ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸ್ಟೆರ್‌ಲೈಟ್‌ ಘಟಕ ವಿಸ್ತರಣೆ ಕೈಬಿಟ್ಟಿಲ್ಲ’

ಕಾರ್ಖಾನೆ ಬೇರೆಡೆಗೆ ಸ್ಥಳಾಂತರಿಸಲು ಸಾಧ್ಯವೇ ಇಲ್ಲ: ವೇದಾಂತ
Last Updated 26 ಮೇ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ತಮಿಳುನಾಡಿನ ತೂತ್ತುಕುಡಿಯಲ್ಲಿರುವ ಸ್ಟೆರ್‌ಲೈಟ್‌ ತಾಮ್ರ ಸಂಸ್ಕರಣಾ ಘಟಕವನ್ನು ಪುನರಾರಂಭಿಸುವ ಇಚ್ಛೆಯನ್ನು ಈ ಕಂಪನಿಯ ಮಾತೃಸಂಸ್ಥೆ ವೇದಾಂತ ರಿಸೋರ್ಸಸ್‌ ಹೊಂದಿದೆ. ಹಾಗೆಯೇ ಕಾರ್ಖಾನೆಯನ್ನು ವಿಸ್ತರಿಸಿ ಉತ್ಪಾದನಾ ಸಾಮರ್ಥ್ಯವನ್ನು ದ್ವಿಗುಣಗೊಳಿಸುವ ಯೋಜನೆಯನ್ನು ಕಂಪನಿಯು ಕೈಬಿಟ್ಟಿಲ್ಲ ಎಂದು ವೇದಾಂತ ಕಂಪನಿಯ ಭಾರತದ ತಾಮ್ರ ವಹಿವಾಟು ವಿಭಾಗದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ರಾಮನಾಥ್‌ ಹೇಳಿದ್ದಾರೆ.

ಸ್ಟೆರ್‌ಲೈಟ್‌ ತಾಮ್ರ ಸಂಸ್ಕರಣಾ ಘಟಕವನ್ನು ಮುಚ್ಚಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಪೊಲೀಸರು ಮಂಗಳವಾರ ನಡೆಸಿದ ಗೋಲಿಬಾರ್‌ನಲ್ಲಿ 13 ಮಂದಿ ಮೃತಪಟ್ಟಿದ್ದರು. ಹಾಗಿದ್ದರೂ ಸ್ಟೆರ್‌ಲೈಟ್‌ ಘಟಕವನ್ನು ಮುಂದುವರಿಸುವ ಮತ್ತು ವಿಸ್ತರಿಸುವ ಯೋಜನೆಯನ್ನು ಕಂಪನಿಯು ಕೈಬಿಟ್ಟಿಲ್ಲ ಎಂದು ರಾಮನಾಥ್‌ ಸ್ಪಷ್ಟಪಡಿಸಿದ್ದಾರೆ.

ಕಾರ್ಖಾನೆಯು ಇರುವ ಪ್ರದೇಶದ ನೀರು ಮತ್ತು ಗಾಳಿ ಮಲಿನಗೊಂಡಿದೆ ಎಂದು ಇಲ್ಲಿನ ಜನರು ಆರೋಪಿಸುತ್ತಿದ್ದಾರೆ.

‘ಈ ಘಟಕವನ್ನು ಬೇರೊಂದು ಕಡೆಗೆ ಸ್ಥಳಾಂತರಿಸುವ ಸ್ಥಿತಿಯಲ್ಲಿ ನಾವು ಇಲ್ಲ. ಈಗ ಎದುರಾಗಿರುವ ಎಲ್ಲ ಅಡ್ಡಿಗಳನ್ನು ದಾಟುತ್ತೇವೆ. ಇದಕ್ಕೆ ಭಾರಿ ಪ್ರಯತ್ನ ಬೇಕಿದೆ ಎಂಬುದು ನಮಗೆ ಅರಿವಿದೆ. ಹಾಗಿದ್ದರೂ ಘಟಕ ಶೀಘ್ರವೇ ಪುನರಾರಂಭವಾಗಲಿದೆ’ ಎಂಬ ವಿಶ್ವಾಸವನ್ನು ರಾಮನಾಥ್‌ ವ್ಯಕ್ತಪಡಿಸಿದ್ದಾರೆ.

ತೂತ್ತುಕುಡಿಯಲ್ಲಿ ಅತಿ ಹೆಚ್ಚು ಮಾಲಿನ್ಯ ಉಂಟು ಮಾಡುವುದು ಸ್ಟೆರ್‌ಲೈಟ್‌ ಕಾರ್ಖಾನೆ ಎಂಬ ಭಾವನೆ ಜನರಲ್ಲಿ ಇದೆ. ಇದು ಬಹಳ ದೊಡ್ಡ ಕಾರ್ಖಾನೆ ಆಗಿರುವುದರಿಂದ ಜನರು ಹೀಗೆ ಭಾವಿಸಿದ್ದಾರೆ. ಕಾರ್ಖಾನೆಯ ಪುನರಾರಂಭಕ್ಕೆ ಸ್ಥಳೀಯರ ಬೆಂಬಲ ಅಗತ್ಯ ಎಂದು ರಾಮನಾಥ್‌ ಅಭಿಪ್ರಾಯಪಟ್ಟಿದ್ದಾರೆ.

ವಾರ್ಷಿಕ ನಿರ್ವಹಣಾ ಕೆಲಸಗಳಿಂದಾಗಿ ಕಾರ್ಖಾನೆಯನ್ನು ಮಾರ್ಚ್‌ನಿಂದಲೇ ಮುಚ್ಚಲಾಗಿದೆ. ಹಾಗೆಯೇ ಇದರ ಪರವಾನಗಿಯೂ ನವೀಕರಣಗೊಂಡಿಲ್ಲ.

ಆರೋಪ ಸುಳ್ಳು
ಪರವಾನಗಿ ಇಲ್ಲದೆಯೇ ಕಾರ್ಖಾನೆಯನ್ನು ಪುನರಾರಂಭಿಸಲು ಕಂಪನಿಯು ಸಿದ್ಧತೆ ನಡೆಸಿದೆ ಎಂಬ ಸುದ್ದಿ ಇತ್ತೀಚೆಗೆ ಹರಡಿತ್ತು. ಇದರಿಂದಾಗಿ ಕಾರ್ಖಾನೆಯ ವಿದ್ಯುತ್‌ ಸಂಪರ್ಕವನ್ನು ತಮಿಳುನಾಡು ಮಾಲಿನ್ಯ ನಿಯಂತ್ರಣ ಮಂಡಳಿಯು ಕಡಿತಗೊಳಿಸಿದೆ.

ಆದರೆ ಈ ಆರೋಪವನ್ನು ರಾಮನಾಥ್‌ ಅಲ್ಲಗಳೆದಿದ್ದಾರೆ. ನಿರ್ವಹಣೆ ಕೆಲಸವೇ ಪೂರ್ಣಗೊಂಡಿಲ್ಲ. ಹಾಗಿರುವಾಗ ಕಾರ್ಖಾನೆಯನ್ನು ಪುನರಾರಂಭಿಸುವುದು ಹೇಗೆ ಎಂದು ಅವರು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT