ಕೇರಳ: ಕಾನ್ವೆಂಟ್‌ ಬಾವಿಯಲ್ಲಿ ಸನ್ಯಾಸಿನಿಯ ಶವ ಪತ್ತೆ

7

ಕೇರಳ: ಕಾನ್ವೆಂಟ್‌ ಬಾವಿಯಲ್ಲಿ ಸನ್ಯಾಸಿನಿಯ ಶವ ಪತ್ತೆ

Published:
Updated:
Deccan Herald

ಕೊಲ್ಲಂ: ಕೊಲ್ಲಂ ಜಿಲ್ಲೆಯ ಪತ್ತನಾಪುರಂ ಕಾನ್ವೆಂಟ್‌ನ ಬಾವಿಯಲ್ಲಿ 55 ವರ್ಷದ ಕ್ರೈಸ್ತ ಸನ್ಯಾಸಿನಿಯೊಬ್ಬರ ಮೃತದೇಹ ಭಾನುವಾರ ಪತ್ತೆಯಾಗಿದೆ.

ಸಂತ ಸ್ಟೀಫನ್ಸ್‌ ಶಾಲೆಯಲ್ಲಿ ಶಿಕ್ಷಕಿಯಾಗಿದ್ದ ಸನ್ಯಾಸಿನಿ ಸೂಸನ್‌ ಮ್ಯಾಥ್ಯೂ ಅವರ ಮೃತದೇಹ ಎಂದು ಗುರುತಿಸಲಾಗಿದೆ. ಬಾವಿ ಸಮೀಪದ ಕಂಬದ ಬಳಿ ಮತ್ತು ಅವರ ಕೊಠಡಿಯಲ್ಲಿ ರಕ್ತದ ಕಲೆಗಳಿರುವುದು ಪತ್ತೆಯಾಗಿದೆ.

‘ಸೂಸನ್‌ ಅವರು ಕೈಗಳಲ್ಲಿಸ್ವಯಂ ಗಾಯ ಮಾಡಿಕೊಂಡಿರುವುದು ಪತ್ತೆಯಾಗಿದೆ. ಎಡಗೈ ಕೊಯ್ದುಕೊಳ್ಳಲಾಗಿದೆ. ಬಲ ಮುಂಗೈನಲ್ಲಿ ಸಣ್ಣ ಗಾಯಗಳಾಗಿವೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಸೂಸನ್‌ ಅವರು ಖಿನ್ನತೆಯಿಂದ ಬಳಲುತ್ತಿದ್ದರು ಎಂದು ಸ್ಥಳೀಯ ವಾಹಿನಿಗಳು ಪ್ರಸಾರ ಮಾಡಿವೆ. ಪೊಲೀಸರು ಈ ವಿಷಯವನ್ನು ದೃಢಪಡಿಸಿಲ್ಲ.

ಎರಡು ದಶಕಗಳ ಹಿಂದೆ ಕೊಟ್ಟಾಯಂನಲ್ಲಿ ಕ್ಯಾಥೊಲಿಕ್‌ ಸನ್ಯಾಸಿನಿಯೊಬ್ಬರು ಇದೇ ರೀತಿ ಸಾವಿಗೀಡಾಗಿದ್ದು, ಕೇರಳದಲ್ಲಿ ವಿವಾದ ಸೃಷ್ಟಿಸಿತ್ತು. 1992ರ ಮಾರ್ಚ್‌ 27ರಂದು ನಡೆದ ಈ ಘಟನೆಯ ತನಿಖೆ ಕೈಗೊಂಡಿದ್ದ ಸ್ಥಳೀಯ ಪೊಲೀಸರು ಇದು ಆತ್ಮಹತ್ಯೆ ಪ್ರಕರಣ ಎಂದು ವರದಿ ನೀಡಿದ್ದರು. ಬಳಿಕ ತನಿಖೆ ನಡೆಸಿದ್ದ ಸಿಬಿಐ, ಇಬ್ಬರು ಪಾದ್ರಿಗಳನ್ನು ಕೊಲೆ ಆರೋಪದ ಮೇಲೆ 2008ರಲ್ಲಿ ಬಂಧಿಸಿತ್ತು.

ಕೊಚ್ಚಿ: ಕ್ರೈಸ್ತ ಸನ್ಯಾಸಿನಿಯೊಬ್ಬರ ಮೇಲೆ ನಡೆದಿರುವ ಅತ್ಯಾಚಾರ ಪ್ರಕರಣವನ್ನು ಮುಚ್ಚಿ ಹಾಕಲು ಹಿರಿಯ ಪೊಲೀಸ್‌ ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ ಎಂದು ಐವರು ಕ್ರೈಸ್ತ ಸನ್ಯಾಸಿನಿಯರು ದೂರಿದ್ದಾರೆ.

ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತೆ ಜತೆಯಲ್ಲಿ ಕೊಟ್ಟಾಯಂನ ಕಾನ್ವೆಂಟ್‌ನಲ್ಲಿ ಈ ಐವರು ಸನ್ಯಾಸಿನಿಯರು ಸೇವೆ ಸಲ್ಲಿಸುತ್ತಿದ್ದರು.

ಜಲಂಧರ್‌ನ ರೋಮನ್‌ ಕ್ಯಾಥೋಲಿಕ್‌ ಬಿಷಪ್‌ ಫ್ರಾಂಕೊ ಮುಲಕ್ಕಲ್‌ ಕ್ರೈಸ್ತ ಸನ್ಯಾಸಿನಿ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಆರೋಪಿಸಲಾಗಿದೆ.

‘ಪ್ರಕರಣದ ತನಿಖೆಯನ್ನು ಅಪರಾಧ ವಿಭಾಗಕ್ಕೆ ಹಸ್ತಾಂತರಿಸುವ ಯತ್ನ ನಡೆದಿದೆ. ಇದರಿಂದ, ಉದ್ದೇಶಪೂರ್ವಕವಾಗಿ ತನಿಖೆ ವಿಳಂಬ ಮಾಡಿ, ಬಿಷಪ್‌ ಫ್ರಾಂಕೊ ಅವರನ್ನು ರಕ್ಷಿಸಲಾಗುತ್ತಿದೆ’ ಎಂದು ಕ್ರೈಸ್ತ ಸನ್ಯಾಸಿನಿಯರು ದೂರಿದರು. ‘ಡಿವೈಎಸ್ಪಿ ಕೆ. ಸುಭಾಷ್‌ ಅವರು ಕೈಗೊಂಡಿರುವ ತನಿಖೆಯ ಬಗ್ಗೆ ನಮಗೆ ಸಂಪೂರ್ಣ ವಿಶ್ವಾಸವಿದೆ. ಆದರೆ, ಹಿರಿಯ ಪೊಲೀಸ್‌ ಅಧಿಕಾರಿಗಳು ಮುಕ್ತ ಮತ್ತು ಪಾರದರ್ಶಕವಾಗಿ ತನಿಖೆ ಕೈಗೊಳ್ಳಲು ಅವರಿಗೆ ಅವಕಾಶ ನೀಡುತ್ತಿಲ್ಲ. ಬಿಷಪ್‌ ಅವರನ್ನು ವಶಕ್ಕೆ ಪಡೆಯಲು ಅಡ್ಡಿಯಾಗುತ್ತಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಪೊಲೀಸ್‌ ಅಧಿಕಾರಿಗಳು ಈ ಆರೋಪ ತಳ್ಳಿ ಹಾಕಿದ್ದಾರೆ. ‘ಅಪರಾಧ ವಿಭಾಗಕ್ಕೆ ಈ ಪ್ರಕರಣವನ್ನು ಹಸ್ತಾಂತರಿಸುವ ಬಗ್ಗೆ ಸದ್ಯಕ್ಕೆ ಯಾವುದೇ ನಿರ್ಧಾರಕೈಗೊಂಡಿಲ್ಲ’ ’ ಎಂದು ಡಿಜಿಪಿ ಲೋಕನಾಥ್‌ ಬೆಹೆರಾ ತಿರುವನಂತಪುರದಲ್ಲಿ ತಿಳಿಸಿದ್ದಾರೆ.

ಎರಡನೇ ದಿನಕ್ಕೆ ಪ್ರತಿಭಟನೆ: ಪೊಲೀಸರ ನಿರ್ಲಕ್ಷ್ಯ ಖಂಡಿಸಿ ಕ್ರೈಸ್ತ ಸನ್ಯಾಸಿನಿಯರು ನಡೆಸುತ್ತಿರುವ ಪ್ರತಿಭಟನೆ ಭಾನುವಾರ ಎರಡನೇ ದಿನಕ್ಕೆ ಕಾಲಿಟ್ಟಿದೆ. ವಿವಿಧ ಸಂಘಟನೆಗಳು ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿವೆ.

ಸಂತ್ರಸ್ತೆಯನ್ನು ನಿಂದಿಸಿದ ಶಾಸಕ ಪಿ.ಸಿ. ಜಾರ್ಜ್‌ ವಿರುದ್ಧ ದೂರು ನೀಡುವುದಾಗಿ ಪ್ರತಿಭಟನಕಾರರು ತಿಳಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !