ಬುಧವಾರ, ನವೆಂಬರ್ 20, 2019
22 °C
ಭಾರತೀಯ ಕಬ್ಬು ಸಂಶೋಧನಾ ಸಂಸ್ಥೆ ವಾರ್ಷಿಕ ಸಭೆಯಲ್ಲಿ ಐಸಿಎಆರ್‌ ಸಹಾಯಕ ಮಹಾನಿರ್ದೇಶಕ ಡಾ. ಆರ್.ಕೆ.ಸಿಂಗ್

2030ರ ಹೊತ್ತಿಗೆ ಬ್ರಜಿಲ್ ಮಾದರಿಯ ಸಕ್ಕರೆ ಕಾರ್ಖಾನೆ

Published:
Updated:
Prajavani

ಧಾರವಾಡ: ‘ಕೇಂದ್ರ ಸರ್ಕಾರವು ನೂತನ ಸಕ್ಕರೆ ನೀತಿ ಜಾರಿಗೆ ತಂದಿದ್ದು, 2030ರ ಹೊತ್ತಿಗೆ ದೇಶದಲ್ಲಿ ಬ್ರಜಿಲ್‌ ಮಾದರಿಯ ಕಾರ್ಖಾನೆಗಳನ್ನು ಸ್ಥಾಪಿಸುವ ಗುರಿ ಹೊಂದಿದೆ’ ಎಂದು ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನ ವಾಣಿಜ್ಯ ಬೆಳೆಗಳ ಸಹಾಯಕ ಮಹಾನಿರ್ದೇಶಕ ಡಾ. ಆರ್‌.ಕೆ.ಸಿಂಗ್ ಹೇಳಿದರು.

ಭಾರತೀಯ ಕಬ್ಬು ಸಂಶೋಧನಾ ಸಂಸ್ಥೆ (ಐಐಎಸ್‌ಆರ್‌) ಹಾಗೂ ಭಾರತೀಯ ಕೃಷಿ ಅನುಸಂಧಾನ ಪರಿಷತ್ತು (ಐಸಿಎಆರ್‌) ಆಯೋಜಿಸಿದ್ದ ಮೂರು ದಿನಗಳ ವಾರ್ಷಿಕ ಸಭೆಯಲ್ಲಿ ಸೋಮವಾರ ಅವರು ಮಾತನಾಡಿದರು.

‘ಜಾಗತಿಕ ಮಾರುಕಟ್ಟೆಯಲ್ಲಿ ಸಕ್ಕರೆ ಧಾರಣೆ ಏರಿದರೆ, ಸಕ್ಕರೆ ಉತ್ಪಾದಿಸುವುದು, ಕುಸಿದರೆ ಎಥನಾಲ್ ಉತ್ಪಾದಿಸಿ ಆದಾಯ ಗಳಿಸುವುದು ಈ ತಂತ್ರಜ್ಞಾನದ ಉದ್ದೇಶ. ದೇಶದಲ್ಲಿ ಸದ್ಯ 50 ಲಕ್ಷ ಹೆಟ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆಯುತ್ತಿದ್ದು, ಇದರಿಂದ ಸುಮಾರು 380 ದಶಲಕ್ಷ ಟನ್‌ ಸಕ್ಕರೆ ಉತ್ಪಾದಿಸಲಾಗುತ್ತಿದೆ. ಕಬ್ಬು ಬೆಳೆಯುವ ಪ್ರದೇಶದಲ್ಲಿ ಮೂರು ಪಟ್ಟು ಹೆಚ್ಚಳ ಮತ್ತು ಇಳುವರಿಯಲ್ಲಿ ಎಂಟು ಪಟ್ಟು ಹೆಚ್ಚಳದಿಂದಾಗಿ 2030ರಲ್ಲಿ ನಿರೀಕ್ಷಿಸಿದ್ದ ಗುರಿಸಾಧನೆ 2019ರಲ್ಲೇ ಆಗಿದೆ’ ಎಂದರು.

‘ಉತ್ಪಾದನೆ ಹಚ್ಚಾಗಿದ್ದರಿಂದ ನೂತನ ನೀತಿಯನ್ನು ಜಾರಿಗೆ ತರಲಾಗಿದೆ. ಇದರನ್ವಯ ಈ ಮೊದಲಿನಂತೆ ಮೊಲಾಸಸ್‌ನಿಂದ ಎಥನಾಲ್ ಉತ್ಪಾದಿಸುವ ಬದಲು, ಕಬ್ಬಿನ ಹಾಲಿನಿಂದಲೇ ನೇರವಾಗಿ ಉತ್ಪಾದಿಸುವ ತಂತ್ರಜ್ಞಾನ ಅಳವಡಿಸಿಕೊಳ್ಳಲಾಗುವುದು. ಸದ್ಯ ಭಾರತವು ₹8.1ಲಕ್ಷ ಕೋಟಿ ಮೌಲ್ಯದ 220.6ದಶಲಕ್ಷ ಟನ್‌ನಷ್ಟು ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ. ಎಥನಾಲ್ ಉತ್ಪಾದನೆ ಹೆಚ್ಚಳದಿಂದ ಇಂಧನ ಆಮದು ಮೇಲಿನ ಹೊರೆ ತಗ್ಗಲಿದೆ. ಪೆಟ್ರೋಲ್‌ಗೆ ಶೇ 30ರಷ್ಟು ಎಥನಾಲ್‌ ಸೇರಿಸಿದಲ್ಲಿ ಶೇ 70ರಷ್ಟು ಕಚ್ಚಾ ತೈಲ ಆಮದು ಖರ್ಚು ಉಳಿಯಲಿದೆ’ ಎಂದು ಡಾ. ಸಿಂಗ್ ಹೇಳಿದರು.

‘ಈ ಸಾಧನೆಗೆ ಹವಾಮಾನ ವೈಪರೀತ್ಯದಲ್ಲಿ ಏರುಪೇರು, ದಕ್ಷಿಣ ಭಾರತದಲ್ಲಿನ ಅಕಾಲಿಕ ಮಳೆಯನ್ನು ಎದುರಿಸುವ ಸವಾಲು ಇದೆ. 2030ರ ಹೊತ್ತಿಗೆ 1.5ಡಿಗ್ರಿಯಷ್ಟು ಜಾಗತಿಕ ತಾಪಮಾನ ಏರುವ ಅಂದಾಜಿದೆ. ಆ ಹೊತ್ತಿಗೆ ಕಡಿಮೆ ನೀರು ಬಳಸಿ ಹೆಚ್ಚು ಇಳುವರಿ ನೀಡುವ ತಳಿಯನ್ನು ಅಭಿವೃದ್ಧಿಪಡಿಸಬೇಕಿದೆ. ಜತೆಗೆ ಭೂಮಿಯ ಫಲವತ್ತತೆ ಕಾಪಾಡಲು ಕೈಗೆಟಕುವ ಬೆಲೆಯಲ್ಲಿ ಜೈವಿಕ ಗೊಬ್ಬರ ಮತ್ತು ಜೈವಿಕ ಕೀಟನಾಶಕ ಲಭ್ಯವಾಗುವಂತೆ ಮಾಡಬೇಕಿದೆ’ ಎಂದರು.

ಕೃಷಿ ವಿವಿ ಕುಲಪತಿ ಡಾ. ಎಂ.ಬಿ.ಚೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಡಾ. ಎ.ಡಿ.ಪಾಟಕ್, ಡಾ. ಭಕ್ಷಿ ರಾಮ್, ಪ್ರಫುಲ್ ಶಿರಗಾಂವಕರ್‌ ಇದ್ದರು.

ಪ್ರತಿಕ್ರಿಯಿಸಿ (+)