ಸೋಮವಾರ, ನವೆಂಬರ್ 18, 2019
25 °C

ಚಿದಂಬರಂಗೆ ಜಾಮೀನು ಮಂಜೂರು: ಬಿಡುಗಡೆ ಭಾಗ್ಯವಿಲ್ಲ!

Published:
Updated:

ನವದೆಹಲಿ: ಐಎನ್‌ಎಕ್ಸ್‌ ಮೀಡಿಯಾ ಭ್ರಷ್ಟಾಚಾರ ಪ್ರಕರಣದ ಆರೋಪಿಯಾಗಿ ಬಂಧನದಲ್ಲಿರುವ ಕಾಂಗ್ರೆಸ್‌ ಮುಖಂಡ ಪಿ. ಚಿದಂಬರಂ ಅವರಿಗೆ ಸುಪ್ರೀಂ ಕೋರ್ಟ್‌ ಮಂಗಳವಾರ ಜಾಮೀನು ಮಂಜೂರು ಮಾಡಿದೆ.

ಆದರೆ, ಅಕ್ರಮವಾಗಿ ಹಣ ವರ್ಗಾವಣೆ ಮಾಡಿರುವ ಇನ್ನೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ.ಡಿ.) ಚಿದಂಬರಂ ಅವರನ್ನು ವಶಕ್ಕೆ ಪಡೆದಿರುವುದರಿಂದ ತಿಹಾರ್‌ ಜೈಲಿನಿಂದ ಈಗಲೇ ಹೊರಬರಲು ಅವರಿಗೆ ಸಾಧ್ಯವಾಗಲಾರದು.

‘ತನಿಖಾ ಸಂಸ್ಥೆ ಸಿಬಿಐ ಆರೋಪಿಸಿರುವಂತೆ, ಆರೋಪಿಯು ದೇಶಬಿಟ್ಟು ಪರಾರಿಯಾಗುವ ಸಾಧ್ಯತೆಯು ಕಾಣಿಸುತ್ತಿಲ್ಲ, ಮಾತ್ರವಲ್ಲದೆ ವಿಚಾರಣೆಯಿಂದ ಅವರು ತಪ್ಪಿಸಿಕೊಳ್ಳುತ್ತಾರೆ ಎಂಬ ವಾದದಲ್ಲೂ ಹುರುಳಿದ್ದಂತಿಲ್ಲ’ ಎಂದು ಜಾಮೀನು ಮಂಜೂರು ಮಾಡಿದ ನ್ಯಾಯಮೂರ್ತಿಗಳಾದ ಆರ್‌. ಭಾನುಮತಿ, ಎ.ಎಸ್‌. ಬೋಪಣ್ಣ ಹಾಗೂ ಹೃಷಿಕೇಶ್‌ ರಾಯ್‌ ಅವರ ಪೀಠವು ಅಭಿಪ್ರಾಯಪಟ್ಟಿದೆ.

‘ಆರೋಪಿಯು ಇಬ್ಬರು ಸಾಕ್ಷಿಗಳ ಮೇಲೆ ಪ್ರಭಾವ ಬೀರಲು ಪ್ರಯತ್ನಿಸಿ ದ್ದಾರೆ’ ಎಂಬ ಸಿಬಿಐ ವಾದವನ್ನು ನ್ಯಾಯಾಲಯ ತಳ್ಳಿಹಾಕಿತು. ‘ಅವರನ್ನು ಎಲ್ಲಿ, ಯಾವಾಗ ಮತ್ತು ಹೇಗೆ ಸಂಪರ್ಕಿಸುವ ಪ್ರಯತ್ನ ಮಾಡಲಾಗಿತ್ತು ಎಂಬ ಮಾಹಿತಿಯನ್ನೇ ಸಿಬಿಐ ನೀಡಿಲ್ಲ’ ಎಂದಿತು.

‘ಆರೋಪಿಯು ಆಗಸ್ಟ್‌ 21ರಿಂದ ನ್ಯಾಯಾಂಗ ಬಂಧನದಲ್ಲಿದ್ದಾರೆ. ಅವರಿಗೆ 74 ವರ್ಷ ವಯಸ್ಸಾಗಿರುವುದಲ್ಲದೆ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಪ್ರಕರಣದ ಇತರ ಆರೋಪಿಗಳಿಗೆ ಈಗಾಗಲೇ ಜಾಮೀನು ನೀಡಲಾಗಿದೆ. ಆದ್ದರಿಂದ ಚಿದಂಬರಂ ಅವರೂ ಜಾಮೀನು ಪಡೆಯಲು ಅರ್ಹರು ಎಂಬುದು ನಮ್ಮ ಭಾವನೆ’ ಎಂದು ಕೋರ್ಟ್‌ ಹೇಳಿದೆ.

‘ಇತರ ಯಾವುದೇ ಪ್ರಕರಣ ದಲ್ಲಿ ಚಿದಂಬರಂ ಅವರ ನ್ಯಾಯಾಂಗ ಬಂಧನದ ಅಗತ್ಯ ಇಲ್ಲವೆಂದಾದರೆ ಅವರನ್ನು ಇಬ್ಬರು ಜಾಮೀನುದಾರರು ಮತ್ತು ಒಂದು ಲಕ್ಷ ರೂಪಾಯಿ ಭದ್ರತೆ ಪಡೆದು ಜೈಲಿನಿಂದ ಬಿಡುಗಡೆ ಮಾಡಬಹುದು ಎಂದು ನ್ಯಾಯಾಲಯ ಹೇಳಿದೆ. ಚಿದಂಬರಂ ಅವರ ಪಾಸ್‌ಪೋರ್ಟ್‌ ಅನ್ನು ಈವರೆಗೆ ವಶಪಡಿಸಿಕೊಳ್ಳದಿದ್ದರೆ ಜಾಮೀನು ನೀಡುವುದಕ್ಕೂ ಮುನ್ನ ಅದನ್ನು ಪಡೆಯಬೇಕು. ಕೋರ್ಟ್‌ ಅನುಮತಿ ಇಲ್ಲದೆ ಅವರು ದೇಶ ಬಿಟ್ಟು ಹೋಗುವಂತಿಲ್ಲ. ತನಿಖಾ ಸಂಸ್ಥೆಯು ವಿಚಾರಣೆಗೆ ಕರೆದಾಗಲೆಲ್ಲಾ ಹಾಜರಾಗಬೇಕು’ ಎಂಬ ಷರತ್ತನ್ನು ನ್ಯಾಯಾಲಯವು ವಿಧಿಸಿದೆ.

ನ್ಯಾಯಾಲಯದ ಷರತ್ತುಗಳು

* ಅಗತ್ಯಬಿದ್ದಾಗ ವಿಚಾರಣೆಗೆ ಹಾಜರಾಗಬೇಕು

* ಅನುಮತಿ ಇಲ್ಲದೆ ದೇಶಬಿಟ್ಟು ಹೋಗುವಂತಿಲ್ಲ

ಜಾಮೀನು ಮಂಜೂರಿಗೆ ಕಾರಣಗಳು

* 2 ತಿಂಗಳಿಗೂ ಹೆಚ್ಚು ಅವಧಿಯಿಂದ ಬಂಧನದಲ್ಲಿರುವುದು

* ಆರೋಪಪಟ್ಟಿ ಸಲ್ಲಿಕೆಯಾಗಿರುವುದು

* ಎಲ್ಲಾ ಸಹ ಆರೋಪಿಗಳಿಗೆ ಜಾಮೀನು ನೀಡಲಾಗಿರುವುದು

* ವಯೋಸಹಜ ಕಾಯಿಲೆಗಳಿಂದ ಬಳಲುತ್ತಿರುವುದು

* ಸಾಕ್ಷ್ಯಗಳ ಮೇಲೆ ಪ್ರಭಾವ ಬೀರುತ್ತಾರೆ ಎಂಬುದಕ್ಕೆ ಪುರಾವೆಯ ಕೊರತೆ

*ತನಿಖಾ ಸಂಸ್ಥೆಯ ಜೊತೆ ಸಹಕರಿಸಿದ್ದಾರೆ

ಪ್ರತಿಕ್ರಿಯಿಸಿ (+)