ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಧಾನಿಯೇ ಉತ್ತರಿಸಬೇಕಿಲ್ಲ: ಅಮಿತ್‌ ಶಾ

Last Updated 18 ಮೇ 2019, 4:16 IST
ಅಕ್ಷರ ಗಾತ್ರ

ನವದೆಹಲಿ: ‘ಈ ಬಾರಿ ದೇಶದ ಪ್ರಧಾನಿಯನ್ನು ಆಯ್ಕೆ ಮಾಡಲು ಚುನಾವಣೆ ನಡೆದಿದೆ. ನರೇಂದ್ರ ಮೋದಿ ಅವರೇ ಮುಂದಿನ ಪ್ರಧಾನಿ’ ಎಂದು ಅಮಿತ್‌ ಶಾ ಹೇಳಿದರು.

ಶುಕ್ರವಾರ ಪಕ್ಷದ ಕಚೇರಿಯಲ್ಲಿ ಆಯೋಜಿಸಿದ್ದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಶಾ, ‘ಸ್ವತಂತ್ರವಾಗಿ ಸರ್ಕಾರ ರಚಿಸಲು ಬೇಕಾಗುವಷ್ಟು ಸ್ಥಾನಗಳು ಬಿಜೆಪಿಗೆ ಲಭಿಸಲಿವೆ. ಈ ಬಾರಿ 300ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿಗಳು ಜಯಗಳಿಸಲಿದ್ದಾರೆ ಎಂದರು.

‘ಮೋದಿಯನ್ನು ಜನರು ಸ್ವೀಕರಿಸಿದ್ದಾರೆ. ಕೇಂದ್ರದಲ್ಲಿ ಮೋದಿ ನೇತೃತ್ವದಲ್ಲಿ ಬಿಜೆಪಿಯೇ ಸರ್ಕಾರ ರಚಿಸಲಿದೆ ಎಂಬ ಭರವಸೆಯನ್ನು ನಾನು ನೀಡುತ್ತೇನೆ. ಮೋದಿ ಸರ್ಕಾರವನ್ನು ರಚಿಸುವ ನಿಟ್ಟಿನಲ್ಲಿ ಜನರು ನಮಗಿಂತ ಹೆಚ್ಚು ಉತ್ಸಾಹ ತೋರಿಸಿದ್ದಾರೆ. ಇದೇ ಮೊದಲ ಬಾರಿಗೆ ಕಾಂಗ್ರೆಸ್ಸೇತರ ಪಕ್ಷವೊಂದು ತನ್ನ ಸಾಧನೆಗಳ ಆಧಾರದಲ್ಲೇ ಕೇಂದ್ರದಲ್ಲಿ ಮತ್ತೆ ಸರ್ಕಾರ ರಚಿಸಲಿದೆ’ ಎಂದು ಅಮಿತ್‌ ಶಾ ಹೇಳಿದರು.

ಹೊಸ ಪಕ್ಷಗಳ ನೆರವು ಪಡೆಯುವಿರಾ ಎಂಬ ಪ್ರಶ್ನೆಗೆ, ‘ನಮ್ಮ ಕಾರ್ಯಸೂಚಿಯನ್ನು ಒಪ್ಪಿಕೊಂಡು ಜೊತೆಗೆ ಬರುವವರನ್ನು ನಾವು ಯಾವತ್ತೂ ಸ್ವಾಗತಿಸುತ್ತೇವೆ’ ಎಂದರು.

ರಫೇಲ್‌ ಖರೀದಿ ವಿಚಾರದಲ್ಲಿ ಮೋದಿ ವಿರುದ್ಧ ಆರೋಪಗಳು ಬಂದಿವೆ. ಹೀಗಿದ್ದರೂ ಅವರು ಮೌನವಾಗಿರುವುದೇಕೆ ಎಂದು ಮಾಧ್ಯಮ ಪ್ರತಿನಿಧಿಯೊಬ್ಬರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಶಾ, ‘ಪ್ರತಿಯೊಂದು ಪ್ರಶ್ನೆಗೂ ಪ್ರಧಾನಿಯೇ ಉತ್ತರ ಕೊಡಬೇಕಾಗಿಲ್ಲ’ ಎಂದರು.

‘ರಫೇಲ್‌ ಕುರಿತು ಮುಕ್ತ ಚರ್ಚೆಗೆ ಬರಲು ಮೋದಿ ನಿರಾಕರಿಸುತ್ತಾರೆ’ ಎಂಬ ರಾಹುಲ್‌ ಆರೋಪವನ್ನು ಉಲ್ಲೇಖಿಸಿ, ‘ರಾಹುಲ್‌ ಅವರು ತಮ್ಮ ಬಳಿ ಇರುವ ಎಲ್ಲ ದಾಖಲೆಗಳೊಂದಿಗೆ ಸುಪ್ರೀಂ ಕೋರ್ಟ್‌ ಮೊರೆ ಹೋಗಬೇಕು. ಯುದ್ಧವಿಮಾನ ಖರೀದಿ ವಿಚಾರದಲ್ಲಿ ಒಂದಿಷ್ಟೂ ರಾಜಿಯಾಗಲಿ, ಪಕ್ಷಪಾತವಾಗಲಿ ಮಾಡಿಲ್ಲ’ ಎಂದರು.

ಮೋದಿ ಮತ್ತು ಶಾ ರಾಜಕೀಯ ಚರ್ಚೆಯನ್ನು ಕೀಳುಮಟ್ಟಕ್ಕಿಳಿಸಿದ್ದಾರೆ ಎಂಬ ವಿರೋಧಪಕ್ಷಗಳ ಆರೋಪಕ್ಕೆ ಪ್ರತಿಕ್ರಿಯೆ ನೀಡುತ್ತ, ‘ವಿರೋಧಪಕ್ಷಗಳವರಿಂದ ಬೇರೇನನ್ನು ನಿರೀಕ್ಷಿಸಲು ಸಾಧ್ಯ? ಬಿಜೆಪಿ ಯಾವತ್ತೂ ಅಂಥ ಕೆಲಸ ಮಾಡಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT