ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಡೀಪುರ: ರಾತ್ರಿ ವಾಹನ ಸಂಚಾರ ವಿರುದ್ಧ ರಾಹುಲ್‌ ಗಾಂಧಿಗೆ ಬಿಕೆಸಿ ಪತ್ರ

Last Updated 8 ನವೆಂಬರ್ 2019, 16:58 IST
ಅಕ್ಷರ ಗಾತ್ರ

ಬೆಂಗಳೂರು: ಜಗತ್ತಿನಲ್ಲೇ ಅತಿ ಹೆಚ್ಚು ಸಂಖ್ಯೆಯ ಹುಲಿಗಳ ವಾಸಸ್ಥಾನವಾಗಿರುವ ಬಂಡೀಪುರ ಕಾಡಿನ ನಡುವೆ ರಾತ್ರಿ ವಾಹನ ಸಂಚಾರ ಪುನರಾರಂಭಿಸಬೇಕು ಎಂಬ ಯಾವ ಒತ್ತಡಗಳಿಗೂ ಮಣಿಯಬಾರದು ಎಂದು ಕೋರಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರಿಗೆ ಮುಖಂಡ ಪ್ರೊ.ಬಿ.ಕೆ.ಚಂದ್ರಶೇಖರ್‌ ಪತ್ರ ಬರೆದಿದ್ದಾರೆ.

ಇದು ರಾಜಕೀಯ ಪಕ್ಷವೊಂದಕ್ಕೆ ಸಂಬಂಧಿಸಿದ ವಿಷಯವಲ್ಲ, ಇದು ಕರ್ನಾಟಕ ರಾಜ್ಯಕ್ಕೆ ಮಾತ್ರ ಸಂಬಂಧಿಸಿದ ವಿಷಯವೂ ಅಲ್ಲ. ನಶಿಸುತ್ತಿರುವ ಕಾಡು, ಅಪಾಯದಲ್ಲಿರುವ ವನ್ಯಜೀವಿಗಳ ಒಟ್ಟಾರೆ ಹಿತದೃಷ್ಟಿಯಿಂದ ನೋಡಿ, ರಾಜಕೀಯ ಹೊರತಾದ ಏಕಧ್ವನಿಯಿಂದ ಇದನ್ನು ಬಲವಾಗಿ ಪ್ರತಿಪಾದಿಸಬೇಕಾಗಿದೆ ಎಂದು ಹೇಳಿದ್ದಾರೆ.

ವಯನಾಡು ಲೋಕಸಭಾ ಕ್ಷೇತ್ರದ ಸದಸ್ಯರಾಗಿರುವ ರಾಹುಲ್‌ ಗಾಂಧಿ ಅವರ ಮೂಲಕ ಬಂಡೀಪುರ ಅರಣ್ಯದೊಳಗೆ ರಾತ್ರಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸುವಂತೆ ಕೇರಳ ಸರ್ಕಾರ ಒತ್ತಡ ಹಾಕುತ್ತಲೇ ಬಂದಿದೆ. ಈ ಹಿನ್ನೆಲೆಯಲ್ಲಿ ಪತ್ರಬರೆದು, ಒತ್ತಡಕ್ಕೆ ಮಣಿಯದಂತೆ ಮನವಿ ಮಾಡಿದ್ದಾರೆ.

‘ಅತಿಕ್ರಮಣದಿಂದ ಪಶ್ಚಿಮ ಘಟ್ಟದ ಅರಣ್ಯ ಪ್ರದೇಶಗಳು ಕ್ಷೀಣಿಸುತ್ತಿವೆ. ನಿಲಂಬೂರು– ನಂಜನಗೂಡು ರೈಲು ಮಾರ್ಗ, ಮೈಸೂರು– ತಲಚ್ಚೇರಿ ರೈಲು ಮಾರ್ಗ ನಿರ್ಮಾಣಕ್ಕೂ ಒತ್ತಡ ಹೆಚ್ಚುತ್ತಿದೆ. ಆದರೆ ಜಗತ್ತಿನ ಅತ್ಯಂತ ಸೂಕ್ಷ್ಮ ಪರಿಸರ ತಾಣವಾಗಿರುವ ಈ ಭಾಗದಲ್ಲಿ ಯಾವುದೇ ಅಭಿವೃದ್ಧಿ ಯೋಜನೆಗಳಿಗೆ ಅವಕಾಶ ಕಲ್ಪಿಸಬಾರದು. ಬದಲಿ ವ್ಯವಸ್ಥೆಯತ್ತ ಗಮನ ಹರಿಸಬೇಕು, ಮೂಕ ವನ್ಯಜೀವಿಗಳ ರಕ್ಷಣೆ ನಮ್ಮೆಲ್ಲರ ಹೊಣೆ’ ಎಂದು ಅವರು ವಿನಂತಿ ಮಾಡಿದ್ದಾರೆ.

ಇತಿಹಾಸದ ನೆನಪು: ಪಶ್ಚಿಮ ಘಟ್ಟದ ಅಮೂಲ್ಯ ನದಿಗಳ ಮೂಲವನ್ನು ಉಳಿಸಬೇಕಾದ ಅಗತ್ಯವನ್ನು ಪತ್ರದಲ್ಲಿ ಮನದಟ್ಟು ಮಾಡಿಕೊಟ್ಟಿರುವ ಚಂದ್ರಶೇಖರ್‌, 1976ರಲ್ಲಿ ಕೇರಳದ ಅಮೂಲ್ಯ ‘ಸೈಲೆಂಟ್‌ ವ್ಯಾಲಿ’ಯಲ್ಲಿ ನಡೆಸಲು ಉದ್ದೇಶಿಸಿದ್ದ ಅಭಿವೃದ್ಧಿ ಯೋಜನೆಗಳನ್ನು ಪ್ರಬಲ ಒತ್ತಡಗಳ ನಡುವೆಯೂ ತಡೆಹಿಡಿದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ದಿಟ್ಟ ಕ್ರಮಗಳನ್ನು ಉಲ್ಲೇಖಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT