ಶುಕ್ರವಾರ, ಮಾರ್ಚ್ 5, 2021
29 °C
ಕಾರ್ಯಕರ್ತರು, ಪದಾಧಿಕಾರಿಗಳ ತರಬೇತಿ ಕೈಪಿಡಿಯಲ್ಲಿ ಆರೋಪ

ಮಾವೋವಾದಿಗಳು, ಬಲವಂತದ ಮತಾಂತರದಿಂದ ದೇಶಕ್ಕೆ ಅಪಾಯ: ಬಿಜೆಪಿ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಭಾರತದಲ್ಲಿರುವ ಮಾವೋವಾದಿಗಳಿಗೆ ಪಾಕಿಸ್ತಾನ ಮತ್ತು ಚೀನಾದಿಂದ ನಿರಂತರವಾಗಿ ಬೆಂಬಲ ದೊರೆಯುತ್ತಿದೆ. ಹಾಗಾಗಿ ಮಾವೋವಾದಿಗಳಿಂದ ದೇಶದ ಆಂತರಿಕ ಭದ್ರತೆಗೆ ಬಹುದೊಡ್ಡ ಅಪಾಯವಿದೆ ಎಂದು ಬಿಜೆಪಿ ಕಾರ್ಯಕರ್ತರು ಮತ್ತು ಪದಾಧಿಕಾರಿಗಳ ತರಬೇತಿಗಾಗಿ ಸಿದ್ಧಪಡಿಸಿದ ಕೈಪಿಡಿಯಲ್ಲಿ ಹೇಳಲಾಗಿದೆ.

ಈಶಾನ್ಯ ರಾಜ್ಯಗಳಲ್ಲಿ ಸಕ್ರಿಯವಾಗಿರುವ ಭಯೋತ್ಪಾದಕ ಸಂಘಟನೆಗಳ ಬೆಂಬಲದಲ್ಲಿ ದಾಳಿ ನಡೆಸಲು ಮಾವೋವಾದಿಗಳು ಅಥವಾ ನಕ್ಸಲರು ಪಿತೂರಿ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ ಎಂದೂ ಈ ಕೈಪಿಡಿಯಲ್ಲಿ ಇದೆ. 

ಬಲವಂತದ ಮತಾಂತರ ಕೂಡ ದೊಡ್ಡ ಆಂತರಿಕ ಸವಾಲು ಎಂದು ಕೈಪಿಡಿಯಲ್ಲಿ ವಿವರಿಸಲಾಗಿದೆ. ದೇಶದ ಜನಸಂಖ್ಯೆಯ ಸ್ವರೂಪವನ್ನೇ ಬದಲಾಯಿಸಲು ಹಲವು ವರ್ಷಗಳಿಂದ ಪ್ರಯತ್ನಿಸಲಾಗುತ್ತಿದೆ. ಜಿಹಾದಿ ಮತ್ತು ಮಸೀಹಿ ಎಂಬ ಹೆಸರಿನಲ್ಲಿ ಈ ಕೆಲಸ ಮಾಡಲಾಗುತ್ತಿದೆ. ಮತಾಂತರದಲ್ಲಿ ತೊಡಗಿರುವ ಕೆಲವು ಕ್ರೈಸ್ತ ಗುಂಪುಗಳಿಗೆ ಹಣ ಮತ್ತು ತೋಳ್ಬಲದ ಬೆಂಬಲವೂ ಇದೆ. ವಿದೇಶದ ಕೆಲವು ಸಂಸ್ಥೆಗಳು ನೆರವು ನೀಡುತ್ತಿವೆ ಎಂದು ವಿವರಿಸಲಾಗಿದೆ. 

‘ಕೆಲವು ರಾಜ್ಯಗಳಲ್ಲಿ ಮತಾಂತರ ಎಷ್ಟೊಂದು ವೇಗವಾಗಿ ನಡೆಯುತ್ತಿದೆ ಎಂದರೆ ಈ ರಾಜ್ಯದ ಜನಸಂಖ್ಯೆಯ ಸ್ವರೂಪ ಆಗಲೇ ಬದಲಾಗಿಬಿಟ್ಟಿದೆ. ಇದರಿಂದಾಗಿ ಈ ರಾಜ್ಯಗಳ ಜನರು ತೀವ್ರವಾಗಿ ಆಕ್ರೋಶಗೊಂಡಿದ್ದಾರೆ. ಅವರ ಸಿಟ್ಟು ಯಾವಾಗ ಬೇಕಿದ್ದರೂ ಸ್ಫೋಟಗೊಳ್ಳಬಹುದು’ ಎಂದು ಕೈಪಿಡಿಯಲ್ಲಿ ಹೇಳಲಾಗಿದೆ. 

ಬಲವಂತದ ಮತಾಂತರವು ಸಹೋದರತ್ವ ಮತ್ತು ಸಾಮಾಜಿಕ ಸಮನ್ವಯವನ್ನು ಹಾಳುಗೆಡವುತ್ತದೆ. ಮತಾಂತರಕ್ಕೆ ಕೆಲವು ಪಕ್ಷಗಳು ಬೆಂಬಲ ನೀಡುತ್ತಿವೆ ಎಂದೂ ಆರೋಪಿಸಲಾಗಿದೆ. 

ನಕ್ಸಲರ ಜತೆ ನಂಟು ಹೊಂದಿದ್ದಾರೆ ಎಂಬ ಕಾರಣಕ್ಕೆ ಕೆಲವು ಸಾಮಾಜಿಕ ಕಾರ್ಯಕರ್ತರನ್ನು ಮಹಾರಾಷ್ಟ್ರ ಪೊಲೀಸರು ಇತ್ತೀಚೆಗೆ ಬಂಧಿಸಿದ್ದಾರೆ. ಪೊಲೀಸರ ಕ್ರಮವನ್ನು ವಿರೋಧ ಪಕ್ಷಗಳು ಖಂಡಿಸಿವೆ. ಬಿಜೆಪಿ ಬೆಂಬಲಿಸಿದೆ. ಈ ವಿಚಾರ ಈಗ ದೇಶದಾದ್ಯಂತ ಚರ್ಚೆಯಾಗುತ್ತಿದೆ. 

 

 

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು