ಶನಿವಾರ, ಫೆಬ್ರವರಿ 27, 2021
31 °C
ಭಾರಿ ಬಹುಮತದಿಂದ ಮರಳಿ ಅಧಿಕಾರಕ್ಕೆ: ಶಾ ವಿಶ್ವಾಸ

ಇನ್ನರ್ಧ ಶತಮಾನ ಬಿಜೆಪಿಯೇ ಯಜಮಾನ: ಅಮಿತ್‌ ಶಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಬಿಜೆಪಿ ಇನ್ನೂ 50 ವರ್ಷ ಭಾರತವನ್ನು ಆಳಲಿದೆ. ಅದನ್ನು ತಡೆಯುವ ಶಕ್ತಿ ಯಾರಿಗೂ ಇಲ್ಲ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ಹೇಳಿದ್ದಾರೆ.

2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವುದು ಹಗಲುಗನಸು. ಭಾರಿ ಬಹುಮತದೊಂದಿಗೆ ಪಕ್ಷವು ಮರಳಿ ಅಧಿಕಾರಕ್ಕೆ ಬರಲಿದೆ. ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಸವಾಲು ಹಾಕಿದ್ದಾರೆ.

ಡಾ. ಅಂಬೇಡ್ಕರ್‌ ಅಂತರರಾಷ್ಟ್ರೀಯ ಕೇಂದ್ರದಲ್ಲಿ ಭಾನುವಾರ ನಡೆದ ಬಿಜೆಪಿ ಕಾರ್ಯಕಾರಿಣಿಯ ಎರಡನೇ ದಿನ ಅವರು ಮಾತನಾಡಿದರು.

ಬಿಜೆಪಿ ಆಡಳಿತದ ‘ಸುವಾಸನೆ’ ಮತ್ತು ಪ್ರಧಾನಿ ಮೋದಿ ಅವರ ‘ವರ್ಚಸ್ಸು’ ಬಿಜೆಪಿಯನ್ನು ಮರಳಿ ಅಧಿಕಾರಕ್ಕೆ ತರಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮುಂಬರುವ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಕಾರ್ಯಕಾರಿಣಿಯಲ್ಲಿ ಹಲವು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಯಿತು.

ನವ ಭಾರತ ನಿರ್ಮಾಣ: 2022ರ ವೇಳೆಗೆ ನವ ಭಾರತ ನಿರ್ಮಾಣ ಮಾಡುವ ತನ್ನ ವಚನಕ್ಕೆ ಬದ್ಧವಾಗಿರುವುದಾಗಿ ರಾಷ್ಟ್ರೀಯ ಕಾರ್ಯಕಾರಿಣಿ ರಾಜಕೀಯ ನಿರ್ಣಯ ಕೈಗೊಂಡಿದೆ.

ಬಡತನ, ಹಸಿವು, ಭ್ರಷ್ಟಾಚಾರ, ಜಾತೀಯತೆ, ಕೋಮುವಾದ ಮತ್ತು ಭಯೋತ್ಪಾದನೆ ಮುಕ್ತವಾದ ‘ನವ ಭಾರತ ನಿರ್ಮಾಣ’ ತನ್ನ ಕನಸು ಎಂದು ಬಿಜೆಪಿ ಪುನರುಚ್ಚರಿಸಿದೆ.

ಹಗಲುಗನಸು: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ವಿರೋಧ ಪಕ್ಷಗಳು ಬಿಜೆಪಿಯನ್ನು ಸೋಲಿಸುವ ಹಗಲು ಕನಸು ಕಾಣುತ್ತಿವೆ ಎಂದು ಕೇಂದ್ರ ಸಚಿವ ಪ್ರಕಾಶ್‌ ಜಾವಡೇಕರ್‌ ಹೇಳಿದ್ದಾರೆ.

ಅಜೇಯ ಭಾರತ, ಅಟಲ್‌ ಭಾಜಪ

ಮುಂಬರುವ ಲೋಕಸಭಾ ಚುನಾವಣೆಗಾಗಿ ಬಿಜೆಪಿ ‘ಅಜೇಯ ಭಾರತ, ಅಟಲ್‌ ಭಾಜಪ’ ಎಂಬ ಹೊಸ ಮಂತ್ರ ಜಪಿಸಿದೆ.

ಎರಡನೇ ದಿನದ ಕಾರ್ಯಕಾರಿಣಿಯಲ್ಲಿ ಪ್ರಧಾನಿ ಮೋದಿ ಅವರು ಈ ಹೊಸ ಘೋಷಣೆ ಹುಟ್ಟು ಹಾಕಿದ್ದಾರೆ.

