ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರ: ದೀರ್ಘಾವಧಿ ಲಾಭಕ್ಕಾಗಿ ಬಿಜೆಪಿ ಅಧಿಕಾರ ತ್ಯಾಗ

Last Updated 13 ನವೆಂಬರ್ 2019, 6:37 IST
ಅಕ್ಷರ ಗಾತ್ರ

ನವದೆಹಲಿ: ಮಹಾರಾಷ್ಟ್ರದಲ್ಲಿ ಮೂರು ದಶಕಗಳಿಂದ ಶಿವಸೇನಾವನ್ನು ಅವಲಂಭಿಸಿದ್ದ ಬಿಜೆಪಿಯು, ಈಗ ಸೇನಾ ಜತೆಗಿನ ತನ್ನ ಮೈತ್ರಿಯನ್ನು ಕಡಿದುಕೊಂಡಿದೆ. ಬಿಜೆಪಿಯು ತನ್ನ ಕಾಲಮೇಲೆ ನಿಲ್ಲುವ ಪ್ರಯತ್ನ ಇದಾಗಿದೆ ಎಂಬುದನ್ನು, ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿಕೆಗೆ ಶಿಫಾರಸು ಮಾಡಿದ ಕೇಂದ್ರ ಸರ್ಕಾರದ ನಿರ್ಧಾರವು ಸ್ಪಷ್ಟಪಡಿಸಿದೆ.

ಸೇನಾ ಜತೆಗಿನ ಮೈತ್ರಿ ಕಡಿದುಕೊಳ್ಳುವುದರಿಂದ ತಕ್ಷಣದಲ್ಲಿ ನಷ್ಟವಾದರೂ, ದೀರ್ಘಾವಧಿಯಲ್ಲಿ ಪಕ್ಷದ ಬೆಳವಣಿಗೆಗೆ ಈ ನಿರ್ಧಾರವು ನೆರವಾಗಲಿದೆ ಎಂಬುದು ಬಿಜೆಪಿಯ ಲೆಕ್ಕಾಚಾರ.

ಮಹಾರಾಷ್ಟ್ರದಲ್ಲಿ ಬಿಜೆಪಿಯು ಮೂರು ದಶಕಗಳಿಂದಲೂ, ಶಿವಸೇನಾ ಜತೆಗಿನ ಮೈತ್ರಿಕೂಟದಲ್ಲಿ ಕಿರಿಯ ಪಾಲುದಾರನಾಗಿತ್ತು. 2014ರ ಚುನಾವಣೆಯಲ್ಲಿ ಮಾತ್ರ ಬಿಜೆಪಿಯು (122 ಸ್ಥಾನಗಳು), ಶಿವಸೇನಾಗಿಂತ (63 ಸ್ಥಾನ) ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಆದರೆ, ಆ ಚುನಾವಣೆಯಲ್ಲಿ ಎರಡೂ ಪಕ್ಷಗಳು ಪ್ರತ್ಯೇಕವಾಗಿ ಸ್ಪರ್ಧಿಸಿದ್ದವು. ಚುನಾವಣೋತ್ತರ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದ್ದವು. 2019ರ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿದವು. ಆದರೆ, ಎರಡೂ ಪಕ್ಷಗಳು ಹಿಂದಿಗಿಂತ ಕಡಿಮೆ ಸ್ಥಾನ ಪಡೆದವು.

ಎರಡೂ ಪಕ್ಷಗಳು ಹಿಂದಿಗಿಂತ ಕಡಿಮೆ ಸ್ಥಾನಗಳಲ್ಲಿ ಗೆಲುವು ಸಾಧಿಸಿವೆ. ಆದರೆ,ಹಿಂದುತ್ವದ ಕಾರ್ಯಸೂಚಿ ಫಲನೀಡುವ ಮಹಾರಾಷ್ಟ್ರದ ವಿಧಾನಸಭಾ ಕ್ಷೇತ್ರಗಳಲ್ಲಿ ಶಿವಸೇನಾದ ಪ್ರಭಾವ ಸೀಮಿತವಾದುದು ಎಂಬುದನ್ನು ಈ ಚುನಾವಣೆಯಲ್ಲಿ ಬಿಜೆಪಿ ಅರ್ಥ ಮಾಡಿಕೊಂಡಿದೆ.

ಶಿವಸೇನಾದ ಹಿಂದುತ್ವದ ‘ಐಕಾನ್‌’ ಆಗಿದ್ದ ಬಾಳಾ ಠಾಕ್ರೆ ಅವರು ಈಗ ಇಲ್ಲ. ಅವರ ಅನುಪಸ್ಥಿತಿ ಶಿವಸೇನಾದಲ್ಲಿ ಎದ್ದುಕಾಣುತ್ತಿದೆ.ಬಿಜೆಪಿಯ ಹಿಂದುತ್ವದ ‘ಐಕಾನ್‌’ಗಳಾದ ಪ್ರಧಾನಿ ನರೇಂದ್ರ ಮೋದಿ ಮತ್ತು ಪಕ್ಷದ ಅಧ್ಯಕ್ಷ ಅಮಿತ್ ಶಾ ಅವರ ಎದುರು ಶಿವಸೇನಾದ ಯಾವ ನಾಯಕರೂ ನಿಲ್ಲುವುದಿಲ್ಲ.ಉತ್ತರ ಭಾರತೀಯರು, ಗುಜರಾತಿಗಳು ಹಾಗೂ ತಮಿಳರನ್ನು ವಿರೋಧಿಸುವಶಿವಸೇನಾದ ಮರಾಠಾ ಕೇಂದ್ರಿತ ಹಿಂದುತ್ವಕ್ಕೆ ಈಗ ಮಾರುಕಟ್ಟೆ ಇಲ್ಲ ಎಂಬುದನ್ನು ಬಿಜೆಪಿ ಅರ್ಥಮಾಡಿಕೊಂಡಿದೆ.

ನಿರ್ದಿಷ್ಟ ದಾಳಿ, ಬಾಲಾಕೋಟ್ ವಾಯುದಾಳಿ , ಜಮ್ಮು–ಕಾಶ್ಮೀರದ ವಿಶೇಷಾಧಿಕಾರ ವಾಪಸಾತಿ ಮತ್ತು ರಾಮ ಮಂದಿರ ನಿರ್ಮಾಣದ ಪರವಾಗಿ ಸು‍ಪ್ರೀಂ ಕೋರ್ಟ್‌ ನೀಡಿದ ತೀರ್ಪು, ಬಿಜೆಪಿಯ ಹಿಂದುತ್ವದ ಪ್ರತಿಪಾದನೆಗೆ ಬಲ ನೀಡಿವೆ.

2019ರ ಲೋಕಸಭಾ ಚುನಾವಾಣೆಯಲ್ಲಿ ಮಹಾರಾಷ್ಟ್ರದ 48 ಕ್ಷೇತ್ರಗಳಲ್ಲಿ ಬಿಜೆಪಿ 25ರಲ್ಲಿ ಮತ್ತು ಸೇನಾ 23ರಲ್ಲಿ ಸ್ಪರ್ಧಿಸಿದ್ದವು. ಬಿಜೆಪಿ 24 ಮತ್ತು ಸೇನಾ 18 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದವು. ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 150, ಸೇನಾ 124 ಮತ್ತು ಉಳಿದ 14 ಕ್ಷೇತ್ರಗಳಲ್ಲಿ ಇತರ ಮಿತ್ರಪಕ್ಷಗಳುಸ್ಪರ್ಧಿಸಿದ್ದವು. ಬಿಜೆಪಿ 105ರಲ್ಲಿ ಗೆಲುವು ಸಾಧಿಸಿದರೆ, ಶಿವಸೇನಾ 56ರಲ್ಲಿ ಮಾತ್ರ ಗೆಲುವು ಸಾಧಿಸಿತು. ಆದರೆ, ಎರಡೂವರೆ ವರ್ಷ ಮುಖ್ಯಮಂತ್ರಿ ಸ್ಥಾನ ತಮಗೆ ಬಿಟ್ಟುಕೊಡಬೇಕು ಎಂದು ಶಿವಸೇನಾ ಪಟ್ಟು ಹಿಡಿಯಿತು. ಇದನ್ನು ಬಿಜೆಪಿ ಸಾರಾಸಗಟಾಗಿ ತಳ್ಳಿಹಾಕಿದೆ.

ಶಿವಸೇನಾವನ್ನು ತೊರೆಯುವ ಮೂಲಕ,ಮೈತ್ರಿ ಪಕ್ಷಗಳಿಗೆ ಶರಣಾಗುವುದಿಲ್ಲ ಎಂಬ ಸಂದೇಶವನ್ನು ಬಿಜೆಪಿಯುಎನ್‌ಡಿಎ ಮಿತ್ರಪಕ್ಷಗಳಿಗೆ ರವಾನಿಸಿದೆ.

ತನ್ನ ಪ್ರಾಬಲ್ಯವಿಲ್ಲದಿದ್ದರೂ, ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿರುವ ರಾಜ್ಯಗಳಲ್ಲಿ ಮಿತ್ರಪಕ್ಷಗಳನ್ನು ಮೀರಿ ಬೆಳೆಯುವ ಮಹತ್ವಾಕಾಂಕ್ಷೆಯನ್ನು ಬಿಜೆಪಿ ತೋರಿಸಿದೆ. ಹೀಗಾಗಿಯೇ ದೀರ್ಘಾವಧಿಯಲ್ಲಿ ಆಗುವ ಲಾಭಕ್ಕಾಗಿ, ಸೇನಾ ಜತೆಗಿನ ಮೈತ್ರಿ ಕಡಿದುಕೊಂಡಿದ್ದರಿಂದ ಆಗುವ ನಷ್ಟವನ್ನು ಅನುಭವಿಸಲು ಬಿಜೆಪಿ ಸಿದ್ಧವಾಗಿದೆ.

ಮಿತ್ರರಿಗೆ ‘ಸಂದೇಶ’ ಇದೇ ಮೊದಲಲ್ಲ
* ಎನ್‌ಡಿಎ ಮಿತ್ರಪಕ್ಷಗಳ ಒತ್ತಡ ತಂತ್ರಕ್ಕೆ ಮಣೆ ಹಾಕುವುದಿಲ್ಲ ಎಂಬುದನ್ನು ಬಿಜೆಪಿ ಈ ಹಿಂದೆಯೇ ಹಲವು ಬಾರಿ ಸಾಬೀತುಮಾಡಿದೆ

* 2013ರಲ್ಲಿ ತನ್ನ ಮಿತ್ರ ಪಕ್ಷ ಜೆಡಿಯು ಜತೆಗಿನ ಮೈತ್ರಿಯನ್ನು ಬಿಜೆಪಿ ಕಡಿದುಕೊಂಡಿತ್ತು. ಬಿಜೆಪಿ ಮತ್ತು ಜೆಡಿಯು ಮತ್ತೆ ಮೈತ್ರಿ ಮಾಡಿಕೊಂಡು ಬಿಹಾರದಲ್ಲಿ ಸರ್ಕಾರ ರಚಿಸಿದ್ದರೂ, ಜೆಡಿಯು ಅನ್ನು ಎರಡನೇ ದರ್ಜೆಯ ಪಕ್ಷದಂತೆಯೇ ನಡೆಸಿಕೊಳ್ಳುತ್ತಿದೆ

* ಆಂಧ್ರಪ್ರದೇಶದಲ್ಲಿ ಎನ್‌ಡಿಎ ಮಿತ್ರಪಕ್ಷವಾಗಿದ್ದ ಟಿಡಿಪಿಯನ್ನೂ ಬಿಜೆಪಿ ಕಡೆಗಣಿಸಿತ್ತು. ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡಬೇಕು ಎಂಬ ಟಿಡಿಪಿಯ ಬೇಡಿಕೆಯನ್ನು ಬಿಜೆಪಿ ತಿರಸ್ಕರಿಸಿತ್ತು. ಹೀಗಾಗಿ 2018ರಲ್ಲಿ ಎನ್‌ಡಿಎಯಿಂದ ಟಿಡಿಪಿ ಹೊರನಡೆದಿತ್ತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT