ಬಿಜೆಪಿ ವಿರೋಧಿ ಧೋರಣೆ: ಟ್ವಿಟ್ಟರ್, ಫೇಸ್‌ಬುಕ್‌ ವಿರುದ್ಧ ದೂರು

7

ಬಿಜೆಪಿ ವಿರೋಧಿ ಧೋರಣೆ: ಟ್ವಿಟ್ಟರ್, ಫೇಸ್‌ಬುಕ್‌ ವಿರುದ್ಧ ದೂರು

Published:
Updated:

ನವದೆಹಲಿ: ‘ಪ್ರಮುಖ ಸಾಮಾಜಿಕ ಮಾಧ್ಯಮ ಸಂಸ್ಥೆಗಳಾದ ಟ್ವಿಟ್ಟರ್‌ ಮತ್ತು ಫೇಸ್‌ಬುಕ್‌, ಬಲ ಪಂಥೀಯರ ಖಾತೆಗಳ ಬಗ್ಗೆ ನಕರಾತ್ಮಕ ಧೋರಣೆಯನ್ನು ಹೊಂದಿವೆ’ ಎಂದು ಬಿಜೆಪಿ ಬೆಂಬಲಿಗರು ಸಂಸತ್ತಿನ ಮಾಹಿತಿ ತಂತ್ರಜ್ಞಾನ ಸಮಿತಿಯ ಮುಖ್ಯಸ್ಥ ಅನುರಾಗ್‌ ಠಾಕೂರ್‌ ಅವರಿಗೆ ದೂರು ಸಲ್ಲಿಸಿದ್ದಾರೆ.

ಪ್ರಮುಖ ಸಾಮಾಜಿಕ ಮಾಧ್ಯಮ ಸಂಸ್ಥೆಗಳು ಬಲ ಪಂಥೀಯರ ಖಾತೆಗಳ ಮೇಲೆ ಯಾವ ರೀತಿ ವಿರೋಧದ ಧೋರಣೆ ತೋರಿಸುತ್ತಿದ್ದಾರೆ ಎನ್ನುವ ದಾಖಲೆಗಳನ್ನೂ ದೂರಿನೊಂದಿಗೆ ಸಲ್ಲಿಸಿದ್ದಾರೆ. ಜನವರಿ 26ರಂದು ಅವರು ನೀಡಿದ ದೂರು ಆಧರಿಸಿ ‘ದಿ ಪ್ರಿಂಟ್‌’ ವರದಿ ಮಾಡಿದೆ. 

ಯೂತ್‌ ಫಾರ್‌ ಸೋಷಿಯಲ್‌ ಮೀಡಿಯಾ ಡೆಮಾಕ್ರಸಿ ಸಮೂಹದ ಅಂಕಿತ್‌ ಜೈನ್‌, ‘ಟ್ಟಿಟ್ಟರ್‌ ಮತ್ತು ಫೇಸ್‌ಬುಕ್‌ಗಳು ತಮ್ಮ ನಿಯಂತ್ರಣ ನಿಯಮಗಳನ್ನು ಬಳಸಿಕೊಂಡು, ಬಲಪಂಥ ಬೆಂಬಲಿಸುವ ವ್ಯಕ್ತಿಗಳ ಖಾತೆಯ ವ್ಯಾಪ್ತಿಯನ್ನು (ರೀಚ್) ನಿರ್ಬಂಧಿಸುವುದು ಮತ್ತು ಟ್ರೆಂಡ್ಸ್‌ ಪಟ್ಟಿಯಲ್ಲಿ ತೆಗೆದು ಹಾಕುವುದು.. ಹೀಗೆ ವ್ಯವಸ್ಥಿತವಾಗಿ ನಮ್ಮ ವಾಕ್‌ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುತ್ತಿವೆ’ ಎಂದು ವಿವರಿಸಿದರು.

‘ಎಡ ಪಂಥೀಯರು ಹಾಗೂ ಕಾಂಗ್ರೆಸ್‌ ಹಿರಿಯ ನಾಯಕರು ಮಾಡಿರುವ ಆಕ್ರಮಣಕಾರಿ, ಅವ್ಯಾಚ್ಯ ಮತ್ತು ಬೆದರಿಕೆಯ ಟ್ವೀಟ್‌ಗಳನ್ನು ಮಾತ್ರ ಆ ಸಂಸ್ಥೆಗಳು ನಿರ್ಲಕ್ಷಿಸಿವೆ’ ಎಂದರು.

2014ರಲ್ಲಿ ಬಿಜೆಪಿ ಪರ ಸಾಮಾಜಿಕ ಮಾಧ್ಯಮದಲ್ಲಿ ಅಭಿಯಾನ ನಡೆಸಿದ್ದ ವಿಕಾಸ್‌ ಪಾಂಡೆ, ‘ಚುನಾವಣೆಗಳು ಹತ್ತಿರವಿರುವ ಈ ಸಂದರ್ಭದಲ್ಲಿ ಸಾಮಾಜಿಕ ಮಾಧ್ಯಮಗಳು ಪಕ್ಷಪಾತಿ ನಿಲುವುಗಳನ್ನು ಹೊಂದಿರದೆ ಜವಾಬ್ದಾರಿಯುತವಾಗಿ ನಡೆದುಕೊಳ್ಳುವುದು ಬಹಳ ಮುಖ್ಯ. ಈ ರೀತಿಯ ಘಟನೆಗಳು ಚುನಾವಣೆ ಮೇಲೆ ಪರಿಣಾಮ ಬೀರಬಹುದುದಾಗಿದೆ. ಇದು ಮುಕ್ತ ಮತ್ತು ನ್ಯಾಯಯುತ ಮತದಾನದ ಹಕ್ಕನ್ನು ಉಲ್ಲಂಘಿಸಿದಂತಾಗುತ್ತದೆ’ ಎಂದು ವಿವರಿಸಿದರು.

ಬಿಜೆಪಿಯವರ ಈ ಆರೋಪವನ್ನು ತಳ್ಳಿ ಹಾಕಿರುವ ಕಾಂಗ್ರೆಸ್‌ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ದಿವ್ಯಾ ಸ್ಪಂದನಾ (ರಮ್ಯಾ), ‘ಸಾಮಾಜಿಕ ಮಾಧ್ಯಮ ಸಂಸ್ಥೆಗಳು ನಮ್ಮ ಪಕ್ಷದ ಪರವಾಗಿ ಯಾವುದೇ ಒಲವನ್ನು ತೋರಿಸಿಲ್ಲ. ಬಿಜೆಪಿ ಬೆಂಬಲಿಗರು ಈ ರೀತಿ ಸುಳ್ಳು ಸುದ್ದಿ ಹುಟ್ಟಿಸುತ್ತಿರುವುದಲ್ಲದೇ, ತನ್ನ ಪಾಡಿಗೆ ಕೆಲಸ ಮಾಡುತ್ತಿರುವ ಟ್ವಿಟರ್‌ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ’ ಎಂದು ಹೇಳಿದರು. 

‘ನಾವು ಕೆಲವು ನಿಯಮಗಳನ್ನು ರೂಪಿಸಿಕೊಂಡಿದ್ದೇವೆ. ಈ ನಿಯಮಗಳನ್ನು ಜಾರಿಗೊಳಿಸುವ ಸಂಬಂಧ ಜವಾಬ್ದಾರಿಯುತವಾದ ಒಂದು ಜಾಗತಿಕ ತಂಡ ಕೆಲಸ ಮಾಡುತ್ತಿದೆ ಮತ್ತು ಈ ತಂಡ ಯಾವುದೇ ಒಂದು ಪಂಥ ಧೋರಣೆ, ರಾಜಕೀಯ ದೃಷ್ಟಿಕೋನದ ಆಧಾರದ ಮೇಲೆ ನಿರ್ಧಾರ ಕೈಗೊಳ್ಳುವುದಿಲ್ಲ. ಯಾವುದೇ ಹಿತಾಸಕ್ತಿ ಇಲ್ಲದೆ, ಎಲ್ಲರಿಗೂ ಒಂದೇ ರೀತಿ ನಿಯಮಗಳನ್ನು ನಾವು ಜಾರಿ ಮಾಡುತ್ತೇವೆ’ ಎಂದು ಟ್ವಿಟ್ಟರ್‌ ವಕ್ತಾರ ಸ್ಪಷ್ಟಪಡಿಸಿದರು.

ಬರಹ ಇಷ್ಟವಾಯಿತೆ?

 • 12

  Happy
 • 5

  Amused
 • 0

  Sad
 • 1

  Frustrated
 • 3

  Angry

Comments:

0 comments

Write the first review for this !