ಮೊದಲ ದಿನದ ಕಾರ್ಯಕಾರಿಣಿಯಲ್ಲಿ ‘ಅಜೇಯ ಬಿಜೆಪಿ’ ಎಂಬ ಧ್ಯೇಯವಾಕ್ಯವನ್ನು ಘೋಷಿಸಲಾಗಿತ್ತು. ಅದಕ್ಕೆ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಹೆಸರು ಸೇರಿಸುವ ಮೂಲಕ ಮೋದಿ ಅವರು ಧ್ಯೇಯವಾಕ್ಯವನ್ನು ಸ್ವಲ್ಪ ಮಾರ್ಪಾಡು ಮಾಡಿದ್ದಾರೆ.

ಮುಂದಿನ ಚುನಾವಣೆಯಲ್ಲಿ ಮತ್ತೆ ವಾಜಪೇಯಿ ಅವರ ಹೆಸರಿಗೆ ಮೊರೆ ಹೊಗುವ ಸುಳಿವನ್ನು ಬಿಜೆಪಿ ನೀಡಿದೆ.

ಪೆಟ್ರೋಲ್‌, ಡೀಸೆಲ್‌ ದರ ಹೆಚ್ಚಳ ಪ್ರಸ್ತಾಪ ಏಕಿಲ್ಲ: ಕಾಂಗ್ರೆಸ್‌ ಪ್ರಶ್ನೆ

ಪೆಟ್ರೋಲ್‌, ಡೀಸೆಲ್‌ ದರ ಹೆಚ್ಚಳ, ಕುಸಿಯುತ್ತಿರುವ ರೂಪಾಯಿ ಮೌಲ್ಯ, ಹೆಚ್ಚುತ್ತಿರುವ ನಿರುದ್ಯೋಗ, ರಫೇಲ್‌ ಯುದ್ಧ ವಿಮಾನ ಹಗರಣದಂತಹ ಜ್ವಲಂತ ಸಮಸ್ಯೆಗಳ ಬಗ್ಗೆ ಬಿಜೆಪಿ ಕಾರ್ಯಕಾರಿಣಿಯಲ್ಲಿ ಪ್ರಸ್ತಾಪವಾಗದಿರುವುದು ಆಶ್ಚರ್ಯ ಮೂಡಿಸಿದೆ ಎಂದು ಕಾಂಗ್ರೆಸ್‌ ಪ್ರತಿಕ್ರಿಯಿಸಿದೆ.

ಬಿಜೆಪಿ ಕಾರ್ಯಕಾರಿಣಿಯಲ್ಲಿ ಒಣ ಘೋಷಣೆಗಳು ಮಾತ್ರ ಕೇಳಿ ಬರುತ್ತಿವೆ. ದೇಶ ಮತ್ತು ಜನರನ್ನು ಬಾಧಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚೆಯಾಗದಿರುವುದು ವಿಷಾದನೀಯ ಎಂದು ಕಾಂಗ್ರೆಸ್‌ ವಕ್ತಾರ ಅಜಯ್‌ ಮಾಕನ್‌ ವಾಗ್ದಾಳಿ ನಡೆಸಿದ್ದಾರೆ.

ಪೆಟ್ರೋಲ್‌, ಡೀಸೆಲ್‌ ದರ ಏರಿಕೆ, ರಫೇಲ್‌ ಯುದ್ಧ ವಿಮಾನ ಖರೀದಿ ಹಗರಣಗಳ ಕುರಿತು ಕೇಳಿದ ಪ್ರಶ್ನೆಗೆ ಸಚಿವರಾದ ಜಾವಡೇಕರ್‌, ರವಿಶಂಕರ್‌ ಪ್ರಸಾದ್‌ ಅವರು ಉತ್ತರಿಸದೆ ನುಣುಚಿಕೊಂಡಿದ್ದಾರೆ ಎಂದು ಅವರು ಲೇವಡಿ ಮಾಡಿದ್ದಾರೆ.

******

ನಾಲ್ಕು ವರ್ಷದ ಆಡಳಿತದ ನಂತರವೂ ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆ ಒಂದಿಷ್ಟೂ ಕುಗ್ಗಿಲ್ಲ 
– ಪ್ರಕಾಶ್‌ ಜಾವಡೇಕರ್‌, ಕೇಂದ್ರ ಸಚಿವ

ನಮಗೆ ಅಧಿಕಾರ ಲಾಲಸೆ, ದಾಹ ಇಲ್ಲ. ಕುರ್ಚಿಯ ವ್ಯಾಮೋಹ ಇಲ್ಲ. ದೇಶ ಮತ್ತು ಜನರಿಗಾಗಿ ಕೆಲಸ ಮಾಡಲು ಅಧಿಕಾರ ಬೇಕು 
– ನರೇಂದ್ರ ಮೋದಿ, ಪ್ರಧಾನಿ 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು