ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್‌ಗೆ ಕ್ರೀಡಾ ಬಹಿಷ್ಕಾರ: ರಾಯ್‌ ಸಲಹೆ

Last Updated 24 ಫೆಬ್ರುವರಿ 2019, 20:00 IST
ಅಕ್ಷರ ಗಾತ್ರ

ನವದೆಹಲಿ: ಸರ್ಕಾರದ ವರ್ಣಭೇದ ನೀತಿ ವಿರೋಧಿಸಿ ದಕ್ಷಿಣ ಆಫ್ರಿಕಾ ತಂಡವನ್ನು ನಿಷೇಧಿಸಿದ್ದ ರೀತಿಯಲ್ಲೇ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿರುವ ಪಾಕಿಸ್ತಾನವನ್ನು ಕ್ರೀಡಾ ಸಮುದಾಯ ಏಕಾಂಗಿಗೊಳಿಸಬೇಕಾದ ಅಗತ್ಯವಿದೆ ಎಂದು ಬಿಸಿಸಿಐನ ಆಡಳಿತಾಧಿಕಾರಿಗಳ ಸಮಿತಿ ಮುಖ್ಯಸ್ಥ ವಿನೋದ್ ರಾಯ್ ಹೇಳಿದ್ದಾರೆ.

ಜೂನ್ 16ರಂದು ಪಾಕ್ ವಿರುದ್ಧ ನಡೆಯಲಿರುವ ವಿಶ್ವಕಪ್ ಕ್ರಿಕೆಟ್ ಪಂದ್ಯವನ್ನು ಬಹಿಷ್ಕರಿಸಬೇಕು ಎಂದು ಹೆಚ್ಚುತ್ತಿರುವ ಆಗ್ರಹದ ಹಿನ್ನೆಲೆಯಲ್ಲಿ ರಾಯ್ ಈ ಹೇಳಿಕೆ ನೀಡಿದ್ದಾರೆ.

‘ಕೇವಲ ಒಂದು ಪಂದ್ಯವನ್ನು ಬಹಿಷ್ಕರಿಸಿದರೆ ಸಾಲದು. ಇದನ್ನು ವಿಶಾಲ ದೃಷ್ಟಿಕೋನದಿಂದ ಅವಲೋಕಿಸಬೇಕಿದೆ. ಲೀಗ್ ಹಂತದ ಪಂದ್ಯ ಆಡದಿದ್ದರೂ, ಸೆಮಿಫೈನಲ್ ಅಥವಾ ಫೈನಲ್‌ನಲ್ಲಿ ಪಾಕ್ ವಿರುದ್ಧ ಭಾರತ ಆಡಬೇಕಾದ ಅನಿವಾರ್ಯತೆ ಎದುರಾಗಬಹುದು’ ಎಂದು ಅವರು ಹೇಳಿದ್ದಾರೆ.

ವರ್ಣಭೇದ ನೀತಿ ಕಾರಣ 1970ರಿಂದ 1991ರವರೆಗೆ ದಕ್ಷಿಣ ಆಫ್ರಿಕಾವನ್ನು ಆಟದಿಂದ ದೂರವಿರಿಸಲಾಗಿತ್ತು. ಇಂತಹ ಯತ್ನವನ್ನು ಪಾಕಿಸ್ತಾನದ ವಿರುದ್ಧವೂ ಮಾಡಬೇಕಾದ ಅಗತ್ಯವಿದೆ ಎಂದು ಅವರು ಅಭಿಪ್ರಾಯಟ್ಟಿದ್ದಾರೆ.

ಭಾರತ–ಪಾಕ್ ದ್ವಿ‍ಪಕ್ಷೀಯ ವ್ಯಾಪಾರ ಹೆಚ್ಚಳ:ಇಸ್ಲಾಮಾಬಾದ್ ವರದಿ: ಭಾರತ ಹಾಗೂ ಪಾಕಿಸ್ತಾನದ ನಡುವೆ ಉದ್ವಿಗ್ನತೆ ಉಂಟಾಗಿರುವ ಮಧ್ಯೆಯೇ ಉಭಯ ದೇಶಗಳ ವ್ಯಾಪಾರ ಶೇ 5ರಷ್ಟು ವೃದ್ಧಿ ದಾಖಲಿಸಿದೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.

ಜುಲೈ 2018–ಜನವರಿ 2019ರ ಅವಧಿಯ ದ್ವಿಪಕ್ಷೀಯ ವ್ಯಾಪಾರವು ₹8 ಸಾವಿರ ಕೋಟಿಗೆ ತಲುಪಿದ್ದು, ಶೇ 4.96ರಷ್ಟು ಬೆಳವಣಿಗೆ ಕಂಡಿದೆ.

ಪಾಕಿಸ್ತಾನಕ್ಕೆ ನೀಡಿದ್ದ ಹೆಚ್ಚು ಅನುಕೂಲಕರ ರಾಷ್ಟ್ರ (ಎಂಎಫ್‌ಎನ್) ಸ್ಥಾನವನ್ನು ಪುಲ್ವಾಮಾ ದಾಳಿಯ ಬಳಿಕ ಭಾರತ ಹಿಂಪಡೆದಿದೆ. ಅಲ್ಲದೇ ಪಾಕ್‌ನಿಂದ ಆಮದಾಗುವ ಸರಕುಗಳ ಮೇಲೆ ಶೇ 200ರಷ್ಟು ಸುಂಕ ವಿಧಿಸಿದೆ.

ಭಾರತದ ಮೇಲೆ 50 ಅಣುಬಾಂಬ್‌ ಹಾಕಲು ಸಿದ್ಧವೇ: ಮುಷರಫ್‌ ಪ್ರಶ್ನೆ

ಅಬುಧಾಬಿ: ಭಾರತದ ಮೇಲೆ ಒಂದು ಪರಮಾಣು ಬಾಂಬ್ ಎಸೆದರೆ, ನೆರೆದೇಶವು 20 ಬಾಂಬ್‌ಗಳನ್ನು ಎಸೆದು ಪಾಕಿಸ್ತಾನವನ್ನು ನಿರ್ನಾಮ ಮಾಡಲಿದೆ ಎಂದು ಪಾಕಿಸ್ತಾನದ ಮಾಜಿ ಅಧ್ಯಕ್ಷ ಜನರಲ್ ಪರ್ವೇಜ್ ಮುಷರಫ್ ಹೇಳಿದ್ದಾರೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.

ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಭಯ ದೇಶಗಳ ನಡುವೆ ಪರಿಸ್ಥಿತಿ ವಿಷಮವಾಗಿದೆ. ಪಾಕ್‌ನ ಒಂದು ಬಾಂಬ್‌ಗೆ ಭಾರತವು 20 ಬಾಂಬ್‌ಗಳಿಂದ ಉತ್ತರ ನೀಡುತ್ತದೆ. ಪಾಕಿಸ್ತಾನವು 50 ಬಾಂಬ್‌ಗಳನ್ನು ಹಾಕಿದರೆ ಭಾರತಕ್ಕೆ ಕಷ್ಟವಾಗಬಹುದು. ಒಮ್ಮೆಗೇ 50 ಬಾಂಬ್ ಎಸೆಯಲು ನೀವು ಸಿದ್ಧರಿದ್ದೀರಾ? ಎಂದು ಪಾಕಿಸ್ತಾನವನ್ನು ಅವರು ಪ್ರಶ್ನಿಸಿದ್ದಾರೆ.

ಬಹಾವಲ್ಪುರದ ಮದರಸಾ ಜೈಷ್‌ ಕಚೇರಿಯಲ್ಲ: ಪಾಕ್ ಉಲ್ಟಾ

ಲಾಹೋರ್: ಭಯೋತ್ಪಾದಕ ಸಂಘಟನೆ ಜೈಷ್‌–ಎ–ಮೊಹಮ್ಮದ್‌ಗೆ ಸೇರಿದೆ ಎಂಬ ಆರೋಪದ ಕಾರಣ ಬಹಾವಲ್ಪುರದ ಮದರಸಾವನ್ನು ವಶಕ್ಕೆ ಪಡೆದಿದ್ದ ಪಾಕಿಸ್ತಾನ ಸರ್ಕಾರ ಇದೀಗ ತನ್ನ ವರಸೆ ಬದಲಿಸಿದೆ. ಮದರಸಾಕ್ಕೂ ಜೈಷ್‌ಗೂ ಯಾವುದೇ ಸಂಬಂಧವಿಲ್ಲ ಎಂದಿದೆ.

ರಾಷ್ಟ್ರೀಯ ಭದ್ರತಾ ಮಂಡಳಿ ಸಭೆಯ ನಿರ್ಣಯದಂತೆ ಪಂಜಾಬ್ ಸರ್ಕಾರವು ಬಹಾವಲ್ಪುರದ ಮದರಸಾ ಸಾಬಿರ್ ಮತ್ತು ಜಾಮಿಯಾ–ಎ–ಮಸ್ಜಿದ್ ಸುಭಾನಲ್ಲಾ ಮೇಲೆ ಆಡಳಿತಾತ್ಮಕ ನಿಯಂತ್ರಣ ತೆಗೆದುಕೊಂಡಿದೆ ಎಂದು ಸಚಿವ ಫವಾದ್ ಚೌಧರಿ ಗುರುವಾರ ಹೇಳಿಕೆ ನೀಡಿದ್ದರು. ಲಾಹೋರ್‌ನಿಂದ 430 ಕಿಲೋಮೀಟರ್ ದೂರದಲ್ಲಿರುವ ಈ ಕಟ್ಟಡ ಸಂಕೀರ್ಣವು ಉಗ್ರ ಅಜರ್ ಮಸೂದ್‌ ನೇತೃತ್ವದ ಜೆಇಎಂ ಕೇಂದ್ರ ಕಚೇರಿ ಎಂದು ಪಾಕಿಸ್ತಾನ ಮೊದಲ ಬಾರಿಗೆ ಒಪ್ಪಿಕೊಂಡಿತ್ತು.

ಕಟ್ಟಡವು ಜೈಷ್ ಸಂಘಟನೆಯ ಕೇಂದ್ರ ಕಚೇರಿ ಎಂಬ ಆರೋಪವನ್ನು ಚೌಧರಿ ತಳ್ಳಿಹಾಕಿದ್ದಾರೆ. ಅದು ಜೈಷ್‌ನ ಕಚೇರಿ ಎಂದು ಭಾರತ ಸುಳ್ಳು ಪ್ರಚಾರ ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ.

ಈ ಮಧ್ಯೆ, ಮದರಸಾ ನಿರ್ವಹಣೆಗೆ ಇಬ್ಬರು ಆಡಳಿತಾಧಿಕಾರಿಗಳನ್ನು ಸರ್ಕಾರ ನೇಮಿಸಿದೆ.

ಬಿಕ್ಕಟ್ಟು ನಿರ್ವಹಣಾ ಘಟಕ ಸ್ಥಾಪನೆ:ಪುಲ್ವಾಮಾ ಘಟನೆಯಿಂದ ಭಾರತ–ಪಾಕಿಸ್ತಾನದ ನಡುವಿನ ಸಂಬಂಧ ಬಿಗಡಾಯಿಸಿರುವ ಕಾರಣ ‘ಬಿಕ್ಕಟ್ಟು ನಿರ್ವಹಣೆ ಘಟಕ’ವನ್ನು ಪಾಕಿಸ್ತಾನ ರಚಿಸಿದೆ. ವಿದೇಶಾಂಗ ಸಚಿವಾಲಯದ ವಕ್ತಾರ ಮಹಮ್ಮದ್ ಫೈಸಲ್ ಅವರ ಹೇಳಿಕೆಯನ್ನು ಉಲ್ಲೇಖಿಸಿ ದಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್ ಶನಿವಾರ ಈ ವರದಿ ಮಾಡಿದೆ.

ಪಾಕಿಸ್ತಾನದ ವಿದೇಶಾಂಗ ಸಚಿವಾಲಯದಲ್ಲಿ ಸ್ಥಾಪನೆಯಾಗಿರುವ ಈ ಘಟಕವು ಒಂದಿಷ್ಟೂ ಬಿಡುವು ತೆಗೆದುಕೊಳ್ಳದೆ ಇಡೀ ವಾರ ಕಾರ್ಯನಿರ್ವಹಿಸಲಿದೆ. ಗಡಿಯಲ್ಲಿನ ಪರಿಸ್ಥಿತಿ, ರಾಜತಾಂತ್ರಿಕ ಸಂಬಂಧಗಳ ಕುರಿತು ಸಂಬಂಧಿಸಿದವರ ಜೊತೆ ಇದು ನಿರಂತರವಾಗಿ ಮಾಹಿತಿ ಹಂಚಿಕೊಳ್ಳಲಿದೆ.

ಪುಲ್ವಾಮಾ ಘಟನೆ ಬಳಿಕ ಸೇನೆಗೆ ಪರಮಾಧಿಕಾರ ನೀಡಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದರು.

***

ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಅಕ್ರಮವಾಗಿ ನೆಲೆಸಿರುವವರನ್ನು ದೇಶದಿಂದ ಹೊರಗಟ್ಟುತ್ತೇವೆ

-ಅಮಿತ್ ಶಾ,ಬಿಜೆಪಿ ಅಧ್ಯಕ್ಷ

ಕರ್ಫ್ಯೂ ಹಾಗೂ ಇತರೆ ಸೇನಾ ಕ್ರಮಗಳ ಕುರಿತು ಹಬ್ಬುತ್ತಿರುವ ವದಂತಿಗಳನ್ನು ನಂಬಬೇಡಿ. ಭದ್ರತೆಗೆ ಸಂಬಂಧಿಸಿದ ಕೆಲವು ಕ್ರಮಗಳನ್ನು ಭದ್ರತಾ ಪಡೆಗಳು ತೆಗೆದುಕೊಳ್ಳುತ್ತಿವೆಯಷ್ಟೇ. ಇದು ಕೇವಲ ಪುಲ್ವಾಮಾ ದಾಳಿಗೆ ಮಾತ್ರ ಸಂಬಂಧಿಸಿದೆ. ಕಾಶ್ಮೀರದ ಜನರು ಕಣಿವೆಯಲ್ಲಿ ಶಾಂತಿ ಕಾಪಾಡಬೇಕು.

-ಸತ್ಯಪಾಲ್ ಮಲಿಕ್, ಜಮ್ಮು–ಕಾಶ್ಮೀರ ರಾಜ್ಯಪಾಲ

ಭಾರತ ಹಾಗೂ ಪಾಕಿಸ್ತಾನದಲ್ಲಿ ಕಲಾವಿದರಿಗೆ ನಿರ್ಬಂಧ ಹೇರುವುದರಿಂದ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ. ಯಾವುದೇ ರೀತಿಯ ಹಾನಿಯಾಗುವುದನ್ನು ಜಗತ್ತಿನ ಯಾವುದೇ ಕಲಾವಿದರು ಒಪ್ಪುವುದಿಲ್ಲ. ಸಂಗೀತಗಾರರು ಪ್ರೀತಿ ಮತ್ತು ಶಾಂತಿಯನ್ನು ಬಯಸುತ್ತಾರೆ ಮತ್ತು ಪಸರಿಸುತ್ತಾರೆ.

-ನೂಮನ್ ಜಾವಿದ್, ಪಾಕಿಸ್ತಾನದ ನಟ, ಸಂಗೀತಗಾರ

ಪಾಕಿಸ್ತಾನದಲ್ಲಿ ಹಿಂದಿ ಚಿತ್ರಗಳನ್ನು ಪ್ರದರ್ಶಿಸುವುದರಿಂದ ಬಾಲಿವುಡ್ ಭಾರಿ ದುಡ್ಡು ಗಳಿಸುತ್ತಿದೆ. ವರ್ಷಕ್ಕೆ 100 ಚಿತ್ರ ಬಿಡುಗಡೆಯಾಗುತ್ತವೆ. ಆದರೆ ಚಿತ್ರ ನಿರ್ಬಂಧ ನಿರ್ಧಾರದಿಂದ ಭಾರತೀಯ ಚಿತ್ರೋದ್ಯಮಕ್ಕೆ ಭಾರಿ ನಷ್ಟವಾಗಲಿದೆ.

-ಸೊಹೈಲ್ ಖಾನ್, ಪಾಕಿಸ್ತಾನದ ಚಿತ್ರೋದ್ಯಮಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT