ರಫೇಲ್‌ ಒಪ್ಪಂದದಲ್ಲಿ ₹ 45,000 ಕೋಟಿ ಅಕ್ರಮ: ಮಲ್ಲಿಕಾರ್ಜುನ ಖರ್ಗೆ ಆರೋಪ

7

ರಫೇಲ್‌ ಒಪ್ಪಂದದಲ್ಲಿ ₹ 45,000 ಕೋಟಿ ಅಕ್ರಮ: ಮಲ್ಲಿಕಾರ್ಜುನ ಖರ್ಗೆ ಆರೋಪ

Published:
Updated:

ನವದೆಹಲಿ: ‘ರಫೇಲ್ ಒಪ್ಪಂದವು ದೇಶದ ಅತ್ಯಂತ ದೊಡ್ಡ ಹಗರಣವಾಗಿದೆ. ಜಂಟಿ ಸಂಸದೀಯ ಸಮಿತಿಯನ್ನು ರಚಿಸಿ, ಆ ಮೂಲಕ ರಫೇಲ್ ಒಪ್ಪಂದದ ಬಗ್ಗೆ ತನಿಖೆ ನಡೆಸಬೇಕು’ ಎಂದು ಕಾಂಗ್ರೆಸ್ ಲೋಕಸಭೆಯಲ್ಲಿ ಒತ್ತಾಯಿಸಿದೆ.

‘ರಫೇಲ್‌ ಒಪ್ಪಂದದ ಮುಂದೆ ಬೋಫೋರ್ಸ್ ಹಗರಣ ಏನೇನೂ ಅಲ್ಲ’ ಎಂದು ಬಿಜೆಪಿ ನಾಯಕರಾದ ಯಶವಂತ್ ಸಿನ್ಹಾ ಮತ್ತು ಅರುಣ್ ಶೌರಿ ಆರೋಪಿಸಿದ್ದರು. ಈ ವಿಷಯವನ್ನು ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರಸ್ತಾಪಿಸಿದರು.

‘ಪ್ರತಿ ವಿಮಾನವನ್ನು ₹ 526 ಕೋಟಿ ವೆಚ್ಚದಲ್ಲಿ ಖರೀದಿಸಲು ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರ ಒಪ್ಪಂದ ಮಾಡಿಕೊಂಡಿತ್ತು. ಆದರೆ ಎನ್‌ಡಿಎ ಸರ್ಕಾರವು ಪ್ರತಿ ವಿಮಾನಕ್ಕೆ ₹ 1,600 ಕೋಟಿ ನೀಡುತ್ತಿದೆ. 36 ವಿಮಾನಗಳಿಗೆ ₹ 58,000 ಕೋಟಿ ನೀಡಲಾಗುತ್ತಿದೆ. ಇಡೀ ಒಪ್ಪಂದದಲ್ಲಿ ₹ 45,000 ಕೋಟಿ ಅಕ್ರಮ ನಡೆದಿದೆ’ ಎಂದು ಖರ್ಗೆ ಆರೋಪಿಸಿದರು.

‘ಇದು ಈವರೆಗೆ ಭಾರತದಲ್ಲಿ ನಡೆದ ಅತ್ಯಂತ ದೊಡ್ಡ ಹಗರಣವಾಗಿದೆ. ರಫೇಲ್ ಒಪ್ಪಂದದ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಸಂಸತ್ತು ಮತ್ತು ದೇಶದ ಜನತೆಯ ಹಾದಿತಪ್ಪಿಸುತ್ತಿದ್ದಾರೆ. ಹೀಗಾಗಿ ಈ ಒಪ್ಪಂದವನ್ನು ಜಂಟಿ ಸಂಸದೀಯ ಸಮಿತಿಯು ತನಿಖೆಗೆ ಒಳಪಡಿಸಬೇಕು’ ಎಂದು ಖರ್ಗೆ ಆಗ್ರಹಿಸಿದರು.

ಖರ್ಗೆ ಅವರು ಮಾತು ಮುಗಿಸುತ್ತಿದ್ದಂತೆ, ಕಾಂಗ್ರೆಸ್‌ ಸದಸ್ಯರು ಸದನದಲ್ಲಿ ಧರಣಿ ಆರಂಭಿಸಿದರು. ‘ರಫೇಲ್‌ ಒಪ್ಪಂದದ ತನಿಖೆ ನಡೆಸಬೇಕು’ ಮತ್ತು ‘ದೇಶದ ಹಾದಿತಪ್ಪಿಸುವುದನ್ನು ನಿಲ್ಲಿಸಿ ಮೋದಿ’ ಎಂದು ಕಾಂಗ್ರೆಸ್ ಸದಸ್ಯರು ಘೋಷಣೆ ಕೂಗಿದರು. ಧರಣಿ ತೀವ್ರವಾದ ಕಾರಣ ಕಲಾಪವನ್ನು ಎರಡು ಬಾರಿ ಮುಂದೂಡಲಾಯಿತು.
**
ಬಿಜೆಪಿ ವಿರುದ್ಧವೇ ತಿರುಗಿಬಿದ್ದ ಪಕ್ಷದ ನಾಯಕರು  
‘ರಫೇಲ್ ಒಪ್ಪಂದವನ್ನು ಮಾಡಿಕೊಳ್ಳುವಾಗ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರವು ದೇಶದ ಹಿತಾಸಕ್ತಿಯನ್ನು ಬಲಿಕೊಟ್ಟಿದೆ’ ಎಂದು ಬಿಜೆಪಿ ಮುಖಂಡರೇ ಸರ್ಕಾರದ ವಿರುದ್ಧ ತಿರುಗಿಬಿದ್ದಿದ್ದಾರೆ.

‘ಕಾಂಗ್ರೆಸ್ ಸರ್ಕಾರದ ಬೊಫೋರ್ಸ್‌ ಹಗರಣಕ್ಕಿಂತಲೂ ರಫೇಲ್ ಹಗರಣ ದೊದ್ಡದು. ರಫೇಲ್‌ ಹಗರಣದ ಮುಂದೆ ಬೊಫೋರ್ಸ್ ಹಗರಣ ಏನೇನೂ ಅಲ್ಲ’ ಎಂದು ಬಿಜೆಪಿಯ ಯಶವಂತ್ ಸಿನ್ಹಾ ಮತ್ತು ಅರುಣ್ ಶೌರಿ ಆರೋಪಿಸಿದ್ದಾರೆ. ಬೋಫೋರ್ಸ್ ಹಗರಣವನ್ನು ಬಯಲಿಗೆಳೆದವರಲ್ಲಿ ಶೌರಿ ಪ್ರಮುಖರು.

‘126 ರಫೇಲ್ ವಿಮಾನಗಳನ್ನು ಖರೀದಿಸಲು ಯುಪಿಎ ಸರ್ಕಾರ ಮುಂದಾಗಿತ್ತು. ಆದರೆ ಆ ಒಪ್ಪಂದವನ್ನು ರದ್ದು ಮಾಡಿ, ಅದೇ ಮೊತ್ತಕ್ಕೆ ಕೇವಲ 36 ವಿಮಾನಗಳನ್ನು ಖರೀದಿಸಲು ಎನ್‌ಡಿಎ ಸರ್ಕಾರ ಮುಂದಾಗಿದೆ. ದಿಢೀರ್‌ ಎಂದು ಇಡೀ ಒಪ್ಪಂದವನ್ನೇ ರದ್ದು ಮಾಡುವಂತ ಯಾವ ಲೋಪವೂ ಯುಪಿಎಯ ಒಪ್ಪಂದದಲ್ಲಿ ಇರಲಿಲ್ಲ. ಬೋಫೊರ್ಸ್‌ ಹಗರಣವನ್ನು ಬಯಲಿಗೆಳೆದವರಲ್ಲಿ ಒಬ್ಬನಾಗಿ ನಾನು ಈ ಮಾತು ಹೇಳುತ್ತಿದ್ದೇನೆ. ಈ ವಿಚಾರದಲ್ಲಿ ಎನ್‌ಡಿಎ ಸರ್ಕಾರ ತನ್ನ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿದೆ’ ಎಂದು ಅರುಣ್ ಶೌರಿ ಆರೋಪಿಸಿದ್ದಾರೆ.

‘ದರವನ್ನು ಬಹಿರಂಗಪಡಿಸಬಾರದು ಎಂಬ ಷರತ್ತು ಯುಪಿಎ ಮಾಡಿಕೊಂಡಿದ್ದ ಒಪ್ಪಂದದಲ್ಲಿ ಇರಲಿಲ್ಲ ಎಂದು ಕಾಂಗ್ರೆಸ್ ಹೇಳುತ್ತಿದೆ. ಆದರೆ ದರ ಬಹಿರಂಗಪಡಿಸಬಾರದು ಎಂದು ಒಪ್ಪಂದಲ್ಲಿ ಷರತ್ತು ಹಾಕಲಾಗಿದೆ, ಯುಪಿಎಯ ಒಪ್ಪಂದದಲ್ಲೂ ಈ ಷರತ್ತು ಇತ್ತು ಎಂದು ಸರ್ಕಾರ ಸಮರ್ಥನೆ ನೀಡುತ್ತಿದೆ. ಇದರಲ್ಲಿ ದೊಡ್ಡ ಅಕ್ರಮ ನಡೆದಿರುವಂತೆ ಕಾಣುತ್ತಿದೆ. ಮಹಾಲೇಖಪಾಲರು (ಸಿಎಜಿ) ರಫೇಲ್ ಒಪ್ಪಂದವನ್ನು ಪರಿಶೀಲಿಸಬೇಕು. ಮೂರು ತಿಂಗಳ ಒಳಗೆ ವರದಿ ನೀಡಬೇಕು ಎಂದು ನಾವು ಒತ್ತಾಯಿಸುತ್ತೇವೆ’ ಎಂದು ಯಶವಂತ ಸಿನ್ಹಾ ಹೇಳಿದ್ದಾರೆ.

‘ವಿಮಾನದ ದರಕ್ಕೆ ಸಂಬಂಧಿಸಿದಂತೆ ಬೇರೆ–ಬೇರೆ ಸಚಿವರು ಭಿನ್ನ–ಭಿನ್ನ ಹೇಳಿಕೆ ನೀಡಿದ್ದಾರೆ. ಇದರಿಂದ ಒಪ್ಪಂದದ ಬಗ್ಗೆ ಮತ್ತಷ್ಟು ಅನುಮಾನಗಳು ಮೂಡುತ್ತಿವೆ. ಹೀಗಾಗಿ ಒಪ್ಪಂದದ ವಿವರಗಳನ್ನು ಸರ್ಕಾರ ಬಹಿರಂಗಪಡಿಸಲೇಬೇಕು’ ಎಂದು ವಕೀಲ ಪ್ರಶಾಂತ್ ಭೂಷಣ್ ಆಗ್ರಹಿಸಿದ್ದಾರೆ.

‘ಯುಪಿಎ ಮಾಡಿಕೊಂಡಿದ್ದ ಒಪ್ಪಂದದ ಪ್ರಕಾರ ರಫೇಲ್‌ ವಿಮಾನಗಳನ್ನು ತಯಾರಿಸುವ ಗುತ್ತಿಗೆಯನ್ನು ಎಚ್‌ಎಎಲ್‌ಗೆ ನೀಡಬೇಕಿತ್ತು. ಆದರೆ ಯಾವ ಕಾರಣವನ್ನೂ ನೀಡದೆ ಎಚ್‌ಎಎಲ್‌ ಅನ್ನು ಗುತ್ತಿಗೆಯಿಂದ ಹೊರಗಿಡಲಾಯಿತು. ಬದಲಿಗೆ ಖಾಸಗಿ ಕಂಪನಿಯೊಂದಕ್ಕೆ ಗುತ್ತಿಗೆ ನೀಡಲಾಗಿದೆ. ಈ ಒಪ್ಪಂದದಲ್ಲಿ ಭಾರಿ ಅಕ್ರಮ ನಡೆದಿದೆ ಎಂಬುದನ್ನು ಈ ಅಂಶಗಳೆಲ್ಲವೂ ಒತ್ತಿ ಹೇಳುತ್ತಿವೆ’ ಎಂದು ಮೂವರು ನಾಯಕರೂ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದಾರೆ.
**

ಬೆಲೆಯಲ್ಲಿ ಭಾರಿ ಬದಲಾವಣೆ

₹ 526 ಕೋಟಿ
ಯುಪಿಎಯ ಒಪ್ಪಂದದ ಪ್ರಕಾರ ಪ್ರತಿ ವಿಮಾನದ ಬೆಲೆ 

₹ 715 ಕೋಟಿ 
ಮಾಜಿ ರಕ್ಷಣಾ ಸಚಿವ ಮನೋಹರ್ ಪರ್ರೀಕರ್ ಹೇಳಿದ್ದ ಅಂದಾಜು ಬೆಲೆ

₹ 1,319 ಕೋಟಿ 
ಡಸಾಲ್ಟ್ ಏವಿಯೇಷನ್ ಸಂಸ್ಥೆಯು ಕತಾರ್‌ ಮತ್ತು ಈಜಿಪ್ಟ್‌ಗೆ ಪ್ರತಿ ರಫೇಲ್ ವಿಮಾನಕ್ಕೆ ವಿಧಿಸಿರುವ ಬೆಲೆ

₹ 1,640 ಕೋಟಿ 
ಎನ್‌ಡಿಎ ಸರ್ಕಾರದ ಒಪ್ಪಂದದ ಒಟ್ಟು ಮೊತ್ತವನ್ನು ವಿಭಾಗಿಸಿದಾಗ ಪ್ರತಿ ವಿಮಾನಕ್ಕೆ ತಗಲುವ ವೆಚ್ಚ
***
ಪಕ್ಷದ ಉನ್ನತಿಗಾಗಿ ದೇಶದ ಹಿತಾಸಕ್ತಿ ಮತ್ತು ಭದ್ರತೆಯನ್ನು ಬಲಿಕೊಟ್ಟಿರುವುದಕ್ಕೆ ಹಾಗೂ ಅಧಿಕಾರ ದುರ್ಬಳಕೆಗೆ ರಫೇಲ್ ಒಪ್ಪಂದವು ಒಂದು ಸ್ಪಷ್ಟ ಉದಾಹರಣೆ
–ಅರುಣ್ ಶೌರಿ, ಬಿಜೆಪಿ ನಾಯಕ
*
ಎಚ್‌ಎಲ್‌ಗೆ ಸಿಗಬೇಕಿದ್ದ ಗುತ್ತಿಗೆಯನ್ನು ಕಸಿದುಕೊಂಡು, ವಿಮಾನ ತಯಾರಿಕೆಯಲ್ಲಿ ಅನುಭವವೇ ಇಲ್ಲದ ರಿಲಯನ್ಸ್‌ ಡಿಫೆನ್ಸ್‌ಗೆ ಗುತ್ತಿಗೆ ನೀಡಿದ್ದು ಏತಕ್ಕೆ?
–ಯಶವಂತ ಸಿನ್ಹಾ, ಬಿಜೆಪಿ ನಾಯಕ
*
ಬೊಫೋರ್ಸ್ ಹಗರಣದ ವಿರುದ್ಧ ಬಿಜೆಪಿ ಹೋರಾಡಿತ್ತು. ಅದೇ ರೀತಿ ರಫೇಲ್ ಹಗರಣದಲ್ಲಿ ಬಿಜೆಪಿ ವಿರುದ್ಧ ವಿರೋಧ ಪಕ್ಷಗಳೆಲ್ಲವೂ ಹೋರಾಡಬೇಕಿದೆ
–ಪ್ರಶಾಂತ್ ಭೂಷಣ್, ಸುಪ್ರೀಂ ಕೋರ್ಟ್ ವಕೀಲ
*
ರಫೇಲ್ ಒಪ್ಪಂದದ ಬಗ್ಗೆ ಇದ್ದ ಅನುಮಾನಗಳಿಗೆ ಸಂಸತ್ತಿನಲ್ಲೇ ಉತ್ತರ ನೀಡಲಾಗಿದೆ. ಈಗ ಇವರೆಲ್ಲಾ ಮಾಡುತ್ತಿರುವ ಆರೋಪಗಳಿಗೆ ಯಾವುದೇ ಆಧಾರಗಳಿಲ್ಲ
–ನಿರ್ಮಲಾ ಸೀತಾರಾಮನ್, ರಕ್ಷಣಾ ಸಚಿವೆ
*
ಯುದ್ಧವಿಮಾನ ತಯಾರಿಸುವ ಸಂಬಂಧ ರಕ್ಷಣಾ ಸಚಿವಾಲಯದ ಜತೆಗೆ ನಾವು ಒಪ್ಪಂದ ಮಾಡಿಕೊಂಡಿಲ್ಲ. ಫ್ರಾನ್ಸ್‌ನಿಂದಲೇ ಎಲ್ಲ ವಿಮಾನಗಳು ಬರುತ್ತವೆ
–ರಿಲಯನ್ಸ್ ಡಿಫೆನ್ಸ್

ಬರಹ ಇಷ್ಟವಾಯಿತೆ?

 • 11

  Happy
 • 0

  Amused
 • 0

  Sad
 • 2

  Frustrated
 • 2

  Angry

Comments:

0 comments

Write the first review for this !