಯಾಪಿ ಪ್ರವಾಸ ಮಾಡುವುದರ ಜೊತೆಗೆ ಪ್ರತಿಭಟನೆ ನಡೆಸುವ ಬಗ್ಗೆಯೂ ಚರ್ಚೆ ನಡೆಸಲಾಗುವುದು’ ಎಂದು ಬಿಜೆಪಿ ಮುಖಂಡರೊಬ್ಬರು ತಿಳಿಸಿದರು.

ಪಕ್ಷದ ನಾಯಕರು ಹಲವು ತಂಡಗಳಲ್ಲಿ ಪ್ರವಾಸ ಮಾಡಿ, ವರದಿ ಸಿದ್ಧಪಡಿಸುತ್ತಾರೆ. ಬಳಿಕ ಸರ್ಕಾರದ ವಿರುದ್ಧ ಹೋರಾಟ ನಡೆಸಲು ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಅವರು ಹೇಳಿದರು.

ಅಲ್ಲದೆ, ಲೋಕಸಭಾ ಚುನಾವಣೆಯಲ್ಲಿ ಗೆಲುವಿನ ಬಳಿಕ ರಾಜ್ಯದ ಹಲವೆಡೆ ನಡೆದ ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸೋಲುಂಟಾಗಲು ಕಾರಣಗಳ ವಿಷಯವೂ ಪ್ರಸ್ತಾಪಗೊಳ್ಳಲಿದೆ.

ಕೃತಜ್ಞತಾ ಸಮಾವೇಶ: ಲೋಕಸಭಾ ಚುನಾವಣೆಯಲ್ಲಿ ನಿರೀಕ್ಷೆಗೂ ಮೀರಿ ಸ್ಥಾನಗಳನ್ನು ಗೆದ್ದ ಸಂಭ್ರಮಾಚರಣೆಯನ್ನುಕೃತಜ್ಞತಾ ಸಮಾವೇಶವಾಗಿ ಆಚರಿಸಲಾಗುವುದು.ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ನೂತನವಾಗಿ ಆಯ್ಕೆ
ಯಾಗಿರುವ 25 ಸಂಸದರು ಮತ್ತು ವಿಧಾನಸಭಾ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ ಅವಿನಾಶ್‌ ಜಾಧವ್‌ ಅವರನ್ನು ಸನ್ಮಾನಿಸಲಾಗುವುದು. ಪಕ್ಷದ ಉಸ್ತುವಾರಿ ವಹಿಸಿರುವ ಪಿ.ಮುರಳೀಧರರಾವ್‌ ಹಾಜರಿರುತ್ತಾರೆ.

ಸಂಸದರಿಗೆ ಸಂಘದ ಪಾಠ

ನೂತನವಾಗಿ ಆಯ್ಕೆಯಾಗಿರುವ 25 ಸಂಸದರಿಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರಿಂದ ಮಂಗಳವಾರ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಆರ್‌ಎಸ್‌ಎಸ್‌ ಹಿನ್ನೆಲೆ ಅಲ್ಲದ ಸಂಸದರಿಗೆ ಸಂಘ ಮತ್ತು ಬಿಜೆಪಿಯ ಕುರಿತು ಕೆಲವೊಂದು ಮಾಹಿತಿ ನೀಡುವ ಕಾರ್ಯ ಸಂಘದ ಪ್ರಮುಖರಿಂದ ನಡೆಯಿತು. ಸದಾಶಿವನಗರದ ರಾಷ್ಟ್ರೋತ್ಥಾನ ಕೇಂದ್ರದಲ್ಲಿ ಈ ತರಬೇತಿ ನಡೆಯಿತು ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT