ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಡಿಯೂರಪ್ಪ ಪ್ರಮಾಣ ವಚನಕ್ಕೆ ತಡೆ ಕೋರಿ ಸಲ್ಲಿಸಿದ್ದ ಅರ್ಜಿ: ಹಸ್ತಕ್ಷೇಪ ಸಾಧ್ಯವಿಲ್ಲ ಎಂದ ಸುಪ್ರೀಂ ಕೋರ್ಟ್‌

Last Updated 17 ಮೇ 2018, 1:59 IST
ಅಕ್ಷರ ಗಾತ್ರ

ನವದೆಹಲಿ: ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನಕ್ಕೆ ತಡೆ ಕೋರಿ ಕಾಂಗ್ರೆಸ್ ಮತ್ತು ಜೆಡಿಎಸ್‌ ಪಕ್ಷ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಬುಧವಾರ ಮಧ್ಯರಾತ್ರಿ ವಿಚಾರಣೆ ನಡೆಸಿದ್ದು ರಾಜ್ಯಪಾಲರ ಕರ್ತವ್ಯದಲ್ಲಿ ಕೋರ್ಟ್ ಹಸ್ತಕ್ಷೇಪ ಸಾಧ್ಯವಿಲ್ಲ ಎಂದು ಸುಪ್ರೀಕೋರ್ಟ್ ಅಭಿಪ್ರಾಯಪಟ್ಟಿದೆ.   

ಕರ್ನಾಟಕದಲ್ಲಿ ಸರ್ಕಾರ ರಚಿಸಲು ಬಿಜೆಪಿಗೆ ಆಹ್ವಾನ ನೀಡಿರುವ ರಾಜ್ಯಪಾಲರ ನಿರ್ಧಾರ ವಿರುದ್ಧ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್‌ ಬುಧವಾರ ಮಧ್ಯರಾತ್ರಿ ನಡೆಸಿತು.

ಸುಪ್ರೀಂ ಕೋರ್ಟ್‌ನ ಕೊಠಡಿ ಸಂಖ್ಯೆ 6ರಲ್ಲಿ ಮಧ್ಯರಾತ್ರಿ 1.45ಕ್ಕೆ ನ್ಯಾಯಮೂರ್ತಿಗಳಾದ  ಎ.ಕೆ.ಸಿಕ್ರಿ, ಎಸ್.ಎ. ಬೋಬ್ಡೆ  ಹಾಗೂ ಅಶೋಕ್ ಭೂಷಣ್‌ ಅವರಿದ್ದ ನ್ಯಾಯಪೀಠ ಕಾಂಗ್ರೆಸ್ ಮತ್ತು ಜೆಡಿಎಸ್‌ ಸಲ್ಲಿಸಿದ್ದ ಅರ್ಜಿಯ ವಿಚಾಣೆ ನಡೆಸಿತು.

ರಾಜ್ಯಪಾಲ ವಜುಭಾಯಿ ವಾಲಾ ಅವರು ಬಿಜೆಪಿಗೆ ಸರ್ಕಾರ ರಚನೆಗೆ ಅವಕಾಶ ನೀಡಿರುವುದನ್ನು ಪ್ರಶ್ನಿಸಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪರವಾಗಿ ಹಿರಿಯ ವಕೀಲ ಮತ್ತು ಕಾಂಗ್ರೆಸ್‌ ಮುಖಂಡ ಅಭಿಷೇಕ್‌ ಮನು ಸಿಂಘ್ವಿ ಬುಧವಾರ ರಾತ್ರಿ ಅರ್ಜಿ ಸಲ್ಲಿಸಿದ್ದರು. ಬಿ.ಎಸ್‌. ಯಡಿಯೂರಪ್ಪ ಅವರು ಗುರುವಾರ ಬೆಳಿಗ್ಗೆ 9ಕ್ಕೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವುದರಿಂದ ರಾತ್ರಿಯೇ ಈ ಅರ್ಜಿಯ ವಿಚಾರಣೆ ನಡೆಸಬೇಕು ಎಂದು ಕೋರಿದರು.

117 ಶಾಸಕರ ಬೆಂಬಲವಿದ್ದರೂ ರಾಜ್ಯಪಾಲರು ಜೆಡಿಎಸ್‌–ಕಾಂಗ್ರೆಸ್‌ ಕಡೆಗಣಿಸಿ 104 ಶಾಸಕರನ್ನು ಹೊಂದಿರುವ ಬಿಜೆಪಿಯನ್ನು ಸರ್ಕಾರ ರಚಿಸಲು ಆಹ್ವಾನ ನೀಡಿದ್ದಾರೆ. ಜತೆಗೆ ಬಹುಮತ ಸಾಬೀತುಪಡಿಸಲು ಸುದೀರ್ಘ 15 ದಿನಗಳ ಕಾಲಾವಕಾಶ ನೀಡಿದ್ದಾರೆ. ಹೀಗಾಗಿ, ರಾಜ್ಯಪಾಲರ ನಿರ್ಧಾರವನ್ನು ರದ್ದುಪಡಿಸಿ ಸರ್ಕಾರ ರಚಿಸಲು ಜೆಡಿಎಸ್‌–ಕಾಂಗ್ರೆಸ್‌ಗೆ ಆಹ್ವಾನ ನೀಡಬೇಕು ಎಂದು ಅರ್ಜಿಯಲ್ಲಿ ಕೋರಿದ್ದರು.

ರಾತ್ರಿಯೇ ಸುಪ್ರೀಂಕೋರ್ಟ್‌ ರಿಜಿಸ್ಟ್ರಾರ್‌ ಅವರನ್ನು ಭೇಟಿಯಾಗಿದ್ದ ಸಿಂಘ್ವಿ ಅವರು ಈ ಬಗ್ಗೆ ತಕ್ಷಣದ ವಿಚಾರಣೆ ನಡೆಸಬೇಕು ಎಂದು ಸಿಂಘ್ವಿ ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT