ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಲಸ ನಿರ್ಲಕ್ಷಿಸಿದರೆ ಕ್ರಿಮಿನಲ್ ಮೊಕದ್ದಮೆ

ಚುನಾವಣೆಗೆ ನಿಯೋಜಿತ ಅಧಿಕಾರಿ, ಸಿಬ್ಬಂದಿಗೆ ಚುನಾವಣಾಧಿಕಾರಿ ಡಾ.ವೆಂಕಟೇಶ್ ಎಂ.ವಿ. ಖಡಕ್‌ ಎಚ್ಚರಿಕೆ
Last Updated 5 ಏಪ್ರಿಲ್ 2018, 9:09 IST
ಅಕ್ಷರ ಗಾತ್ರ

ಹಾವೇರಿ: ಆದ್ರೆ ಆಗ್ಲಿ, ಹೋದ್ರೆ ಹೋಗ್ಲಿ, ಚಲ್ತಾ ಹೈ... ಎಂದು ಅಂದುಕೊಂಡು ಯಾರೇ ಕರ್ತವ್ಯ ನಿರ್ಲಕ್ಷಿಸಿದರೂ, ಅಮಾನತು ಮಾಡಿ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು ಎಂದು ಚುನಾವಣೆ ನಿಯೋಜಿತ ಅಧಿಕಾರಿ, ಸಿಬ್ಬಂದಿಗೆ ಜಿಲ್ಲಾಧಿಕಾರಿ ಡಾ.ವೆಂಕಟೇಶ್‌ ಎಂ.ವಿ. ಖಡಕ್ ಎಚ್ಚರಿಕೆ ನೀಡಿದರು. ಮಾದರಿ ನೀತಿ ಸಂಹಿತೆ ಜಾರಿ ಕುರಿತು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಿಯೋಜಿತ ಚುನಾವಣಾಧಿಕಾರಿಗಳು, ಸಹಾಯಕ ಚುನಾವಣಾಧಿಕಾರಿಗಳು, ಮಾದರಿ ನೀತಿ ಸಂಹಿತೆ ನಿಗಾ ಸಮಿತಿ, ಸ್ಥಿರ ಕಣ್ಗಾವಲು ತಂಡ, ಫ್ಲೈಯಿಂಗ್ ಸ್ಕ್ವಾಡ್, ಸ್ಥಿರ ವಿಚಕ್ಷಣಾ ತಂಡಗಳು ಸೇರಿದಂತೆ ವಿವಿಧ ಕಾರ್ಯ ಪಡೆಗಳ ಅಧಿಕಾರಿಗಳ ಸಭೆ ಹಾಗೂ ತಾಲ್ಲೂಕು ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದ ಅವರು ಎಚ್ಚರಿಕೆ ನೀಡಿದರು.

‘ನೀತಿ ಸಂಹಿತೆ ಉಲ್ಲಂಘನೆ ಬಗ್ಗೆ ಅಧಿಕಾರಿಗಳು ಗರಿಷ್ಠ ಎಚ್ಚರಿಕೆ ವಹಿಸಬೇಕು. ಚುನಾವಣಾ ಆಯೋಗದ ನಿರ್ದೇಶನದಂತೆ ಪ್ರತಿಯೊಬ್ಬರು ತಮ್ಮ ಕರ್ತವ್ಯಗಳನ್ನು ನಿರ್ವಹಿಸಬೇಕು. ಪಲಾಯನವಾದ ಸಹಿಸುವುದಿಲ್ಲ. ಚುನಾವಣೆ ಸಂಬಂಧಿಸಿದ ಕರ್ತವ್ಯ ಲೋಪಗಳಿಗೆ ಕ್ಷಮೆ ಇಲ್ಲ. ಸಬೂಬುಗಳಿಗೆ ಅವಕಾಶವಿಲ್ಲ. ನಿಮ್ಮ ಲೋಪದಿಂದ ಚುನಾವಣೆ ಅಕ್ರಮಗಳು ನಡೆದರೆ, ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ತಾಲ್ಲೂಕುವಾರು ದೂರು ಸ್ವೀಕಾರ ಕೇಂದ್ರ ಸ್ಥಾಪಿಸಬೇಕು. ಮಾಧ್ಯಮಗಳ ಮೂಲಕ ವ್ಯಾಪಕ ಪ್ರಚಾರ ನೀಡಬೇಕು. ಕ್ಷೇತ್ರ ಚುನಾವಣಾಧಿಕಾರಿಗಳು ಕಾಲಕಾಲಕ್ಕೆ ಮಾಧ್ಯಮಗೋಷ್ಠಿ ನಡೆಸಿ ಮಾಹಿತಿಗಳನ್ನು ಪಸರಿಸಬೇಕು ಎಂದರು.ಮದ್ಯ , ಸೀರೆ, ಕುಕ್ಕರ್ ಮತ್ತಿತರ ಅಕ್ರಮ ದಾಸ್ತಾನುಗಳ ಬಗ್ಗೆ ತೀವ್ರ ನಿಗಾವಹಿಸಬೇಕು. ಸೆಕ್ಟರ್ ಅಧಿಕಾರಿಗಳು ಮತ್ತು ಫ್ಲೈಯಿಂಗ್ ಸ್ಕ್ವಾಡ್ ಈ ಕುರಿತು ಕ್ರಮ ವಹಿಸಬೇಕು ಎಂದರು.

ಮಾರ್ಗಸೂಚಿ ಸಲ್ಲಿಸಿ: ಕ್ಷೇತ್ರವಾರು ಮಾರ್ಗಸೂಚಿಗಳನ್ನು ತಯಾರಿಸಬೇಕು. ಮತಗಟ್ಟೆಗಳ ನಡುವಿನ ಅಂತರ, ಪ್ರಯಾಣದ ಸಮಯ, ಬೇಕಾದ ವಾಹನಗಳ ಕುರಿತು ತಕ್ಷಣವೇ ಮಾಹಿತಿ ಒದಗಿಸಬೇಕು ಎಂದು ಸೂಚಿಸಿದರು.

ಅಣಕು ಮತದಾನ: ಮತದಾನದ ಆರಂಭಕ್ಕೆ ಮೊದಲು ಪಕ್ಷಗಳ ಮತಗಟ್ಟೆ ಏಜೆಂಟ್‌ಗಳಿಗೆ ವಿದ್ಯುನ್ಮಾನ ಮತಯಂತ್ರ ಹಾಗೂ ವಿ.ವಿ.ಪ್ಯಾಟ್ ಕುರಿತು ಮಾಹಿತಿ ನೀಡಿ, ಅಣುಕು ಮತದಾನದ ಪ್ರಾತ್ಯಕ್ಷಿಕೆ ನೀಡಬೇಕು. ಈ ಕುರಿತ ಯಾವುದೇ ಲೋಪಕ್ಕೆ ನಿಮ್ಮನ್ನೇ ಹೊಣೆ ಮಾಡಲಾಗುವುದು ಎಂದು ಎಚ್ಚರಿಸಿದರು.

ಹೊಸ ಮತಗಟ್ಟೆ : ಮತಗಟ್ಟೆ ಕಟ್ಟಡ ಶಿಥಿಲಗೊಂಡಿದ್ದರೆ, ಮತದಾರರ ಸಂಖ್ಯೆ ಹೆಚ್ಚಾಗಿ ಸ್ಥಳವಕಾಶದ ಕೊರತೆ ಕಂಡುಬಂದರೆ ಹೊಸ ಮತಗಟ್ಟೆಯನ್ನು ಗುರುತಿಸಬೇಕು. ಮತಗಟ್ಟೆ ಸ್ಥಳ ಬದಲಾವಣೆ ಕುರಿತು ರಾಜಕೀಯ ಪಕ್ಷಗಳಿಗೆ ಹಾಗೂ ಮತದಾರರಿಗೆ ಮಾಹಿತಿ ನೀಡಬೇಕು ಎಂದು ಸೂಚಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಶಾಂತಾ ಹುಲ್ಮನಿ, ಮಾದರಿ ನೀತಿ ಸಂಹಿತೆ ಅಧಿಕಾರಿ ಸಿದ್ದು ಹುಲ್ಲೊಳ್ಳಿ, ಉಪವಿಭಾಗಾಧಿಕಾರಿ ಮಹೇಶ್ ಇದ್ದರು.

‘ಗುಂಪು ರಚಿಸಿಕೊಂಡು ಜಾಗೃತಿ ಮೂಡಿಸಿ’

‘ಜಿಲ್ಲೆಯಲ್ಲಿ ಕನಿಷ್ಠ ಶೇ 80ರಷ್ಟು ಮತದಾನವಾಗಬೇಕು. ಈ ನಿಟ್ಟಿನಲ್ಲಿ ಜಾಗೃತಿ ಕಾರ್ಯಕ್ರಮ ನಡೆಸಲು ಶಿಕ್ಷಕರು, ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತರು, ಸ್ವಯಂ ಸೇವಾ ಸಂಘಗಳು, ಬಿ.ಎಲ್.ಒ.ಗಳು ಸಕಾರಾತ್ಮಕ ಗುಂಪು ರಚಿಸಿಕೊಂಡು ಹೊಸ ಮತದಾರರ ನೋಂದಣಿ, ಮತದಾನದ ಮಹತ್ವ ಕುರಿತು ಜಾಗೃತಿ ಮೂಡಿಸಬೇಕು’ ಎಂದು ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಎಂ.ವಿ. ಹೇಳಿದರು.‘ದುರ್ಬಲರು, ಶೋಷಿತರು, ಅಂಗವಿಕಲರು ಮತದಾನದಲ್ಲಿ ಪಾಲ್ಗೊಳ್ಳುವಂತೆ ನಿರಂತರ ಸಭೆ, ಚರ್ಚೆಗಳ ಮೂಲಕ ಅರಿವು ಮೂಡಿಸಬೇಕು’ ಎಂದು ಸೂಚನೆ ನೀಡಿದರು.

**

ಪ್ರತಿ ತಹಶೀಲ್ದಾರ್ ಕಚೇರಿಯಲ್ಲಿ ಮತದಾರರ ಸೇವಾ ಕೇಂದ್ರ ತೆರೆದು ಮತಪಟ್ಟಿ ನೋಂದಣಿ, ಮತಗಟ್ಟೆ ವಿವರ ಸೇರಿದಂತೆ ಮತದಾರರ ಸಮಸ್ಯೆಗಳಿಗೆ ಸ್ಪಂದಿಸಬೇಕು – ಡಾ.ವೆಂಕಟೇಶ್ ಎಂ.ವಿ, ಜಿಲ್ಲಾಧಿಕಾರಿ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT