ಶುಕ್ರವಾರ, ಡಿಸೆಂಬರ್ 6, 2019
20 °C
ದುಸ್ಥಿತಿಯಲ್ಲಿರುವ ಪಾದಚಾರಿ ಮೇಲ್ಸೇತುವೆಗಳ ಕುರಿತು ಪ್ರದೀಪ್‌ ಭಲೆಕರ್‌ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ

ವಿಚಾರಣೆ ನಡೆಸಲು ಮುಂಬೈ ಹೈಕೋರ್ಟ್‌ ಸಮ್ಮತಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಮುಂಬೈನಲ್ಲಿ ದುಸ್ಥಿತಿಯಲ್ಲಿರುವ ಎಲ್ಲಾ ಪಾದಚಾರಿ ಮೇಲ್ಸೇತುವೆಗಳ ಕುರಿತು ಇದೇ 22ರಂದು ವಿಚಾರಣೆ ಕೈಗೆತ್ತಿಕೊಳ್ಳಲಾಗುವುದು ಎಂದು ಮುಂಬೈ ಹೈಕೋರ್ಟ್‌ ಹೇಳಿದೆ.

ಛತ್ರಪತಿ ಶಿವಾಜಿ ಟರ್ಮಿನಲ್ಸ್ ಬಳಿಯ ಮೇಲ್ಸೇತುವೆ ಕುಸಿದು 6 ಮಂದಿ ಮೃತಪಟ್ಟು, 31ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಹಿನ್ನೆಲೆಯಲ್ಲಿ ವಿಚಾರಣೆ ತ್ವರಿತವಾಗಿ ಆರಂಭಿಸುವಂತೆ ಅರ್ಜಿದಾರ ಪ್ರದೀಪ್‌ ಭಲೆಕರ್‌ ಅವರ ಪರ ವಕೀಲ ನಿತೀನ್ ಸಾತ್ಪುಟ್ ಶುಕ್ರವಾರ ಮನವಿ ಮಾಡಿದರು. 

ನ್ಯಾಯಮೂರ್ತಿಗಳಾದ ರಂಜಿತ್ ಮೋರ್ ಮತ್ತು ಭಾರತಿ ಡಾಂಗ್ರೆ ಅವರಿದ್ದ ವಿಭಾಗೀಯ ಪೀಠ ಇದೇ 22ರಂದು ವಿಚಾರಣೆ ಆರಂಭಿಸಲು ಒಪ್ಪಿದೆ.

ಪ್ರಭಾದೇವಿ ರೈಲ್ವೆ ನಿಲ್ದಾಣದ ಕಿರಿದಾದ ಮೇಲ್ಸೇತುವೆಯಲ್ಲಿ ನೂಕುನುಗ್ಗಲು ಉಂಟಾಗಿ 31 ಮಂದಿ ಪ್ರಾಣ ಕಳೆದುಕೊಂಡ ಘಟನೆ ಬಳಿಕ 2017ರ ಸೆಪ್ಟೆಂಬರ್‌ನಲ್ಲಿ ಪ್ರದೀಪ್‌ ಭಲೆಕರ್‌ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.

ನಗರದಲ್ಲಿರುವ ಎಲ್ಲಾ ಮೇಲ್ಸೇತುವೆಗಳ ಬಗ್ಗೆ ಸರ್ವೆ ನಡೆಸಲು ಸಮಿತಿಯೊಂದನ್ನು ರಚಿಸುವಂತೆ ಮತ್ತು ದುಸ್ಥಿತಿಯಲ್ಲಿರುವ ಸೇತುವೆಗಳ ದುರಸ್ತಿಗೆ ಆದೇಶ ನೀಡುವಂತೆ ಭಲೆಕರ್ ಮನವಿ ಮಾಡಿದ್ದರು.

ಬುಲೆಟ್ ರೈಲು ಯೋಜನೆ ಕೈಬಿಡಿ: ಮುಂಬೈ ಮತ್ತು ಅಹಮದಾಬಾದ್‌ ನಡುವಿನ ಬುಲೆಟ್ ರೈಲು ಯೋಜನೆಯನ್ನು ಕೈಬಿಡುವಂತೆ ಎನ್‌ಸಿಪಿ ಶಾಸಕ ಜಿತೇಂದ್ರ ಅಹಾದ್ ಆಗ್ರಹಿಸಿದ್ದಾರೆ.

‘ರೈಲ್ವೆ ಸೌಲಭ್ಯಗಳ ಸುಧಾರಣೆಗೆ ಪ್ರಮುಖ ಆದ್ಯತೆಯನ್ನು ಸರ್ಕಾರ ನೀಡಬೇಕು. ಅವಘಡಗಳಿಗೆ ಅಧಿಕಾರಿಗಳನ್ನು ಹೊಣೆ ಮಾಡುವುದು ಪರಿಹಾರವಲ್ಲ. ತೋರಿಕೆಗಾಗಿ ಬುಲೆಟ್‌ ರೈಲು ಯೋಜನೆ ಅನುಷ್ಠಾನ ಮಾಡಿ ತೆರಿಗೆದಾರರ ಹಣ ವ್ಯರ್ಥ ಮಾಡುವುದು ಬೇಡ’ ಎಂದಿದ್ದಾರೆ.‌

ಬುಲೆಟ್‌ ರೈಲು ಯೋಜನೆಯನ್ನು ಕೈಬಿಡುವುದಾಗಿ ನಮ್ಮ ಪಕ್ಷ ಚುನಾವಣಾ ಪ್ರಣಾಳಿಕೆಯಲ್ಲೂ ಪ್ರಕಟಿಸುವುದಾಗಿ ಅವರು ಹೇಳಿದ್ದಾರೆ.

ಸೇತುವೆ ಕೆಡವಲು ನಿರ್ಧಾರ
ಗುರುವಾರದ ದುರ್ಘಟನೆ ಬೆನ್ನಲ್ಲೆ ಮೇಲ್ಸೇತುವೆಯನ್ನು ಕೆಡವಲು ಮುಂಬೈ ಮಹಾನಗರ ಪಾಲಿಕೆ ನಿರ್ಧರಿಸಿದೆ.

ಪಾಲಿಕೆ ಆಯುಕ್ತ ಅಜಯ್ ಮೆಹ್ತಾ ನೇತೃತ್ವದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಸೇತುವೆ ಕುಸಿತಕ್ಕೆ ಕಾರಣ ತಿಳಿಯಲು ಮುಖ್ಯ ಎಂಜಿನಿಯರ್ (ವಿಚಕ್ಷಣ ದಳ) ನೇತೃತ್ವದಲ್ಲಿ ತನಿಖೆ ನಡೆಸಲು ಸಹ ನಿರ್ಧರಿಸಲಾಯಿತು.

ಸಿಬ್ಬಂದಿಯ ಜವಾಬ್ದಾರಿ ಮತ್ತು ಪರಿಶೀಲನೆ ನಡೆಸಿದವರ ಪಾತ್ರದ ಬಗ್ಗೆ  24 ಗಂಟೆಯಲ್ಲಿ ಮೊದಲ ವರದಿ ಸಲ್ಲಿಸುವಂತೆ ಮುಖ್ಯ ಎಂಜಿನಿಯರ್‌ಗೆ ಸೂಚಿಸಲಾಯಿತು. ಕ್ರೇನ್ ಮತ್ತು ಗ್ಯಾಸ್ ಕಟರ್‌ಗಳನ್ನು ಬಳಸಿ ಸೇತುವೆ ಬೀಳಿಸುವ ಕಾರ್ಯ ಈಗಾಗಲೇ ನಡೆಸಲಾಗುತ್ತಿದೆ ಎಂದು ವಾರ್ಡ್ ಅಧಿಕಾರಿ ಕಿರಣ್ ದಿಘಾವ್ಕರ್ ಹೇಳಿದರು.‌

ಹೊಣೆಗಾರರ ಪತ್ತೆಗೆ: ಸಿಎಂ ಸೂಚನೆ 
ಘಟನೆಗೆ ಹೊಣೆ ಯಾರು ಎಂಬುದನ್ನು ಪತ್ತೆ ಹಚ್ಚಲು ಅಧಿಕಾರಿಗಳಿಗೆ ತಿಳಿಸಿದ್ದೇನೆ ಎಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ತಿಳಿಸಿದರು.

ಬಳಕೆಗೆ ಯೋಗ್ಯವಾಗಿದೆ ಎಂಬ ವರದಿಯ ಬಳಿಕವೂ ಇಂತಹ ಅವಘಡ ಸಂಭವಿಸಿರುವುದು ಆಘಾತವಾಗಿದೆ ಎಂದು ಶುಕ್ರವಾರ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದರು.

ಉನ್ನತ ಮಟ್ಟದ ತನಿಖೆಗೆ ಈಗಾಗಲೇ ಆದೇಶಿಸಲಾಗಿದೆ. ಘಟನೆಗೆ ಹೊಣೆಯಾದವರಿಗೆ ಶಿಕ್ಷೆ ಖಚಿತ ಎಂದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು