ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಶಕ್ತ ಭಾರತ’ ಬಿಜೆಪಿ ಸಂಕಲ್ಪ

ಕಮಲ ಪ್ರಣಾಳಿಕೆ: ದೇಶದಾದ್ಯಂತ ಎನ್‌ಆರ್‌ಸಿ ವಿಸ್ತರಿಸುವ ಭರವಸೆ
Last Updated 8 ಏಪ್ರಿಲ್ 2019, 19:29 IST
ಅಕ್ಷರ ಗಾತ್ರ

ನವದೆಹಲಿ: ರಾಮಮಂದಿರ ನಿರ್ಮಾಣ, 370ನೇ ವಿಧಿ ರದ್ದತಿ ಮತ್ತು ಸಮಾನ ನಾಗರಿಕ ಸಂಹಿತೆ ಜಾರಿಯ ವಿಚಾರದಲ್ಲಿ ಸಿದ್ಧಾಂತಗಳಿಗೆ ಬದ್ಧತೆಯನ್ನು ತೋರಿರುವ ಬಿಜೆಪಿ, ಈ ಬಾರಿಯ ಲೋಕಸಭಾ ಚುನಾವಣೆಗೆ ಪಕ್ಷದ ಪ್ರಣಾಳಿಕೆಯನ್ನು ಸೋಮವಾರ ಬಿಡುಗಡೆ ಮಾಡಿದೆ.

ರಾಷ್ಟ್ರೀಯ ಪೌರತ್ವ ನೋಂದಣಿಯನ್ನು (ಎನ್‌ಆರ್‌ಸಿ) ದೇಶದಾದ್ಯಂತ ವಿಸ್ತರಿಸಲು ನಿರ್ಧರಿಸಿದೆ. ತೆರಿಗೆ ಹಂತಗಳ ಪರಿಷ್ಕರಣೆ, ಸಣ್ಣ ಹಿಡುವಳಿದಾರರಿಗೆ ಪಿಂಚಣಿ ಹಾಗೂ ಮೂಲಸೌಕರ್ಯ ಸೇರಿದಂತೆ ವಿವಿಧ ರಂಗಗಳಲ್ಲಿ ₹126 ಲಕ್ಷ ಕೋಟಿ ಬಂಡವಾಳ ಹೂಡಿಕೆಯ ವಾಗ್ದಾನ ನೀಡಿದೆ.

‘ಸಂಕಲ್ಪ ಭಾರತ, ಸಶಕ್ತ ಭಾರತ’ ಧ್ಯೇಯವಾಕ್ಯದ 48 ಪುಟಗಳ ‘ಸಂಕಲ್ಪ ಪತ್ರ’ವನ್ನು (ಪ್ರಣಾಳಿಕೆ) ಪ್ರಧಾನಿ ನರೇಂದ್ರ ಮೋದಿ ಅವರು ಪಕ್ಷದ ಅಧ್ಯಕ್ಷ ಅಮಿತ್ ಶಾ, ಸಚಿವರಾದ ರಾಜನಾಥ ಸಿಂಗ್, ಸುಷ್ಮಾ ಸ್ವರಾಜ್ ಹಾಗೂ ಅರುಣ್ ಜೇಟ್ಲಿ ಅವರ ಜೊತೆಗೂಡಿ ಬಿಡುಗಡೆ ಮಾಡಿದರು.

ಭಾರತದ ಆರ್ಥಿಕತೆಯನ್ನು 2032ರ ಹೊತ್ತಿಗೆ ₹ 700 ಲಕ್ಷ ಕೋಟಿಗೆ ಏರಿಸುವುದು, ರಾಷ್ಟ್ರೀಯ ಹೆದ್ದಾರಿಗಳ ಉದ್ದವನ್ನು ದುಪ್ಪಟ್ಟುಗೊಳಿಸುವುದು, ಸೇನೆಯ ಬಲವರ್ಧನೆ ಮಾಡುವುದು, ಸರ್ಕಾರಿ– ಖಾಸಗಿ ಸಹಭಾಗಿತ್ವ
ದಡಿ 2024ರ ವೇಳೆಗೆ ಎಲ್ಲ ಜಿಲ್ಲೆಗಳಲ್ಲಿ ವೈದ್ಯಕೀಯ ಕಾಲೇಜು ತೆರೆಯುವ ಭರವಸೆಯನ್ನು ಬಿಜೆಪಿ ನೀಡಿದೆ. ಈ ಮೂಲಕ ಹಿಂದುತ್ವಕ್ಕಿಂತ ಹೆಚ್ಚಾಗಿ ಅಭಿವೃದ್ಧಿ ವಿಚಾರಗಳು ಹಾಗೂ ಮಧ್ಯಮವರ್ಗದಲ್ಲಿ ಹೊಸ ಭರವಸೆ ಮೂಡಿಸುವ ಅಂಶಗಳು ಪ್ರಣಾಳಿಕೆಯಲ್ಲಿವೆ.

‘ನ್ಯೂನತೆಗಳಿಗೆ ಉತ್ತರ’: ‘2014ರಲ್ಲಿ ನೀಡಿದ ಮತ, ಪ್ರಬಲ ಹಾಗೂ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳುವ ಸರ್ಕಾರದ ಆಯ್ಕೆಗೆ ಕಾರಣವಾಯಿತು. ಐದು ದಶಕಗಳ ವಂಶಾಡಳಿತದ ದೊಡ್ಡ ನ್ಯೂನತೆಗಳನ್ನು ಸರಿಪಡಿಸಲು ಸಾಧ್ಯವಾಯಿತು.

ಪ್ರಣಾಳಿಕೆಯಲ್ಲಿನ ಪ್ರಮುಖ ಅಂಶಗಳು

*2024ರೊಳಗೆ ಮೂಲಸೌಕರ್ಯ ಕ್ಷೇತ್ರದಲ್ಲಿ ₹100 ಲಕ್ಷ ಕೋಟಿ ಬಂಡವಾಳ

* ಕೃಷಿ ಕ್ಷೇತ್ರದಲ್ಲಿ ₹25 ಲಕ್ಷ ಕೋಟಿ ಬಂಡವಾಳ ಹೂಡಿಕೆ

* ಅತಿಸಣ್ಣ, ಸಣ್ಣ ,ಮಧ್ಯಮ ಕೈಗಾರಿಕಾ ಕ್ಷೇತ್ರಕ್ಕೆ ₹1 ಲಕ್ಷ ಕೋಟಿ ಸಾಲ ಖಾತ್ರಿ

* ಮರುಪಾವತಿ ಖಾತ್ರಿಯೊಂದಿಗೆ ಶೂನ್ಯ ಬಡ್ಡಿದರದಲ್ಲಿ ₹1 ಲಕ್ಷ ಕೃಷಿ ಸಾಲ

* ಸೇನಾ ಶಸ್ತ್ರಾಸ್ತ್ರ ಖರೀದಿ ಪ್ರಕ್ರಿಯೆಗೆ ವೇಗ

* ಭಯೋತ್ಪಾದನೆ ವಿರುದ್ಧ ಹೋರಾಟ; ಸಶಸ್ತ್ರ ಪಡೆಗಳಿಗೆ ಪರಮಾಧಿಕಾರ

* ಈಶಾನ್ಯದಲ್ಲಿ ಒಳನುಸುಳುವಿಕೆ ತಡೆಗೆ ತಂತ್ರಜ್ಞಾನ ಬಳಸಿ ಬೇಲಿ ನಿರ್ಮಾಣ

* 2022ರೊಳಗೆ ಎಲ್ಲರಿಗೂ ಸೂರು

* ಮಹಿಳೆಯರಿಗೆ ₹1ಕ್ಕೆ ಸ್ಯಾನಿಟರಿ ನ್ಯಾಪ್‌ಕಿನ್ ಪೂರೈಕೆ

* ಮುಂದಿನ ಐದು ವರ್ಷಗಳಲ್ಲಿ 50 ನಗರಗಳಿಗೆ ಮೆಟ್ರೊ ರೈಲು ಸಂಪರ್ಕ

ದೇಶದೆಲ್ಲೆಡೆ ಪೌರತ್ವ ನೋಂದಣಿ

ನೆರೆಯ ದೇಶಗಳ ಮುಸ್ಲಿಮೇತರ ಸಮುದಾಯಗಳ ಜನರಿಗೆ ಪೌರತ್ವ ನೀಡುವ ಪೌರತ್ವ ತಿದ್ದುಪಡಿ ಮಸೂದೆ ಜಾರಿಗೆ ಬಿಜೆಪಿ ಮುಂದಾಗಿದೆ. ಈ ಮಸೂದೆಗೆ ವಿರೋಧ ವ್ಯಕ್ತಪಡಿಸುತ್ತಿರುವ ಈಶಾನ್ಯರಾಜ್ಯಗಳ ಜನರ ಆತಂಕವನ್ನು ದೂರ ಮಾಡುವ ಭರವಸೆಯನ್ನು ಅದು ನೀಡಿದೆ.

ಅಸ್ಸಾಮಿನ ಪ್ರಬಲ ವಿರೋಧದ ನಡುವೆಯೂ ಪೌರತ್ವ ನೋಂದಣಿ ಅಭಿಯಾನವನ್ನು ದೇಶದ ಎಲ್ಲ ಕಡೆಗೂ ವಿಸ್ತರಿಸಲು ಸಂಕಲ್ಪ ತೊಟ್ಟಿದೆ. ಇದಕ್ಕೆ ಕೆಲ ಕಾರಣಗಳನ್ನೂ ನೀಡಿದೆ. ಅಕ್ರಮ ವಲಸೆಯ ಕಾರಣದಿಂದ ಹಲವು ಭಾಗಗಳಲ್ಲಿ ಅಲ್ಲಿನ ಸಾಂಸ್ಕೃತಿಕ ಮತ್ತು ಭಾಷಾ ಅಸ್ಮಿತೆಯಲ್ಲಿ ಭಾರಿ ಬದಲಾವಣೆಗಳಾಗಿವೆ. ಇದು ಸ್ಥಳೀಯ ಜನರ ಜೀವನ ನಿರ್ವಹಣೆ ಹಾಗೂ ಅವರ ಉದ್ಯೋಗದ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನು ಬೀರಿದೆ ಎಂಬುದು ಪಕ್ಷದ ಅಭಿಪ್ರಾಯ.

ಕಾಶ್ಮೀರದ ವಿಶೇಷಾಧಿಕಾರ ರದ್ದು

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ರಾಜ್ಯದ ಸ್ಥಾನಮಾನ ನೀಡಿರುವ ಸಂವಿಧಾನದ 370ನೇ ವಿಧಿ ಹಾಗೂ 35ಎ ವಿಧಿಗಳನ್ನು ವಜಾ ಮಾಡುವುದಾಗಿ ಬಿಜೆಪಿ ಪುನರುಚ್ಚರಿಸಿದೆ.

ರಾಮಮಂದಿರ ನಿರ್ಮಾಣ ಪ್ರಸ್ತಾಪ

ನಿರೀಕ್ಷೆಯಂತೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಪ್ರಸ್ತಾಪವೂ ಪ್ರಣಾಳಿಕೆಯಲ್ಲಿ ಸ್ಥಾನ ಪಡೆದಿದೆ. ಸಾಂವಿಧಾನಿಕ ಚೌಕಟ್ಟಿನಲ್ಲಿ ಎಲ್ಲ ಸಾಧ್ಯತೆಗಳನ್ನು ಬಳಸಿಕೊಂಡು ಮಂದಿರ ನಿರ್ಮಾಣ ಮಾಡುವುದಾಗಿ ಬಿಜೆಪಿ ಪ್ರಕಟಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT