ಅಕ್ಕಿ, ಹೆಸರುಬೇಳೆ ಬಳಸಿ ವಿಶ್ವದಾಖಲೆ ಬರೆಯಲು ಹೊರಟಿದೆ ಬಿಜೆಪಿ

7

ಅಕ್ಕಿ, ಹೆಸರುಬೇಳೆ ಬಳಸಿ ವಿಶ್ವದಾಖಲೆ ಬರೆಯಲು ಹೊರಟಿದೆ ಬಿಜೆಪಿ

Published:
Updated:

ನವದೆಹಲಿ: ರಾಮಲೀಲಾ ಮೈದಾನದಲ್ಲಿ ಬಿಜೆಪಿ ಭಾನುವಾರ ‘ಭೀಮ್ ಮಹಾಸಂಗಮ್ ವಿಜಯ್ ಸಂಕಲ್ಪ್’ ರ‍್ಯಾಲಿ ಆಯೋಜಿಸಿದೆ. ರ‍್ಯಾಲಿಯಲ್ಲಿ ಪಾಲ್ಗೊಳ್ಳುವ ಕಾರ್ಯಕರ್ತರಿಗೆ ವಿತರಿಸಲೆಂದು 3 ಟನ್ (3000 ಕೆ.ಜಿ.) ಖಿಚಡಿ ಖಾದ್ಯ ತಯಾರಿಸುವ ಬಿಜೆಪಿಯ ಆಶಯ ಈಡೇರಿದರೆ ಅದೊಂದು ವಿಶ್ವದಾಖಲೆ ಆಗಲಿದೆ.

ದಲಿತರ ಮನೆಗಳಿಂದ ಸಂಗ್ರಹಿಸಿರುವ ಅಕ್ಕಿ ಮತ್ತು ಬೇಳೆಕಾಳುಗಳಿಂದ ಈ ಖಿಚಡಿ ತಯಾರಿಸಲಾಗುತ್ತದೆ ಎಂದು ಎಎನ್‌ಐ ಸುದ್ದಿಸಂಸ್ಥೆ ಟ್ವಿಟ್ ಮಾಡಿದೆ.

ಆಹಾರ ಸಂಸ್ಕರಣಾ ಉದ್ಯಮಗಳ ಇಲಾಖೆ ನವೆಂಬರ್ 2017ರಲ್ಲಿ ದೆಹಲಿಯಲ್ಲಿ ಆಯೋಜಿಸಿದ್ದ ವಿಶ್ವ ಆಹಾರ ಮೇಳದಲ್ಲಿ ಖ್ಯಾತ ಬಾಣಸಿಗ ಸಂಜೀವ್ ಕಪೂರ್ 918 ಕೆ.ಜಿ. ಖಿಚಡಿ ತಯಾರಿಸಿದ್ದರು. ಅತಿಹೆಚ್ಚು ಖಚಡಿ ತಯಾರಿಕೆಯಲ್ಲಿ ಇದು ಈವರೆಗಿನ ವಿಶ್ವದಾಖಲೆಯಾಗಿತ್ತು.

ಬಿಜೆಪಿ ಆಯೋಜಿಸಿರುವ ರ್‍ಯಾಲಿಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಮಾತನಾಡಲಿದ್ದಾರೆ. ದಲಿತರ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಏನೂ ಮಾಡುತ್ತಿಲ್ಲ ಎನ್ನುವ ಕಾಂಗ್ರೆಸ್‌ ಆರೋಪಗಳು ಚುರುಕು ಪಡೆದುಕೊಂಡಿರುವ ಬೆನ್ನಿಗೇ ಬಿಜೆಪಿ ಇಂಥದ್ದೊಂದು ರ‍್ಯಾಲಿ ಮತ್ತು ಖಿಚಡಿ ಸಾಹಸಕ್ಕೆ ಕೈಹಾಕಿರುವುದು ಕೇವಲ ಕಾಕತಾಳೀಯವಾಗಿರಲಾರದು.

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !