ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನದಿಯಲ್ಲಿ ತೇಲಿ ಬಂದ ಬಾಲಕನ ದೇಹ ಕಂಡು ಕರಗಿತು ಭಾರತ–ಪಾಕ್ ಯೋಧರ ಮನ

Last Updated 12 ಜುಲೈ 2019, 10:42 IST
ಅಕ್ಷರ ಗಾತ್ರ

ಶ್ರೀನಗರ: ಪಾಕಿಸ್ತಾನದಿಂದ ಭಾರತದತ್ತ ಹರಿದುಬರುವ ಕಿಶನ್‌ಗಂಗಾ ನದಿಯಲ್ಲಿತೇಲಿ ಬಂದ ಏಳು ವರ್ಷದ ಬಾಲಕನ ಶವ ಎರಡೂ ದೇಶಗಳ ಯೋಧರು, ಸಾರ್ವಜನಿಕರು,ಅಧಿಕಾರಿಗಳು ಮತ್ತು ರಾಜಕಾರಣಿಗಳ ಮನಸ್ಸು ಕರಗುವಂತೆ ಮಾಡಿತು. ಭಾರತದ ಸೇನಾಧಿಕಾರಿಗಳ ತಂಡ ನೆಲಬಾಂಬ್‌ಗಳಿದ್ದ ಅಪಾಯಕಾರಿ ಪ್ರದೇಶದಿಂದ ಬಾಲಕನ ಶವವನ್ನು ಸುರಕ್ಷಿತವಾಗಿ ಗಡಿ ನಿಯಂತ್ರಣಾ ರೇಖೆಗೆ ತಂದು, ಪಾಕಿಸ್ತಾನದ ವಶಕ್ಕೆ ಒಪ್ಪಿಸಿತು.

ಬಾಲಕನ ಶವ ಹಸ್ತಾಂತರ ವಿಚಾರ ಕಳೆದ ಮೂರು ದಿನಗಳಿಂದ ಗಡಿ ನಿಯಂತ್ರಣ ರೇಖೆಯ ಎರಡೂ ಬದಿಯ ಹಳ್ಳಿಗಳಲ್ಲಿ ಚರ್ಚೆಯ ವಿಷಯವಾಗಿತ್ತು. ಗುರ್ಜ್‌ ಕಣಿವೆಯ ಅಖೂರ ಹಳ್ಳಿಯ ಜನರು ಈ ಎಲ್ಲ ಬೆಳವಣಿಗೆಗಳಿಗೂ ಸಾಕ್ಷಿಯಾಗಿದ್ದರು. ಗುರುವಾರ ಮಧ್ಯಾಹ್ನ ಬಾಲಕ ಆಬೀದ್‌ ಶೇಖ್‌ನ ಶವವನ್ನು ಪಾಕಿಸ್ತಾನ ಸೇನೆಗೆ ಒಪ್ಪಿಸಲಾಯಿತು.

‘ಇಂಥ ದೃಶ್ಯವನ್ನು ನನ್ನ ಜೀವಮಾನದಲ್ಲಿ ಇದೇ ಮೊದಲ ಬಾರಿಗೆ ನೋಡುತ್ತಿದ್ದೇನೆ’ ಎಂದು ಮಾಜಿ ಶಾಸಕ ನಾಜಿರ್ ಅಹಮದ್ ಗುರೇಜಿ ಕಣ್ತುಂಬಿಕೊಂಡರು.

ಅಖೂರ ಗ್ರಾಮಸ್ಥರು ಮಂಗಳವಾರ ಕಿಶನ್‌ಗಂಗಾ ನದಿಯಲ್ಲಿ ಶವವೊಂದು ತೇಲಿ ಬರುವುದನ್ನು ಗುರುತಿಸಿದ್ದರು. ಇದಾದ ಕೆಲವೇ ಗಂಟೆಗಳಲ್ಲಿ ‘ಮಗು ನಾಪತ್ತೆಯಾಗಿದೆ’ ಎನ್ನುವ ಪೋಸ್ಟ್‌ ಪಾಕ್ ಆಕ್ರಮಿತ ಕಾಶ್ಮೀರದಮಿಮಿಮಾರ್ಗ್ ಅಸ್ತೂರ್‌ ಗ್ರಾಮದ ಫೇಸ್‌ಬುಕ್ ಪುಟದಲ್ಲಿ ಕಾಣಿಸಿಕೊಂಡಿತ್ತು. ನಂತರ ಮಗು ಕಳೆದುಕೊಂಡ ಕುಟುಂಬ ಕಣ್ಣೀರು ಇಡುವ ದೃಶ್ಯಾವಳಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿದ್ದವು.

‘ಬಾಲಕನ ಶವ ಪತ್ತೆಯಾಗಿರುವ ವಿಷಯ ತಿಳಿದ ತಕ್ಷಣ ಪಾಕ್ ಸೇನೆಗೆ ಈ ವಿಷಯ ತಿಳಿಸುವಂತೆ ಸೇನಾಧಿಕಾರಿಗಳಿಗೆ ಬಂಡಿಪೊರ ಜಿಲ್ಲಾಧಿಕಾರಿ ಶಬಾದ್ ಮಿರ್ಝಾ ಸೂಚಿಸಿದರು. ಅಧಿಕಾರಿಗಳು ಅತ್ತ ಮುಂದೇನು ಮಾಡಬೇಕು ಎಂದು ಯೋಚಿಸುತ್ತಿರುವಾಗ, ಇತ್ತ ಅಖೂರ ಗ್ರಾಮಸ್ಥರನ್ನು ಮತ್ತೊಂದು ವಿಷಯ ಕಾಡುತ್ತಿತ್ತು.

ಬಾಲಕನ ಶವ ಕೊಳೆಯದಂತೆ ರಕ್ಷಿಸಿಡಲುಅಖೂರ ಸುತ್ತಮುತ್ತ ಎಲ್ಲಿಯೂ ಶವಾಗಾರ ಇಲ್ಲ. ಈವರೆಗೆ ಅಲ್ಲಿನ ಗ್ರಾಮಸ್ಥರಿಗೆ ಶವಾಗಾರದ ಅಗತ್ಯವೂ ಕಂಡುಬಂದಿರಲಿಲ್ಲ. ಬೆಟ್ಟದಿಂದ ಸಂಗ್ರಹಿಸಿದ ಮಂಜುಗಡ್ಡೆಗಳನ್ನುಬಾಲಕನ ಶವದ ಸುತ್ತಲೂ ಜೋಡಿಸಿಟ್ಟು, ಶವ ಕೊಳೆಯದಂತೆ ಕಾಪಾಡಿಕೊಂಡರು.

ಶವ ಕೊಳೆಯಬಹುದು ಎನ್ನುವ ಕಾರಣಕ್ಕೆ ಭಾರತೀಯ ಸೇನೆಯು ಗುರೆಝ್ ಸಮೀಪವೇ ಶವವನ್ನು ಪಾಕ್ ಸೇನೆಗೆ ಹಸ್ತಾಂತರಿಸಲು ಉದ್ದೇಶಿಸಿತ್ತು.ಆದರೆ ಪಾಕಿಸ್ತಾನದ ಅಧಿಕಾರಿಗಳು ಕುಪ್ವಾರಾ ಜಿಲ್ಲೆಯ ತೀತ್ವಾಲ್ ಸಮೀಪ ಇರುವ ಅಧಿಕೃತ ವಿನಿಮಯ ಠಾಣೆಯಲ್ಲಿ ಶವ ಸ್ವೀಕರಿಸುತ್ತೇವೆ ಎಂದರು. ಗುರೆಝ್ ಸುತ್ತಮುತ್ತ ನೆಲಬಾಂಬ್ ಹೂತಿರುವುದು ಪಾಕ್‌ ಸೇನೆಯ ಹಿಂಜರಿಕೆಗೆ ಮುಖ್ಯ ಕಾರಣವಾಗಿತ್ತು.

ಬುಧವಾರ ಸಂಜೆ ಕಳೆಯುತ್ತಾ ಬಂದರೂ ಪಾಕ್ ಸೇನೆ ತನ್ನ ಮನಸ್ಸು ಬದಲಿಸಲಿಲ್ಲ. ಶವದೊಂದಿಗೆ ಭಾರತದ ಅಧೀನದಲ್ಲಿರುವ ಕೊನೆಯ ಠಾಣೆಗೆ ಭೇಟಿ ನೀಡಿದ ಸೇನೆ ಮತ್ತು ನಾಗರಿಕ ಅಧಿಕಾರಿಗಳು, ಶವವನ್ನು ಮತ್ತೆ ವಾಪಸ್ ತಂದು ಗುರೆಝ್‌ನ ಆಸ್ಪತ್ರೆಯಲ್ಲಿ ಇರಿಸಿದರು.

ಗುರುವಾರ ಮುಂಜಾನೆಯ ಹೊತ್ತಿಗೆ ಪಾಕಿಸ್ತಾನ ಸೇನೆಯು ಶವವನ್ನು ಗುರೇಝ್ ಸಮೀಪವೇ ಸ್ವೀಕರಿಸಲು ಸಮ್ಮತಿ ಸೂಚಿಸಿತು. ಎರಡೂ ದೇಶದ ಅಧಿಕಾರಿಗಳು ಭೇಟಿಯಾಗುವ ಸ್ಥಳದಲ್ಲಿ ಸಾಕಷ್ಟು ನೆಲಬಾಂಬ್‌ಗಳಿದ್ದ ಕಾರಣ ಹೆಜ್ಜೆ ಮೇಲೆ ಹೆಜ್ಜೆ ಇರಿಸಿ ಭಾರತ ತಂಡ ಮುನ್ನಡೆಯಬೇಕಾಯಿತು. ಎರಡೂ ದೇಶಗಳ ಸೇನೆ ಮತ್ತು ನಾಗರಿಕ ಅಧಿಕಾರಿಗಳು ತಮ್ಮ ಹಮ್ಮುಬಿಮ್ಮು ಬದಿಗಿರಿಸಿ ಮೃತ ಬಾಲಕನ ಕುಟುಂಬದ ಕಣ್ಣೀರಿಗೆ ಮಿಡಿದರು.

‘ನಾವು ಬಾಲಕನ ದೇಹವನ್ನು ಮಧ್ಯಾಹ್ನ 12.40ರ ಸುಮಾರಿಗೆ ಪಾಕಿಸ್ತಾನ ಸೇನೆಗೆ ಹಸ್ತಾಂತರಿಸಿದೆವು. ಅವರು ಗುರುತು ಪರಿಶೀಲಿಸಿದ ನಂತರ ಸ್ವೀಕರಿಸಿದರು’ ಎಂದು ಭಾರತ ತಂಡದ ಸದಸ್ಯರೊಬ್ಬರು ಪ್ರತಿಕ್ರಿಯಿಸಿದರು.

‘ಪ್ರತಿಬಾರಿಯಂತೆ ಈ ಸಲ ನಾವು ಅಧಿಕೃತ ವಿನಿಮಯ ಠಾಣೆಯಿಂದ ಬಾಲಕನ ಶವ ಹಸ್ತಾಂತರಿಸಲಿಲ್ಲ. ಬಾಲಕನಶವವನ್ನು ಅದು ದೊರೆತ ಸ್ಥಳದ ಸಮೀಪವೇಪಾಕ್ ಸೇನೆಗೆ ಒಪ್ಪಿಸಿದೆವು. ಮಾನವೀಯತೆಯ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಯಿತು’ ಎಂದು ಶ್ರೀನಗರದಲ್ಲಿರುವ 15ನೇ ಕಾರ್ಪ್ಸ್‌ನ ಕಮಾಂಡಿಂಗ್ ಅಧಿಕಾರಿ ಲೆಫ್ಟಿನೆಂಟ್ ಜನರಲ್ಕೆ.ಜೆ.ಎಸ್.ಧಿಲ್ಲೊನ್ ಹೇಳಿದರು.

ಗುರೇಝ್‌ನಲ್ಲಿ ಇಂದಿಗೂ ಬಾಲಕ ಆದೀಬ್‌ನ ಬಗ್ಗೆ ಮಾತು ನಿಂತಿಲ್ಲ.ಬಾಲಕನ ಶವ ಪತ್ತೆಯಾದ ದಿನದಿಂದ ಗಡಿಯ ಆ ಬದಿ–ಈ ಬದಿಯ ಹಳ್ಳಿಗಳಲ್ಲಿ ಆದೀಬ್‌ ಕುರಿತು ಮರುಕ ಇತ್ತು. ಅವನ ಕುಟುಂಬಕ್ಕೆ ಶವ ಬೇಗನೇ ತಲುಪಬೇಕು ಎಂಬ ಭಾವನೆಯಿತ್ತು. ಗಡಿ ನಿಯಂತ್ರಣ ರೇಖೆಯು ವಿಭಜಿಸಿರುವ ಎರಡೂ ಹಳ್ಳಿಗಳನ್ನು ಆದೀಬ್‌ ಹತ್ತಿರಕ್ಕೆ ತಂದ. ಯುದ್ಧ ಮತ್ತು ರಕ್ತಪಾತದ ಕಹಿಯನ್ನು ಬಾಲಕನ ಶವ ಕೆಲ ದಿನಗಳ ಮಟ್ಟಿಗಾದರೂ ಮರೆಯುವಂತೆ ಮಾಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT